ನದಿ ನಮ್ಮಲ್ಲಿ ಮೂಡಿಸುವ ಭಾವನೆಗಳು ಯಾವುವು?
ನದಿ ಸಮೃದ್ಧಿ ಭಾವದ ಸೂಚಕ. ನದಿಪಾತ್ರದುದ್ದಕ್ಕೂ ನೆಮ್ಮದಿಯನ್ನು ನೆಲೆಗೊಳಿಸಿದಂತೆ ಹಸಿರು ಕಾಣಿಸುತ್ತದೆ. ಹಸಿರು ಕಣ್ಮನಗಳಿಗೆ ತಂಪು ನೀಡುವಂತಹುದು. ನದಿಗೆ, ಅದು ರೂಪಿಸುವ ಹಸಿರಿಗೆ ಸೃಷ್ಟಿಶೀಲ ಶಕ್ತಿಯಿದೆ. ಹೀಗೆ ಜೀವಂತಿಕೆಯ ರೂಪಕವಾದ ನದಿ ರಮಣೀಯ ಭಾವನೆಗಳನ್ನು ನಮ್ಮಲ್ಲಿ ಉದ್ದೀಪಿಸುತ್ತದೆ. ಇವೆಲ್ಲವೂ ಮೊದಲನೋಟಕ್ಕೆ ನದಿ ನಮ್ಮಲ್ಲಿ ಉಂಟುಮಾಡುವ ಭಾವಗಳಾದವು. ಇದರಾಚೆಗೆ ನದಿ ನಮ್ಮಲ್ಲಿ ಏನನ್ನಾದರೂ ಮೂಡಿಸುತ್ತದೆಯೇ ಅಥವಾ ನದಿಯ ಮೂಲಕ ನಾವು ಏನನ್ನಾದರೂ ಕಲಿಯಲಿಕ್ಕೆ ಸಾಧ್ಯವಿದೆಯೇ? ನದಿಯ ಮತ್ತೊಂದು ಹೆಸರು ಹೊಳೆ. ಈ ‘ಹೊಳೆ’ ಎನ್ನುವ ಪದ ಹೊಳಪನ್ನೂ ಹೊಳಹನ್ನೂ ಸೂಚಿಸುವಂತಹದು. ನಮ್ಮ ಬದುಕಿನ ಹೊಳಪು ಹಾಗೂ ಆ ಬದುಕು ಅರ್ಥಪೂರ್ಣಗೊಳ್ಳಲು ಬೇಕಾದ ಏನನ್ನಾದರೂ ‘ಹೊಳೆ’ ಧ್ವನಿಸುತ್ತಿದೆಯೇ? ಹೌದು, ಎನ್ನಿಸುತ್ತದೆ.
ಹೊಳೆ ಅಥವಾ ನದಿ ಮುಖ್ಯವಾಗಿ ನಮಗೆ ಎರಡು ಸಂಗತಿಗಳನ್ನು ಸದಾ ನೆನಪಿಸುತ್ತದೆ. ಮೊದಲನೆಯದು – ಚಲನಶೀಲತೆ. ಮತ್ತೊಂದು ನಡಿಗೆಯಲ್ಲಿನ ಲಾಲಿತ್ಯ. ಎಲ್ಲಿಯೂ ನಿಲ್ಲದಿರುವುದು ನದಿಯ ವ್ಯಕ್ತಿತ್ವದ ಪ್ರಮುಖ ಲಕ್ಷಣ. ಹೀಗೆ ನಿಲ್ಲದಿರುವ ಮೂಲಕವೇ ನದಿ ನಿರಂತರವಾಗಿ ಹೊಸತಾಗುತ್ತದೆ ಹಾಗೂ ಜಡಗೊಳ್ಳುವುದರಿಂದ ಪಾರಾಗುತ್ತದೆ. ಅರಿವು ಮೈಗೂಡಬೇಕಾದರೆ ಹರಿವು ಅನಿವಾರ್ಯ ಎನ್ನುವುದನ್ನು ತಿಳಿದುಕೊಳ್ಳಲು ನದಿ ಪರಿಣಾಮಕಾರಿಯಾಗಿ ಹೇಳುತ್ತದೆ. ನಡಿಗೆಯ ಲಯದ ಬಗ್ಗೆ ನೋಡೋಣ. ಲಯವಿಲ್ಲದೆ ಜಗತ್ತಿನಲ್ಲಿ ಏನಾದರೂ ಇದೆಯೇ? ಪ್ರತಿಯೊಂದು ಸಂಗತಿಯೂ ತನ್ನದೇ ಆದ ಲಯವೊಂದನ್ನು ಹೊಂದಿದೆ. ಬದುಕಿಗೆ ಶ್ರುತಿಬದ್ಧ ಲಯ ಅಗತ್ಯ. ಲಯ ತಪ್ಪಿದಾಗಲೇ ಬದುಕಿನಲ್ಲಿ ಏರುಪೇರುಗಳು ಕಾಣಿಸುತ್ತವೆ.
ನದಿಯದು ಶಾಂತಚಿತ್ತ. ಆದರೆ, ಋತುವಿಲಾಸದಿಂದ ಹೊಳೆಯೂ ಹದತಪ್ಪುತ್ತದೆ. ಆಗ ಪ್ರವಾಹ ಉಂಟಾಗುತ್ತದೆ. ಮತ್ತೆ ಕೆಲವೊಮ್ಮೆ ನದಿ ಬತ್ತುತ್ತದೆ. ನೀರಹೆಜ್ಜೆಗಳು ಅಳಿಸಿಹೋದಂತೆ ಕಾಣಿಸುತ್ತದೆ. ಬದುಕಿನಲ್ಲೂ ಇಂಥ ಪ್ರವಾಹಗಳು, ಭರವಸೆಗಳೆಲ್ಲ ಬರಿದಾದಂಥ ಸನ್ನಿವೇಶಗಳೇನು ಕಡಿಮೆಯೇ? ಅತಿವೃಷ್ಟಿ ಸಂದರ್ಭದಲ್ಲಿ ಮೇರೆ ಮೀರಬಾರದ ಸಂಯಮವನ್ನೂ ಮತ್ತೊಂದು ಮಳೆಗಾಲಕ್ಕೆ ಕಾಯುವ ತಾಳ್ಮೆಯನ್ನೂ ನದಿಯ ಬದುಕು ನಮಗೆ ಹೇಳುವಂತಿದೆ. ನದಿ ಎನ್ನುವುದು ಜೀವಂತವಾದ ‘ಬದುಕಿನ ಗೀತೆ’ಯಂತೆ ನಮ್ಮೊಂದಿಗೆ ನಡೆದುಬರುತ್ತಿದೆ.
ನಾವು ಮರೆಯಬಾರದ ಸಂಗತಿ ಮತ್ತೊಂದಿದೆ. ಅದು, ಕಣ್ಣಿಗೆ ಕಾಣುವುದಷ್ಟೇ ನದಿಯಲ್ಲ; ನಮ್ಮ ನೋಟದಾಚೆಗೂ ‘ಹೊಳೆ’ ಇರಬಹುದೆನ್ನುವುದು. ನಾವು ಅಂತರಂಗದ ಬಗ್ಗೆ ಮಾತನಾಡುತ್ತೇವೆ. ಅಂತರಗಂಗೆಯೂ ಇದೆ. ಅಂತರ್ಜಲ ಈ ಹೊತ್ತಿನ ಆತಂಕದ ಸಂಗತಿ. ಗುಪ್ತಗಾಮಿನಿ ಸ್ವರೂಪದಲ್ಲಿಯೂ ನದಿಯ ಅಸ್ತಿತ್ವವಿದೆ. ಈ ಒಳನದಿಗಳ ಬಗ್ಗೆ ನಾವು ಹೆಚ್ಚು ಜಾಗರೂಕರಾಗಿರಬೇಕು. ನಾಗರೀಕತೆಯ ಉದ್ದಕ್ಕೂ ನಮ್ಮನ್ನು ಪೊರೆಯುತ್ತಲೇ ಬಂದಿರುವುದು, ಮನುಷ್ಯರನ್ನಾಗಿ ಉಳಿಸಿರುವುದು ಈ ನದಿಗಳೇ. ಕೊನೆಯದಾಗಿ, ಒಂದು ಪ್ರಶ್ನೆ: ನದಿ ಎಂದರೇನು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.