ನಿಶ್ಚಲ ಕತ್ತಲಿನಲ್ಲಿ, ಚಳಿಗಾಲದ ತೆಳು ಮಂಜಿನ ಹೊದಿಕೆಯಲ್ಲಿ, ಮೂಕವಾಗಿದ್ದ ದಾರಿಗೆ ಒಮ್ಮೆಗೇ ನಾಲ್ಕು ಜೋಡಿ ಚಕ್ರಗಳು ಚಕ್ಕಂದಕ್ಕೆ ಸಿಕ್ಕ ಸಂಭ್ರಮ. ‘ರೊಂಯ್, ರೊಂಯ್, ರೊಂಯ್!’ ಕರಿಯ ಹೊಗೆಯಿಲ್ಲ, ಕರ್ಕಶ ಧ್ವನಿಯಿಲ್ಲ, ಹರಿದೋಡುವ ಧಾವಂತವಿಲ್ಲ– ಸಮಾಧಾನದ ಸವಾರಿಯ ನಾವು, ನಾಲ್ವರು, ಸೈಕಲ್ ಸವಾರರು.
ಮಾರ್ಗದಂಚಿನ ಬಿಳಿಗೀಟು ನಮ್ಮ ಸಂಗಾತಿ, ದಾರಿಯ ಪ್ರತಿ ಕಿರಿಬಿರಿಯೂ ಜಲ್ಲಿಕಣವೂ ನಿವಾರಿಸಬೇಕಾದ ಅಡ್ಡಿ. ಆದರೆ ಲಕ್ಷ್ಯವೋ ಒಂದೇ ದಿನದಲ್ಲಿ ಮಂಗಳೂರಿನಿಂದ ಶತೋತ್ತರ ಕಿ.ಮೀ. ಅಂತರದ ಕುದುರೆಮುಖ ಪಟ್ಟಣ ಮುಟ್ಟಿ ಮರಳುವುದು; ಸುಮಾರು ಇನ್ನೂರಿಪ್ಪತ್ತು ಕಿ.ಮೀ. ಸವಾರಿ. ನಗರ ಮಿತಿಯೊಳಗೆ ಬೀದಿದೀಪಗಳ ಅತಿರೇಕದಲ್ಲಿ ದೃಷ್ಟಿಮಂದನೂ ಸಂಭ್ರಮಿಸಬಹುದಿತ್ತು.
ಅಲ್ಲಿ ನಮ್ಮ ಗುರುತಿಗೂ ಉಳಿದಂತೆ, ಕತ್ತಲ ಓಟಗಳಲ್ಲಿ ನಮ್ಮ ನೋಟಕ್ಕೂ ಒದಗುವಂತೆ ಬೆಳಕಿನಕೋಲು ಎದುರು ಬಿಟ್ಟಿದ್ದೆವು. ಅದಕ್ಕೂ ಮುಖ್ಯವಾಗಿ ಹಿಂಬಾಲಿಸುವವರಲ್ಲಿ ನಮ್ಮ ಕುರಿತು ಜಾಗೃತಿಯನ್ನುಂಟುಮಾಡುವಂತೆ ಹಿಂದೆ ಕೆಂಪು ಮಿನುಗಿನ ದೀಪವನ್ನೂ ಸಿಕ್ಕಿಸಿಕೊಂಡಿದ್ದೆವು.
ಉಡುಪಿಯತ್ತ ಹೋಗುವ ಹೆದ್ದಾರಿ ನಮಗೊಂದು ಲೆಕ್ಕವೇ ಅಲ್ಲ. ಪಡುಬಿದ್ರೆಯಲ್ಲಿ ಮೊದಲ ಸುತ್ತಿನ ಕಾಫಿ–ತಿಂಡಿ. ಮತ್ತೆ ಕಾರ್ಕಳದ ಕವಲಿಗೆ ಹೊರಳಿಕೊಂಡೆವು. ನಾಲ್ಕು ದಶಕಗಳ ಹಿಂದೆ ಕುದುರೆಮುಖ ಗಣಿ ಯೋಜನೆಗಾಗಿ ರೂಪುಗೊಂಡಿದ್ದ ಈ ದಾರಿ ಗಣಿಗಾರಿಕೆ ಕಳಚಿದ ಮೇಲೆ ಮಂಕಾಗಿತ್ತು.
ಆದರೆ ವನ್ಯ ನಷ್ಟದಲ್ಲಾದರೂ ಸರಿ, ದಾರಿಯನ್ನು ರಾಷ್ಟ್ರೀಯ ಸ್ಥಾನಕ್ಕೇರಿಸುವ ಲಾಭಬಡುಕರ ಹಂಚಿಕೆಯಲ್ಲಿ ಇಂದು ಅದ್ಭುತ ಪುನರುಜ್ಜೀವನ ಪಡೆಯುತ್ತಿದೆ. ನಂದಿಕೂರು ಕಳೆಯುತ್ತಿದ್ದಂತೆ ಅರುಣರಾಗ ಪಸರಿಸಿತು. ಬೆಳ್ಮಣ್ಣಿಗಾಗುವಾಗ ಸೂರ್ಯ ಬೆಳ್ಕರಿಸಿದ. ಕಾರ್ಕಳ ಸಮೀಪಿಸುತ್ತಿದ್ದಂತೆ ನಮ್ಮ ದಿಟ್ಟಿಯನ್ನಡ್ಡಗಟ್ಟಬೇಕಿದ್ದ ಪಶ್ಚಿಮಘಟ್ಟ ಶ್ರೇಣಿ ಮಾತ್ರ ಮಂಜಿನ ಮರೆಯಲ್ಲೇ ಉಳಿದಿತ್ತು. ಬಜಗೋಳಿಯಲ್ಲಿ ಇನ್ನೊಂದು ಲಘೂಪಹಾರ ಸೇವಿಸಿ, ಪೂರ್ಣ ಏರುದಾರಿಗೆ ಸಜ್ಜಾದೆವು.
ಮಾಳ ಕೈಕಂಬ - ಕುದುರೆಮುಖ ರಾಷ್ಟ್ರೀಯ ಉದ್ಯಾನದ ಗಡಿ ಠಾಣೆ. ಬಂಡಿಪುರ, ಮುದುಮಲೈ ವನಧಾಮಗಳಲ್ಲಿ ಸೈಕಲ್ ಮತ್ತು ಚಾರಣವನ್ನು ಆನೆಗಳ ಭಯದಲ್ಲಿ ನಿಷೇಧಿಸಲಾಗಿದೆ. ಇಲ್ಲಿ ಆನೆಗಳಿಲ್ಲದಿರುವುದಕ್ಕೋ ಏನೋ ನಮ್ಮನ್ನು ಯಾರೂ ಕೇಳಲಿಲ್ಲ, ತುಸು ಅಂತರದಲ್ಲೇ ಘಟ್ಟದ ಏರುದಾರಿ ಮೊದಲಿಟ್ಟಿತು. ಅದು ತಂಪಿನ ದಿನ.
ಸಾಲದ್ದಕ್ಕೆ ಎತ್ತೆತ್ತರಕ್ಕೆ ಕಾಲೂರಿ ಮೇಲೆ ಹಸುರಿನ ಕೊಡೆಯರಳಿಸಿದ ಕಾಡೂ ನಮ್ಮ ಅನುಕೂಲಕ್ಕಿತ್ತು. ಏರು ಮಾತ್ರ ಸೈಕಲ್ಲಿನ ಗೇರು ಸಂಯೋಜನೆಯಲ್ಲಿ ಕನಿಷ್ಠ ವಲಯದಿಂದ– ಅಂದರೆ, 1 ಗುಣಿಸು 3 ಅಥವಾ 2 ಅಥವಾ 1, ಇದರಿಂದ ಬಿಡುಗಡೆಯೇ ಕೊಡದಂತಿತ್ತು.
‘ಉಸ್ಸೂಊಊ’ ಅಂತ ಐದು ಸೆಕೆಂಡಿಗಾದರೂ ಉದ್ದಕ್ಕೆ ಉಸಿರು ಬಿಟ್ಟು ಕುಳಿತುಕೊಳ್ಳುವ, ತುಳಿತ ಬಿಟ್ಟು ಹಾಗೇ ಪೆಡಲ್ ಮೇಲೆ ನಿಂತು ಅಂಡೆತ್ತಿ ಉರಿ ಕಡಿಮೆ ಮಾಡುವ, ಸ್ನಾಯುಗಳನ್ನು ಸಮಾಧಾನಿಸುವ ಅವಕಾಶವೇ ಇರಲಿಲ್ಲ. ನಮ್ಮ ಶ್ರಮದ ಲೆಕ್ಕಾಚಾರದ ದರವನ್ನು ಹೇಳುವುದಿದ್ದರೆ ಈ ವಲಯ ಕಷ್ಟ, ಕರಕಷ್ಟ, ಕಡುಕಷ್ಟ ಮಾತ್ರ! ಭಗವತಿ ಘಾಟಿ ರೈಲ್ವೇ ಮಾರ್ಗದಷ್ಟೇ ಲೆಕ್ಕಾಚಾರದಲ್ಲಿ ರೂಪುಗೊಂಡ ‘ಕಲಾಕೃತಿ’.
ಮೋಹಕ-ಅಪಾಯದ ಹಾದಿ
ಮೊದಲ ಸುಮಾರು ಹದಿನೆಂಟು ಕಿ.ಮೀ. ಒಂದೇ ಏರುಕೋನದ ದಾರಿ. ಬೆಟ್ಟಗಳ ಬಲು ಆಳದ ಸೀಳುಗಳಲ್ಲಿ, ಏಣುಗಳನ್ನು ದೀರ್ಘ ಬಳುಕಿನಲ್ಲಿ ಬಳಸುತ್ತದೆ. ಹಾಗೇ ನೆಲದ ವಾಲಿಕೆಯೂ ನಿಖರವಾಗಿರುವುದರಿಂದ ಮೋಟಾರು ಚಾಲಕರಿಗೆ ಬಹು ಉತ್ತೇಜನಕಾರಿಯಾಗಿಯೇ ಇದೆ. ಆದರೆ ಜತೆಗೇ ವಿಪರೀತ ವೇಗಕ್ಕಿಳಿಯದಂತೆ ಭಯವನ್ನೂ ಹುಟ್ಟಿಸುತ್ತದೆ. ನಾವೂ ಘಾಟಿಯ ‘ಮೋಹಕ-ಅಪಾಯ’ವನ್ನು ಗುರುತಿಸಿ ರಸ್ತೆಯ ಅಂಚನ್ನೇ ಹಿಡಿದಿದ್ದೆವು.
ಸತತ ಏರಿನ ದಾರಿಯಲ್ಲಿ ಕೆಲವು ತುಸು ದೊಡ್ಡ ಸೇತುವೆಗಳು ಮಾತ್ರ ಸಮತಟ್ಟಾಗಿದ್ದುವು. ಅವು ಬಂದದ್ದೇ ತೊರೆ ಇಣುಕುವ ನೆಪದಲ್ಲಿ, ನಮ್ಮ ನಿಜದ ಅಗತ್ಯ - ವಿಶ್ರಾಂತಿಯನ್ನು, ಮರೆಸಿ ನಿಂತೇ ಬಿಡುತ್ತಿದ್ದೆವು. ಅವು ಸಿಗದಿದ್ದರೂ ನೀರು ಕುಡಿಯುವ, ಮೂತ್ರ ಮಾಡುವ, ಹಕ್ಕಿ ನೋಡುವ, ರಸ್ತೆ-ಸಾವಿಗೀಡಾದ ಜೀವಕ್ಕೆ (ಬಹುತೇಕ ಹಾವುಗಳು) ಮರುಗುವ, ಗಿರಿ ದಿಟ್ಟಿಸುವ, ಕಣಿವೆಗಿಣುಕುವ, ಅನೂಹ್ಯ ವಾಸನೆಗಳ ಮೂಲ ಕಾಣುವ, ರಸ್ತೆಯದೇ ರಚನಾ ವೈಭವ ಹೊಗಳುವ, ಚಿತ್ರ ತೆಗೆಯುವುದೇ ಮೊದಲಾದ ನೂರು (ನೆಪ) ಅವಕಾಶಗಳಂತೂ ಇದ್ದೇ ಇತ್ತು! ಪೆಡಲಿಳಿದರೆ ನೂಕಿ ನಡೆಯುವ, ನಡೆದರೆ ಪೆಡಲೊತ್ತಿ ಸವಾರಿ ಹೊರಡುವ ವಂಚನೆಯನ್ನು ಈ ವ್ಯವಸ್ಥಿತ ಏರು ಮಾಡುತ್ತಲೇ ಇತ್ತು!
ದಾರಿಯುದ್ದಕ್ಕೂ ಮಾರ್ಗಸೂಚಿ ಸಂಜ್ಞೆಗಳು, ಪರಿಸರ ಪ್ರೇಮಿ ಘೋಷಣೆಗಳೇನೋ ಧಾರಾಳ ಇವೆ. ಅವನ್ನೂ ಮೀರಿ ವನ್ಯ ಕಾನೂನು ಅನುಷ್ಠಾನಗೊಳ್ಳಲೇಬೇಕಾದ ಕಾಲವಿದು. ವನ್ಯದೊಳಗೆ ಸಾಮಾನ್ಯರಿಗೆ ವೀಕ್ಷಣಾ ಕಟ್ಟೆ ಅಥವಾ ವಿಹಾರತಾಣಗಳು ಅಪ್ರಸ್ತುತ. ಅದನ್ನು ಸೋದಾಹರಣವಾಗಿ ಸ್ಪಷ್ಟಪಡಿಸುತ್ತವೆ. ಹಿಂದೆಲ್ಲ ನಾವು ‘ಜಗ್ ಫಾಲ್ಸ್’, ಎಸ್ಕೆ ಬಾರ್ಡರ್, ಕಡಾಂಬಿ ಅಬ್ಬಿ ಎಂದೆಲ್ಲ ನಿಲ್ಲುತ್ತಿದ್ದ ತಾಣಗಳಲ್ಲಿ ನಿಷೇಧದ ಬೋರ್ಡಿದ್ದರೂ ನಿಂತುಹೋದವರ, ದೃಶ್ಯ ಮರೆಮಾಡಿದ ಹಸಿರು ಭಂಗಿಸಲು ಪ್ರಯತ್ನಿಸಿದವರ, ಏನಲ್ಲದಿದ್ದರೂ ‘ಕುರುಕಿ ಕುಡಿದು’ ಎಸೆದು ಹೋದವರ ವೈವಿಧ್ಯಮಯ ಕಸ!
ಹನ್ನೆರಡು ಗಂಟೆಯ ಸುಮಾರಿಗೆ ನಾವು ಹಿಂದೆಲ್ಲ ಪ್ರಸಿದ್ಧವಿದ್ದ ಕವಲು ಕಟ್ಟೆ – ದಕ ಗಡಿ (ಎಸ್ಕೆ ಬಾರ್ಡರ್) ಸೇರಿದೆವು. ಗಣಿಗಾರಿಕೆಯ ಕಾಲದಲ್ಲಿ ಇಲ್ಲಿ ರೂಢಿಸಿದ್ದ ಹೋಟೆಲ್, ಅಂಗಡಿ, ಸೋಮಾರಿ ಕಟ್ಟೆಗಳೆಲ್ಲ ಇಂದಿಲ್ಲ. ವನ್ಯ ಇಲಾಖೆಯ ಏನೋ ಒಂದು ರಚನೆಯನ್ನುಳಿದು ಎಲ್ಲ ಕಟ್ಟಡಗಳೂ ವಿದ್ಯುತ್ ಸ್ತಂಭ ಸಾಲೂ ವೀಕ್ಷಣಾಕಟ್ಟೆಯೂ ನೆಲಸಮವಾಗಿವೆ. ಕಣಿವೆಯಂಚಿನಲ್ಲಿ ವೀಕ್ಷಣೆಯ ನೆಪದಲ್ಲಿ ಜನ ತಂಗುವುದನ್ನು ನಿರುತ್ತೇಜನಗೊಳಿಸುವಂತೆ ತಡೆಬೇಲಿಯನ್ನೂ ಹಾಕಿದ್ದಾರೆ. ದಕ ಗಡಿ ನಿರ್ಜನ, ನೀರವ, ಉಳಿದೆಡೆಗಳಷ್ಟೇ (ಹೆಚ್ಚಲ್ಲ. ಮಾರ್ಗಹೋಕರು ಕಸ ಎಸೆಯುವುದನ್ನು ನಿಯಂತ್ರಿಸುವುದು ಬಹಳ ಕಷ್ಟ) ಸ್ವಚ್ಛ. ಇವೆಲ್ಲ ಸಾಧ್ಯವಾಗುವಂತೆ ಮಾಡಿ, ವನ್ಯ ಪುನರುತ್ಥಾನಕ್ಕೆ ದುಡಿದ ಶಕ್ತಿಗಳಿಗೆ ವಂದನೆಗಳು!
ದಕ ಗಡಿಯಿಂದ ಮುಂದೆ ದಾರಿ ಶಿಖರಗಳ ವಲಯದಲ್ಲಿ (ನೆತ್ತಿಯಲ್ಲೇ ಅಲ್ಲ) ಸಾಗುವುದರಿಂದ ಅಲ್ಲಲ್ಲಿ ಕಿರು ತೊರೆಗಳೂ ಸುಲಭದಲ್ಲಿ ಮಟ್ಟ ಮಾಡಬಹುದಾದ ನೆಲದ ಹರಹುಗಳೂ ಹುಲ್ಲುಗಾವಲೂ ಕಾಣಸಿಗುತ್ತವೆ. ಅಂಥಲ್ಲಿ ಕೆಲವು ಮತೀಯ ನೆಲೆಗಳು ವಾಣಿಜ್ಯ ಆಯಾಮ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ್ದೂ ಉಂಟು. ಅಲ್ಲಿ ಮತ್ತೆ ವನ್ಯಪ್ರೇಮಿಗಳು (ವನ್ಯ ಇಲಾಖೆಯಲ್ಲ!) ಸಕಾಲಿಕ ಜಾಗೃತಿಯನ್ನು ತಳೆದದ್ದರಿಂದ ಅವು ವನ್ಯಕ್ಕೆ ಅಪಾಯಕಾರಿಯಾಗಿ ವಿಕಸಿಸಲಿಲ್ಲ.
ಆದರೆ... ಇಲಾಖೆಯೊಳಗಿನ ಕಾಮಗಾರಿ ಮೋಹಗಳಲ್ಲಿ, ಪರೋಕ್ಷವಾಗಿ ವೈಯಕ್ತಿಕ ಸ್ವಾರ್ಥಗಳು ವಿಕಸಿಸುವಲ್ಲಿ ಈ ವನ್ಯ ನಿಷ್ಠೆ ಪೂರ್ಣ ಲೋಪವಾಗಿದೆ. ಇದಕ್ಕೆರಡು ಉದಾಹರಣೆಗಳಲ್ಲಿ ಸಣ್ಣದಕ್ಕೆ ಹನುಮನಗುಂಡಿಯನ್ನೂ ದೊಡ್ಡದಕ್ಕೆ ಭಗವತೀ ಪ್ರಕೃತಿ ಶಿಬಿರವನ್ನೂ ಹೆಸರಿಸಬಹುದು. ಹನುಮಾನ್ ಗುಂಡಿಯ ಬಳಿ ‘ಟಿಕೆಟ್ಟಿನ ಅಧಿಕಾರ’ದಲ್ಲಿ ಜಲಕೇಳಿಯಾಡಲು, ಬಾಡಿಗೆ ತುಂಬಿದ ಬಲದಲ್ಲಿ ಪ್ರಕೃತಿ ಶಿಬಿರದಲ್ಲಿ ಮೋಜುಮಜಾಕ್ಕೂ ಅವಕಾಶ ಕಲ್ಪಿಸುವ ಇಲಾಖೆಗೆ ಏನನ್ನಬೇಕೋ ತಿಳಿಯುವುದಿಲ್ಲ.
ಜಾಗೃತ ನಾಗರಿಕರ ಒತ್ತಡಕ್ಕೆ ಕೆಲಕಾಲ ಮುಚ್ಚಿದ್ದ ಹನುಮನಗುಂಡಿ ಈಗ ಮತ್ತೆ ಮುಕ್ತವಾಗಿರುವುದು, ಜನಪ್ರಿಯವಾಗುತ್ತಿರುವುದು ಚಿಂತಾಜನಕ. ವಾಹನ ತಂಗುದಾಣಕ್ಕಾಗಿ ಅಲ್ಲಿ ಅಗಲ ಕಿರಿದಾದ ದಾರಿಯನ್ನು ಈಗ ಅಗಲಗೊಳಿಸಿದ್ದಾರೆ. ಆದರೂ ನಮ್ಮ ಬಡಕಲು ಸೈಕಲ್ಲು ಹಾಯ್ದು ಹೋಗಲು ಕಷ್ಟವಾಗುವಂತೆ ಅಲ್ಲಿ ಜನ ವಾಹನ ದಟ್ಟಣೆ ಇತ್ತು, ವನ್ಯದ್ದಲ್ಲದ ಗದ್ದಲ ಕೆಳಗಿನ ಕಣಿವೆಯಿಂದ ಬರುತ್ತಿತ್ತು.
ಏರು ದಾರಿಯಲ್ಲಿ ಎಡಮಗ್ಗುಲಿನಲ್ಲಿ ಅಲ್ಲದೊಂದು ಸ್ವಲ್ಪ ದೀರ್ಘವೇ ಆದ ತೆರೆಮೈ. ಅಲ್ಲಿ ತುಸುವೇ ಅಗಲ ಹೆಚ್ಚಿರುವ ಜಾಗಗಳಲ್ಲೆಲ್ಲ ವಾಹನಗಳು ತಂಗಿದ, ಜನ ಹೇಸಿಗೆ ಮಾಡಿದ ಲಕ್ಷಣಗಳು ಧಾರಾಳವಿವೆ. ಇಲಾಖೆ ಒಂದು ಕಸದ ತೊಟ್ಟಿಯನ್ನೂ ಸ್ಥಾಪಿಸಿದ್ದಾಗಿದೆ. ಅಲ್ಲಿ ನಾವು ದೃಶ್ಯ ನೋಡುವ ನೆಪದಲ್ಲಿ ನಿಟ್ಟುಸಿರು ಚೆಲ್ಲಿ, ಐದು ಮಿನಿಟೆಂದು ಕುಳಿತೆವು.
ಇದೇ ಮುಹೂರ್ತವೆಂಬಂತೆ ವೇಣು ಸೈಕಲ್ಲಿನ ಮುಂಚಕ್ರವೂ ಒಮ್ಮೆಗೇ ನಿಟ್ಟುಸಿರಿಟ್ಟಿತು! ಅದೃಷ್ಟಕ್ಕೆ ಚಿನ್ಮಯ ಹೆಚ್ಚುವರಿ ಟ್ಯೂಬ್, ಪಂಪ್ ಸಜ್ಜಾಗಿದ್ದ. ಉಳಿದ ಕೆಲಸಗಳೆಲ್ಲ ಹೊಸ ತಲೆಮಾರಿನ ಸೈಕಲ್ಲುಗಳಲ್ಲಿ ತುಂಬ ಸರಳವೂ ದೃಢವೂ ಇರುವುದರಿಂದ ನಮಗೆ ಹೆಚ್ಚು ವೇಳೆ ಬೇಕಾಗಲಿಲ್ಲ. ಐದು ಮಿನಿಟಿನ ವಿಶ್ರಾಂತಿಗೆ ಮತ್ತೆ ಐದು ಮಿನಿಟಷ್ಟೇ ಸೇರುವುದರೊಳಗೆ ನಾವು ಮತ್ತೆ ದಾರಿಗಿಳಿದಿದ್ದೆವು.
ಗಂಗಾಮೂಲ, ಗಂಗಡಿಕಲ್ಲಿನ ಗೇಟಿಗೆ ಏಕಮುಖವಾದ ದೀರ್ಘ ಏರಿಕೆ ಒಮ್ಮೆಗೆ ಮುಗಿದಿತ್ತು. ಅಲ್ಲಿ ದಾರಿ ಪ್ರಧಾನ ಶಿಖರ ಶ್ರೇಣಿಯನ್ನು ಪಶ್ಚಿಮಕ್ಕೆ ಬಿಟ್ಟು ಒಳಮೈಯ ವಿಸ್ತಾರ ಬೋಗುಣಿಗೆ ಜಾರುತ್ತದೆ. ಅದುವರೆಗಿನ ಶ್ರಮವೆಲ್ಲ ಸಾರ್ಥಕವೆನ್ನುವಂತೆ ಸುಮಾರು ಆರೆಂಟು ಕಿ.ಮೀ. ಉದ್ದದ ಇಳಿಜಾರು. ಎಡಕ್ಕೆ ಗಂಗಡಿಕಲ್ಲಿನ ಶ್ರೇಣಿ, ಬಲಕ್ಕೆ ಕುರಿಯಂಗಲ್ಲಿನ ಹಿಮ್ಮೈ.
ಕಡಾಂಬಿ ಅಬ್ಬಿಯ ಬಳಿ ಸಣ್ಣ ಏರು ನಿಭಾಯಿಸಿದರೆ ಮತ್ತೆ ಭಗವತಿ ಪ್ರಕೃತಿ ಶಿಬಿರದ ಗೇಟಿನವರೆಗೂ ಬಲು ಮನೋಹರ ಓಟ. ಶಿಬಿರದ ಗೇಟಿನ ಬಳಿ ಅರವಿಂದರ ಸಂಸ್ಥೆ ಶಾಲಾಶಿಷ್ಯ, ಹೊಸದಾಗಿ ವನ್ಯ ಇಲಾಖೆಯ ಸೇರ್ಪಡೆಯಾಗಿ ಕಾವಲಿಗೆ ನಿಂತಿದ್ದ. ಆತನಿಗೋ ಗುರುಗಳ ಹೊಸ ಅವತಾರ ನೋಡಿ ಸಾಹಿತ್ಯ ಸಂಭ್ರಮ. ಇವರಿಗೋ (ನಮಗೂ) ಇನ್ನೂ ಒಂಬತ್ತು ಹತ್ತು ಕಿ.ಮೀ. ಬಾಕಿ ಉಳಿದ ಲೆಕ್ಕದ್ದೇ ಮಂಡೆಬೆಚ್ಚ! ಮತ್ತೂ ಒಂದೆರಡು ಏರು ಇಳಿತ, ಎಡಕ್ಕೆ ಲಕ್ಯಾ ಅಣೆಕಟ್ಟು, ಬಲಕ್ಕೆ ಭದ್ರಾನದಿಗಳನ್ನೆಲ್ಲ ಕಳೆದು ಗಣಿನಗರಿ ತಲುಪುವಾಗ ಗಂಟೆ ಎರಡು ಕಳೆದಿತ್ತು.
ನಮ್ಮ ಮೊದಲ ಮತ್ತು ಪ್ರಧಾನ ಚಿಂತೆ ಹೊಟ್ಟೆಯದು.
ಆದರೆ ಗಣಿಗಾರಿಕೆ ಕಳಚಿ ಉಳಿದ ಹಾಳೂರಿನ ವ್ಯವಸ್ಥೆಯಲ್ಲಿ ಊಟದ ಶಾಸ್ತ್ರ ಮುಗಿಸುವಾಗ ಮೂರೇ ಕಳೆದಿತ್ತು. ಯೋಜನೆಯಂತೆ ಅಂದೇ ಹಿಂದಿರುಗುವ ಪ್ರಯತ್ನ ಮಾಡಿದರೆ ಮೊದಲ ಅರ್ಧ ಕಗ್ಗಾಡಿನೊಳಗೆ ಕತ್ತಲ ಸವಾರಿ, ಮತ್ತಿನದು ಹೆದ್ದಾರಿಯ ದೀಪದ ಹುಚ್ಚು ಹೊಳೆಯಲ್ಲಿ ಎದುರು ಸವಾರಿ ಅನುಭವಿಸಬೇಕಿತ್ತು. ಅದನ್ನು ಸರ್ವಾನುಮತಿಯಲ್ಲಿ ಮರುದಿನಕ್ಕೆ ಮುಂದೂಡಿದೆವು. ಆಗ ಒಲಿದದ್ದು ಭಗವತಿ ಪ್ರಕೃತಿ ಶಿಬಿರ. ಪಟ್ಟಣದಲ್ಲೇ ಇರುವ ಇಲಾಖಾ ಕಚೇರಿಯಲ್ಲಿ ಅನುಮತಿ ಮಾಡಿಸಿಕೊಂಡು ಆರಾಮವಾಗಿ ಮತ್ತೆ ಬಂದ ದಾರಿಯಲ್ಲೇ ಪೆಡಲಿದೆವು. ಮೊದಲು ಸಿಗುವ ಲಕ್ಯಾ ಅಣೆಕಟ್ಟಿಗೊಂದು ಇಣುಕುನೋಟ ಹಾಕಿದೆವು.
ಗಣಿಗಾರಿಕೆ ನಡೆದಿದ್ದಾಗ ಒಂದು ಮೂಲೆಯಲ್ಲಷ್ಟೇ ಕೆಸರು ನೀರು ತುಂಬಿಕೊಳ್ಳುತ್ತಾ ಉಳಿದಂತೆ ‘ಸ್ಫಟಿಕ ನಿರ್ಮಲ’ ಸರೋವರದ ಭ್ರಮೆ ಹುಟ್ಟಿಸುತ್ತಿದ್ದ ಪಾತ್ರೆ ಇಂದು ಶುದ್ಧ ಮರುಭೂಮಿ! ಅದರಲ್ಲಿ ನಿಜವಾದ ಲಖ್ಯಾ ಝರಿಯ ನೀರು ನೋಡಬೇಕಿದ್ದರೆ ಕನಿಷ್ಠ ಆರು ಕಿ.ಮೀ ನಡೆಯಬೇಕಿತ್ತು! ವಾಸ್ತವದ ಜಲಸಂಪತ್ತು ಇಷ್ಟು ಬಡಕಲಾಗಿರುವಾಗಲೂ ಸಂಪೂರ್ಣ ನ್ಯಾಯಿಕ ಉಚ್ಛಾಟನೆಗೊಳಗಾದ ಕೆಐಒಸಿಯೆಲ್ ಇಲ್ಲಿಂದ ನೀರು ಕೊಡುತ್ತೇನೆನ್ನುವುದು, ಇದ್ದಲ್ಲಿನ ವ್ಯವಸ್ಥೆ ಕುಲಗೆಡಿಸಿಟ್ಟ ಮಂಗಳೂರು ಪಡೆಯುತ್ತೇವೆ ಎನ್ನುವುದು ಎಷ್ಟು ವಿಚಿತ್ರ! ನೆಲದ ಮೇಲೆ ಇನ್ನೂ ತನಗೆ ‘ಹಕ್ಕಿದೆ’ ಎಂಬ ಭ್ರಮೆಯಲ್ಲಿದೆ. ಇದರಿಂದ ಅದು ತನ್ನ ಕಾಲದ ಅನಿವಾರ್ಯ ರಚನೆಗಳನ್ನು ಇಂದಿಗೂ ಪರಭಾರೆ ಮಾಡುವ ಎಡವಟ್ಟುಗಳನ್ನು ನಡೆಸುವುದು, ರಾಜ್ಯ ಸರಕಾರ (ವನ್ಯ ಇಲಾಖೆ) ಅರಿವಿಲ್ಲದವರಂತೆ ವರ್ತಿಸುವುದು ಆಘಾತಕರ.
ಕತ್ತಲಾಗುವ ಮುನ್ನ ಭಗವತಿ ಪ್ರಕೃತಿ ಶಿಬಿರ ತಲುಪಿದೆವು. ಪ್ರಾಕೃತಿಕ ಶುದ್ಧ ಸ್ಥಿತಿಯಲ್ಲಿರುವ ಭದ್ರಾ ನದಿ ದಂಡೆಯ ಮೇಲಿನ ಈ ನೆಲ ಒಂದು ಕಾಲಕ್ಕೆ ಕಾಟಿ ಕಡವೆಗಳ ಆಡುಂಬೊಲ. ಗಣಿಗಾರಿಕೆಯ ಸ್ಥಾಪನೆಯೊಡನೆ ಸಾರ್ವಕಾಲಿಕ ದಾರಿ ಮತ್ತು ನವನಗರದ ಹಾಲಿನ ಬೇಡಿಕೆಯನುಸಾರ ಈ ಪ್ರಾಕೃತಿಕ ಹುಲ್ಲುಗಾವಲಿಗೆ ಅಸಂಖ್ಯ ಜಾನುವಾರುಗಳೊಡನೆ ಅಕ್ರಮ ವಸತಿ ಹೂಡುವ ಗೋವಳಿಗರು ಬಂದು ನೆಲೆಸಿದ್ದರು. ಈಚಿನ ವರ್ಷಗಳಲ್ಲಿ ಖಾಸಗಿ ಪರಿಸರಾಸಕ್ತ ಸಂಘಟನೆಗಳು ವನ್ಯಸಂರಕ್ಷಣೆಯ ಆವಶ್ಯಕತೆಗೆ ಈ ಗೋವಳಿಗರೆಲ್ಲರಿಗೆ ಮಾನವೀಯ ನೆಲೆಯಲ್ಲಿ ಹೊರಗೆ ಪುನರ್ವಸತಿ ಕಲ್ಪಿಸಿ, ನೆಲವನ್ನು ಇಲಾಖೆಗೆ ಮುಕ್ತಗೊಳಿಸಿದವು.
ಆದರೆ ವನ್ಯ ಇಲಾಖೆ, ಅಧಿಕಾರ ಬಲದಲ್ಲಿ ಮುಂದಿನ ದಿನಗಳಲ್ಲಿ ಅಲ್ಲೇ ನಿರ್ವಹಣೆಯ ನೆಪದಲ್ಲಿ ಹೆಚ್ಚು ಸ್ಥಿರವಾದ ಮತ್ತು ತ್ವರಿತ ವಿಸ್ತರಿಸುವ ಕ್ಯಾನ್ಸರಿನಂತೆ ಈ ಶಿಬಿರತಾಣ ನಿರ್ಮಿಸಿದ್ದು ದೊಡ್ಡ ಅನ್ಯಾಯ. ಏನೇ ಇರಲಿ, ಪ್ರಕೃತಿ ಶಿಬಿರದ ಹಳೆ ಪರಿಚಯದ ಅಡುಗೆಯವ– ರಾಜು, ನಮ್ಮನ್ನು ಚೆನ್ನಾಗಿಯೇ ನೋಡಿಕೊಂಡರು. ಹೋದದ್ದೇ ಚಾ, ಖಾಲಿಯೇ ಇದ್ದ ಡಾರ್ಮಿಟರಿ ನಮಗೊದಗಿತು. ಸ್ನಾನಕ್ಕೆ ಬಿಸಿನೀರು ಸಿಕ್ಕರೂ ನಮ್ಮಲ್ಲಿ ಬದಲಿ ಬಟ್ಟೆ ಇಲ್ಲದೇ ಸೋತವರೇ ಹೆಚ್ಚು. ಊಟ ಹಿತಮಿತವಾಗಿತ್ತು. ವಾತಾವರಣದಲ್ಲಿ ನಾವು ನಿರೀಕ್ಷಿಸಿದ ಚಳಿ ಇರಲಿಲ್ಲವಾದ್ದರಿಂದ ರಾತ್ರಿಯೂ ಸುಖಕರವಾಗಿತ್ತು. ಬೆಳಿಗ್ಗೆ ಖಾಲಿ ಚಾ ಸೇವಿಸಿ ಮತ್ತೆ ಪೆಡಲು ಮೆಟ್ಟಿದ್ದೆವು.
ಆತ್ಮತೃಪ್ತಿಯೇ ಪ್ರಮಾಣ
ನಸು ಚಳಿಯೂ ತೆಳು ಮಂಜಿನ ಮುಸುಕೂ ಹರಿಯುವಂತೆ ಮಂಗಳೂರು ಜಪ ಹಿಡಿದೆವು. ಹಿಂದಿನ ದಿನದ ಉದ್ದಕ್ಕೂ ವೇಣು ನಮಗೆಲ್ಲ ಧಾರಾಳ ಕೈ ತುತ್ತು ಕೊಡುತ್ತಿದ್ದ ಸಂಕ್ರಾಂತಿಯ ಎಳ್ಳು ಎರಡನೇ ದಿನಕ್ಕೂ ನಮಗೆ ರುಚಿಕರವಾಗಿ ಎಲ್ಲ ವೇಳೆಗಳಲ್ಲೂ ಒದಗುತ್ತಲೇ ಇತ್ತು. ಮತ್ತೆ ಗಣಿನಗರಿಯಲ್ಲಿ ಕೊಂಡಿಟ್ಟುಕೊಂಡಿದ್ದ ಬಿಸ್ಕೆಟ್, ಬಾಳೆ ಹಣ್ಣು ಹೆಚ್ಚುವರಿಯಾಗಿ ಒದಗಿ ನಮ್ಮನ್ನು ‘ಹೊಟ್ಟೆ ಖಾಲಿ’ ಭಾವ ಕಾಡಲಿಲ್ಲ.
ಹಾಗಾಗಿ ಗಂಗಾಮೂಲದವರೆಗಿನ ಏರು ದಾರಿಯಲ್ಲಿ ನಾವು ಸರ್ವಶಕ್ತರಾಗುವ ಅವಸರಕ್ಕೆ ಬೀಳಲಿಲ್ಲ. ಮತ್ತೆ ಇಳಿದಾರಿಯಲ್ಲಿ ವಾಯುಪುತ್ರರಾಗುವ ಮೋಹಕ್ಕೂ ಒಳಪಡಲಿಲ್ಲ. ಕಡಾಂಬಿ ಅಬ್ಬಿ ಬಳಿಯ ಒಂಟಿ ಕಾಟಿಯ ಕತೆ, ಕುರಿಯಂಗಲ್ಲಿನ ರಿಪೀಟರ್ ಸ್ಟೇಶನ್ ಕತೆ, ಗಂಗಾಮೂಲದ ಪುರಾಣ, ವರಾಹತೀರ್ಥದ ವರ್ತಮಾನಗಳನ್ನೆಲ್ಲ ಮೆಲುಕು ಹಾಕುತ್ತ ಇಳಿಜಾರಿನ ಸಂತೋಷ ಅನುಭವಿಸಿದೆವು. ಹಿಂದಿನ ದಿನದ ಕಷ್ಟ, ಅಂದಿನ ಮೊದಲ ಆರೆಂಟು ಕಿಮೀ ಏರಾಟವನ್ನು ಮರೆತವರಂತೆ ಅಲ್ಲಲ್ಲಿ ನಿಂತು, ಸಂತೋಷ ಪಡುತ್ತಾ ಸುಮಾರು ಎಂಟೂವರೆ ಗಂಟೆಯ ವೇಳೆಗೆ ಮತ್ತೆ ಮಾಳಕೈಕಂಬ, ಅಂದರೆ ರಾಷ್ಟ್ರೀಯ ಉದ್ಯಾನದ ಗಡಿ, ಪಾರು ಮಾಡಿದೆವು.
ಕಡಾರಿಯ ಹೋಟೆಲಿನಲ್ಲಿ ಉಪಾಹಾರಕ್ಕೂ ಬೆಳ್ಮಣ್ಣಿನಲ್ಲಿ ಕಬ್ಬಿನ ಹಾಲಿಗೂ ಎಲ್ಲ ಒಟ್ಟಾಗಿ ನಿಂತದ್ದೇ ದೊಡ್ಡ ವಿಶ್ರಾಂತಿ. ಮತ್ತೆ ಏರುತ್ತಿದ್ದ ಬಿಸಿಲನ್ನು ಲೆಕ್ಕಿಸದೆ ಅವರವರ ಲಹರಿಯಲ್ಲಿ ಅವಿರತ ಪೆಡಲುತ್ತ ಮಧ್ಯಾಹ್ನದ ಊಟಕ್ಕೆ ಅವರವರ ಮನೆಯನ್ನೇ ಸೇರಿದ್ದೆವು. ಹೋಗುವ ದಾರಿಯಲ್ಲಿ, ‘ನಗರದ ಹೊಗೆದೂಳು - ಅಯ್ಯಪ್ಪಾ, ಜಲಮೂಲದ ದುರ್ನಾತ - ಕಳೆಯಪ್ಪಾ, ಪ್ರಾಕೃತಿಕ ಹಸಿರ - ಕಣ್ತುಂಬಪ್ಪಾ, ಯಾಂತ್ರಿಕ ಜಂಜಾಟ - ಕಳಚಪ್ಪಾ, ಕ್ಲೋರಿನ್ ನೀರು - ಯಾಕಪ್ಪಾ, ಬೆಟ್ಟದ ನಿರ್ಮಲ ಝರಿ - ಕೊಡಿಸಪ್ಪಾ....’ ಇತ್ಯಾದಿ ಜಪಿಸಿದ್ದಿತ್ತು.
ಮರಳುವ ದಾರಿಯಲ್ಲಿ ಅನಿಷ್ಠಗಳೆಲ್ಲ ಒಂದೊಂದೇ ವಕ್ಕರಿಸುತ್ತಿದ್ದಂತೆ ಉಳಿದ ಪಲ್ಲವಿ ಒಂದೇ – ‘ಅಯ್ಯಪ್ಪಾ, ಅಯ್ಯಯ್ಯಪ್ಪಾ.’ ಹೆದ್ದಾರಿಯ ಮಟ್ಟಸ ನೆಲದಲ್ಲಿ ಪ್ರಶಸ್ತಿ, ದಾಖಲೆಗಳಿಗಾಗಿ ತರಹೇವಾರು ಸವಾರಿಗಿಳಿಯುವವರಿದ್ದಾರೆ. ಅಕ್ಷರಶಃ ತೊಟ್ಟ ಬಟ್ಟೆಯಲ್ಲೇ ಶತೋತ್ತರ ಕಿ.ಮೀ. ಸವಾಲನ್ನು, ಸತತ ಎರಡು ದಿನವೂ ಸಾಧಿಸಿದ ಚಕ್ರ ತಪಸ್ಸು ಮತ್ತು ಸಿದ್ಧಿ ನಮ್ಮದು! ಗದ್ದಲವಿಲ್ಲದ, ಸ್ಪರ್ಧೆಯೂ ಅಲ್ಲದ ಈ ಸವಾರಿ ಪದವಿ, ಪುರಸ್ಕಾರಗಳನ್ನು ಮೀರಿದ್ದು, ಆರೋಗ್ಯಪೂರ್ಣ ಜೀವ ಶಕ್ತಿಯನ್ನು ಮರುಸ್ಥಾಪಿಸುವಂಥದ್ದು. ಇಲ್ಲಿ ಆತ್ಮತೃಪ್ತಿಯೇ ಪ್ರಮಾಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.