ಆಗ ತಾನೆ ಪಿಯುಸಿ ಮುಗಿಸಿ ಡಿಗ್ರಿಗೆ ಸೇರಿಕೊಂಡಿದ್ದೆ. ಬಣ್ಣ ಬಣ್ಣದ ಲೋಕ ಅದು. ಬರೆಯಲು, ಬಣ್ಣಿಸಲು ಪದಗಳಿಗೆ ನಿಲುಕದ ಜಗತ್ತು. ಎಲ್ಲವೂ ಹೊಸತು. ಜೊತೆಗೆ ಹೆಜ್ಜೆ ಹೆಜ್ಜೆಗೂ ಹೊರದೂಡಿದಷ್ಟೂ ಮತ್ತೆ ಬಂದು ಅಣಕಿಸುವ ಕೀಳರಿಮೆ. ಇಂಗ್ಲಿಷ್ ಮಾತನಾಡಲು ಬರದೇ ಇದ್ದುದೇ ಭೂತಾಕಾರದಲಿ ಕಾಡುತ್ತಲಿತ್ತು. ಹೊಸ ಕಾಲೇಜು, ಹೊಸ ಗೆಳೆಯರು, ಅವರ ಜೀವನಶೈಲಿ, ನಗರ ಜೀವನ, ಹಾಸ್ಟೆಲ್...ಎಲ್ಲದರ ಮುಂದೆ ನಾನು ನೂರು ಚಿಕ್ಕವಳು ಅನ್ನುವ ಭಾವನೆ. ನನ್ನತ್ತ ನೆಟ್ಟ ಕಣ್ಣುಗಳೆಲ್ಲವೂ ನಗೆಯಾಡುತ್ತಿವೆ ಎನ್ನುವ ಅಳುಕು. ಯಾರು ಎದುರಾದರೂ ಬಾರದ ಭಾಷೆಯ ಬಳಸುವಾಗಿನ ಮುಜುಗರ. ಎಲ್ಲರನೂ ಕಣ್ತಪ್ಪಿಸಿ ಓಡಾಡುವ ಕಾಯಕ. ಒಡಲಾಳದಲಿ ಚೂರಿ ಇರಿದಂತಹ ಅನುಭವ, ನೋವು.
ಬಾಯಿ ತೆರೆದರೆ ಬಣ್ಣಗೇಡು ಎನ್ನುವ ಸ್ಥಿತಿ. ಆಗಾಗ ಕಣ್ಣ ಹನಿಗಳು ಗಲ್ಲ ತೋಯಿಸುತ್ತಿದ್ದ ಪರಿಸ್ಥಿತಿ. ಗಂಟು ಮೂಟೆ ಕಟ್ಟಿಕೊಂಡು ಮನೆಯ ಹಾದಿ ಹಿಡಿದು ಬಿಡೋಣ ಎಂದು ಯೋಚಿಸಿದ್ದು ಅದೆಷ್ಟೋ ಬಾರಿ. ಅಪ್ಪಅಮ್ಮನ ಕನಸು ನನಸು ಮಾಡುವ ಆಸೆ ಕತ್ತಲ ಕೋಣೆಯೊಳಗಿನ ಬೆಳಕಿನ ಕಿಂಡಿ. ಮುತ್ತಿಕೊಂಡ ಗೊಂದಲದ ಗೂಡಲ್ಲಿ ಮತ್ತೆ ಮತ್ತೆ ಹೊಸ ರೂಪವ ತಾಳುವ ಕಾರ್ಮೋಡದ ಕರಿನೆರಳು. ನನ್ನ ಈ ಜನ್ಮದ ಹಣೆಬರಹವೇ ಇಷ್ಟು, ಇನ್ನೂ ಅದೆಷ್ಟು ಸಹಿಸಿಕೊಳ್ಳಬೇಕೋ ಈ ಕೀಳರಿಮೆಯ ಎನ್ನುವ ನಿಟ್ಟುಸಿರು. ಒಡಲಾಳದ ದುಗುಡದಲಿ ನಿದ್ದೆಯ ಕಳೆದುಕೊಂಡು ಎಣಿಸಿದ ಜಂತೆಯ ತೊಲೆಗಳು. ಎಲ್ಲೆಂದರಲ್ಲಿ ಹರಿಯುತ್ತಾ ಸಾಗುವ ಯೋಚನೆಯ ಅಲೆಗಳು. ಅದು ಬರೀ ಮೌನದ ಯಾರಿಗೂ ತೋಡಿಕೊಳ್ಳಲಾಗದ ಮಾತು.
ಇದಕ್ಕೆ ಕೊನೆ ಯಾವಾಗ? ಎಂದು ನನ್ನನು ನಾನೇ ಕೇಳಿಕೊಂಡುದು ಅದೆಷ್ಟೋ ಬಾರಿ. ಪ್ರತಿ ಹೆಜ್ಜೆಯಲ್ಲೂ ಹೃದಯದ ಮೂಲೆಯಲ್ಲಿ ಆತ್ಮವಿಶ್ವಾಸ ಸುಟ್ಟ ವಾಸನೆ ಬಡಿಯುವುದು ನನಗೇ ತಿಳಿಯುತ್ತಿತ್ತು. ಅದೆಷ್ಟೋ ಬಾರಿ ಹಾಸ್ಟೆಲ್ಲಿನ ಮಹಡಿಯ ಮೇಲೆ ಯಾರಿಗೂ ಕಾಣದಂತೆ ಅತ್ತಿದ್ದು. ಕಗ್ಗತ್ತಲಲ್ಲೂ ಮಿನುಗುತ್ತಿದ್ದ ನಕ್ಷತ್ರಗಳು ನನ್ನಳುವ ಕೇಳಿ ಚಂದಿರನಿಗೆ ಚಾಡಿ ಹೇಳಿದಕ್ಕೋ ಏನೋ ಅವನೂ ಮೋಡಗಳೊಳಗೆ ಅಡಗಿ ಕುಳಿತು ಬಿಡುತ್ತಿದ್ದ ಅನ್ನಿಸುತ್ತಿತ್ತು. ಪ್ರತಿದಿನ ಗಾಯವಿಲ್ಲದ ನೋವಿನ ಗಿಡ ಬೆಳೆಯತೊಡಗಿತು. ಅದನ್ನು ಮರೆ(ಮಾಯಿ)ಸುವುದ ಬಿಟ್ಟು ಮತ್ತೆ ಮತ್ತೆ ನಾನೇ ಕೆರೆದು ದೊಡ್ಡದಾಗಿ ಮಾಡುತ್ತಲಿದ್ದೆ ತಿಳಿದೂ... ತಿಳಿಯದೆಯೂ...
ಅವತ್ತು ಗುಂಪಿನಲ್ಲಿ ಕಾಳ ಹೆಕ್ಕಿ ತಿನ್ನುತ್ತಲಿದ್ದ ಒಂಟಿ ಕಾಲಿನ ಪಾರಿವಾಳದ ಹೋರಾಟವ ಕಂಡು ಒಡಲಾಳ ನೊಂದು ದೇವರಿಗೊಂದಿಷ್ಟು ಶಾಪ ಹಾಕಿತ್ತು. ಅದರ ಬಗ್ಗೆ ಎರಡು ದಿನಗಳವರೆಗೆ ಯೋಚನೆಯ ಕೊಳದಲ್ಲೇ ಮುಳುಗಿತ್ತು. ಕೊನೆಗೊಂದು ನಿರ್ಣಯ, ಪ್ರಯತ್ನ, ಕಲಿಕೆ, ದೃಢ ನಿರ್ಧಾರ, ಹೋರಾಟ, ಅಂತಿಮವಾಗಿ ಜಯ ಪಡೆಯಲೇಬೇಕು ಎನ್ನುವ ಛಲ. ಯಾವುದೇ ಅವಮಾನ, ನೋವು, ಕೀಳರಿಮೆಯ ಒಳ ನುಗ್ಗಲು ಬಿಡದೆ ಸಾಧಿಸಲೇ ಬೇಕೆನ್ನುವ ಹಟವ ತುಂಬಿಕೊಂಡು ಸಾಧನೆಯ ಹಾದಿಯತ್ತ ಮುನ್ನುಗ್ಗಲು ಪ್ರಯತ್ನಿಸಿದ್ದು ನಿಧಾನವಾಗಿ ಫಲವ ಕೊಡಲಾರಂಭಿಸಿತು.
ಅಂದಿನಿಂದ ಮನಸ್ಸು ನಿರ್ಧರಿಸಿ ಬಿಟ್ಟಿತು. ನಾನು ನಾನಾಗಿರುವುದೇ ಬಹಳ ಮುಖ್ಯ. ಅದಕ್ಕಾಗಿ ನಾನು ಪ್ರಯತ್ನ ಮತ್ತು ಕಲಿಕೆಯ ಬಿಟ್ಟು ಏನನ್ನೂ ಮಾಡಬೇಕಿಲ್ಲ. ಆತ್ಮವಂಚನೆ, ಕೀಳರಿಮೆಯ ಚಕ್ರವ್ಯೂಹದಲಿ ಸುತ್ತಿಕೊಳ್ಳಬೇಕಿಲ್ಲ. ಒಳಗಿದ್ದುಕೊಂಡೇ ನನ್ನನ್ನು ಚಿಂದಿಯಾಗಿಸುತ್ತಿರುವ ಕೀಳರಿಮೆಯನ್ನು ಜೀವನದ ಯಾವುದೇ ಹಂತದಲ್ಲಿ ಎದುರಾದರೂ ಕಾಣದ ಊರಿಗೆ ಕಿತ್ತೆಸೆದು ಬಿಡುವೆ. ಜೊಳ್ಳಿನ ಕಣಗಳಿಗೇನು ಕೆಲಸ ಒಡಲಾಳದ ಗೂಡಲಿ? ಅಮೂರ್ತವ ಬಡಿದೋಡಿಸಿ ಮೂರ್ತ ರೂಪವ ನೀಡಿ ನನ್ನಲೇ ಕಾಣದೆ ಅಡಗಿರುವ ಗುಣಗಳ ಬಡಿದೆಬ್ಬಿಸುವೆ ಎನ್ನುವ ಶಪಥ ಮಾಡಿದೆ. ಆಗಿನಿಂದ ಅದೇನೋ ಸಂತಸ ನಾನು ಮಾಡುವ ಪ್ರತಿ ಕೆಲಸದಲ್ಲೂ, ಒಡಲಾಳದ ಇಳಿಜಾರಿನಲ್ಲೂ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.