ಇಂದು ಎಷ್ಟೇ ತಂತ್ರಜ್ಞಾನ ಮುಂದುವರಿದಿರಬಹುದು. ಸಂವಹನ ಕ್ರಾಂತಿಯೇ ಆಗಿರಬಹುದು. ಆದರೆ ಬರವಣಿಗೆಗೆ ಮತ್ತು ಪತ್ರಕ್ಕೆ ಅದರದೇ ಆದ ಮಾಂತ್ರಿಕ ಶಕ್ತಿಯಿದೆ. ಹೇಳುವುದಕ್ಕೂ ಬರೆಯುವುದಕ್ಕೂ ಇರುವ ವ್ಯತ್ಯಾಸ ಅದೇ. ಅದೇ ಪತ್ರಗಳ ವಿಶೇಷ.
ವಾಟ್ಸ್‌ಆ್ಯಪ್ ಮಾಡುವುದು, ಮೆಸೇಜ್ ಕಳಿಸುವುದರಲ್ಲೆಲ್ಲ ಅಂಥ ಸೃಜನಶೀಲತೆ ಇರುವುದಿಲ್ಲ. ಈಗೆಲ್ಲ ನಮಗೆ ರೆಡಿಮೇಡ್ ಸರಕುಗಳು ಸಿಕ್ಕಿ ನಮ್ಮ ಸೃಜನಶೀಲತೆಯನ್ನೇ ಕೊಲ್ಲುತ್ತಿದೆ. ಬರವಣಿಗೆ ಎನ್ನುವುದು ಒಂದು ಸೃಜನಶೀಲ ಪ್ರಕ್ರಿಯೆ. ಎಲ್ಲ ರೆಡಿಮೇಡ್‌ಗಳನ್ನು ಮೀರಿ ನಾವೇ ಶ್ರಮವಹಿಸಿ ಸೃಜನಶೀಲವಾಗಿ ಪತ್ರ ಬರೆಯುವುದು ತುಂಬ ಮುಖ್ಯವಾದದ್ದು.
ಈ ಎಲ್ಲ ಪತ್ರಗಳನ್ನು ಓದುತ್ತ ಪತ್ರಮಾಧ್ಯಮದ ಮಾಂತ್ರಿಕತೆ ನಮ್ಮನ್ನೂ ಆವರಿಸಿಕೊಳ್ಳುತ್ತಾ ಹೋಯಿತು. ಇಲ್ಲಿನ ಪ್ರತಿಯೊಂದು ಪತ್ರದಲ್ಲಿಯೂ ಒಬ್ಬ ಲೇಖಕ ಕಾಣಿಸುತ್ತಾನೆ. ಒಬ್ಬ ಕವಿ ಕಾಣಿಸುತ್ತಾನೆ. ನಮ್ಮಲ್ಲಿ ಎಷ್ಟೆಲ್ಲ ಜನರು ಇಷ್ಟು ಚೆನ್ನಾಗಿ ಬರೆಯಬಲ್ಲರು ಎಂಬ ಹೆಮ್ಮೆಯೂ ಆಯಿತು. ಬಹುಶಃ ಪ್ರೀತಿಗೆ ಮಾತ್ರ ಹೀಗೆ ಬರೆಸಬಲ್ಲ ಶಕ್ತಿ ಇದೆ ಅನ್ನಿಸುತ್ತದೆ.
ಉಳಿದೆಲ್ಲ ಮಾಧ್ಯಮಗಳನ್ನು ಬಿಟ್ಟು ಪತ್ರಮಾಧ್ಯಮವನ್ನು ಆಯ್ದುಕೊಂಡ ಕಾರಣಕ್ಕೇ ಇಲ್ಲಿನ ಎಲ್ಲ ಸ್ಪರ್ಧಿಗಳನ್ನೂ ಅಭಿನಂದಿಸಬೇಕು.
ಇಲ್ಲಿನ ಪತ್ರಗಳಲ್ಲಿ ಕೆಲವು ತಮಾಷೆಯಾಗಿದ್ದವು. ಇನ್ನು ಕೆಲವು ಸಾಹಿತ್ಯಿಕ ಭಾಷೆಯಿಂದ ಗಮನಸೆಳೆಯುವಂತಿದ್ದವು. ಮತ್ತೆ ಕೆಲವು ತುಂಬ ಶ್ರಮವಹಿಸಿ ಕಲಾತ್ಮಕ ಕುಸುರಿ ಮಾಡಿ ಕಳಿಸಿದ್ದಾರೆ.
ಸಂಗಾತಿಯನ್ನು ಇಂಪ್ರೆಸ್ ಮಾಡಬೇಕು ಎಂಬ ಹಂಬಲ ಬಹುತೇಕ ಎಲ್ಲ ಪತ್ರಗಳಲ್ಲಿಯೂ ಎದ್ದು ಕಾಣುತ್ತದೆ. ಭಾಷೆ, ರೂಪಕಗಳು, ವರ್ಣನೆಗಳು ಹೀಗೆ ಹಲವು ಅಂಶಗಳ ಮೂಲಕ ಇಂಪ್ರೆಸ್ ಮಾಡಿಕೊಳ್ಳಲು ಪ್ರಯತ್ನಿಸುವುದು ಕಾಣುತ್ತದೆ. ಆದರೆ ಈ ಎಲ್ಲವನ್ನೂ ಮೀರಿ ಮುಗ್ಧತೆಯಿಂದ, ಮನಸ್ಸಿನಿಂದ ಬರೆದ ಪತ್ರಗಳು ನಮಗೆ ಇಷ್ಟವಾದವು. ಪತ್ರಗಳ ಆಯ್ಕೆಯಲ್ಲಿ ನಾವು ಮುಖ್ಯ ಮಾನದಂಡವಾಗಿರಿಸಿಕೊಂಡಿರುವುದು ಈ ಅಂಶಗಳನ್ನೇ.
ಮೂರು ಪತ್ರಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಿದ್ದೀವಿ. ಹಾಗೆಯೇ ಈ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ನಮಗೆ ಮೆಚ್ಚುಗೆ ಆದ ಆರು ಪತ್ರಗಳನ್ನೂ ಆಯ್ಕೆ ಮಾಡಿದ್ದೀವಿ.
ಮೊದಲನೇ ಬಹುಮಾನ ಪಡೆದ ಪತ್ರ ‘ಯಾವ ಸೆಲ್ಫಿಯೂ ಸೆರೆಹಿಡಿಯಲಾಗದ ಪರವಶತೆಗೆ ನೀನೇ ಕಾರಣ...’ ಬೆಳ್ಳಂಬೆಳಕಿನ ಬದುಕಿನಲ್ಲಿ ಒಂಟಿತನದ ಕತ್ತಲೆ ಕಾಡುವ ಭಯ, ಹುಟ್ಟಿಮೆಯ ಚಂದ್ರನಂತೆ ನೀನು ನನ್ನ ಬದುಕಿನಲ್ಲಿ ಉದಿಸಿದ ಕ್ಷಣದಿಂದ ನನಗಿಲ್ಲವೇ ಇಲ್ಲ!– ಹೀಗೆ ಆರಂಭವಾಗುವ ಪತ್ರದಲ್ಲಿ ಭಾಷೆಯಲ್ಲಿನ ಕಾವ್ಯಾತ್ಮಕ ಗುಣ ನಮ್ಮನ್ನು ವಿಶೇಷವಾಗಿ ಸೆಳೆಯಿತು.
‘ಅಲ್ಲಿಂದ ಮುಂದೆ ಶುರುವಾದ್ದೆಲ್ಲ ನಸುನಗುಗಳ, ಪಿಸು ಮಾತುಗಳ, ಕೆನ್ನೆ ರಂಗೇರುವ, ಮೈ ಬಿಸಿಯಾಗುವ ಅವಿಸ್ಮರಣೀಯ ಅನುಭವಗಳು’
ಹೀಗೆ ಪ್ರೀತಿ ಹುಟ್ಟಿಕೊಂಡ ಕ್ಷಣದ ಭಾವನೆಗಳನ್ನು ತುಂಬ ಚೆನ್ನಾಗಿ ಅಭಿವ್ಯಕ್ತಿಸಿದ್ದಾರೆ. ಪ್ರೇಮದ ಸಾರ್ವತ್ರಿಕ ಅನುಭವವನ್ನು ತುಂಬ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಅಲ್ಲದೇ ಇಲ್ಲಿನ ವಿವರಗಳೂ ತುಂಬ ಚೆನ್ನಾಗಿವೆ. ಸೂಕ್ಷ್ಮ ಸಂವೇದನೆ ಕಾಣುತ್ತದೆ.
ಕೊನೆಯಲ್ಲಿ ಅವರು ಇದನ್ನೆಲ್ಲ ಇಮೇಲ್ ಮಾಡ್ಬೋದಿತ್ತು, ಮೆಸೇಜ್ ಕಳಿಸಬಹುದಿತ್ತು. ಆದರೆ ನನಗೆ ಅನ್ನಿಸಿದ್ದನ್ನು ಹಂಚಿಕೊಳ್ಳುವುದು ಪತ್ರದ ಮೂಲಕ ಮಾತ್ರ ಸಾಧ್ಯ. ಸೆಲ್ಫಿಯಲ್ಲಿಯೂ ಸೆರೆಹಿಡಿಯಲು ಸಾಧ್ಯವಿಲ್ಲದ ಭಾವನೆ ಇದು ಎಂದು ಹೇಳ್ತಾರೆ. ಸಮಕಾಲೀನ ಸಂವಹನ ಮಾಧ್ಯಮಗಳ ನಡುವೆಯೇ ಪತ್ರದ ಮಹತ್ವವನ್ನೂ ಹೇಳುವ ಪತ್ರವಿದು.
ಎರಡನೇ ಬಹುಮಾನ ನೀಡಿರುವ ‘ಕಾಗದದ ದೋಣಿ ಹತ್ತಿ ಕಡಲ ದಾಟಿ ಹೊರಟವನ ಮೇಲೆ ಕ್ಷಮೆಯಿರಲಿ ನೂರ್...’ ಎಂಬ ಪತ್ರ ಪ್ರಬುದ್ಧತೆಯ ಕಾರಣದಿಂದ ಇಷ್ಟವಾಯ್ತು. ಹೆಣ್ಣಿನ ರೂಪದ ಬಗ್ಗೆ ವರ್ಣನೆಗಳಲ್ಲಿಯೇ ಮುಳುಗಿಹೋಗದ, ಬದುಕಿಗೆ ಹತ್ತಿರವಾದ ಪಕ್ವ ಪ್ರೇಮ ಈ ಪತ್ರದಲ್ಲಿ ಎದ್ದುಕಾಣುತ್ತದೆ. ಮರಣ ದಂಡನೆಗೆ ಗುರಿಯಾಗಿರುವ ವ್ಯಕ್ತಿ, ಬಿಟ್ಟು ಹೋಗಿರುವ ಹೆಂಡತಿಯನ್ನು ನೆನಪಿಸಿಕೊಂಡು ಬರೆದ ಪತ್ರ ಇದು. ಅವನಿಗೆ ಮೊಹಬ್ಬತ್ ಎಂಬ ಮಗಳೂ ಇದ್ದಾಳೆ. ವಿಶೇಷವಾಗಿ ಇದರಲ್ಲೊಂದು ಸಾಲು ತುಂಬ ಚೆನ್ನಾಗಿದೆ.
‘ಮೊಹಬ್ಬತ್‌ಗೆ ನೀನು ಬೇಕು, ನನಗೆ ನಿನ್ನ ಮೊಹಬ್ಬತ್!’
ಈ ರೀತಿಯ ಆರಂಭವೇ ನನಗೆ ತುಂಬ ಇಷ್ಟವಾಯ್ತು. ಕೊಂಚ ಗಂಭೀರವಾಗಿಯೇ ಕೊನೆಗೊಳ್ಳುತ್ತದೆ ಪತ್ರ. ಸಾವಿನ ತುದಿಯಲ್ಲಿ ನಿಂತುಕೊಂಡು ‘ಅಲ್ಲಾಹ್ ಎಷ್ಟೊಂದು ಕರುಣಾಮಯಿ ನೋಡು, ಸಾವಿರ ಜನ್ಮಗಳಿಗಾಗುವಷ್ಟು ನಿನ್ನ ಪ್ರೀತಿ ಕೊಟ್ಟು, ಬದಲಿಗೆ ಕೇವಲ ಸಾವೆಂಬ ಪುಟ್ಟ ಕಂದಾಯ ಕಟ್ಟಿಸಿಕೊಳ್ಳುತ್ತಿದ್ದಾನೆ’ ಎಂದು ಜೀವನ್ಮುಖಿಯಾಗುವ ಪತ್ರ ಭಾವನಾತ್ಮಕವಾಗಿ ಮನಸ್ಸಿಗೆ ಇಳಿಯುತ್ತದೆ. ಮೂರನೇ ಬಹುಮಾನಕ್ಕೆ ಆಯ್ಕೆ ಮಾಡಿರುವುದು ‘ಯಾವಾಗ್ ಸಿಕ್ತೀಯೇ, ಕಾಯ್ತಿರ್ತೀನಿ...’ ಎಂಬ ಹೆಸರಿನ ಪತ್ರ.
ಈ ಪತ್ರ ತುಂಬ ಮಜವಾಗಿದೆ. ಗ್ರಂಥಾತ್ಮಕ ಭಾಷೆ, ಸುಂದರ ಶಬ್ದಗಳ ಮೊರೆ ಹೋಗದೆ, ತನ್ನ ಮನಸ್ಸಿನ ಭಾವನೆಯನ್ನು ಹಾಗ್ಹಾಗೇ ಅಭಿವ್ಯಕ್ತಿಸಿದ್ದಾರೆ. ಮಂಡ್ಯ ಭಾಷೆಯನ್ನು ತುಂಬ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಬರೆದಿರುವ ರೀತಿ ಚೆನ್ನಾಗಿದೆ. ಇಲ್ಲಿ ಅವರು ಆ ಹುಡುಗಿಯನ್ನು ಇಂಪ್ರೆಸ್ ಮಾಡೋಕೆ ಪ್ರಯತ್ನಿಸುತ್ತಿಲ್ಲ, ಬದಲಿಗೆ ತನ್ನ ಭಾವನೆಯನ್ನು ಎಕ್ಸ್‌ಪ್ರೆಸ್ ಮಾಡೋಕೆ ಪ್ರಯತ್ನಿಸ್ತಿದಾರೆ.
‘ನೀನ್ ಬ್ಯಾರೇ ಮದ್ವ್ಯಾಗಿ ನನ್ನ ಬುಟ್ ಬುಟ್ ಹೋದಾಗ, ನಮ್ ಗದ್ದೇಲಿ ನೆಟ್ಟಿದ್ ತೆಂಗಿನ ಸಸಿ ಈಗ ಮರವಾಗದೆ.’ ಹೀಗೆ ನಡುವೆ ಕಳೆದು ಹೋದ ಕಾಲವನ್ನು ಸೂಚಿಸಲು ಬಳಸಿಕೊಂಡಿರುವ ಹೋಲಿಕೆಗಳೂ ಗಮನಸೆಳೆಯುವಂತಿದೆ. ಮಂಡ್ಯದ ಮಣ್ಣಿನ ಸೊಗಡು ಮತ್ತು ಮುಗ್ಧತೆ ಎರಡೂ ಇದೆ.
ಇಲ್ಲಿ ಇಬ್ಬರಿಗೂ ಮದ್ವೆಯಾಗಿಬಿಟ್ಟಿದೆ. ಅದಕ್ಕೆ ಕೊನೆಯಲ್ಲಿ ‘ನೀನು ನಿನ್ ಮಕ್ಳನ್ನು ಕರ್ಕೊಂಡ್ ಬಾ, ನಾನು ನನ್ನ ಮಕ್ಳನ್ನು ಕರ್ಕೊಂಡು ಬರ್ತೀನಿ. ನಿನ್ನ ಮಕ್ಕಳನ್ನು ನಾನು ಮುದ್ದಾಡ್ತೀನಿ, ನನ್ನ ಮಕ್ಳನ್ನು ನೀನು ಮುದ್ದಾಡು’ ಅಂತ ಹೇಳಿರುವುದೂ ತುಂಬ ತಮಾಷೆಯಾಗಿದೆ. ಬಹುಶಃ ಈ ಪತ್ರ ಓದಿದ್ರೆ ಅವರ ಹಳೆಯ ಪ್ರೇಮಿ ಬಂದು ಮಕ್ಕಳನ್ನು ಮುದ್ದಾಡಿ ಹೋಗಬಹುದು!
ಇನ್ನು ಮೆಚ್ಚುಗೆ ಪಡೆದ ಆರು ಪತ್ರಗಳಲ್ಲಿನ ಬಿಡಿಬಿಡಿಯಾದ ಭಾಗಗಳು ಗಮನ ಸೆಳೆಯುವಂತಿದ್ದವು. ಒಂದರಲ್ಲಿ ಅಭಿವ್ಯಕ್ತಿಪಡಿಸಿದ ಭಾವನೆ, ಇನ್ನೊಂದರಲ್ಲಿ ಬರವಣಿಗೆಯ ರೀತಿ ಹೀಗೆ ಹಲವು ಅಂಶಗಳನ್ನು ಪರಿಗಣಿಸಿ ಈ ಆರು ಪತ್ರಗಳನ್ನು ಆಯ್ಕೆ ಮಾಡಿದ್ದೇವೆ.
ಈ ಸ್ಪರ್ಧೆಯಲ್ಲಿ ಯಾರ್‍ಯಾರು ಬಹುಮಾನ ಪಡೆದಿದ್ದಾರೋ ಅವರೆಲ್ಲರಿಗೂ ನಮ್ಮಿಬ್ಬರ ಪರವಾಗಿ ಶುಭಾಶಯಗಳು. ಇದೇ ಥರ ಬರೀತಾ ಇರಿ. ಬರೆಯುವುದನ್ನು ಮಾತ್ರ ನಿಲ್ಲಿಸಬೇಡಿ. ಯಾರಿಗೆ ಬಹುಮಾನ ಬಂದಿಲ್ಲವೋ ಅವರು ಬೇಸರಿಸಿಕೊಳ್ಳಬೇಡಿ. ಪತ್ರ ಬರೆಯಲು ನೀವು ವಹಿಸಿದ ಶ್ರಮವೇ ಬಹುಮಾನಕ್ಕೆ ಅರ್ಹ. ಖುಷಿಯಾಗಿರಿ, ಇನ್ನಷ್ಟು ಚೆನ್ನಾಗಿ ಬರೆಯಲು ಪ್ರಯತ್ನಿಸಿ.
ಈ ಆಯ್ಕೆ, ಬಹುಮಾನ, ಎಲ್ಲಕ್ಕಿಂತ ಮುಖ್ಯವಾಗಿ ನಾವಿಬ್ಬರೂ ಒಟ್ಟಿಗೇ ಕೂತು ಇಷ್ಟೆಲ್ಲ ಪ್ರೇಮಪತ್ರಗಳನ್ನು ಓದಿದ್ದೇ ದೊಡ್ಡ ಖುಷಿಯ ಅನುಭವ ಕೊಟ್ಟಿದೆ. ಅದಕ್ಕೆ ಧನ್ಯವಾದಗಳು. ಎಲ್ಲರಿಗೂ ಮತ್ತೊಮ್ಮೆ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು...
– ನಿಮ್ಮ, ಯಶ್-ರಾಧಿಕಾ ಪಂಡಿತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.