ADVERTISEMENT

ನಾವಿಕ್‌: ಬದಲಾಗಲಿದೆ ಸಂಚಾರ ಸೂತ್ರ

ಹೇಮಂತ್ ಕುಮಾರ್ ಎಸ್.
Published 21 ಜನವರಿ 2020, 9:14 IST
Last Updated 21 ಜನವರಿ 2020, 9:14 IST
ಬದಲಾಗಲಿದೆ ಸಂಚಾರ ಸೂತ್ರ
ಬದಲಾಗಲಿದೆ ಸಂಚಾರ ಸೂತ್ರ   

ತಕ್ಷಣ ಪ್ರಯಾಣಿಸಬೇಕಾದ ತುರ್ತು ಸ್ಥಿತಿಯಲ್ಲಿ ಇರುವಲ್ಲಿಯೇ ಮೊಬೈಲ್ ಫೋನ್ ತೆಗೆದು ಓಲಾ, ಉಬರ್ ಅಥವಾ ಇನ್ನಾವುದೇ ಸೇವಾ ಸಂಸ್ಥೆ ಮೂಲಕ ಕ್ಯಾಬ್ ಬುಕ್ ಮಾಡಿ ಕುರ್ಚಿಗೆ ಕೊಂಚ ಒರಗಿ ಸಮಾಧಾನಿಸುತ್ತೀರಿ. ಕೆಲನಿಮಿಷಗಳಲ್ಲಿಯೇ ಕಾರು ನಿಮ್ಮ ಸ್ಥಳಕ್ಕೆ ಬಂದಿರುವುದು ಬಳಸುತ್ತಿರುವ ಅಪ್ಲಿಕೇಷನ್ ಮೂಲಕ ತಿಳಿಯುತ್ತದೆ. ಆದರೆ, ಮನೆಯ ಮುಂದೆ ಕಾರಿಲ್ಲ! ಅತ್ತಿತ್ತ ಹುಡುಕಾಡಿ ಚಾಲಕನಿಗೆ ಕರೆ ಮಾಡಿದರೆ- ‘ನೀವ್ ಕಳ್ಸಿರೊ ಲೊಕೇಷನಲ್ಲೇ ಇದ್ದೀನಲ್ಲ...ಅಯ್ಯೋ!’ ಎಂಬ ಉದ್ಗಾರ. ನಾವು ಆರನೇ ಕ್ರಾಸ್‍ನಿಂದ ಬುಕ್ ಮಾಡಿದ್ದರೆ, ಕ್ಯಾಬ್ ಏಳು ಇಲ್ಲವೇ ಐದನೇ ಕ್ರಾಸ್‍ನಲ್ಲಿ ನಿಂತಿರುತ್ತದೆ.

ಮನೆ ನಂ.35ರಲ್ಲಿ ನಿಂತು ಕಾಯುತ್ತಿದ್ದರೆ ಹಿಂದಿನ ಬೀದಿಯ ಮನೆ ನಂ.70ರಲ್ಲಿ ಕ್ಯಾಬ್ ನಮ್ಮ ಬರುವಿಕೆಗಾಗಿ ಕಾದಿರುತ್ತದೆ. ‘ಏಕೆ ಹೀಗೆ?’ ಎಂದು ನಮ್ಮಲ್ಲೇ ಗೊಣಗುವುದರ ಜತೆಗೆ ಚಾಲಕನ ಜತೆ ವಾಗ್ವಾದ ನಡೆಸಿ ಕಸ್ಟಮರ್ ಕೇರ್‌ಗೂ ಕರೆ ಮಾಡಿ ದೂರುಗಳ ಸುರಿಮಳೆ ಸಲ್ಲಿಕೆಯಾಗಿರುತ್ತದೆ. ಆದರೂ ಮತ್ತದೇ ಗೊಂದಲದ ಪುನರಾವರ್ತನೆ. ಇದಕ್ಕೆ ಕಾರಣ ಸದ್ಯ ಬಳಕೆಯಲ್ಲಿರುವ ನ್ಯಾವಿಗೇಷನ್(ಪಥದರ್ಶಕ) ಸಿಸ್ಟಮ್.

ಭಾರತದಲ್ಲಿ ಬಹುತೇಕ ಮಾರ್ಗಸೂಚಿ ಸಾಧನಗಳಿಗೆ ದಾರಿ ತೋರುತ್ತಿರುವುದು ‘ಜಿಪಿಎಸ್’. ಪ್ರಸ್ತುತ ಜಿಪಿಎಸ್ ಮೂಲಕ ದೇಶದಲ್ಲಿ ಸಂಚಾರಕ್ಕೆ ದೊರೆಯುತ್ತಿರುವುದು ಮೇಲೆ ಹೇಳಿದಷ್ಟೇ ನಿಖರತೆ. ಇನ್ನು ಅಲ್ಪಾವಧಿಯಲ್ಲಿ ಈ ವ್ಯವಸ್ಥೆ ಬದಲಾಗಲಿದೆ. ಮ್ಯಾಪ್ ಹಾಕಿಕೊಂಡು ಹುಡುಕುವ ಸ್ಥಳಕ್ಕೆ ಬಹುಬೇಗ ಸೇರುತ್ತೇವೆ. ಯಾವುದೇ ಗೊಂದಲಗಳಲ್ಲಿದೆ ಕ್ಯಾಬ್, ಆಟೋ ನಮ್ಮದೇ ಮನೆ ಬಾಗಿಲಲ್ಲಿ ಬಂದು ನಿಲ್ಲಲಿವೆ. ಅದಕ್ಕಾಗಿಯೇ ಇಸ್ರೊ ಉಪಗ್ರಹ ಸಮೂಹ ‘ನಾವಿಕ’ನನ್ನು ದಯ ಪಾಲಿಸಲಿದೆ.

ADVERTISEMENT

ಅತಿ ಕಡಿಮೆ ವೆಚ್ಚ ಹಾಗೂ ಮೊದಲ ಪ್ರಯತ್ನದಲ್ಲಿಯೇ ‘ಮಂಗಳಯಾನ’ ಯಶಸ್ವಿಯಾದ ಬಳಿಕ ಇಡೀ ಜಗತ್ತಿನ ದೃಷ್ಟಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಕಡೆಗೆ ನೆಟ್ಟಿದೆ. ಅದು ಶೋಧಿಸಿದ ಮತ್ತೊಂದು ಪಥದರ್ಶಕ ವ್ಯವಸ್ಥೆಯೇ ‘ನಾವಿಕ್‌’.

1999, ಕಾರ್ಗಿಲ್‌ ಯುದ್ಧದ ಸಂದರ್ಭ; ಗಡಿ ದಾಟಿ ದೇಶದೊಳಗೆ ಅಡಗಿದ್ದ ಪಾಕಿಸ್ತಾನ ಸೇನೆಯನ್ನು ಸದೆಬಡಿಯಲು ಜಿಪಿಎಸ್‌(ಗ್ಲೋಬಲ್‌ ಪೊಸಿಷನಿಂಗ್ ಸಿಸ್ಟಮ್‌) ಮೂಲಕ ಮಾಹಿತಿ ಪಡೆಯುವುದು ಅತ್ಯಗತ್ಯವಾಗಿತ್ತು. ಇಂಥ ಕಠಿಣ ಸಮಯದಲ್ಲಿ ಅಮೆರಿಕ ಜಿಪಿಎಸ್‌ ಮಾಹಿತಿ ಒದಗಿಸಲು ನಿರಾಕರಿಸಿತು. ಅಂದೇ ರಾಷ್ಟ್ರಕ್ಕೆ ಸ್ವದೇಶಿ ಪಥದರ್ಶಕ ವ್ಯವಸ್ಥೆಯ ಅಗತ್ಯ ಎಷ್ಟಿದೆ ಎಂಬುದರ ಅರಿವಾಗಿತ್ತು.

ಇಂಥ ವ್ಯವಸ್ಥೆಯನ್ನು ದೇಶೀಯವಾಗಿ ರೂಪಿಸಲು ಇಸ್ರೊ ಸಿದ್ಧಪಡಿಸಿದ ಯೋಜನೆಗೆ ಕೇಂದ್ರ ಸರ್ಕಾರ 2006ರ ಮೇನಲ್ಲಿ ಅನುಮೋದನೆ ನೀಡಿತ್ತು. ಅಲ್ಲಿಂದ ವೇಗ ಪಡೆದುಕೊಂಡ ಯೋಜನೆ 12 ವರ್ಷಗಳಲ್ಲಿ ಪೂರ್ಣಗೊಂಡು ಬಳಕೆಗೆ ತೆರೆದುಕೊಳ್ಳುತ್ತಿದೆ. ಭಾರತೀಯ ಉಪಗ್ರಹ ಪುಂಜದ ಮುಖೇನ ಅಮೆರಿಕದ ಜಿಪಿಎಸ್‌ಗಿಂತ ಹೆಚ್ಚು ನಿಖರವಾಗಿ ಪಥದರ್ಶಕ ಸಿಗುತ್ತದೆ. ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯಲ್ಲಿ (ಐಆರ್‌ಎನ್‌ಎಸ್‌ಎಸ್‌) ಎಂಟು ಸರಣಿ ಉಪಗ್ರಹಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಇವುಗಳಿಂದ ಮಾಹಿತಿ ಗ್ರಹಿಸಿ ಸಾರ್ವಜನಿಕ ಬಳಕೆಗೆ ತರಲು ಅಗತ್ಯವಾದ ಚಿಪ್‌, ಸಾಧನಗಳು ಇನ್ನಷ್ಟೇ ಉತ್ಪಾದನೆಯಾಗಬೇಕಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಟ್ಯಾಕ್ಸಿ, ಬಸ್‌ ಸೇರಿ ಸಾರ್ವಜನಿಕರು ಪ್ರಯಾಣಿಸುವ ವಾಹನಗಳಲ್ಲಿ ಏಪ್ರಿಲ್‌ನಿಂದಲೇ ಜಿಪಿಎಸ್‌ ಸಾಧನ ಅಳವಡಿಸಲು ಕೇಂದ್ರ ಸರ್ಕಾರ ಸೂಚಿಸಿತ್ತು. ಚಳಿಗಾಲದಲ್ಲಿ ಆವರಿಸಿಕೊಳ್ಳುವ ದಟ್ಟ ಮಂಜಿನಿಂದಾಗಿ ಸಂಭವಿಸುವ ರೈಲು ಅಪಘಾತ, ಸಂಚಾರ ವಿಳಂಬ ತಡೆಯಲು ಜಿಪಿಎಸ್‌ ಆಧರಿತ ಸಾಧನಗಳನ್ನು ಬಳಸಲು ಭಾರತೀಯ ರೈಲ್ವೆ ಕ್ರಮವಹಿಸಿದೆ. ಪರ್ವತಾರೋಹಣ, ಕ್ರೀಡೆ, ಸೇನೆ, ವಾಯುಯಾನ ಸೇರಿ ಹಲವು ಕಡೆ ಪಥದರ್ಶಕ ವ್ಯವಸ್ಥೆಯ ಬಳಕೆ ಹೆಚ್ಚುತ್ತಿದೆ. ಈ ಎಲ್ಲ ವಲಯಗಳಲ್ಲಿಯೂ ಇಸ್ರೊದ ‘ನಾವಿಕ್‌’ ಮೂಲಕ ಮಾಹಿತಿ ಪಡೆಯಲು ಅಗತ್ಯವಾದ ಚಿಪ್‌ಗಳ ತಯಾರಿ ಹಾಗೂ ಸಾಧನಗಳಲ್ಲಿ ಅವುಗಳ ಅಳವಡಿಕೆ ತ್ವರಿತವಾಗಿ ಆಗಬೇಕಿದೆ.

*


ಜಗತ್ತಿನ ಸುತ್ತ ರಷ್ಯಾ-ಅಮೆರಿಕದ 55 ಉಪಗ್ರಹಗಳು
ಇಸ್ರೊದ ನಾವಿಕ್ ಗುರಿ ಭಾರತದ ಪಥದರ್ಶನ ವ್ಯವಸ್ಥೆಯನ್ನು ಉತ್ತಮಗೊಳಿಸುವುದು. ಆದರೆ, ಇಡೀ ಜಗತ್ತನ್ನು ಅಮೆರಿಕದ ಜತೆಗೆ ರಷ್ಯಾ ಉಪಗ್ರಹಗಳೂ ಸುತ್ತುವರಿದಿವೆ. ಅಮೆರಿಕದ ಜಿಪಿಎಸ್‍ನಂತೆಯೇ ರಷ್ಯಾದ ‘ಗ್ಲೊನಾಸ್’(ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್) ಪಥದರ್ಶಕ ವ್ಯವಸ್ಥೆ ಸಹ ಹೆಚ್ಚು ಬಳಕೆಯಲ್ಲಿದೆ. ಪ್ರಾರಂಭದಲ್ಲಿ ರಷ್ಯಾ ಒಕ್ಕೂಟಕ್ಕಾಗಿಯೇ ರೂಪಿಸಲಾದ ವ್ಯವಸ್ಥೆ ಇಂದು ಜಗತ್ತನ್ನು ವ್ಯಾಪಿಸಿದೆ. ಏಕಕಾಲದಲ್ಲಿ ಜಿಪಿಎಸ್ ಮತ್ತು ಗ್ಲೊನಾಸ್ ಬಳಸಿ ಅತ್ಯಂತ ನಿಖರವಾಗಿ ಸ್ಥಳದ ಮಾಹಿತಿ ಪಡೆಯಬಹುದು. ಗ್ಲೊನಾಸ್ ಎರಡು ಮೀಟರ್ ಸಮೀಪದಷ್ಟು ನಿಖರತೆ ಹೊಂದಿದೆ. ಜಿಪಿಎಸ್-ಗ್ಲೊನಾಸ್ ಎರಡೂ ವ್ಯವಸ್ಥೆ ಸೇರಿದರೆ, 55 ಉಪಗ್ರಹಗಳ ಸಹಕಾರದಿಂದ ಪಥದರ್ಶನವಾಗುತ್ತದೆ.

ಆ್ಯಪಲ್‍ನ ‘ಐಫೋನ್ 4ಎಸ್’ ಮೊಬೈಲ್ ಫೋನ್‍ನಲ್ಲಿ ಮಾರ್ಗಸೂಚಿಗಾಗಿ ಮೊಟ್ಟಮೊದಲ ಬಾರಿಗೆ ಜಿಪಿಎಸ್ ಮತ್ತು ಗ್ಲೊನಾಸ್ ಎರಡನ್ನೂ ಬಳಸಲಾಯಿತು. ಐಫೋನ್‍ನಂತಹ ಅಧಿಕ ಬೆಲೆಯ ಸ್ಮಾರ್ಟ್‍ಫೋನ್‍ಗಳಲ್ಲಿ ಮಾತ್ರ ಬಳಸಲಾದ ಉಭಯ ಪಥದರ್ಶಕ ವ್ಯವಸ್ಥೆಯನ್ನು ಇದೀಗ ಬಹುತೇಕ ಎಲ್ಲ ಮೊಬೈಲ್ ಫೋನ್ ಕಂಪನಿಗಳು ಅಳವಡಿಸಿಕೊಳ್ಳುತ್ತಿವೆ. ಮೊಬೈಲ್ ಕೊಳ್ಳುವಾಗ ಅಥವಾ ನೀವು ಈಗ ಬಳಸುತ್ತಿರುವ ಮೊಬೈಲ್‍ನಲ್ಲಿ ಎ-ಜಿಪಿಎಸ್ ಮತ್ತು ಎ-ಗ್ಲೊನಾಸ್ ವ್ಯವಸ್ಥೆ ಇದೆಯೇ ಒಮ್ಮೆ ಪರೀಕ್ಷಿಸಿಕೊಳ್ಳಬಹುದು.

*

ನಾವಿಕ್‌
ಅಮೆರಿಕದ ಜಿಪಿಎಸ್‌ 24 ಉಪಗ್ರಹಗಳ ಸಮೂಹವಾಗಿದ್ದು, ಇದರ ವ್ಯಾಪ್ತಿ ಬಹುತೇಕ ಇಡೀ ಜಗತ್ತನ್ನು ಆವರಿಸಿದೆ. ಜಿಪಿಎಸ್‌ 20–30 ಮೀಟರ್‌ನಷ್ಟು ನಿಖರವಾಗಿ ಸ್ಥಳದ ಮಾಹಿತಿ ನೀಡಿದರೆ, ನಾವಿಕ್‌ 5 ಮೀಟರ್‌ನಷ್ಟು ಸಮೀಪದ ನಿಖರತೆ ಒದಗಿಸುತ್ತದೆ. ಎಂಟು ಉಪಗ್ರಹಗಳ ನಾವಿಕ್‌ ವ್ಯವಸ್ಥೆಯನ್ನು ಭಾರತದ ಯಾವುದೇ ಭಾಗದಲ್ಲಿ ಬಳಸಬಹುದು. ಇದರೊಂದಿಗೆ ಭಾರತದ ಗಡಿಯಿಂದ 1500 ಕಿ.ಮೀ. ಹೊರಭಾಗದಲ್ಲಿಯೂ ಇದರ ವ್ಯಾಪ್ತಿಯಿದೆ. ಅಂದರೆ, ದಕ್ಷಿಣದಲ್ಲಿ ಮಲೇಷ್ಯ, ಹಿಂದೂ ಮಹಾಸಾಗರ ಪಶ್ಚಿಮದಲ್ಲಿ ಅರೆಬಿಯನ್‌ ಪೆನಿನ್ಸುಲಾ ಹಾಗೂ ಪೂರ್ವದಲ್ಲಿ ಚೀನಾದ ಕೆಲ ಭಾಗದವರೆಗಿನ ಮಾಹಿತಿ ಪಡೆಯಲು ಸಾಧ್ಯ.

ಸಾರ್ವಜನಿಕರಿಗೆ ಮುಕ್ತವಾಗಿ ಸ್ಟ್ಯಾಂರ್ಡ್ ‌ ಪೊಸಿಷನಿಂಗ್‌ ಸರ್ವಿಸ್‌ (ಎಸ್‌ಪಿಎಸ್) ಹಾಗೂ ಅಧಿಕೃತ ಬಳಕೆದಾರರಿಗೆ ಮಾತ್ರವೇ ರಿಸ್ಟ್ರಿಕ್ಟೆಡ್‌ ಸರ್ವಿಸ್‌ (ಆರ್‌ಎಸ್) ಸೌಲಭ್ಯವನ್ನು ₹ 2,246 ಕೋಟಿ ವೆಚ್ಚದ ‘ನಾವಿಕ್‌’ ನೀಡಲಿದೆ. ಸಮುದ್ರ ಮಾರ್ಗ, ವಾಯುಯಾನ ಹಾಗೂ ಭೂ ಮಾರ್ಗದಲ್ಲಿನ ಸಂಚಾರಗಳಲ್ಲಿ ಮಾರ್ಗಸೂಚಿ ವ್ಯವಸ್ಥೆ, ವಿಪತ್ತು ನಿರ್ವಹಣೆ, ವಾಹನ ಗುರುತಿಸುವಿಕೆ, ಮೊಬೈಲ್‌ನಲ್ಲಿ ಪಥದರ್ಶನ ವ್ಯವಸ್ಥೆ, ನಕ್ಷೆ ಮತ್ತು ಪ್ರದೇಶದ ಮಾಹಿತಿ ಸಂಗ್ರಹ, ಚಾರಣಿಗರು ಮತ್ತು ಪ್ರವಾಸಿಗರಿಗೆ ಪ್ರಯಾಣದ ಮಾರ್ಗಸೂಚಿ, ದೃಶ್ಯ ಮತ್ತು ಧ್ವನಿ ಮೂಲಕ ಚಾಲಕರಿಗೆ ಪಥದರ್ಶನವನ್ನು ಪಡೆಯಬಹುದಾಗಿದೆ.

* ಯುರೋಪಿಯನ್ ಒಕ್ಕೂಟ ‘ಗೆಲಿಲಿಯೊ’ ಪಥದರ್ಶಕ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ತೊಡಗಿದೆ. 23,222 ಕಿ.ಮೀ. ಎತ್ತರದಲ್ಲಿ ಭೂಮಿಯನ್ನು ಗೆಲಿಲಿಯೊದ ಉಪಗ್ರಹಗಳು ಸುತ್ತುತ್ತಿವೆ. ಈ ವ್ಯವಸ್ಥೆಗಾಗಿ ಒಟ್ಟು 30 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದ್ದು, ಪ್ರಸ್ತುತ 14 ಉಪಗ್ರಹಗಳು ಕಾರ್ಯಾಚರಿಸುತ್ತಿವೆ.

* ಭಾರತದಂತೆಯೇ ಚೀನಾ ಸಹ ತನ್ನದೇ ಪಥದರ್ಶಕ ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತಿದೆ. 35 ಉಪಗ್ರಹಗಳ ಸಮೂಹದ ‘ಬಿಡೌ’ ಅಥವಾ ಬಿಡಿಎಸ್ ಪಥದರ್ಶಕ ವ್ಯವಸ್ಥೆ ಇದಾಗಿದೆ. 2011ರಲ್ಲಿ ಮೊದಲ ಬಾರಿಗೆ ಕಾರ್ಯಾಚರಣೆಯನ್ನು ಸಾರ್ವಜನಿಕಗೊಳಿಸಲಾಯಿತು. ಸದ್ಯ 22 ಉಪಗ್ರಹಗಳು ಕಕ್ಷೆ ಸೇರಿದ್ದು, ಚೀನಾ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ 10 ಮೀಟರ್‍ನಷ್ಟು ನಿಖರವಾಗಿ ಸ್ಥಳದ ಮಾಹಿತಿ ಪೂರೈಸುತ್ತಿವೆ.


*

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.