ಐಶಾರಾಮಿ ಕಾರುಗಳ ತಯಾರಿಕೆಯಲ್ಲಿ ಪ್ರಪಂಚದ ಗಮನ ಸೆಳೆದಿರುವ ಬಹುರಾಷ್ಟ್ರೀಯ ಕಂಪೆನಿ ಬಿಎಂಡಬ್ಲ್ಯು, ಶ್ರೀಮಂತರ ವಿಲಾಸಿ ಜೀವನಕ್ಕೆ ಮೀಸಲು ಎಂಬ ಹಣೆಪಟ್ಟಿಯನ್ನು ಹೊತ್ತಿತ್ತು. ಜೊತೆಗೆ ಬಿಎಂಡಬ್ಲ್ಯು ಬೈಕ್ ಒಡೆಯರಾಗಬೇಕಾದರೆ ಅಂತರರಾಷ್ಟ್ರೀಯ ತೆರಿಗೆ ಕಟ್ಟುವುದು ಅವಶ್ಯವಾಗಿತ್ತು. ಭಾರತದಲ್ಲಿ ದುಬಾರಿ ಬೈಕುಗಳನ್ನು ಕೊಳ್ಳುವವರ ಸಂಖ್ಯೆ ತೀರಾ ವಿರಳವಿದ್ದು, ವಿದೇಶಿ ನಿಯಮಗಳ ಅನುಮತಿ ಪಡೆದು ದೇಶದಲ್ಲಿ ಬೈಕ್ ಓಡಿಸುವುದು ಸುಲಭದ ಮಾತಾಗಿರಲಿಲ್ಲ.
ಆದರೆ ಚಿತ್ರಣ ಈಗ ಕೊಂಚ ಬದಲಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳು ಮಾರುಕಟ್ಟೆ ಅಭಿವೃದ್ಧಿಗೆ ಪೂರಕವಾಗಿರುವ, ಅವಶ್ಯಕತೆಗಳಿಗೆ ಅನುಗುಣವಾಗಿ ಭಾರತಕ್ಕೆ ತಕ್ಕಂತೆ ಬೈಕ್, ಕಾರುಗಳ ತಯಾರಿಕೆಯನ್ನು ಮಾಡುತ್ತಿವೆ. ಈಗ ಆ ದಾರಿಯಲ್ಲಿ ಬಿಎಂಡಬ್ಲ್ಯು ಕೂಡ ಸೇರಿದೆ.
2017ನೇ ವರ್ಷದಲ್ಲಿ ಹೆಸರಾಂತ ವಿದೇಶಿ ಬೈಕುಗಳು ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದು, ಅವುಗಳಲ್ಲಿ ಮುಂಚೂಣಿಯಲ್ಲಿರುವುದು ಬಿಎಂಡಬ್ಲ್ಯು. ಅದ್ದೂರಿ, ಐಶಾರಾಮಿ ಕಾರುಗಳು ಮತ್ತು ಸ್ಪೋರ್ಟ್ಸ್ ಬೈಕುಗಳನ್ನು ತಯಾರಿಸುವ ಬಿಎಂಡಬ್ಲ್ಯು, ಈ ಬಾರಿ ಭಾರತೀಯ ಬೈಕ್ ಪ್ರಿಯರಿಗಾಗಿ ಹೊಸ ಜಿ310 ಆರ್ ಎಂಬ ಬೈಕು ವಿನ್ಯಾಸಗೊಳಿಸಿದೆ. ಇದೇ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಹೊರಬರುವ ಎಲ್ಲ ಲಕ್ಷಣಗಳನ್ನು ಕಂಪೆನಿ ಹೊರಹಾಕಿದೆ. ಟ್ರೆಂಡಿ ಮತ್ತು ರೇಸಿಂಗ್ ಪ್ರಿಯರನ್ನು ತನ್ನ ಗ್ರಾಹಕರನ್ನಾಗಿಸಲು ಸರ್ವ ರಸಗಳನ್ನು ಮೈಗೂಡಿಸಿಕೊಂಡು ಮಾರುಕಟ್ಟೆ ಪ್ರವೇಶಿಸಲು ಈ ಜಿ310ಆರ್ ಸಿದ್ಧಗೊಂಡಿದೆ.
ಇದರ ಮುಖ್ಯ ಆಕರ್ಷಣೆ ಇರುವುದು ಬೆಲೆಯಲ್ಲಿ. ₹3 ಲಕ್ಷದ ಒಳಗೆ ಬೆಲೆ ನಿಗದಿಪಡಿಸಿ ಅಂತರರಾಷ್ಟ್ರೀಯ ಗುಣಮಟ್ಟದ ಬೈಕ್ ನೀಡಲು ಬಿಎಂಡಬ್ಲ್ಯು ಸಜ್ಜಾಗಿರುವುದಾಗಿ ತಿಳಿದುಬಂದಿದ್ದು, ಕೈಗೆಟಕುವ ಬೆಲೆಯಲ್ಲಿ 313 ಸಿಸಿ ಬೈಕ್ ಭಾರತಕ್ಕೆ ಲಗ್ಗೆ ಇಡುವ ನಿರೀಕ್ಷೆಗಳಿವೆ.
ಭಾರತದಲ್ಲಿ ಟಿವಿಎಸ್ ಜತೆ ಒಪ್ಪಂದ ಮಾಡಿಕೊಂಡಿರುವ ಬಿಎಂಡಬ್ಲ್ಯು, ಬೆಂಗಳೂರಿನಲ್ಲಿರುವ ಟಿವಿಎಸ್ ಉತ್ಪಾದಕ ಘಟಕದಲ್ಲೇ ಬೈಕಿನ ಬಿಡಿಭಾಗಗಳ ಜೋಡಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. 2015ರಲ್ಲಿ ಇಐಸಿಎಂಎ ಮಿಲಾನ್ (ಇಟಲಿ)ನಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ 500ಸಿಸಿ ಸಾಮರ್ಥ್ಯದ ಸೂಪರ್‌ಬೈಕನ್ನು ಪ್ರದರ್ಶಿಸಿತ್ತು. ಇದರ ಪರಿಷ್ಕೃತ ಆವೃತ್ತಿಯೇ ಸದ್ಯದಲ್ಲೇ ಬಿಡುಗಡೆಯಾಗಲಿರುವ ಜಿ310ಆರ್.
ಮುಂಬರುವ ದಿನಗಳಲ್ಲಿ ಟಿವಿಎಸ್, ಬಿಎಂಡಬ್ಲೂ ಒಟ್ಟಾಗಿ ಆಫ್ ರೋಡ್, ರೋಡ್‌ಸ್ಟರ್ ಮಾದರಿಗಳನ್ನು ಪರಿಚಯಿಸುವ ತವಕದಲ್ಲಿವೆ. ಮೊದಲು ಬಿಡುಗಡೆಯಾಗಲಿರುವ ಜಿ310ಆರ್‌ಗೆ ದೊರೆಯುವ ಪ್ರತಿಕ್ರಿಯೆ ನೋಡಿಕೊಂಡು ಮತ್ತಷ್ಟು ಹೊಸ ವಾಹನಗಳನ್ನು ಪರಿಚಯಿಸಲಿದೆ.
ಕಳೆದ 50 ವರ್ಷಗಳಿಂದ ಉದ್ಯಮದಲ್ಲಿ ಪಳಗಿರುವ ಬಿಎಂಡಬ್ಲ್ಯು, ಭಾರತದಲ್ಲಿ ತನ್ನ ಪ್ರಥಮ ಅಧಿಕೃತ ಆವೃತ್ತಿಯನ್ನು ಮೋಹಕವಾಗಿ ವಿನ್ಯಾಸಗೊಳಿಸಿದೆ. ‘ಫಸ್ಟ್ ಇಂಪ್ರೆಶನ್ ಇಸ್ ಬೆಸ್ಟ್ ಇಂಪ್ರೆಶನ್’ ಎಂಬ ಸೂತ್ರ ಅನುಸರಿಸಿರುವುದು ಜಿ310ಆರ್ ಚಿತ್ರಗಳನ್ನು ನೋಡುತ್ತಿದ್ದಂತೆ ಒಪ್ಪಬಹುದಾಗಿದೆ.
ಬ್ರೆಜಿಲ್, ಯುರೋಪ್, ಜರ್ಮನಿಗಳ ಮಾದರಿಯ ಬೈಕುಗಳಂತೆ ದೇಹದ ವಿನ್ಯಾಸ ಇರಿಸಲಾಗಿದೆ. ಸ್ಟಂಟ್ ಬೈಕ್ ರೂಪದಲ್ಲಿ ಸ್ಪೋರ್ಟ್ಸ್ ಬೈಕೊಂದು ಹೊರಬರುತ್ತಿರುವುದು ಬಿಎಂಡಬ್ಲ್ಯು ಅನುಭವಕ್ಕೆ ಹಿಡಿದ ಕನ್ನಡಿಯಂತಿದೆ.
ಥ್ರಾಟಲ್ ಗ್ರಿಪ್, ರೋಡ್‌ಗ್ರಿಪ್ ವಿಷಯದಲ್ಲಿ ಬಿಎಂಡಬ್ಲ್ಯು ತನ್ನತನ ಉಳಿಸಿಕೊಳ್ಳುವುದರಲ್ಲಿ ಸದಾ ಮುಂದಿದೆ ಎಂದು ಟಿವಿಎಸ್ ಬೆಂಗಳೂರು ಘಟಕದ ತಜ್ಞರು ಹೇಳುತ್ತಾರೆ. ಮೊದಲ ಹಂತದಲ್ಲಿ ಕಪ್ಪು, ನೀಲಿ, ಬಿಳಿ ಬಣ್ಣಗಳಲ್ಲಿ ದೊರಕಲಿವೆ. ಕವಾಸಾಕಿ ಝಡ್50, ಕೆಟಿಎಮ್ ಡ್ಯೂಕ್390, ಬಜಾಜ್ ಡಾಮಿನರ್, ಬೆನೆಲ್ಲಿ ಟಿಎನ್‌ಟಿ300, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕುಗಳಿಗೆ ಸ್ಪರ್ಧೆ ನೀಡಲು ಮಾರುಕಟ್ಟೆಗೆ ಇಳಿಯಲಿದೆ.
ಬೆಲೆಯಲ್ಲಿ ಸ್ವಲ್ಪ ಹೆಚ್ಚು ಎನಿಸಿದರೂ ಅಂತರರಾಷ್ಟ್ರೀಯ ಮಟ್ಟದ ಬಿಎಂಡಬ್ಲ್ಯು ಬ್ರ್ಯಾಂಡ್ ಹೆಸರಿಗೆ ₹ 2–2.75 ಲಕ್ಷ ಬೆಲೆ ನಿಗದಿಗೊಳಿಸುವ ನಿರೀಕ್ಷೆಯಿದೆ ಎಂದು ದ್ವಿಚಕ್ರ ವಾಹನ ವಿಶ್ಲೇಷಕರು ಊಹಿಸಿದ್ದಾರೆ. ಯಾವುದಕ್ಕೂ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.