ADVERTISEMENT

ಕೆಡುಕನ್ನು ಎದುರಿಸುವುದು ಒಳಿತು ಮಾತ್ರ

ಸೃಜನಾನಂದ
Published 11 ಜನವರಿ 2017, 19:30 IST
Last Updated 11 ಜನವರಿ 2017, 19:30 IST

ತಪ್ಪು ಮಾಡಿದವರಿಗೆ ಯಾವ ಶಿಕ್ಷೆ ಕೊಡಬೇಕು? ಇದಕ್ಕೆ ಸಂಬಂಧಿಸಿದಂತೆ ಅನೇಕ ಬಗೆಯ ಚಿಂತನೆಗಳನ್ನು ಅನೇಕರು ಹೇಳಿದ್ದಾರೆ. ತಪ್ಪು ಮಾಡಿದ್ದು ಯಾರು ಮತ್ತು ಯಾವಾಗ ಮತ್ತು ಹೇಗೆ ಎಂಬುದನ್ನು ಅನುಸರಿಸಿ ಆಯಾ ಕಾಲಘಟ್ಟದ ಸರ್ಕಾರಗಳು ಮತ್ತು ಕಾನೂನುಗಳು ತಮ್ಮದೇ ಆದ ಬಗೆಯ ಶಿಕ್ಷೆಗಳನ್ನೂ ನೀಡಿವೆ ಮತ್ತು ನೀಡುತ್ತಿವೆ. ಇದೆಲ್ಲಾ ಕಾನೂನಿನ ಮಾತಾಯಿತು. ನಿತ್ಯದ ಬದುಕಿನಲ್ಲಿ ನಾವು ಅನೇಕರು ಮಾಡುವ ತಪ್ಪುಗಳನ್ನು ಗಮನಿಸುತ್ತಿರುತ್ತೇವೆ.

ನಮ್ಮ ಗೆಳೆಯರು, ಶಿಷ್ಯರು, ಮಕ್ಕಳು ಹಾಗೂ ಸೋದರ ಸೋದರಿಯರೂ ತಪ್ಪು ಮಾಡುತ್ತಿರುತ್ತಾರೆ. ಅದನ್ನು ನೋಡಿ ಕೆಲವೊಮ್ಮೆ ಸಿಟ್ಟಿಗೇಳುತ್ತೇವೆ. ಕೆಲವೊಮ್ಮೆ ಅದನ್ನು ಸರಿಪಡಿಸಿಕೊಳ್ಳಲು ಅವರಿಗೆ ಸಲಹೆ ಕೊಡುತ್ತೇವೆ. ಇನ್ನು ಕೆಲವೊಮ್ಮೆ ಆ ಕೆಲಸದಿಂದಲೇ ಅವರನ್ನು ದೂರವಿಡುವ ಪ್ರಯತ್ನ ಮಾಡುತ್ತೇವೆ. ಆದರೆ ಇದನ್ನು ಸರಿಯಾಗಿ ನಿರ್ವಹಿಸುವ ಮಾದರಿಯೊಂದಿದೆಯೇ?

ಇದಕ್ಕೆ ಸಂಬಂಧಿಸಿದಂತೆ ಅಕ್ಬರ್ ಮತ್ತು ಬೀರಬಲ್ಲರ ದೃಷ್ಟಾಂತವೊಂದಿದೆ. ಸಾಮ್ರಾಟ ಅಕ್ಬರನ ಗಡ್ಡವನ್ನು ಎಳೆದವನಿಗೆ ಯಾವ ಶಿಕ್ಷೆ ಕೊಡಬೇಕು ಎಂಬ ಪ್ರಶ್ನೆ ಒಡ್ಡೋಲಗದಲ್ಲಿ ಕೇಳಿಬಂದಾಗ ಹಲವು ಬುದ್ಧಿವಂತರು ಹಲವು ಉತ್ತರಗಳನ್ನು ಹೇಳಿದರಂತೆ. ಆದರೆ ಬೀರಬಲ್ಲ ಮಾತ್ರ ‘ಗಡ್ಡ ಎಳೆದವನ ಬಾಯಿಗೆ ಮಿಠಾಯಿ ಹಾಕಬೇಕು’ ಎಂಬ ಉತ್ತರ ನೀಡಿದ್ದ.

ಬೀರಬಲ್ಲನ ಉತ್ತರದ ಹಿಂದಿನ ತರ್ಕ ಬಹಳ ಸರಳವಾಗಿತ್ತು. ಸಾಮ್ರಾಟನ ಗಡ್ಡ ಎಳೆಯುವಷ್ಟು ಸಲುಗೆ ಯಾರಿಗಾದರೂ ಇದ್ದರೆ ಯುವರಾಜ ಕುಮಾರ ಸಲೀಮನಿಗೆ ಮಾತ್ರ. ಆ ಪುಟ್ಟ ಬಾಲಕನಿಗೆ ಶಿಕ್ಷೆ ನೀಡಲು ಸಾಧ್ಯವಿದೆಯೇ ಎಂಬುದು ಬೀರಬಲ್ಲನ ತರ್ಕ.

ಇದು ಮಕ್ಕಳಿಗೆ ಹೇಳುವ ಕಥೆಯಂತೆ ಭಾಸವಾಗುವುದಾದರೂ ಇದನ್ನು ನಮ್ಮ ನಮ್ಮ ಬದುಕಿಗೂ ಅನ್ವಯಿಸಿ ನೋಡಿಕೊಳ್ಳಬಹುದು. ತಪ್ಪನ್ನು ತಿದ್ದುವ ಅತ್ಯುತ್ತಮ ಮಾರ್ಗ ಪ್ರೀತಿ. ಅಂಗುಲಿಮಾಲನನ್ನು ಬುದ್ಧ ಬದಲಾಯಿಸಿದ್ದು ಪ್ರೀತಿಯಿಂದ. ಗಾಂಧೀಜಿಯ ಅಹಿಂಸಾತ್ಮಕ ಮಾರ್ಗದ ಗೆಲುವಿಗೆ ಕಾರಣವಾದದ್ದು ಇದೇ ಪ್ರೀತಿಯಲ್ಲವೇ. ಇದನ್ನು ಮತ್ತೊಂದು ಉದಾಹರಣೆಯ ಮೂಲಕ ವಿವರಿಸಬಹುದು.

ರಿನ್ಝಾಯ್ ಝೆನ್ ಮಾರ್ಗದ ಗುರು ಬನ್ಕೀ ಯೊತಾಕು ಆಶ್ರಮದಲ್ಲಿ ನಡೆದ ಘಟನೆಯಿದು. ಆಶ್ರಮಕ್ಕೆ ಕಲಿಯಲು ಜಪಾನಿನ ವಿವಿಧ ಪ್ರದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಇಂಥ ವಿದ್ಯಾರ್ಥಿಗಳಲ್ಲಿ ಒಬ್ಬ ಕಳ್ಳತನ ಮಾಡುತ್ತಿದ್ದ. ಈತ ಸಿಕ್ಕಿಬಿದ್ದಾಗ ಅದನ್ನು ಗುರು ಬನ್ಕೀ ಅವರಿಗೆ ತಿಳಿಸಲಾಯಿತು. ಈ ವಿಷಯ ಕೇಳಿಸಿಕೊಂಡ ಗುರುಗಳು, ಅಷ್ಟೇ ತಾನೇ ಎಂದು ಸುಮ್ಮನಾಗಿಬಿಟ್ಟರು.

ಮತ್ತಷ್ಟು ದಿನಗಳು ಕಳೆದ ಮೇಲೆ ಮತ್ತೊಮ್ಮೆ ಇದೇ ವಿದ್ಯಾರ್ಥಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ. ಗುರುಗಳಿಗೆ ಸುದ್ದಿ ಹೋಯಿತು. ಅವರು ಮತ್ತೊಮ್ಮೆ ಅದನ್ನು ನಿರ್ಲಕ್ಷಿಸಿದರು. ವಿದ್ಯಾರ್ಥಿ ತನ್ನನ್ನು ತಿದ್ದಿಕೊಳ್ಳಲೇ ಇಲ್ಲ. ಮತ್ತೆ ಮತ್ತೆ ಸಿಕ್ಕಿಬಿದ್ದ. ಗುರುಗಳೂ ಅಷ್ಟೇ, ಮತ್ತೆ ಮತ್ತೆ ನಿರ್ಲಕ್ಷಿಸಿದರು. ಇದರಿಂದ ಬೇಸತ್ತ ಉಳಿದ ಶಿಷ್ಯರು ಒಟ್ಟಾಗಿ ಒಂದು ಬಿನ್ನವತ್ತಳೆಯೊಂದನ್ನು ಸಿದ್ಧಪಡಿಸಿ ಗುರುಗಳ ಬಳಿ ಸಾರಿದರು.

ಬಿನ್ನವತ್ತಳೆಯನ್ನು ಓದಿದ ಬನ್ಕೀ, ಶಿಷ್ಯರನ್ನು ಉದ್ದೇಶಿಸಿ ಹೇಳಿದ ಮಾತುಗಳು ಹೀಗಿದ್ದವು: ‘ಈ ಬಿನ್ನವತ್ತಳೆಗೆ ಸಹಿ ಹಾಕಿರುವ ನಿಮಗೆಲ್ಲಾ ಯಾವುದು ಒಳಿತು, ಯಾವುದು ಕೆಡುಕು ಎಂಬುದನ್ನು ನಿರ್ಧರಿಸುವ ಸಾಮರ್ಥ್ಯವಿದೆ. ಈ ಸಾಮರ್ಥ್ಯವೇ ನಿಮಗೆ ಇನ್ನೊಂದು ಗುರುವನ್ನು ನೀಡಬಹುದು.

ನೀವು ಇನ್ನೆಲ್ಲಿಯಾದರೂ ಹೋಗಿ ನಿಮ್ಮ ಶಿಕ್ಷಣವನ್ನು ಮುಂದುವರಿಸಬಹುದು. ಆದರೆ ನೀವು ದೂರುತ್ತಿರುವಾತನಿಗೆ ನಿಮಗಿರುವ ಸಾಮರ್ಥ್ಯವಿಲ್ಲ. ಅದನ್ನು ನಾನೇ ಅವನಿಗೆ ಕಲಿಸಬೇಕಾಗುತ್ತದೆ. ಆದ್ದರಿಂದ ನೀವೆಲ್ಲಾ ಇಲ್ಲಿಂದ ಹೋಗುವ ನಿರ್ಧಾರ ಕೈಗೊಂಡರೂ ನಾನು ಆತನನ್ನು ಉಳಿಸಿಕೊಂಡು ಬೋಧಿಸುತ್ತೇನೆ. ಅವನನ್ನು ಅವನೇ ಅರಿಯುವಂತೆ ಮಾಡುತ್ತೇನೆ’.

ಬನ್ಕೀಯ ಮಾತುಗಳ ಮುಗಿಯುವ ಹೊತ್ತಿಗೆ ಎಲ್ಲಾ ಶಿಷ್ಯರ ಕಣ್ಣಲ್ಲಿ ನೀರು ತುಂಬಿತ್ತು. ದೂರಿಗೆ ಕಾರಣನಾದವನು ಅಂದಿನಿಂದ ಮತ್ತೆ ಕದಿಯಲಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ವಾದಿಸುವಾಗ ಒಂದು ಮುಳ್ಳು ಶಸ್ತ್ರಚಿಕಿತ್ಸೆಯ ಆಯುಧವಾಗಿರುತ್ತದೆ ಎಂದು ಮರೆತಿರುತ್ತೇವೆ. ಅಂದರೆ ಕೆಡುಕನ್ನು ಎದುರಿಸುವುದಕ್ಕೆ ಒಳಿತಿನಿಂದ ಸಾಧ್ಯವೇ ಹೊರತು ಕೆಡುಕಿನ ಮೂಲಕವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.