ADVERTISEMENT

ಕವಿಮನೆಯಲ್ಲಿ ಕೃಷಿಪಾಠ...

ಸಂಪತ್ ಬೆಟ್ಟಗೆರೆ
Published 4 ಏಪ್ರಿಲ್ 2018, 19:30 IST
Last Updated 4 ಏಪ್ರಿಲ್ 2018, 19:30 IST
ಕವಿಮನೆಯಲ್ಲಿ ಕೃಷಿಪಾಠ...
ಕವಿಮನೆಯಲ್ಲಿ ಕೃಷಿಪಾಠ...   

ಹೊಸಗನ್ನಡ ಸಾಹಿತ್ಯದಲ್ಲಿ ಕೃಷಿ ಹಾಗೂ ತೋಟಗಾರಿಕೆ ಕುರಿತು ವಿಶೇಷವಾಗಿ ಆಲೋಚನೆ ಮಾಡಿದವರಲ್ಲಿ ಕುವೆಂಪು ಅವರೇ ಮೊದಲಿಗರೆನ್ನಬಹುದು. ಅವರು ಬರೆದಿರುವ ಗೊಬ್ಬರದ ಮೇಲಿನ ಕವನ, ಹೀರೆಯ ಹೂವಿನ ಕವಿತೆ, ಎಲ್ಲಕ್ಕಿಂತಲೂ ಮಿಗಿಲಾಗಿ ನೇಗಿಲಯೋಗಿಯ ಹಾಡು ರೈತರಿಗೆ ವರದಾನದ ರೂಪದಲ್ಲಿ ಹಾರೈಸಿವೆ. ಆದ್ದರಿಂದ ಕುವೆಂಪು ಅವರನ್ನು ರೈತ ಕುಲದ ಕವಿಬಂಧು ಎಂದು ಬಣ್ಣಿಸಲು ಅಡ್ಡಿಯಿಲ್ಲ. ಅಂತಹ ಕವಿಬಂಧುವಿನ ಮನೆಗೆ ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಕಾಲೇಜಿನ ಮುಖ್ಯಸ್ಥರು-ಡೀನರು ಆದ ಡಾ. ಎಂ. ಹನುಮಂತಪ್ಪ ಅವರಿಗೆ ವಿಶೇಷ ಮನವಿ ಸಲ್ಲಿಸಿ ಶೈಕ್ಷಣಿಕ ಅಧ್ಯಯನ ಪ್ರವಾಸ ಕೈಗೊಂಡಿದ್ದರು. ಕನ್ನಡ ವಿಭಾಗದೊಂದಿಗೆ, ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೇ ಕನ್ನಡಾಭಿಮಾನದಿಂದ ಮುನ್ನಡೆಸಿಕೊಂಡು ಬರುತ್ತಿರುವ ‘ಹೊಂಗಿರಣ’ ಕನ್ನಡ ಬಳಗವು ಇದರಲ್ಲಿ ಭಾಗಿಯಾಗಿತ್ತು.

‘ಸರ್, ದಯವಿಟ್ಟು ಇಲ್ಲ ಅನ್ಬೇಡಿ. ಒಂದೇ ದಿನ ಸರ್!’ ಎಂದೆಲ್ಲ ಡೀನ್ ಅವರನ್ನು ಒಪ್ಪಿಸಿ ಅನುಮತಿ ಪಡೆದಿದ್ದ ವಿದ್ಯಾರ್ಥಿಗಳು, ‘ನೀವೇ ಒಂದು ದಿನದ ಈ ಪುಟ್ಟ ಪ್ರವಾಸಕ್ಕೆ ಯೋಜನೆ ರೂಪಿಸಿಕೊಡಿ ಸರ್’ ಎಂದು ದುಂಬಾಲು ಬಿದ್ದಿದ್ದರು. ಅದರಂತೆ ಪ್ಲಾನ್ ಕೂಡ ಸಿದ್ಧವಾಯಿತು. ಮೊದಲು ಮೂಡಿಗೆರೆಯಿಂದ ಶೃಂಗೇರಿ ಶಾರದಾ ಪೀಠಕ್ಕೆ ಹೋಗಿ ಶಾರದಾಂಬೆಯ ದರ್ಶನ ಪಡೆಯುವುದು. ಮಧ್ಯಾಹ್ನ ಅಲ್ಲೇ ಅನ್ನಸಂತರ್ಪಣೆಯಾಗುತ್ತದೆ. ಅಂದರೆ ವಿದ್ಯಾರ್ಥಿಗಳ ಜ್ಞಾನದಾಹವನ್ನು, ಹೊಟ್ಟೆಯ ಹಸಿವನ್ನು ಸಂತೃಪ್ತಿಗೊಳಿಸುವ ಕೆಲಸ ಶಾರದಾಂಬೆಗೆ ಬಿಟ್ಟುಬಿಡಿ ಎಂದರು ಡೀನರು. ಈ ಬಗ್ಗೆ ಕುಪ್ಪಳಿಯ ಕುವೆಂಪು ಪ್ರತಿಷ್ಠಾನದ ಕಡಿದಾಳ್ ಪ್ರಕಾಶ್ ಅವರಲ್ಲಿ ಸಲಹೆ ಕೇಳಿದಾಗ, ‘ಬಹುತೇಕ ಎಲ್ಲರೂ ಹಾಗೇ ಮಾಡುವುದು! ನೀವು ಮಧ್ಯಾಹ್ನದ ನಂತರ ಬಂದರೆ ಕವಿಮನೆ, ಪರಿಸರ ವೀಕ್ಷಣೆ ಮಾಡಿ ಇಳಿಸಂಜೆ ಕವಿಶೈಲದಲ್ಲಿ ಸೂರ್ಯಾಸ್ತಮಾನವನ್ನು ನೋಡಿಕೊಂಡು ಹೋಗಲು ಕೂಡ ಅನುಕೂಲವಾದೀತು’ ಎಂದರು. ಬಡ ವಿದ್ಯಾರ್ಥಿಗಳ ಊಟದ ಖರ್ಚನ್ನು ಉಳಿಸಿದ ಶಾರದಾಂಬೆಗೆ ವಿದ್ಯಾರ್ಥಿಗಳು ಸೇರಿದಂತೆ ಅಧ್ಯಾಪಕರಾದ ನಾವೆಲ್ಲ ಮನದಲ್ಲೆ ಕೃತಜ್ಞತೆ ಸಲ್ಲಿಸಿದೆವು.

ಊಟ ಮಾಡಿ ಶೃಂಗೇರಿಯಿಂದ ಕೊಪ್ಪ ಮಾರ್ಗವಾಗಿ ತೆರಳುವಾಗ ಗಡಿಕಲ್ಲು ಸಮೀಪ ಸಿಗುವ ಪುಟ್ಟಪ್ಪನವರು ಹುಟ್ಟಿದ ಹಿರೇಕೂಡಿಗೆಯ ಪುಟ್ಟ ಮನೆಯನ್ನು ನೋಡಿದೆವು. ಅಲ್ಲಿ ಕುವೆಂಪು ಅವರ ಬಾಲ್ಯಕಾಲದ ಜ್ಞಾಪಕಾರ್ಥವಾಗಿ ಕುವೆಂಪು ಅವರ ಅಜ್ಜಿಮನೆಯನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ಕವಿಯ ನೆನಪಿನ ಚಿತ್ರಗಳನ್ನು ಗಮನಿಸಿದ ಒಡಿಶಾ ರಾಜ್ಯದ, ಈಗಷ್ಟೇ ಕನ್ನಡ ಕಲಿಯುತ್ತಿರುವ ಪ್ರಥಮ ಬಿ.ಎಸ್ಸಿ ತೋಟಗಾರಿಕೆ ವಿದ್ಯಾರ್ಥಿ ಸುಧಾಂಶು ಶೇಖರ್ ಶೇಥಿ, ‘ಸರ್ ನನಗೇನು ಅರ್ಥವಾಗುತ್ತಿಲ್ಲ’ ಎಂದ. ಪಕ್ಕದಲ್ಲೇ ಇದ್ದ ಇನ್ನೋರ್ವ ಕನ್ನಡೇತರ ಕೇರಳ ರಾಜ್ಯದ ವಿದ್ಯಾರ್ಥಿ ಜೋಯಲ್ ಮ್ಯಾಥ್ಯೂ ‘ನನಗೆ ತಿಳಿದಿದೆ ಸರ್... ಅದೇನೆಂದರೆ, ಕನ್ನಡದ ಗೆಳೆಯ ಹನುಮಂತ ಮಂಟೂರ್ ಹೇಳಿದ, ಕುವೆಂಪು ಹುಟ್ಟಿದ ಸ್ಥಳವಿದು. ಅವರ ತಾಯಿಯ ತೌರೂರಿದು!’ ಎಂದಾಗ, ‘ವಾಹ್!’ ಎಂಬ ಉದ್ಗಾರವನ್ನು ಸುಧಾಂಶು ವ್ಯಕ್ತಪಡಿಸಿದ. ನಂತರ ನಮ್ಮ ಪಯಣ ಕುಪ್ಪಳಿ ಕಡೆಗೆ ಸಾಗಿತು. ಮಾರ್ಗಮಧ್ಯೆ ವಿದ್ಯಾರ್ಥಿಗಳು ತೋಟಗಾರಿಕೆ ಕಣ್ಣಿನಿಂದ ಪರಿಸರ ಆಸ್ವಾದಿಸಿ ಸಂಭ್ರಮಪಟ್ಟರು.

ADVERTISEMENT

ಬಿಹಾರ ರಾಜ್ಯದಿಂದ ಬಂದು ನಮ್ಮ ಕಾಲೇಜಿನಲ್ಲಿ ಕನ್ನಡ ಕಲಿಯುತ್ತಲೆ ಕುವೆಂಪು ಅವರ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುತ್ತಿರುವ ಪ್ರಥಮ ಬಿ.ಎಸ್ಸಿ ತೋಟಗಾರಿಕೆ ವಿದ್ಯಾರ್ಥಿನಿಯಾಗಿರುವ ಬುದ್ಧಿಲತ ಕುಮಾರಿ ‘ನಮ್ಮ ರಾಜ್ಯವು ಬರಗಾಲಪೀಡಿತವಾಗಿದೆ. ಆದರೆ ಇಲ್ಲಿಯ ಪರಿಸರ ಎಷ್ಟೊಂದು ಸುಂದರವಾಗಿದೆ ಸರ್!’ ಎಂದು ಪುಳಕಗೊಂಡಳು. ಕೇರಳ ರಾಜ್ಯದ ವಿದ್ಯಾರ್ಥಿನಿಯರಾದ ಶ್ರೀಲಕ್ಷ್ಮೀ, ಹೃದ್ಯ ಅನ್ನಾ ಜಾಯ್ ಕೂಡ ‘ಕೇರಳ ರಾಜ್ಯದಲ್ಲಿ ಅತ್ಯದ್ಭುತ ಪ್ರಾಕೃತಿಕ ತಾಣಗಳಿವೆ. ಆದರೆ ಎಲ್ಲಾ ಒಂದೇ ರೀತಿ ಕಾಣುತ್ತವೆ. ಇಲ್ಲಿ ಮಾತ್ರ ಹಾಗಿಲ್ಲ, ಮೂಡಿಗೆರೆ ಹಾಗೂ ಕೊಪ್ಪದ ಹಿರೇಕೂಡಿಗೆಗೆ ಬಹಳ ವ್ಯತ್ಯಾಸವಿದೆ. ಎಲ್ಲವೂ ಅನನ್ಯ’ ಎಂದು ಹರ್ಷಗೊಂಡರು.

ನಮ್ಮ ರಾಜ್ಯದ ವಿದ್ಯಾರ್ಥಿನಿಯರಾದ ನಮಿತಾ, ಸಹನಾ ‘ಅದಕ್ಕೆ ಕುವೆಂಪು ಮತ್ತು ತೇಜಸ್ವಿಯವರು ಪರಿಸರವನ್ನು ತಮ್ಮ ಸಾಹಿತ್ಯದಲ್ಲಿ ವಿಭಿನ್ನವಾಗಿ ಚಿತ್ರಿಸಲು ಸಾಧ್ಯವಾಗಿದೆ. ಮುಂದೆ ನೀವು ಕನ್ನಡವನ್ನು ಕಲಿತು ಓದಿದರೆ, ಎಲ್ಲವೂ ತಿಳಿಯುತ್ತೆ’ ಎಂದರು. ಅಷ್ಟರಲ್ಲೇ ‘ಕುಪ್ಪಳಿಯ ಕವಿಮನೆ ಬಂತು ಇಳಿಯಿರಿ, ಬೇಗ ಬೇಗ ನೋಡಿಕೊಂಡು ಬನ್ನಿ. ಕವಿಶೈಲ ನೋಡೋದಕ್ಕೂ ಸಾಕಷ್ಟು ಸಮಯಬೇಕು’ ಎಂದು ಡ್ರೈವರ್ ರವಿ ಆದೇಶಿಸಿದರು.

ಇನ್ನು ಮುಂದೆ, ಪುಳಕಿತ ಭಾವಕ್ಕೆ ಅಕ್ಷರರೂಪ ನೀಡುವ ತವಕ ವಿದ್ಯಾರ್ಥಿಗಳಿಗೆ. ಮಲೆನಾಡಿನ ಪರಂಪರೆಯನ್ನು ಜ್ಞಾಪಿಸುವ ಕೈಹೆಂಚಿನ ತೊಟ್ಟಿಮನೆಯದು. ಎಲ್ಲೆಲ್ಲೂ ಮರದ ರನ್ನ ಕಂಬಗಳು, ಹಳೇಕಾಲದ ಮರದ ಪಕಾಸು, ಹಲಗೆಯ ಮುಚ್ಚಿಗೆಯನ್ನು ಒಳಗೊಂಡಿದೆ. ಮೂರಂತಸ್ತನ್ನು ಹೊಂದಿ, ಒಳಾಂಗಣದ ಜೊತೆಗೆ ಒಳ ಅಂಗಳವು ಇದಕ್ಕಿದೆ. ಕುವೆಂಪು ಸೇರಿದಂತೆ ಅವರ ಕುಟುಂಬಸ್ಥರು ಮದುವೆಯಾದ ಮಂಟಪ, ಹಕ್ಕಿಯನ್ನು ಕಲ್ಲಿನಿಂದ ಹೊಡೆಯುವ ಕವಣೆ ಹಗ್ಗ, ಧಾನ್ಯ ತುಂಬಿಡುವ ದೊಡ್ಡ ಮರದ ಕಲುಬಿ, ನೊಗ, ನೇಗಿಲು, ಆರು ಗೂಡು, ಮೇಣಿ-ಮಿಣಿ, ಮೆರಿಕೋಲು, ಅಡುಗೆ ಪರಿಕರಗಳಾದ ಸವಗೆ ಮಣೆ, ಅನ್ನ ಬಸಿಯುವ ಮರದ ಬಾನಮರುಗುಲು, ಕುಟ್ಟಿದ ಹಿಟ್ಟಿನ ಕಡುಬನ್ನು ಬೇಯಿಸುವ ದೊಡ್ಡ ತಾಮ್ರದ ತಪ್ಪಲೆ; ಮಾಂಸ, ಸಂಡಿಗೆ, ಮೀನು ಬೇಯಿಸುವ ಮಣ್ಣಿನ ವಿವಿಧ ನಮೂನೆಯ ಪಾತ್ರೆಗಳು, ಕೆಳ ಅಂತಸ್ತಿನಿಂದ ಮೇಲಂತಸ್ತಿಗೆ ಹೋಗಲು ಇರುವ ಹಳೇಕಾಲದ ಗಟ್ಟಿಮರದ ಬೃಹತ್ತಾಕಾರದ ಏಣಿಗಳು; ಕುವೆಂಪು ಅವರ ಪೂರ್ವಿಕರು ತುಂಡು ಬಿಳಿಪಂಚೆಯನ್ನು ಕುಂಟಿಕಟ್ಟಿ, ಕಾಲಿಗೆ ಬೆಳ್ಳಿ ಸರಿಗೆಬಳೆ, ಬಲಕೈಗೆ ಬೆಳ್ಳಿ ಖಡ್ಗ ಹಾಕಿಕೊಂಡು ಧರಿಸುತ್ತಿದ್ದ ಕರಿಬಣ್ಣದ ಕೋಟು, ಮಲೆನಾಡಿನ ಗೌಡಿಕೆ ಗತ್ತುಗಾರಿಕೆಯ ಸುಂದರ ವಿನ್ಯಾಸದ ಹಂಸ ಕೊರಳ ತಲೆಯಾಕಾರದ ಬೆತ್ತದ ಊರುಗೋಲು, ಭತ್ತ ಕುಟ್ಟಿ ಅಕ್ಕಿ ತೆಗೆಯಲು ಸಹಾಯಕವಾದ ಕುಟ್ಟುವರಳು ಮರದ ಮಣೆ, ಒಂಟಿನಳಿಕೆಯ ತೋಟಾಕೋವಿ ಸೇರಿದಂತೆ ಮಲೆನಾಡಿನ ಪಟೇಲರ ಮನೆಯಲ್ಲಿರಬಹುದಾದ ಎಲ್ಲಾ ಪರಿಕರಗಳು ಇಲ್ಲಿ ಕಂಡವು.

ಕೃಷಿ ಮತ್ತು ತೋಟಗಾರಿಕೆ ವಿದ್ಯಾರ್ಥಿಗಳಿಗೆ ಮಲೆನಾಡನ್ನು ತಮ್ಮ ಜ್ಞಾನದ ಅರಿವಿಗೆ ತಂದುಕೊಳ್ಳಲು ಇದಕ್ಕಿಂತಲೂ ಮಿಗಿಲಾದ ಕ್ಷೇತ್ರದರ್ಶನ ಅಧ್ಯಯನ ಕೇಂದ್ರ ಮತ್ತೊಂದಿಲ್ಲ ಎಂಬ ಭಾವನೆ ಎಲ್ಲರ ಕೊರಳೊಳಗಿನಿಂದ ಹೊಮ್ಮಿ ಬಂತು. ಮನೆಯ ಹಿಂಬದಿಯಲ್ಲಿದ್ದ ಅಭ್ಯಂಜನ ಗೃಹವನ್ನು ಗಮನಿಸಿದ ವಿದ್ಯಾರ್ಥಿನಿಯರು ‘ಸರ್ ಅರ್ಧಗೋಡೆ– ಇದರಲ್ಲಿ ಸ್ತ್ರೀಯರು ಹೇಗೆ ಸ್ನಾನ ಮಾಡುತ್ತಿದ್ದರು’ ಎಂಬ ಕುತೂಹಲದ ಪ್ರಶ್ನೆ ಕೇಳಿದರು. ‘ಅದರ ಮೇಲರ್ಧದ ಭಾಗಕ್ಕೆ ಅಡಿಕೆಗರಿಯ ತಡಿಕೆಯಿಂದ ಮರೆಕಟ್ಟಲಾಗುತ್ತಿತ್ತು, ವರ್ಷಕ್ಕೋ, ಎರಡು ವರ್ಷಕ್ಕೋ ಅದನ್ನು ಬದಲಾಯಿಸುತ್ತಿದ್ದರು’ ಎಂಬ ಉತ್ತರದಿಂದ ಸಮಾಧಾನ ಪಟ್ಟುಕೊಂಡರು. ಹೀಗೆ ಕುವೆಂಪು ಅವರ ಕುಪ್ಪಳಿಮನೆ ಮಲೆನಾಡು ಕುರಿತ ಅನೇಕ ಜೀವಂತ ಕುತೂಹಲಗಳಿಗೆ ಸಾಕ್ಷಿಪ್ರಜ್ಞೆಯಂತಿದೆ. ಕುವೆಂಪು ಅವರ ಮನೆ ಮುಂದೆ ಈಗ ‘ನನ್ನಮನೆ’ ಎಂಬ ಅವರದೆ ಕವಿತೆಗಳ ಸಾಲುಗಳನ್ನು ಕಲ್ಲಿನ ಹಾಳೆ ಮೇಲೆ ಬರೆದು ನೆಟ್ಟಗೆ ನಿಲ್ಲಿಸಲಾಗಿದೆ. ಇದು ಕುಪ್ಪಳಿಮನೆ ನೋಡಿಕೊಂಡು ಹೊರಬರುವಾಗ, ಸ್ವತಃ ಅವರೇ ಮನೆಗೆ ಬಂದಿದ್ದ ಅತಿಥಿಗಳನ್ನು ಪ್ರೀತಿಯಿಂದ ಬೀಳ್ಕೊಡುವಾಗ ನುಡಿಯುವಂತೆ ಅಂತರಾಳಕ್ಕೆ ಇಳಿದುಬಿಡುತ್ತವೆ.

‘ಮನೇ ಮನೇ ಮುದ್ದು ಮನೇ

ಮನೇ ಮನೇ ನನ್ನ ಮನೇ!

ನಾನು ಬದುಕೊಳುಳಿವ ಮನೆ,

ನಾನು ಬಾಳಿಯಳಿವ ಮನೆ;

ನನ್ನದಲ್ಲದಿಳೆಯೊಳಿಂದು

ಹೆಮ್ಮೆಯಿಂದ ನನ್ನದೆಂದು

ಬೆಂದು ಬಳಲಿದಾಗ ಬಂದು

ನೀರು ಕುಡಿವ ನನ್ನ ಮನೆ!”

ನಿಜಕ್ಕೂ ಬಿಸಿಲಿನ ಜಳ ಸಂಜೆ ಆದರೂ ಅಧಿಕವಿತ್ತು. ವಿದ್ಯಾರ್ಥಿಗಳು ನೀರು ಕುಡಿಯುತ್ತಲೇ ಕವಿಶೈಲದ ಕಾಲ್ನಡಿಗೆಯ ದಾರಿಯಲ್ಲಿ ಹೆಜ್ಜೆ ಹಾಕತೊಡಗಿದರು. ಆಗ ನಮಗೆ ಕವಿ ಸಮಾಧಿಯ ದರ್ಶನವಾಯಿತು. ಜೊತೆಗೆ ಕಲಾವಿದ ಕೆ.ಟಿ.ಶಿವಪ್ರಸಾದ ಅವರು ಕವಿಪರಿಕಲ್ಪನೆಗೆ ತಕ್ಕದಾಗಿ ನಿರ್ಮಿಸಿರುವ ಕಲ್ಲಿನ ಪ್ರತಿಕೃತಿಗಳು; ಕುವೆಂಪು ಗುರುಗಳಾದ ಟಿ.ಎಸ್.ವೆಂಕಣ್ಣಯ್ಯ, ಇಂಗ್ಲಿಷ್ ಗೀತೆಗಳು ಖ್ಯಾತಿಯ ಬಿ.ಎಂ.ಶ್ರೀ., ಕುವೆಂಪು ಅವರ ಹಸ್ತಾಕ್ಷರ ಇರುವ ಬಂಡೆಯಾದ ಧ್ಯಾನಪೀಠವನ್ನು ಕಂಡು ಯುವಮನ ಒಂದು ಕ್ಷಣ ಮೂಕವಿಸ್ಮಯಗೊಂಡಿತು. ಜೊತೆಗೆ ಅಲ್ಲೇ ಕಲ್ಲಿನ ಗೋಡೆ ಮೇಲೆ ಕಲಾವಿದ ವಿನ್ಯಾಸಗೊಳಿಸಿರುವ ಕುವೆಂಪು ವಿರಚಿತ ಕವನದ ಸಾಲುಗಳು ಕವಿಶೈಲದ ಶ್ರೋತೃ ಹೇಗಿಲ್ಲಿ ನಡೆದುಕೊಳ್ಳಬೇಕೆಂಬುದನ್ನು ಸೂಚಿಸಿತು.

‘ಮಿತ್ರರಿರ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ;

ಮೌನವೆ ಮಹತ್ತಿಲ್ಲಿ, ಈ ಬೈಗು ಹೊತ್ತಿನಲಿ

ಕವಿಶೈಲದಲಿ, ಮುತ್ತಿಬಹ ಸಂಜೆಗತ್ತಲಲಿ

ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ!’

1934ರಲ್ಲಿ ಕುವೆಂಪು ಅವರು ಬರೆದ ಈ ಸಾಲುಗಳು ಕೇವಲ ಕಲ್ಲಿನ ಮೇಲೆ ದಾಖಲಾಗಿಲ್ಲ. ಅಲ್ಲಿನ ಸೆಕ್ಯುರಿಟಿ ಗಾರ್ಡ್ ಮಾನಪ್ಪ ಅವರಿಗೆ, ಮೂರನೆಯ ಕ್ಲಾಸಿನ ಕನ್ನಡ ಶಾಲೆಯ ಹುಡುಗನಿಗೆ ಶಿಶುಗೀತೆ ಬಾಯಿಪಾಠವಾದಂತೆ ಅಂತರ್ಗತವಾಗಿಬಿಟ್ಟಿದೆ. ಮಾತ್ರವಲ್ಲ, ಅವರು ಕುವೆಂಪು ಬಗ್ಗೆ ತಿಳಿದುಕೊಂಡಿರುವ ಕೆಲವು ವಿಶೇಷ ಸಂಗತಿಗಳು, ಕವಿಯನ್ನು ಕುರಿತು ಕರ್ತೃಕೇಂದ್ರಿತ ವಿಮರ್ಶೆಗೆ ಒಳಪಡಿಸಲು ಸಹಾಯಕವಾಗುವಂತಿದೆ. ಕುವೆಂಪು ಅವರ ಮಗ ಕೋಕಿಲೋದಯ ಚೈತ್ರ ಅವರು ವಿದೇಶದಲ್ಲಿ ನೆಲೆಯಾಗಿ, ಅವರ ಮನದರಸಿಯನ್ನು ಅಲ್ಲೇ ಪ್ರೀತಿಸಿ ಮದುವೆಯಾಗುತ್ತಾರೆ. ಮುಂದಿನ ಜೀವನವನ್ನು ಅಲ್ಲೇ ಕಂಡುಕೊಳ್ಳುತ್ತಾರೆ. ಮತ್ತೆಂದು ಕನ್ನಡನಾಡಿಗೆ ಮರಳದ ಅವರನ್ನು ಕುರಿತು ‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀನು ಕನ್ನಡವಾಗಿರು’ ಎಂದು ಹರಸಿ, ಹಾರೈಸಿದರು ಎಂದು ಅವರು ಕವಿ ಕವಿತೆಯ ರಹಸ್ಯವನ್ನು ತೆರೆದಿಟ್ಟಾಗ ವಿದ್ಯಾರ್ಥಿಗಳ ಹೃನ್ಮನದ ಮಿಡಿತದ ವೇಗ ಅಧಿಕಗೊಂಡಿತು.

ನಿಜ, ಕವಿಯ ಪ್ರತಿಭೆಯ ಸ್ಫೂರ್ತಿಗೆ ಕಾರಣವಾದ ಘಟನೆ ಯಾವುದೇ ಇರಲಿ, ಆದರೆ ಅದು ಬರೆಯುವವರೆಗೂ ಕವಿಯ ಸ್ವತ್ತು, ಬರೆದ ಮೇಲೆ ಓದುಗನ ಭಾವಕ್ಕೆ ಬಿಟ್ಟದ್ದು. ಅದನ್ನು ಹೇಗಾದರೂ ಅರ್ಥಮಾಡಿಕೊಳ್ಳಬಹುದಾದ ಸಾರ್ವತ್ರಿಕ ಸ್ವಂತಿಕೆಯನ್ನು ಯಾವ ಕವಿತೆ ಆಗುಮಾಡಿಕೊಡುತ್ತದೆಯೋ ಆಗ ಆ ಕವಿತೆಯ ಕವಿ ಯಶಸ್ಸು ಸಾಧಿಸುವುದರಲ್ಲಿ ಅನುಮಾನವೇ ಇಲ್ಲ ಎಂಬ ಸದಾಶಯ ಅಲ್ಲಿದ್ದ ಎಲ್ಲರಿಗೂ ಅನ್ನಿಸಿತು. ಕುವೆಂಪು ಅವರೇ ಪ್ರತಿಪಾದಿಸಿರುವ ದರ್ಶನ ವಿಮರ್ಶೆಯೂ ಇದನ್ನೇ ಪ್ರತಿಪಾದಿಸುತ್ತದೆ.

ಮಾನಪ್ಪನವರು ‘ನನ್ನ ಸಮಯ ಮುಗಿಯಿತು ಸಾರ್, ನಾನಿನ್ನು ಹೋಗುತ್ತೇನೆ. ಮತ್ತೊಬ್ಬರು ಬರುತ್ತಾರೆ’ ಎಂದು ಕವಿಶೈಲದ ಪಡುವಣದ ಹಾದಿಗುಂಟ ಕೆಳಗಿಳಿಯುತ್ತಲೇ ಮರೆಯಾದರು. ರವಿಗೂ ಅವರಿಗೆ ಬೆಸೆದ ನಂಟೇನೋ! ಅವನು ಕೂಡ ಪಶ್ಚಿಮದೂರಾಚೆಯ ಕಡೆಗೆ ಪಯಣ ಬೆಳೆಸಿದ. ಆಗ ನಮ್ಮೊಂದಿಗಿದ್ದ ಕಾಲೇಜಿನ ಸಹೋದ್ಯೋಗಿ ಮಿತ್ರ ಮಣಿಕಂಠ, ಎಂ.ಎಸ್ಸಿ. ತೋಟಗಾರಿಕೆ ವಿದ್ಯಾರ್ಥಿಯಾದ ಅವಿನಾಶ್ ಅವರು ‘ಎಲ್ಲರೂ ಅಲ್ಲಿ ನೋಡಿ. ಸೂರ್ಯಾಸ್ತಮಾನದ ಸುಂದರ ದೃಶ್ಯ!’ ಎಂದರು. ಆಗ ಸೂರ್ಯದೇವನು ಮಾನಪ್ಪನಂತೆ ‘ನನ್ನ ಸಮಯ ಮುಗಿಯಿತು ಮಿತ್ರರೆ, ಮತ್ತೊಬ್ಬರು (ಚಂದ್ರ!) ಬರುತ್ತಾರೆ. ಮತ್ತೆ ಭೇಟಿಯಾಗುವುದಿದ್ದರೆ ಸಿಬ್ಬಲುಗುಡ್ಡೆಗೆ ನಾಳೆ ಬೆಳಿಗ್ಗೆ ಬೇಗ ಬನ್ನಿ, ಅಲ್ಲಿ ನಾನು ಉದಯಿಸುವುದು. ಅಲ್ಲಿಯವರೆಗೆ ತಮಗೆಲ್ಲರಿಗೂ ನಮಸ್ಕಾರ, ಶುಭರಾತ್ರಿ...’ ಎಂದು ಸಿಹಿಮುತ್ತು ಕೊಟ್ಟಂಥ ಆನಂದಾನುಭಾವ ಎಲ್ಲರಿಗಾಯಿತು.

ಹಾಗೇ ಅಲ್ಲೇ ಸಮೂಹ ಛಾಯಾಚಿತ್ರಕ್ಕೆ ಮುಖತೆರೆದು ಅವರವರ ಭಾವಕ್ಕೆ ಅನುಗುಣವಾಗಿ ಕ್ಯಾಮೆರಾ ಕಣ್ಣಿಗೆ ಗುರಿಯಾದೆವು. ನಿಜವಾದ ತೋಟಗಾರಿಕೆ ಎಂದರೆ ಪ್ರಕೃತಿಯನ್ನು ಅದರಿಷ್ಟದಂತೆ ಬೆಳೆಯಲು ಬಿಡುವುದು, ಜೊತೆಗೆ ಅದರೊಂದಿಗೆ ಪರಿಸರಸ್ನೇಹಿಯಾಗಿ ನಡೆದುಕೊಳ್ಳುವುದೆಂದು ಒಳಮನಸ್ಸು ಪಿಸುನುಡಿದಂತಾಯಿತು. ಕವಿಶೈಲದ ಆವರಣದಲ್ಲೇ ಇರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ನೆನಪಿನ ಕಲಾನಿಕೇತನ ಜೀವವೈವಿಧ್ಯ ಛಾಯಾಚಿತ್ರ ಸಂಗ್ರಹಾಲಯವು ಕೂಡ ಇದನ್ನೇ ಪ್ರತಿಬಿಂಬಿಸಿತು. ಮರಳಿ ಮೂಡಿಗೆರೆ ಕಡೆಗೆ ಪಯಣ ಬೆಳೆಸಿದ ವಿದ್ಯಾರ್ಥಿಗಳ ಮಿದು ಹೃದಯ, ಮೂಡಿಗೆರೆಯಲ್ಲಿ ಬಸ್ಸಿಳಿಯುವಾಗ ಒಂದೇ ಭಾವದಿ ಒಕ್ಕೊರಲ ಸವಿ ನುಡಿಯಾಡಿತು. ಅದು ಜೀವನಪೂರ್ತಿ ಚಿರಸ್ಥಾಯಿಯಾದುದು.

‘ನಮ್ಮ ಬೇಡಿಕೆಗೆ ಮನ್ನಣೆ ನೀಡಿ, ಕುಪ್ಪಳಿಗೆ ಕರೆದೊಯ್ದಿದಕ್ಕೆ ಧನ್ಯವಾದಗಳು ಸರ್! ಕುಪ್ಪಳಿಯಂತೆ ನಿಮ್ಮನ್ನೂ ಈ ಜೀವನಪೂರ್ತಿ ಮರೆಯೊಲ್ಲ!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.