ADVERTISEMENT

ಕಾವ್ಯ ಶಾರೀರಕ್ಕೆ ದೃಶ್ಯ ಶರೀರ ತೊಡಿಸಿದಾಗ...

ಪದ್ಮನಾಭ ಭಟ್ಟ‌
Published 19 ಅಕ್ಟೋಬರ್ 2016, 19:30 IST
Last Updated 19 ಅಕ್ಟೋಬರ್ 2016, 19:30 IST
ಕಾವ್ಯ ಶಾರೀರಕ್ಕೆ ದೃಶ್ಯ ಶರೀರ ತೊಡಿಸಿದಾಗ...
ಕಾವ್ಯ ಶಾರೀರಕ್ಕೆ ದೃಶ್ಯ ಶರೀರ ತೊಡಿಸಿದಾಗ...   

ಹೊಸ ಪೀಳಿಗೆಯವರಿಂದ ಕಾವ್ಯ ದೂರವಾಗುತ್ತಿದೆ ಎಂಬುದು ಹಳೆಯ ಹಳಹಳಿಕೆ. ಇದಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಕೂತವರು ಸಾಕಷ್ಟಿದ್ದರೂ, ಹೊಸ ದಾರಿ ಹುಡುಕುವ ಪ್ರಯತ್ನಕ್ಕಿಳಿದವರು ವಿರಳ.

ಇಂದಿನ ಹದಿಹರೆಯದವರಿಗೆ ಅವರು ಬಹುವಾಗಿ ನೆಚ್ಚಿಕೊಂಡಿರುವ ಆಧುನಿಕ ಮಾಧ್ಯಮದ ಮೂಲಕವೇ ಕಾವ್ಯವನ್ನು ತಲುಪಿಸಲು ಸಾಧ್ಯವಾದರೆ ಹೇಗಿರುತ್ತದೆ? ಪುಸ್ತಕದಲ್ಲಿನ ಕಾವ್ಯಗಳಿಗೆ ದೃಶ್ಯಶರೀರ ತೊಡಿಸಿದರೆ ಹೇಗಿರುತ್ತದೆ? ಇಂಥ ಆಲೋಚನೆಯಲ್ಲಿಯೇ ಹುಟ್ಟಿಕೊಂಡಿದ್ದು ನೀನಾಸಮ್‌ ಪ್ರತಿಷ್ಠಾನದ ‘ಕಾವ್ಯ ಕನ್ನಡಿ’ ಯೋಜನೆ.

ವರ್ಷದ ಹಿಂದೆ ಹುಟ್ಟಿದ ಈ ಪರಿಕಲ್ಪನೆಗೆ ಫಲ ಸಿಕ್ಕಿದೆ. ಹೊಸಗನ್ನಡದ ಕವಿತೆಗಳನ್ನಾಧರಿಸಿದ ಎಂಟು ಕಿರುಚಿತ್ರಗಳು ಸಿದ್ಧಗೊಂಡಿವೆ. ನೀನಾಸಮ್‌ನ ಕೆ.ವಿ. ಅಕ್ಷರ ಅವರ ಮಾತಿನಲ್ಲಿಯೇ ಹೇಳುವುದಾದರೆ, ಇದು ಭಿನ್ನ ಕಲಾಪ್ರಕಾರಗಳ ನಡುವೆ ಪರಾಗಸ್ಪರ್ಶ ಮಾಡಿ ಫಲಬಿಡುವ ಗಳಿಗೆಗಾಗಿ ಕಾಯುವ ಯೋಜನೆ.  ­

ತಿಳಿ ಹಸಿರು ಬಣ್ಣದ ಚಿಗುರು ಹುಲ್ಲ ಹೊದ್ದ ವಿಶಾಲ ಬಯಲ ಎದೆಯಿಂದಲೇ ಎದ್ದುನಿಂತ ಒಂಟಿ ಮರ... ಹಿನ್ನೆಲೆಗೆ ನೋಡಿದಷ್ಟೂ ಮನಸೆಲ್ಲ ತುಂಬಿ ಮಿದುಗೊಳಿಸುವಂಥ ದಿವ್ಯ ಆಗಸ... ಅತ್ತ ತುದಿಯಿಂದ ಸೊಂಟದಲ್ಲಿ ನೀರ ಮಡಿಕೆ ಹೊತ್ತು ಪ್ರಯಾಸದಿಂದ ನಡೆದುಬರುತ್ತಿರುವ ತುಂಬು ಗರ್ಭಿಣಿಗೆ ಪ್ರಸವ ವೇದನೆ. ಮರಕ್ಕೊರಗಿ ಕೂತ ಅವಳ ಕೈಯಿಂದ ಜಾರಿದ ಮಡಕೆ ಉರುಳುತ್ತುರುಳುತ್ತಾ ಸಾಗಿ ಕಲ್ಲಿಗೆ ಬಡಿದು ಒಡೆದ ಕ್ಷಣವೇ ಹೊಸ ಜೀವವೊಂದು ಕಣ್ತೆರೆಯುತ್ತದೆ.

ಈಗಷ್ಟೇ ಹುಟ್ಟಿದ ಆ ಮಗುವಿನ ಮೃದು ಕೋಮಲ ಕಣ್ಣೆವೆಗಳೇ ಈ ಜಗದ ನಿಜದ ಬಾಗಿಲುಗಳಾಗಿರಬಹುದೇ? ಕುವೆಂಪು ಅವರ ‘ಸೋಮನಾಥಪುರ ದೇವಾಲಯ’ ಎಂದು ಹೇಳಿದರೆ ಬಹುತೇಕರಿಗೆ ತಿಳಿಯುವುದಿಲ್ಲ. ಆದರೆ ‘ಬಾಗಿಲೊಳು ಕೈ ಮುಗಿದು...’ ಎನ್ನುತ್ತಿದ್ದಂತೆಯೇ ಎಲ್ಲರ ಮುಖದಲ್ಲಿ ಪರಿಚಿತತೆಯ ಮಂದಹಾಸ ಮಿನುಗುತ್ತದೆ. ಮನಸ್ಸಲ್ಲಿ ಹಳೆಯ ದೇಗುಲವೊಂದರ ಹಳೆಯ ಕಲ್ಲಿನ ಬಾಗಿಲ ಚಿತ್ರವೊಂದು ಮನಸಲ್ಲಿ ಮೂಡುತ್ತದೆ. ಆದರೆ ಜಗತ್ತನ್ನೇ ಒಂದು ದೇಗುಲವನ್ನಾಗಿ ನೋಡಿ ಜನನವನ್ನು ಅದರ ಪ್ರವೇಶವನ್ನಾಗಿ ಪರಿಭಾಗಿಸಿಕೊಳ್ಳುವ ಅನನ್ಯ ಸಾಧ್ಯತೆಯೂ ಈ ಪದ್ಯದಲ್ಲಿದೆಯೇ?

***
ಆತ ಯಕ್ಷಗಾನ ಕಲಾವಿದ. ನಡುವಯಸ್ಸು ಮೀರುತ್ತಿದೆ. ಮದುವೆಯಾಗಿಲ್ಲ. ಯಕ್ಷಗಾನ ಪಾತ್ರವೊಂದನ್ನು ಮುಗಿಸಿ ಮುಖಕ್ಕೆ ಎಣ್ಣೆ ಹಾಕಿ ಬಣ್ಣ ಒರೆಸಿಕೊಳ್ಳುವ ಕ್ಷಣ, ಎದುರಿನ ಕನ್ನಡಿಯಲ್ಲಿನ ಅವನದೇ ಬಿಂಬ ಸ್ವತಂತ್ರಗೊಂಡು  ನುಡಿಯತೊಡಗುತ್ತದೆ.

‘ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ
ಬೀದಿಬೀದಿಯನಲೆದು ನೋಡಬೇಕು
ಅಲ್ಲಿ ಎಲ್ಲಾದರೂ ಮರದ ನೆರಳಿಗೆ ಕುಳಿತು
ರಾಮಭದ್ರನ ಮಹಿಮೆ ಹಾಡಬೇಕು’

ಕವಿ ಸು. ರಂ. ಎಕ್ಕುಂಡಿ ಅವರ ಪದ್ಯದ ಸಾಲುಗಳು ಧ್ವನಿಗೊಳ್ಳುತ್ತಾ ಹೋಗುತ್ತಿರುವ ಹಾಗೆಯೇ ಯಕ್ಷಗಾನ ಕಲಾವಿದನ ಬದುಕಿನ ಒಳಸುಳಿಗಳೂ ಸೂಚ್ಯವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮೇಲ್ನೋಟಕ್ಕೆ ರಾಮಭಕ್ತಿಯ ಅಭಿವ್ಯಕ್ತಿಯ ಸಾಧಾರಣ ಸಾಲುಗಳಂತೆ ಕಾಣುವ ಈ ಪದ್ಯದಲ್ಲಿ ತನ್ನ ಬದುಕಿನ ಸೀತೆಯ ಹಂಬಲಿಕೆಯ ಆರ್ತ ಸಾಧ್ಯತೆಯೊಂದು ಎಲ್ಲಿ ಅಡಗಿತ್ತು?
***
ಇವು ಎರಡು ಉದಾಹರಣೆಗಳಷ್ಟೇ. ಹೆಗ್ಗೋಡಿನ ನೀನಾಸಮ್‌ ಪ್ರತಿಷ್ಠಾನ ರೂಪಿಸಿರುವ ‘ಕಾವ್ಯ ಕನ್ನಡಿ’ ಯೋಜನೆಯಲ್ಲಿ ನಿರ್ಮಿತಗೊಂಡ ಎಂಟು ಕಿರುಚಿತ್ರಗಳೂ ಕಾವ್ಯದೊಳಗಿನ ಇಂಥ ಅನನ್ಯ ಸಾಧ್ಯತೆಗಳನ್ನು ಬಗೆದು ಬೆರುಗು ಹುಟ್ಟಿಸುತ್ತವೆ.

ಅರವಿಂದ ಕುಪ್ಳೀಕರ್ ಅವರಿಗೆ ದ.ರಾ. ಬೇಂದ್ರೆ ಬರೆದ ‘ಪುಟ್ಟ ವಿಧವೆ’ ಪದ್ಯದಲ್ಲಿನ ನಾಯಕಿ ಭಾರತಮಾತೆಯ ಸ್ವಾತಂತ್ರ್ಯಾನಂತರದ ದುಃಸ್ಥಿತಿಯ ಪ್ರತಿರೂಪವಾಗಿ ಕಂಡಿದ್ದರೆ, ಕೆ.ಎಸ್‌. ನರಸಿಂಹಸ್ವಾಮಿ ಅವರ ‘ನೀವಲ್ಲವೆ’ ಪದ್ಯ ಬಾಲಾಜಿ ಮನೋಹರ್‌ ಅವರಿಗೆ ಆಧುನಿಕ ಬದುಕಿನ ದಾಂಪತ್ಯದ ಬಿರುಕುಗಳಿಗೆ ಕನ್ನಡಿಯಾಗಿ ಹೊಳೆದಿದೆ.

ಕೆ.ವಿ. ಶಿಶಿರ ಅವರಿಗೆ ಪು.ತಿ.ನ. ಅವರ ‘ಹೊನಲ ಹಾಡು’ ಪದ್ಯ ಸ್ಥಿರ ಮತ್ತು ಚಲನೆಯ ಮನೋದೈಹಿಕ ಸಾಧ್ಯತೆಗಳ ಶೋಧಕ್ಕೆ ಒದಗಿಬಂದಿದ್ದರೆ, ಮೌನೇಶ ಬಡಿಗೇರ ಅವರು, ಚಂದ್ರಶೇಖರ ಕಂಬಾರರ ‘ಸ್ವಂತ ಚಿತ್ರ’ ಪದ್ಯದಲ್ಲಿನ ಅನೂಹ್ಯವನ್ನು ಸಮಕಾಲೀನ ನೃತ್ಯದ ಅಮೂರ್ತ ವಿನ್ಯಾಸದಲ್ಲಿಯೇ ತಾಕಲು ಯತ್ನಿಸಿದ್ದಾರೆ. ಪ್ರತಿಭಾ ನಂದಕುಮಾರ್‌ ಅವರ ‘ಮುದುಕಿಯರಿಗಿದು ಕಾಲವಲ್ಲ’, ಸಿದ್ದಲಿಂಗಯ್ಯ ಅವರ ‘ಅಗ್ನಿಶಾಮಕರು’ ಪದ್ಯಗಳೂ ಇದುವರೆಗಿನ ಓದಿನ ಆಚೆಯ ದೃಶ್ಯಸಾಧ್ಯತೆಗಳಿಗೆ ತೆರೆದುಕೊಂಡಿವೆ.

ಏನಿದು ಕಾವ್ಯ ಕನ್ನಡಿ?
ಹೊಸ ಪೀಳಿಗೆಗೆ ಅವರು ಹೆಚ್ಚಾಗಿ ನೆಚ್ಚುವ ಆಧುನಿಕ ಮಾಧ್ಯಮದ ಮೂಲಕವೇ ಕಾವ್ಯವನ್ನು ತಲುಪಿಸುವ ಉದ್ದೇಶದಿಂದ ನೀನಾಸಮ್‌ ಪ್ರತಿಷ್ಠಾನ ರೂಪಿಸಿರುವ ಯೋಜನೆಯೇ ‘ಕಾವ್ಯ ಕನ್ನಡಿ’.  ಈ ಯೋಜನೆಯಲ್ಲಿ ಹೊಸಗನ್ನಡದ ಪ್ರಮುಖ ಕವಿಗಳ ಆಯ್ದ ಕವಿತೆಗಳನ್ನು ಆಧರಿಸಿ, ದೃಶ್ಯಮಾಧ್ಯಮದ ಮೇಲೆ ತಕ್ಕಮಟ್ಟಿಗೆ ಹಿಡಿತ ಸಾಧಿಸಿರುವ ನಾಲ್ಕು ಯುವ ಕಲಾವಿದರು ಎಂಟು ಕಿರುಚಿತ್ರಗಳನ್ನು ರೂಪಿಸಿದ್ದಾರೆ.

ಈ ಯೋಜನೆಯ ಹಿಂದಿನ ಪ್ರೇರಣೆಗಳ ಬಗ್ಗೆ ನೀನಾಸಮ್‌ನ ಕೆ. ವಿ. ಅಕ್ಷರ ವಿವರಿಸುವುದು ಹೀಗೆ: ‘ಈಗ ಎರಡು ಕಾರಣಕ್ಕಾಗಿ ಕಾವ್ಯ ಅಷ್ಟೊಂದು ಆಕರ್ಷಿತವಾಗಿಲ್ಲ. ಒಂದನೇ ಕಾರಣ, ಕಾವ್ಯವನ್ನು ಎಲ್ಲೆಲ್ಲಿ ಕಲಿಸಬೇಕಾಗಿತ್ತೋ ಅಲ್ಲಿ ಆಕರ್ಷಕವಾಗಿ, ವಿದ್ಯಾರ್ಥಿಗಳಿಗೆ ಕಾವ್ಯದ ಸುಖ ಸಿಗುವ ಹಾಗೆ ಕಲಿಸುತ್ತಿಲ್ಲ.

ಎರಡನೇ ಕಾರಣ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕಾವ್ಯ, ಸಾಹಿತ್ಯ ಇಂಥವುಗಳು ಅಷ್ಟೊಂದು ಉಪಯೋಗಿ ಅಲ್ಲ ಎಂಬ ಮನೋಭಾವ ಬೆಳೆಯುತ್ತಿದೆ.  ಇದರಿಂದ ಕಾವ್ಯದಲ್ಲಿ ಆಸಕ್ತಿ ತಳೆಯಬಹುದಾದಂಥವರೂ ಕಾವ್ಯದಿಂದ ದೂರ ಇರುವಂತಾಗಿದೆ. ಹಾಗಂತ ಕಾವ್ಯವೇ ದುರ್ಬಲ ಆಗಿದೆ ಅಂತಲ್ಲ.  ಕಾವ್ಯದ ಬಗ್ಗೆ ಸಮಾಜ ತೋರಿಸುತ್ತಿರುವ ಆಸಕ್ತಿ ಬೇರೆ ಬೇರೆ ಕಾರಣಗಳಿಂದ ಕುಂದುತ್ತಾ ಇದೆ. ಕಾವ್ಯ ಬರೆಯುವವರು– ಓದುವವರು ನಮ್ಮ ನಡುವೆಯೇ ಇದ್ದಾರೆ. ಆದರೆ ಆ ನೆಲೆಗಳು ಒಂದಕ್ಕೊಂದು ಸಂಪರ್ಕಗೊಳ್ಳುತ್ತಿಲ್ಲ.

ಇಂದಿನ ಹೊಸ ಪೀಳಿಗೆ, ಪುಸ್ತಕಗಳಿಗಿಂತ ಹೆಚ್ಚು ಸಿನಿಮಾ, ಯೂಟ್ಯೂಬ್‌, ಮೊಬೈಲ್‌ಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದೆ. ಆ ಮಾಧ್ಯಮಗಳ ಮೂಲಕವೇ ಪದ್ಯವನ್ನು ತಲುಪಿಸಬೇಕು ಎಂಬ ಪ್ರಯತ್ನ ನಮ್ಮದು.

ಇಂದು ಸಿನಿಮಾ ಮಾಡುವ ತಂತ್ರಜ್ಞಾನವೂ ಸುಲಭವಾಗಿದೆ. ಮೊಬೈಲ್‌ನಲ್ಲಿಯೇ ಸಿನಿಮಾ ಚಿತ್ರೀಕರಿಸಿ, ಲ್ಯಾಪ್‌ಟಾಪ್‌ನಲ್ಲಿ ಸಂಕಲನ ಮಾಡಿ ಯೂಟ್ಯೂಬ್‌ಗೆ ಹಾಕಿಬಿಡಬಹುದು. ನಮ್ಮ ಈ ‘ಕಾವ್ಯ ಕನ್ನಡಿ’ ಇನ್ನಷ್ಟು ಜನರಿಗೆ ಪ್ರೇರೇಪಣೆ ನೀಡುವುದರ ಮೂಲಕ ಹೊಸ ಪೀಳಿಗೆಗೆ ಕಾವ್ಯದ ವ್ಯಾಮೋಹವನ್ನು ಹತ್ತಿಸಲಿ ಎಂಬ ಆಶಯ ನಮ್ಮದು. ಈ ಪ್ರಯತ್ನದ ಮೊದಲ ಹಂತವಾಗಿ ಈ ಕಾವ್ಯಕನ್ನಡಿ ರೂಪಿಸಿದ್ದೇವೆ’.

ಕಾವ್ಯ ಕನ್ನಡಿಯ ಹಲವು ಹಂತಗಳು
ಕಾವ್ಯ ಕನ್ನಡಿ ಹಲವು ಹಂತಗಳಲ್ಲಿ ರೂಪು ತಳೆದ ಯೋಜನೆ. ಇದರ ಮೊದಲ ಹಂತವಾಗಿ ನೀನಾಸಮ್‌ ಪ್ರತಿಷ್ಠಾನ ಕನ್ನಡ ಚಲನಚಿತ್ರ ಮಾಧ್ಯಮದಲ್ಲಿ ಪ್ರಾಥಮಿಕ ತರಬೇತಿ ಮತ್ತು ಅನುಭವ ಪಡೆದು, ಕಿರುಚಿತ್ರಗಳನ್ನು ಮಾಡುತ್ತಿರುವ ಕೆಲವು ಯುವ ಕಲಾವಿದರನ್ನು ಗುರ್ತಿಸಿ ಯೋಜನೆಯಲ್ಲಿ ಅವರಿಗೆ ಅವಕಾಶ ನೀಡಿತು. ಬಾಲಾಜಿ ಮನೋಹರ್‌, ಅರವಿಂದ ಕುಪ್ಳೀಕರ್‌, ಮೌನೇಶ ಬಡಿಗೇರ, ಶಿಶಿರ ಕೆ.ವಿ. ಈ ನಾಲ್ಕು ಯುವ ಕಲಾವಿದರು ಯೋಜನೆಯ ಭಾಗವಾದರು.

ಎರಡನೇ ಹಂತದಲ್ಲಿ 11 ಜನ ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡ ‘ಕಾವ್ಯಕನ್ನಡಿ ಬೆಂಬಲ ಸಮಿತಿ’ಯನ್ನು ರಚಿಸಲಾಯಿತು. ಈ ಯೋಜನೆಗೆ ಸಲಹೆ–ಸಹಕಾರ ನೀಡುವುದು ಮತ್ತು ಕಲಾತ್ಮಕ ಮೇಲುಸ್ತುವಾರಿ ಮಾಡುವುದು ಈ ಸಮಿತಿಯ ಕೆಲಸವಾಗಿತ್ತು. 2015 ಜುಲೈ ತಿಂಗಳಲ್ಲಿ ಈ ನಿರ್ದೇಶಕರ ಗುಂಪು ಮತ್ತು ಬೆಂಬಲ ಸಮಿತಿಗಳೆರಡೂ ಕೂಡಿ ಹೆಗ್ಗೋಡಿನಲ್ಲಿ ಎರಡು ದಿನಗಳ ಚಿಂತನ ಶಿಬಿರ ನಡೆಸಿತು.

ನಂತರವೂ ನಿರ್ಮಾಣ ಪೂರ್ವದ ಹಂತದಲ್ಲಿ, ನಿರ್ಮಾಣ ನಂತರದ ಹಂತಗಳಲ್ಲಿಯೂ ಈ ಸಲಹಾ ಸಮಿತಿ ನಿರ್ದೇಶಕರ ಜತೆಗಿದ್ದು ಹಲವು ಸಲಹೆ ಸೂಚನೆಗಳನ್ನು ನೀಡಿತು. ಪ್ರತಿ ಚಿತ್ರಕ್ಕೆ ನೀನಾಸಮ್‌ ಪ್ರತಿಷ್ಠಾನವು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ 50 ಸಾವಿರ ರೂಪಾಯಿಗಳ ಧನಸಹಾಯ ಮಾಡಿದೆ. ಹಾಗೆಯೇ ಹಲವು ಹಂತಗಳಲ್ಲಿ ನಡೆದ ಸಭೆಗಳ ಆಯೋಜನೆ, ಖರ್ಚು ವೆಚ್ಚಗಳನ್ನೂ ಭರಿಸಿದೆ. ಕವಿಗಳಿಗೆ ಐದು ಸಾವಿರ ಗೌರವಧನ ನೀಡಿದೆ.

2015 ಜುಲೈನಲ್ಲಿ ಆರಂಭವಾದ ಈ ಯೋಜನೆ ಮುಕ್ತಾಯಗೊಂಡಿದ್ದು 2016 ಅಕ್ಟೋಬರ್‌ನಲ್ಲಿ. ಈ ತಿಂಗಳ ಆರಂಭದಲ್ಲಿ ಹೆಗ್ಗೋಡಿನಲ್ಲಿ ನಡೆದ ಐದು ದಿನಗಳ ನೀನಾಸಮ್‌ ಸಂಸ್ಕೃತಿ ಶಿಬಿರದ ಕೊನೆಯ ದಿನ ಎಂಟು ಕಿರುಚಿತ್ರಗಳೂ ಪ್ರದರ್ಶಿತಗೊಂಡಿವೆ. ಅಂದೇ ಸಂಚಿ ಪ್ರತಿಷ್ಠಾನದ ಯೂಟ್ಯೂಬ್‌ ಚಾನೆಲ್‌ ಮೂಲಕ ಅಂತರ್ಜಾಲದಲ್ಲಿಯೂ ಎಲ್ಲ ಚಿತ್ರಗಳು ಬಿಡುಗಡೆಗೊಂಡಿವೆ.

ಸಂಚಿ ಪ್ರತಿಷ್ಠಾನದ ಸಹಯೋಗ
‘ಕಾವ್ಯ ಕನ್ನಡಿ’ ಯೋಜನೆಗೆ ನೀನಾಸಮ್‌ ಪ್ರತಿಷ್ಠಾನಕ್ಕೆ ಸಂಚಿ ಪ್ರತಿಷ್ಠಾನವೂ ಸಹಯೋಗ ಒದಗಿಸಿದೆ. ತಾಂತ್ರಿಕ ಬೆಂಬಲ ನೀಡಿದೆ. ‘ಕನ್ನಡದ ಪದ್ಯಗಳಿಗೆ ಆಧುನಿಕ ಮಾಧ್ಯಮಗಳ ಮೂಲಕ ಮರುವ್ಯಾಖ್ಯಾನ ನೀಡಬೇಕು ಎಂಬ ಉದ್ದೇಶದಿಂದ ನೀನಾಸಮ್‌ ಈ ಯೋಜನೆಗೆ ತೊಡಗಿಕೊಂಡಿತ್ತು. ನಮ್ಮ ಆಸಕ್ತಿಯೂ ಅದೇ ಆಗಿದ್ದ ಕಾರಣದಿಂದ ನಾವೂ ಖುಷಿಯಿಂದಲೇ ಆ ಯೋಜನೆ ಭಾಗವಾದೆವು.

ಕಡಿಮೆ ಖರ್ಚಿನಲ್ಲಿ ಗುಣಮಟ್ಟದಲ್ಲಿ ರಾಜಿಯಾಗದ ಹಾಗೆಯೇ ಹೇಗೆ ಚಿತ್ರ ನಿರ್ಮಾಣ ಮಾಡಬಹುದು ಎಂಬ ಬಗ್ಗೆ ನಾವು ಸಲಹೆ ನೀಡಿದೆವು. ಸದ್ಯಕ್ಕೆ ಸಿನಿಮಾ ರಂಗದಲ್ಲಿ ತೊಡಗಿಕೊಂಡಿರುವ ಹಲವರು ಈ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ. ಆದರೆ ಹಳಬರು ಯಾರೂ ಇಲ್ಲ.

ಎಲ್ಲ ಹೊಸ ಕಲಾವಿದರೇ ಇದ್ದಾರೆ. ತುಂಬ ಹೊಸತು ಎನ್ನುವಂಥದ್ದೇನೂ ಮಾಡಿಲ್ಲ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಆಗುತ್ತಿರುವುದನ್ನೇ ಮಾಡಿದ್ದೇವೆ. ಆದರೆ ಕನ್ನಡ ಕಾವ್ಯವನ್ನು ಒಳಗೊಂಡಿರುವ ಬಗೆ ಹೊಸತಾಗಿದೆ’ ಎಂದು ಬೆಂಬಲ ಸಮಿತಿ ಸದಸ್ಯರಾಗಿರುವ ಸಂಚಿ ಪ್ರತಿಷ್ಠಾನದ ಅಭಯ ಸಿಂಹ ಹೇಳುತ್ತಾರೆ.

ಪೂರ್ತಿ ಉಚಿತ
‘ಕಾವ್ಯ ಕನ್ನಡಿ’ ಯೋಜನೆಯಡಿ ನಿರ್ಮಾಣವಾಗಿರುವ ಎಲ್ಲ ಎಂಟು ಕಿರುಚಿತ್ರಗಳೂ ಕ್ರಿಯೇಟಿವ್‌ ಕಾಮನ್ಸ್‌ ಅಡಿಯಲ್ಲಿ ಬಳಕೆಗೆ ಲಭ್ಯವಿರುತ್ತವೆ. ವಾಣಿಜ್ಯೇತರ ಉದ್ದೇಶಗಳಿಗೆ ಯಾರು ಬೇಕಾದರೂ ಈ ಚಿತ್ರಗಳನ್ನು ಬಳಸಿಕೊಳ್ಳಬಹುದು. ಪ್ರದರ್ಶನ ಏರ್ಪಡಿಸಬಹುದು. ಅದಕ್ಕೆ ಅನುಮತಿ ಪಡೆಯಬೇಕಾದ ಅವಶ್ಯಕತೆಯೂ ಇಲ್ಲ.

ಭವಿಷ್ಯದ ಯೋಚನೆಗಳು: ಈ ಎಂಟು ಕಿರುಚಿತ್ರಗಳು ಕಾವ್ಯ ಕನ್ನಡಿಯ ಮೊದಲ ಹಂತವಷ್ಟೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವ ಯೋಚನೆ ನೀನಾಸಮ್‌ ಪ್ರತಿಷ್ಠಾನಕ್ಕಿದೆ.

ಮುಂದಿನ ವರ್ಷ ಕನ್ನಡ ಕಾವ್ಯ ಆಧಾರಿತ ಕಿರುಚಿತ್ರಗಳ ಸ್ಪರ್ಧೆಯನ್ನು ಆಯೋಜಿಸಿ ದೊಡ್ಡ ಮೊತ್ತದ ಬಹುಮಾನವನ್ನು ಇಡುವ ಆಲೋಚನೆ ಪ್ರತಿಷ್ಠಾನಕ್ಕಿದೆ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವ ಪೀಳಿಗೆ ಕನ್ನಡ ಕಾವ್ಯವನ್ನು ದೃಶ್ಯಮಾದ್ಯಮದೊಂದಿಗೆ ಅನುಸಂಧಾನ ನಡೆಸಲು ಪ್ರಯತ್ನಿಸಬಹುದು ಎಂಬ ಆಶಯ ಈ ಯೋಜನೆಯ ಹಿಂದಿದೆ.

ಕಾವ್ಯ ಕನ್ನಡಿ ಕಿರುಚಿತ್ರಗಳನ್ನು http://bit.ly/kannDi ಕೊಂಡಿ ಬಳಸಿ ನೋಡಬಹುದು. ಕಾವ್ಯ ಕನ್ನಡಿ ಬೆಂಬಲ ಸಮಿತಿ ಸದಸ್ಯರು: ಅಕ್ಷರ ಕೆ.ವಿ., ಅಶೋಕ ಟಿ.ಪಿ., ಜಸವಂತ ಜಾಧವ, ಗಿರೀಶ ಕಾಸರವಳ್ಳಿ, ಅಭಯ ಸಿಂಹ,  ಎಸ್‌. ದಿವಾಕರ್‌, ವಿವೇಕ ಶಾನಭಾಗ, ದೀಪಾ ಗಣೇಶ್‌, ಎಸ್‌.ಆರ್‌. ವಿಜಯ ಶಂಕರ, ಅಶೋಕ ಹೆಗಡೆ.

***
ಕೆಲವರು ಕಾವ್ಯ ಓದುವುದಕ್ಕಷ್ಟೇ ಇರುವುದು, ಅದನ್ನು ದೃಶ್ಯಮಾಧ್ಯಮಕ್ಕೆ ತಂದರೆ ಅದು ಕಲ್ಪನೆಗೆ ಹಾಕಿಕೊಂಡ ಮಿತಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ನನ್ನ ಪ್ರಕಾರ ಕಾವ್ಯವನ್ನು ದೃಶ್ಯಮಾಧ್ಯಮಕ್ಕೆ ತಂದಾಗ ಅದರ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತವೆ.

ಇಂಥ ಪ್ರಯತ್ನವಾದ ‘ಕಾವ್ಯ ಕನ್ನಡಿ’ಯ ಭಾಗವಾಗಿದ್ದಕ್ಕೆ ನನಗೆ ತುಂಬ ಖುಷಿಯಿದೆ. ಇದು ಕೆಲವರಿಗೆ ಇಷ್ಟವಾಗಬಹುದು, ಇನ್ನೂ ಕೆಲವರಿಗೆ ಇಷ್ಟವಾಗದಿರಬಹುದು. ಆದರೆ ಒಟ್ಟಾರೆ ಪರಿಣಾಮವನ್ನಂತೂ ಬೀರುತ್ತದೆ. ಈ ಇಡೀ ಯೋಜನೆಯ ಉದ್ದೇಶವೇ ಯುವ ಪೀಳಿಗೆಯಲ್ಲಿ ಕಾವ್ಯ ಪ್ರೀತಿ ಹುಟ್ಟಿಸುವುದು. ಆದ್ದರಿಂದ ಶಾಲಾ– ಕಾಲೇಜುಗಳಲ್ಲಿ ಈ ಚಿತ್ರಗಳನ್ನು ಪ್ರದರ್ಶಿಸಿದರೆ ಒಂದಿಷ್ಟು ವಿದ್ಯಾರ್ಥಿಗಳಾದರೂ ಕಾವ್ಯದ ಬಗೆಗೆ ಆಸಕ್ತಿ ಬೆಳೆಸಿಕೊಳ್ಳಬಹುದು.
–ಅರವಿಂದ್‌ ಕುಪ್ಳೀಕರ್‌


***

ಈ ಯೋಜನೆಯಲ್ಲಿ ವಿವಿಧ ಹಂತಗಳಲ್ಲಿ ಪಾಲ್ಗೊಳ್ಳುತ್ತ, ಪದ್ಯವನ್ನು ಓದುವ ಹಲವು ಬಗೆಗಳನ್ನು ತಿಳಿದುಕೊಳ್ಳುತ್ತಾ ಹೋದೆ. ಉಳಿದ ಕಲಾವಿದರ ಜತೆ ಚರ್ಚಿಸುವಾಗ ಒಂದೇ ಪದ್ಯವನ್ನು ಎಷ್ಟೆಲ್ಲ ಬಗೆಗಳಲ್ಲಿ ಓದಿಕೊಳ್ಳಬಹುದು ಎಂಬ ಸಾಧ್ಯತೆಗಳೆಲ್ಲ ತೆರೆದುಕೊಳ್ಳುತ್ತ ಹೋದವು. ತುಂಬ ಆಸಕ್ತಿದಾಯಕ ಪ್ರಕ್ರಿಯೆ ಇದು.

ಒಂದು ಕಥೆಯನ್ನು ಸಿನಿಮಾ ಮಾಡುವಾಗ ಪಾತ್ರಗಳ ಚಲನೆ, ವಿವರಗಳು ಎಲ್ಲವೂ ಲಭ್ಯವಿರುತ್ತವೆ. ಆದರೆ ಪದ್ಯ ಹಾಗಲ್ಲ. ಇಲ್ಲಿ ಎಲ್ಲವನ್ನೂ ನಿರ್ದೇಶಕನೇ ಕಟ್ಟಿಕೊಳ್ಳಬೇಕಾಗುತ್ತದೆ. ಇದೊಂದು ಸವಾಲು.

ಹೀಗೆ ಒಂದೊಂದು ಪಾತ್ರಗಳನ್ನು ಸೃಷ್ಟಿಸಿಕೊಂಡಾಗಲೂ ಅದರ ಚಲನೆ, ಅಭಿನಯ, ಕ್ಯಾಮೆರಾ ನೋಟ ಎಲ್ಲವಕ್ಕೂ ಹೊಸ ಹೊಸ ಅರ್ಥ ಸಾಧ್ಯತೆಗಳೇ ಹುಟ್ಟಿಕೊಳ್ಳುತ್ತವೆ.

ಅದೊಂದು ವಿಶಿಷ್ಟ ಅನುಭವ. ಸಿನಿಮಾ ಮಾಧ್ಯಮವನ್ನು ಅರ್ಥ ಮಾಡಿಕೊಳ್ಳುವುದಕ್ಕೆ, ಸಿನಿಮಾ ಮಾಡುವವನ ಮನಸ್ಥಿತಿ ಅರ್ಥ ಮಾಡಿಕೊಳ್ಳುವುದಕ್ಕೆ ಮತ್ತು ಪದ್ಯವನ್ನು ಅರ್ಥೈಸಿಕೊಳ್ಳಲಿಕ್ಕೆ ಈ ಮೂರೂ ನಿಟ್ಟಿನಲ್ಲಿಯೂ ‘ಕಾವ್ಯ ಕನ್ನಡಿ’ಯಂಥ ಯೋಜನೆಗಳು ಸಹಕಾರಿಯಾಗಿವೆ.
-ಶಿಶಿರ ಕೆ.ವಿ.

***
ಮೊದಲು ಕಾವ್ಯ ಕನ್ನಡಿ ಯೋಜನೆಯ ಬಗ್ಗೆ ಕೇಳಿದಾಗ ಇದು ಯಶಸ್ವಿ ಆಗಲಾರದು ಎನಿಸಿತ್ತು. ಕಾವ್ಯ ಇರುವುದು ಒಬ್ಬ ಸಹೃದಯ ಖಾಸಗಿಯಾಗಿ ಅನುಸಂಧಾನ ಮಾಡುವುದಕ್ಕೆ. ಬಾಯಿಬಿಟ್ಟು ಓದಿದಾಕ್ಷಣ ಅದಕ್ಕೊಂದು ಮಿತಿ ಹುಟ್ಟಿಕೊಳ್ಳುತ್ತದೆ. ಹಾಗೆಯೇ ದೃಶ್ಯಮಾಧ್ಯಮವೆಂಬುದು ಬೇರೆಯದೇ ಪ್ರಕಾರ. ಕಾವ್ಯಕ್ಕೆ ತನ್ನದೇ ಆದ ಲಯ, ಛಂದಸ್ಸು ಇರುವ ಹಾಗೆ ದೃಶ್ಯ ಮಾಧ್ಯಮಕ್ಕೂ ತನ್ನದೇ ಆದ ವ್ಯಾಕರಣ ಇದೆ.

ಹೀಗೆ ಅವೆರಡನ್ನೂ ಸೇರಿಸಲು ಹೋದಾಗ ಒಂದೋ ಕಾವ್ಯ ಹಾಳಾಗಿ ಸಿನಿಮಾ ಚೆನ್ನಾಗಿ ಆಗುತ್ತದೆ, ಇಲ್ಲವೇ ಸಿನಿಮಾ ಹಾಳಾಗಿ ಕಾವ್ಯಕ್ಕೆ ಹೊಸ ಅರ್ಥ ಸಿಗುತ್ತದೆ. ಈ ಎರಡೂ ದಾರಿಗಳನ್ನು ಬಿಟ್ಟು, ಕಾವ್ಯಕ್ಕೂ ಹೊಸ ಅರ್ಥ ವಿಸ್ತಾರ ಸಿಗಬೇಕು, ಸಿನಿಮಾದ ಹೊಸ ಸಾಧ್ಯತೆಗಳೂ ತೆರೆದುಕೊಳ್ಳಬೇಕು ಎಂಬುದು ನನ್ನ ಮನಸ್ಸಿನಲ್ಲಿತ್ತು.

ಅವೆರಡೂ ತಮ್ಮ ಪಾಡಿಗೆ ತಾವು ಸ್ವತಂತ್ರ ಕೃತಿಗಳಾಗಿಯೂ ನಿಲ್ಲಬೇಕು, ಹಾಗೆಯೇ ಅವೆರಡನ್ನೂ ಸೇರಿಸಿದಾಗ ಯಾವುದೂ ಕೆಡದೇ ಹೊಸ ಸಾಧ್ಯತೆ ತೆರೆದುಕೊಳ್ಳಬೇಕು ಎಂಬುದು ನನ್ನ ಉದ್ದೇಶವಾಗಿತ್ತು.

ಕುವೆಂಪು ಅವರ ಪದ್ಯ ‘ಸೋಮನಾಥಪುರದ ದೇವಾಲಯ’ದಲ್ಲಿ ಬೇಗ ಬೇಗನೇ ಇಮೇಜ್‌ಗಳು ಹೊಳೆಯುತ್ತ ಹೋದವು. ಅದು ಈಗಾಗಲೇ ಹಲವು ಸಲ ಬೇರೆಬೇರೆ ಕಡೆಗಳಲ್ಲಿ ಬಳಸಿಕೊಂಡಿರುವ ಜನಪ್ರಿಯ ಪದ್ಯ. ಆ ಎಲ್ಲ ವ್ಯಾಖ್ಯಾನಗಳನ್ನೂ ಒಡೆದು ಹೊಸದನ್ನು ಕಟ್ಟಬೇಕು ಎಂಬ ಉದ್ದೇಶದಿಂದ ಹೊಸದೇ ರೀತಿಯ ಇಮೇಜ್‌ಗಳನ್ನು ಬಳಸಿಕೊಂಡು ಕಿರುಚಿತ್ರ ಮಾಡಿದ್ದೇನೆ.

ಆದರೆ ಚಂದ್ರಶೇಖರ ಕಂಬಾರರ ‘ಸ್ವಂತ ಚಿತ್ರ’ ಹಾಗಲ್ಲ. ಅದು ಹಲವು ಹಂತಗಳಲ್ಲಿ ಮನಸ್ಸಿನಲ್ಲಿ ಇಳಿಯುತ್ತಾ ಹೋಗುವ ಪದ್ಯ. ತುಂಬಾ ಪೊಲಿಟಿಕಲ್‌ ಆಗಿ ಕೂಡ ಇದೆ. ಪದ್ಯವಾಗಿ ಬೆಳೆಯುತ್ತಲೇ ಹೊಗಲು ಬೇಕಾದ ಎಲ್ಲ ಅಂಶಗಳೂ ಈ ಪದ್ಯದಲ್ಲಿ ಇವೆ. ವಿಷುವಲ್‌ ಆಗಿಯೂ ಅದನ್ನು ಹೇಳಲು ಪ್ರಯತ್ನಿಸಿದ್ದೇನಿ. ಮುಂದೆ ಇಂಥ ಪ್ರಯತ್ನ ಮಾಡುವವರಿಗೆ ಮಾದರಿ ಆಗಬೇಕು ಎಂಬ ಉದ್ದೇಶದಿಂದ ಗುಣಮಟ್ಟಕ್ಕೂ ಸಾಕಷ್ಟು ಗಮನ ನೀಡಿದ್ದೇನೆ.
–ಮೌನೇಶ ಬಡಿಗೇರ

***

ಒಂದು ಕಾವ್ಯಕ್ಕೆ ದೃಶ್ಯರೂಪ ನೀಡುವುದು ಹೊಸ ವಿಷಯ ಅಲ್ಲ. ಕನ್ನಡದ ಅನೇಕ ಕವಿಗಳ ಕಾವ್ಯಗಳನ್ನು ಸಿನಿಮಾಗಳಲ್ಲಿ ಆ ರೀತಿ ಬಳಸಿಕೊಳ್ಳಲಾಗಿದೆ. ಆದರೆ ಕಾವ್ಯ ಕನ್ನಡಿ ಅದಕ್ಕಿಂತ ಭಿನ್ನ ಪ್ರಯೋಗ.

ಸಾಮಾನ್ಯವಾಗಿ ಸಿನಿಮಾದ ಕಥೆಗೆ ಹೊಂದುವಂಥ ಕಾವ್ಯವನ್ನು ಆಯ್ದುಕೊಂಡು ಬಳಸಿಕೊಳ್ಳಲಾಗುತ್ತದೆ. ಆದರೆ ಇಲ್ಲಿ ಮೊದಲು ಕಾವ್ಯವನ್ನು ಆಯ್ದುಕೊಂಡು ನಂತರ ಅದರ ಮೂಲಕವೇ ಕಥೆಯನ್ನು ಹುಟ್ಟಿಸಲಾಯಿತು. ಇದು ಹೊಸ ಪ್ರಯತ್ನ. ಹೊಸ ರೀತಿಯ ಅರ್ಥವ್ಯಾಖ್ಯಾನ.
 
ನನಗೆ ಕನ್ನಡ ಕಾವ್ಯ ಲೋಕ ಬಹುಮಟ್ಟಿಗೆ ಅಪರಿಚಿತವೇ ಆಗಿತ್ತು. ‘ಕಾವ್ಯ ಕನ್ನಡಿ’ ನನ್ನ ಮಟ್ಟಿಗೆ ಕನ್ನಡ ಕಾವ್ಯ ಜಗತ್ತನ್ನು ಪರಿಚಯಿಸಿಕೊಳ್ಳುವ ಕಾರ್ಯಾಗಾರವೂ ಆಗಿತ್ತು.

ಬೇರೆಯವರು ಮಾಡಿದ ಕಿರುಚಿತ್ರಗಳನ್ನು ನೋಡಿ ಆ ಕವಿಗಳ ಪದ್ಯಗಳನ್ನು ಓದಬೇಕು ಅನ್ನಿಸಿದೆ. ಇಂಥ ಇನ್ನಷ್ಟು ಪ್ರಯತ್ನಗಳನ್ನು ಮಾಡಬೇಕು ಅನ್ನಿಸಿದೆ. ಕನ್ನಡ ಕಾವ್ಯದ ಗಂಭೀರ ವಿದ್ಯಾರ್ಥಿಗಳಿಗೆ ಈ ಕಿರುಚಿತ್ರಗಳು ಇಷ್ಟವಾಗದೆಯೂ ಇರಬಹುದು. ಆದರೆ ಹೊಸಬರಿಗೆ ಇದು ಆಕರ್ಷಕವಾಗಿ ಕಂಡು, ಕಾವ್ಯದ ಅಭಿರುಚಿ ಬೆಳೆಸಿಕೊಳ್ಳಲು ನೆರವಾಗುತ್ತದೆ. ನಮ್ಮ ಮುಖ್ಯ ಉದ್ದೇಶವೂ ಅದೇ ಆಗಿತ್ತು. 
–ಬಾಲಾಜಿ ಮನೋಹರ್‌
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.