ADVERTISEMENT

ಮಣ್ಣಿ ನ ಮಗಳು

​ಪ್ರವೀಣ ಕುಲಕರ್ಣಿ
Published 30 ಜನವರಿ 2013, 19:59 IST
Last Updated 30 ಜನವರಿ 2013, 19:59 IST

ಓದಿದ್ದು ಎಂ.ಎಸ್ಸಿ (ಜೀವ ವಿಜ್ಞಾನ) ಪದವಿ. ಸಿಕ್ಕಿದ್ದು ಸರ್ಕಾರಿ ಕೆಲಸ. ಇದ್ದದ್ದು ಬೆಂಗಳೂರು ಮಹಾನಗರ. ಆ ಯುವತಿಯ ಮನಸ್ಸು `ಇರುವುದೆಲ್ಲವ ಬಿಟ್ಟು ಇರದುದರೆಡೆಗೆ' ತುಡಿಯುತ್ತಿತ್ತು. ಆ ತುಡಿತದಲ್ಲಿ ಎದ್ದು ಕಂಡಿತ್ತು ಮಣ್ಣಿನ ಕನವರಿಕೆ. ಅದೊಂದು ದಿನ ಇದ್ದಕ್ಕಿದ್ದಂತೆ ಕೆಲಸಕ್ಕೆ ರಾಜೀನಾಮೆ ಒಗೆದು ಮರಳಿ ಮಣ್ಣಿನ ಹಾದಿ ಹಿಡಿದೇಬಿಟ್ಟಳು ಆ ತರುಣಿ. ತನ್ನ ಸ್ನೇಹಿತರೊಡನೆ ಕೈಕೆಸರು ಮಾಡಿಕೊಂಡು ಮಣ್ಣಿನಲ್ಲಿ ಆಕೆ ದುಡಿದ ಪರಿಣಾಮ ಅಲ್ಲೆಗ ಹಾಲಿನ ಹೊಳೆಯೇ ಹರಿಯುತ್ತಿದೆ.

ಹಾಸನ ಜಿಲ್ಲೆ ಜ್ಯೋತಿಮಲ್ಲಾಪುರ ಗ್ರಾಮದ ಕೆ.ಬಿ. ಪ್ರತಿಭಾ ಅಂತಹ ಸಾಧನೆ ಮೆರೆದ ಯುವತಿ. ಗ್ರಾಮೀಣ ಯುವಪಡೆ ನಾಗಾಲೋಟದಿಂದ ನಗರದ ಕಡೆ ಓಡುತ್ತಿರುವಾಗ ಪ್ರತಿಭಾ ಹಿಂದಿರುಗಿ ಹಳ್ಳಿಯ ಕಡೆಗೆ ಹೆಜ್ಜೆ ಹಾಕಿದ್ದಾರೆ; ಪ್ರವಾಹದ ವಿರುದ್ಧವೇ ಈಜುವಂತೆ! ಸುಸ್ಥಿರ ಕೃಷಿಗೆ ಹೊಸ ಭಾಷ್ಯ ಬರೆದಿರುವ ಅವರು, ತಮ್ಮ ಸಾಧನೆ ಮೂಲಕ ಅಭಿವೃದ್ಧಿ ಪದಕ್ಕೂ ಹೊಸ ವ್ಯಾಖ್ಯಾನ ನೀಡಿದ್ದಾರೆ.

ಸ್ನಾತಕೋತ್ತರ ಪದವಿ ಓದುವಾಗ ಜೀವ ವಿಜ್ಞಾನದ ಸಣ್ಣ-ಸಣ್ಣ ಸೂಕ್ಷ್ಮಗಳನ್ನು ಅವರು ಅರ್ಥ ಮಾಡಿಕೊಂಡಿದ್ದರು. ಆಹಾರ ಇಲಾಖೆಯಲ್ಲಿ ಗುಣಮಟ್ಟದ ಪರೀಕ್ಷಕರಾಗಿ ಕೃಷಿ ಪದಾರ್ಥದ ತಪಾಸಣೆ ನಡೆಸುವಾಗ, ನಿಸರ್ಗದ ಸೂಕ್ಷ್ಮಗಳ ಮೇಲೆ ಸವಾರಿ ನಡೆದಿದ್ದನ್ನು ಅವರು ಗುರುತಿಸಿದರು. ಆಗ ಅವರಲ್ಲಿ ಮೊಳಕೆಯೊಡೆದಿದ್ದೇ `ಊರಿಗೆ ಹಿಂದಿರುಗಿ ನಿಸರ್ಗದೊಂದಿಗೆ ಸಹಜವಾಗಿ ಬದುಕಬೇಕು' ಎಂಬ ಆಲೋಚನೆ.


`ಪರಿಸರ ಸ್ನೇಹಿ ಚಟುವಟಿಕೆ ನಡೆಸುವ ಮೂಲಕ ಊರಿನ ಒಂದಿಷ್ಟು ಜನಕ್ಕೆ ಉದ್ಯೋಗವನ್ನೂ ಕೊಡಬಹುದಲ್ಲ' ಎನ್ನುವ ನಿರ್ಧಾರದಲ್ಲಿ ಆ ಚಿಂತನೆ ಹರಳುಗಟ್ಟಿತು. ಆದರೆ, ಹಳ್ಳಿಗೆ ಹೋಗಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ ಎನ್ನುವುದು ಅವರಿಗೆ ಬಹುಬೇಗ ಅರ್ಥವಾಯಿತು. ಒಂದೊಂದು ಕಡೆಗೂ ಹತ್ತಾರು ಎಡರು-ತೊಡರು. ಅವರ ಉತ್ಸಾಹದ ಬಲೂನು ಗಾಳಿ ಕಳೆದುಕೊಂಡು ಕುಗ್ಗುತ್ತಿತ್ತು.

ಬ್ಯಾಂಕ್‌ಗಳು ಸಾಲ ಕೊಡಲು ಮನಸ್ಸು ಮಾಡಲಿಲ್ಲ. ತಾಂತ್ರಿಕ ಜ್ಞಾನ ಹಂಚಿಕೊಳ್ಳಲು ನಗರದ ಸಂಸ್ಥೆಗಳು ಮುಂದಾಗಲಿಲ್ಲ. `ಹಳ್ಳಿಗೆ ಬಂದಿದ್ದಾಯಿತು, ಮುಂದೇನು ಮಾಡುವುದು' ಎಂಬ ಪ್ರಶ್ನೆಗೆ ಉತ್ತರ ಹೊಳೆಯಲಿಲ್ಲ. ಆಗ ಪ್ರತಿಭಾ ಭೇಟಿ ಮಾಡಿದ್ದು ಯುವ ಎಂಜಿನಿಯರ್‌ಗಳಾದ ಕಸ್ತೂರಿರಾಜು ಮತ್ತು ಗೋಪಿ ಈಶ್ವರನ್ ಅವರನ್ನು. ಪ್ರತಿಭಾ ಅವರಂತೆಯೇ ಗ್ರಾಮಾಂತರ ಭಾಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ತುಡಿತ ಅವರಲ್ಲೂ ಇತ್ತು. ಹಲವು ಸುತ್ತಿನ ಮಾತುಕತೆಗಳ ಬಳಿಕ ಡೇರಿ ಫಾರ್ಮ್ (ಹೈನು ಉತ್ಪನ್ನ ಘಟಕ) ಆರಂಭಿಸುವ ನಿರ್ಧಾರಕ್ಕೆ ಬರಲಾಯಿತು.

ಕುರುಡಾಗಿ ಕೆಲಸ ಆರಂಭಿಸುವ ಬದಲು ಒಂದಿಷ್ಟು ಯಶಸ್ವಿ ಮಾದರಿಗಳನ್ನು ನೋಡಿಬರಲು ಅವರ ತಂಡ ಪಂಜಾಬ್ ಮತ್ತು ಹರಿಯಾಣಗಳಿಗೆ ಭೇಟಿ ನೀಡಿತು. ಹಲವು ತರಹದ ಡೇರಿ ಫಾರ್ಮ್‌ಗಳನ್ನು ಕಂಡ ಪ್ರತಿಭಾ ಬಳಗ, ರೈತರ ಜೊತೆ ಸಂವಾದ ನಡೆಸಿ, ತನ್ನ ಗೊಂದಲಗಳನ್ನು ನಿವಾರಿಸಿಕೊಂಡಿತು. ರಾಜ್ಯದ ಹೈನುಗಾರರು ಅಳವಡಿಸಿಕೊಂಡ ಸೂತ್ರ ಎಂತಹದ್ದು ಎಂಬುದನ್ನು ಅರಿಯಲು ಬೀದರ್‌ನಿಂದ ಬೆಂಗಳೂರಿನವರೆಗೆ ಹತ್ತಾರು ಹಳ್ಳಿಗಳಲ್ಲಿ ಓಡಾಡಿತು.

ಕೆಲವೇ ಕೆಲವು ಡೇರಿಗಳನ್ನು ಬಿಟ್ಟರೆ ಮಿಕ್ಕೆಲ್ಲ ಕಡೆ ಸಾಂಪ್ರದಾಯಿಕ ಹೈನುಗಾರಿಕೆಯಷ್ಟೇ ರೂಢಿಯಲ್ಲಿತ್ತು. ವೈಜ್ಞಾನಿಕ ಮತ್ತು ವ್ಯವಸ್ಥಿತವಾದ ಹೈನುಗಾರಿಕೆ ಪದ್ಧತಿ ಎಲ್ಲಿಯೂ ಕಾಣಲಿಲ್ಲ. ಬಹಳಷ್ಟು ಜನರಿಗೆ ಅದೊಂದು ಉಪ ಉದ್ಯೋಗ ಆಗಿತ್ತಷ್ಟೇ. ಮತ್ತೊಂದು ಕಳವಳಕಾರಿ ಸಂಗತಿಯನ್ನೂ ಈ ಪಡೆ ಗುರುತಿಸಿತು. ವಿದ್ಯಾವಂತ ಯುವಕರು, ತಮ್ಮ ಭೂಮಿಯನ್ನು ಹಾಗೇ ಬಿಟ್ಟು ಹಳ್ಳಿ ತೊರೆಯುತ್ತಿದ್ದ ವಿದ್ಯಮಾನ ಅದಾಗಿತ್ತು. ಕೃಷಿ, ಹೈನುಗಾರಿಕೆ ಅನಕ್ಷರಸ್ಥರು ಮಾಡುವ ಕೆಲಸ ಎಂಬ ಬಲವಾದ ನಂಬಿಕೆ ಅಲ್ಲೆಲ್ಲ ಬೇರೂರಿದ್ದು ಗೋಚರಿಸಿತು.

`ನಮ್ಮ ಯಾತ್ರೆಯಲ್ಲಿ ಕಂಡ ಇಂತಹ ಸಂಗತಿಗಳೆಲ್ಲ ನಾವು ಕೈಗೊಳ್ಳಬೇಕಾದ ಉದ್ಯೋಗ ಇದಲ್ಲದೆ ಬೇರೆ ಯಾವುದೂ ಅಲ್ಲ' ಎಂಬ ನಿರ್ಧಾರವನ್ನು ಗಟ್ಟಿಗೊಳಿಸುತ್ತಾ ಹೋಯಿತು' ಎಂದೆನ್ನುವ ಪ್ರತಿಭಾ, `ನಮ್ಮ ಪ್ರತಿ ನಡೆಯೂ ಹಳ್ಳಿಗಳ ಯುವಕರಿಗೆ ಮಾದರಿಯಾಗಬೇಕು' ಎಂಬ ಛಲವೂ ಜೊತೆಗೂಡಿತ್ತು' ಎನ್ನುತ್ತಾರೆ.

`ಹೈನುಗಾರಿಕೆಯೇ ಅಂತಿಮ ಎಂದಾದಾಗ ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ (ಎನ್‌ಡಿಆರ್‌ಐ) ಮತ್ತು ಪಶು ಸಂಗೋಪನೆ ಇಲಾಖೆ ತಜ್ಞರ ಜೊತೆ ಸಮಾಲೋಚನೆ ನಡೆಸಿದೆವು. ಏಕೆಂದರೆ, ನಾವು ಯಶಸ್ಸಿಗೆ ಮಾದರಿಯಾಗಲು ಬಯಸಿದ್ದೆವು ವಿನಃ ವೈಫಲ್ಯಕ್ಕಲ್ಲ' ಎಂದು ನಗುತ್ತಾರೆ ಪ್ರತಿಭಾ.

ಡೇರಿ ಆರಂಭಿಸಲು ಬೇಕಾದ ಪೂರ್ವ ತಯಾರಿ, ತಾಂತ್ರಿಕ ಜ್ಞಾನ, ಆಡಳಿತ ತಂತ್ರ, ನಿರ್ವಹಣಾ ಕೌಶಲ, ತಳಿಗಳ ಮಾಹಿತಿ, ಪಶುಗಳ ಪೌಷ್ಟಿಕ ಆಹಾರ ಮತ್ತು ಅವುಗಳ ಆರೋಗ್ಯ ರಕ್ಷಣೆ ಸಂಬಂಧ ಪ್ರತಿಭಾ ಮತ್ತು ಅವರ ಸ್ನೇಹಿತರು ಕಲೆಹಾಕಿದ ವಿವರ ನೋಡಿದರೆ ಯಾವ ವಿಶ್ವವಿದ್ಯಾಲಯವಾದರೂ ಅವರಿಗೊಂದು ಪಿಎಚ್.ಡಿ ಕೊಟ್ಟುಬಿಡಬೇಕು! ಬೃಹತ್ ಹೊತ್ತಿಗೆಗೆ ಬೇಕಾದಷ್ಟು ಸಮೃದ್ಧ ಜ್ಞಾನವೇ ಅವರಲ್ಲಿದೆ.

ಪ್ರತಿಭಾ ಅವರ ಅಪ್ಪ ತಮ್ಮ ಜಮೀನಿನ ಸ್ವಲ್ಪ ಭಾಗವನ್ನು ಹೈನುಗಾರಿಕೆಗೆ ಬಿಟ್ಟುಕೊಡಲು ಮೊದಲೇ ಒಪ್ಪಿದ್ದರು. ಒಂದಿಷ್ಟು ಧನಸಹಾಯ ಕೂಡ ಅವರಿಂದ ಸಿಕ್ಕಿತು. ಕೊನೆಗೊಂದು ದಿನ ಜ್ಯೋತಿಮಲ್ಲಾಪುರದಲ್ಲಿ ಅತ್ಯಾಧುನಿಕ ದನದ ಕೊಟ್ಟಿಗೆ ಸಿದ್ಧವಾಯಿತು. ನೂರು ಹಸುಗಳೂ ಬಂದವು. ಮನುಷ್ಯರು ಬಾಳುವ ಮನೆಗಿಂತ ಸ್ವಚ್ಛವಾಗಿದೆ ಅವುಗಳ ಕೊಟ್ಟಿಗೆ. ಅದಕ್ಕೆ ಗೆಳೆಯರೆಲ್ಲ ಸೇರಿ `ಮಾರುತಿ ಡೇರಿ' ಎಂಬ ಹೆಸರಿಟ್ಟರು.

ಎಂಜಿನಿಯರ್‌ಗಳ ತಾಂತ್ರಿಕ ಕೌಶಲ ಮತ್ತು ಪ್ರತಿಭಾ ಅವರ ಕೃಷಿ ಜಾಣ್ಮೆ ಒಟ್ಟಾಗಿದ್ದರಿಂದ ಡೇರಿ ದೊಡ್ಡದಾಗಿ ಬೆಳೆಯಿತು. ಹಾಲು ಕೊಡುವ ಹಸುಗಳಿಗೆ ಐಷಾರಾಮಿ ಸೌಲಭ್ಯ ಕಲ್ಪಿಸಲಾಯಿತು. ಜೈವಿಕ ಅನಿಲ ಉತ್ಪಾದನೆ ಕೆಲಸವೂ ಶುರುವಾಯಿತು. ಸುಮಾರು 200 ಮೆಟ್ರಿಕ್ ಟನ್ ಮೇವು ಸಂಗ್ರಹಣೆಗೆ ವ್ಯವಸ್ಥೆ ಮಾಡಲಾಯಿತು. ಸಾವಯವ ಗೊಬ್ಬರ ಉತ್ಪಾದನೆಗೂ ಕೈಹಾಕಲಾಯಿತು.

ಸದ್ಯ ವ್ಯವಸ್ಥಿತ ವಿದೇಶಿ ಹೈನುಗಾರಿಕೆ ಘಟಕದಂತೆ ಜ್ಯೋತಿಮಲ್ಲಾಪುರದ ಹಸುವಿನ ಕೊಟ್ಟಿಗೆ ಕಂಗೊಳಿಸುತ್ತಿದೆ. ಅಲ್ಲಿ ಹುಡುಕಿದರೂ ಒಂದಿಷ್ಟು ಸಗಣಿ-ಗಂಜಲ ಸಿಗುವುದಿಲ್ಲ. ಹಸುಗಳಿಗೆ ನಿತ್ಯ ಸ್ನಾನ. ಕೊಟ್ಟಿಗೆ ಯಾವುದೋ ಕಂಪನಿ ಕಚೇರಿಯಂತೆ ಫಳಫಳ ಹೊಳೆಯುತ್ತದೆ. ನಿತ್ಯ ಎರಡು ಸಲ ಕೊಟ್ಟಿಗೆ ಅಂಗಳವನ್ನು ತೊಳೆಯಲಾಗುತ್ತದೆ. ಹಾಲು ಕರೆಯಲು ಯಂತ್ರಗಳಿವೆ. ಕ್ಯಾನುಗಳಿಗೆ ಹಾಲು ತುಂಬಿಸಿ ಇಡುವಷ್ಟರಲ್ಲಿ ಖಾಸಗಿ ಹಾಲು ಸಂಸ್ಥೆಯೊಂದರ ವಾಹನ ಬಂದು ಅವುಗಳನ್ನು ಹೊತ್ತೊಯ್ಯುತ್ತದೆ. ಕ್ಯಾನುಗಳಿಗೆ ತುಂಬುವ ಮುನ್ನ ಮನೆಗಳಲ್ಲಿ ಮಕ್ಕಳ ಮೋರೆಯಲ್ಲೊ ನೊರೆ ತುಳುಕುವಷ್ಟು ಹಾಲನ್ನು ಉಳಿಸಿಕೊಳ್ಳಲಾಗುತ್ತದೆ.

ಪ್ರತಿನಿತ್ಯ ಸರಾಸರಿ 400 ಲೀಟರ್ ಹಾಲು ಮಾರುತಿ ಡೇರಿಯಲ್ಲಿ ಉತ್ಪಾದನೆ ಆಗುತ್ತದೆ. ವರ್ಷದುದ್ದಕ್ಕೂ ಇಷ್ಟು ಪ್ರಮಾಣದ ಹಾಲಿಗೆ ಕೊರತೆಯಾಗದಂತೆ ಬೇರೆ ಬೇರೆ ಋತುವಿನಲ್ಲಿ ಕರು ಹಾಕುವ ಹಸುಗಳನ್ನು ಆರಿಸಿ ತರಲಾಗಿದೆ. ತಿಂಗಳಿಗೆ ಮೂರು ಲಕ್ಷ ರೂಪಾಯಿಯಷ್ಟು ಆದಾಯ ಬರುತ್ತಿದೆ. `ಒಟ್ಟಾರೆ 2 ಕೋಟಿ ರೂಪಾಯಿ ಬಂಡವಾಳ ಹೂಡಿದ್ದೆವು. ಇನ್ನೊಂದು ವರ್ಷದಲ್ಲಿ ಎಲ್ಲ ಸಾಲ ತೀರಲಿದ್ದು, ವರಮಾನವೂ ಹೆಚ್ಚಲಿದೆ' ಎಂದು ಖುಷಿಯಿಂದ ಹೇಳುತ್ತಾರೆ ಪ್ರತಿಭಾ.

ಪ್ರತಿಭಾ ಹೈನುಗಾರಿಕೆಯಿಂದ ಮಾತ್ರ ತೃಪ್ತರಾಗಿಲ್ಲ. ತಮ್ಮ ಎಂಟು ಎಕರೆ ಜಮೀನನ್ನು ಒಂದು ಪ್ರಯೋಗ ಶಾಲೆ ಮಾಡಿಕೊಂಡಿದ್ದಾರೆ. ಅಲ್ಲಿ ರಾಗಿ, ಮುಸುಕಿನ ಜೋಳ, ಎಳ್ಳು, ಅವರೆ, ಹುರುಳಿ, ಕಾಫಿ, ತೆಂಗು, ಮಾವು, ದಾಳಿಂಬೆ ಬೆಳೆಯುತ್ತಿದ್ದಾರೆ. ಪಶು ಆಹಾರವನ್ನು ಸ್ವತಃ ತಯಾರು ಮಾಡಿಕೊಳ್ಳುತ್ತಿದ್ದು, `ಅಕ್ಷಯ ಧಾರಿಣಿ' ಹೆಸರಿನಲ್ಲಿ ಮಾರಾಟವನ್ನೂ ಮಾಡುತ್ತಿದ್ದಾರೆ. ಹಸುವಿನ ಕಾಯಿಲೆಗೆ ಅವರೇ ಚಿಕಿತ್ಸೆ ನೀಡುತ್ತಾರೆ.
ಜೈವಿಕ ಅನಿಲ ಘಟಕದಿಂದ ಉತ್ಪಾದನೆಯಾಗುವ ವಿದ್ಯುತ್, ಡೇರಿ ಮಾತ್ರವಲ್ಲದೆ ಪ್ರತಿಭಾ ಮತ್ತು ಕೆಲಸಗಾರರ ಮನೆಗಳನ್ನೂ ಬೆಳಗುತ್ತದೆ.

ಕೆಇಬಿಯಿಂದ ವಿದ್ಯುತ್ ಖರೀದಿಸುವುದನ್ನೇ ನಿಲ್ಲಿಸಿಬಿಟ್ಟಿರುವ ಅವರು, ಇಂಧನದ ವಿಷಯದಲ್ಲೂ ಸ್ವಾವಲಂಬನೆ ಸಾಧಿಸಿದ್ದಾರೆ. ಕೆಲಸಗಾರರು ಸೇರಿದಂತೆ ಎಲ್ಲ ಮನೆಗಳಿಗೆ ಬಿಸಿನೀರಿನ ಸಂಪರ್ಕ ಒದಗಿಸಲಾಗಿದೆ. ವರ್ಷದುದ್ದಕ್ಕೂ ಒಂದಿಲ್ಲೊಂದು ತರಬೇತಿ ಶಿಬಿರಗಳು ಇಲ್ಲಿ ನಡೆಯುತ್ತವೆ. ಹಳ್ಳಿಗರಲ್ಲಿ ಜಾಗೃತಿ ಉಂಟುಮಾಡುವ ಕೆಲಸಕ್ಕೂ ಪ್ರತಿಭಾ ಕೈಹಾಕಿದ್ದಾರೆ. `ಮಾರುತಿ ಡೇರಿ' ಯಶಸ್ಸಿನಿಂದ ಸ್ಫೂರ್ತಿ ಪಡೆದಿರುವ ಹಲವು ರೈತರು ಹಸುಗಳನ್ನು ತಂದಿದ್ದಾರೆ.

ಮಾರುತಿ ಡೇರಿಯಲ್ಲಿ ಸದ್ಯ ಹತ್ತು ಕುಟುಂಬಗಳು (ಗಮನಿಸಿ: ವ್ಯಕ್ತಿಗಳಲ್ಲ) ಕೆಲಸ ಪಡೆದುಕೊಂಡಿವೆ. ಪ್ರತಿಯೊಬ್ಬ ಉದ್ಯೋಗಿಯೂ  6-10 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದಾರೆ. ತಾವೇ ಉತ್ಪಾದಿಸಿದ ವಿದ್ಯುತ್ ಬೆಳಕಲ್ಲಿ ನಿಂತು, ಪ್ರತಿಭಾ ತಮ್ಮ ಸಾಧನೆ ಪುಟಗಳನ್ನು ತಿರುವಿ ಹಾಕುವಾಗ ಅವರ ಮುಖದಲ್ಲಿ ಮಂದಹಾಸ. ಆರ್ದ್ರಗೊಂಡ ಕಣ್ಣುಗಳಲ್ಲಿ ಧನ್ಯತಾಭಾವ. ಮಾರುತಿ ಹಾಲು ಉತ್ಪಾದನಾ ಕೇಂದ್ರ ಸಂಪರ್ಕ ಸಂಖ್ಯೆ: 9449740526.
ಚಿತ್ರಗಳು: ಮಾಡಾಳು ಶಿವಲಿಂಗಪ್ಪ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT