ADVERTISEMENT

ಮೂರನೇ ಬಹುಮಾನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2015, 19:30 IST
Last Updated 11 ಫೆಬ್ರುವರಿ 2015, 19:30 IST

ನಿನ್ನನ್ನು ಅರ್ಥ ಮಾಡಿಕೊಳ್ಳುವ ಪಯಣ

ರಾಮು,
ಸಂಬೋಧನೆಯಿಲ್ಲದೆ ಈ ಪತ್ರವನ್ನು ಶುರು ಮಾಡುತ್ತಿದ್ದೇ ನೆಂದು ಬೇಜಾರು ಮಾಡಿಕೊಳ್ಳಬೇಡ ‘ನನ್ನ ಪ್ರೀತಿಯ’ಎಂದು ಉಪಯೋಗಿಸಲಿಲ್ಲ. ಏಕೆಂದರೆ ಪ್ರೇಮದಲ್ಲಿ ನನ್ನದು ಎಂಬ ಭಾವ ಇರಬಾರದಂತೆ. ಇನ್ನು ಪ್ರೀತಿ, ಅದನ್ನು ನಿನ್ನ ಹತ್ತಿರ ನಾನೆಂದಿಗೂ ನಿವೇದನೆ ಮಾಡಿಕೊಳ್ಳಲಾಗಲಿಲ್ಲ. ಭರ್ತಿ ನಾಲ್ಕು ವರ್ಷವಾಯಿತು ನಿನ್ನನ್ನು ನೋಡಲು ಶುರುಮಾಡಿ. ಈಗಾಗಲೇ ತುಂಬಾ ತಡಮಾಡಿಬಿಟ್ಟಿದ್ದೇನೆ, ನೀನು ಮತ್ತೆ ನಿನ್ನ ಸ್ವಂತ ಊರಿಗೆ ಹೋಗುವ ಮುಂಚೆ ನನ್ನ ಸಮಾಧಾನಕ್ಕಾದರೂ ಇರಲಿ ಎಂದು ಈ ಪತ್ರ ಬರೆಯುತ್ತಿದ್ದೇನೆ.

ನಿನ್ನನ್ನು ಮೊದಲು ನೋಡಿದ್ದು ಕಾಲೇಜಿನ ಕಾರಿಡಾರ್‌ನಲ್ಲಿ, ಸುಮಾರು 9 ಗಂಟೆಗೆ ಕಾಲೇಜು ಸೇರಿದ ಮೊದಲನೇ ವಾರ, ಅದಾಗಲೇ ತರಗತಿ ಶುರುವಾಗುವುದರಲ್ಲಿತ್ತು, ನಾನೂ ತಡವಾಗಿ ಬಂದಿದ್ದೆ. ನೀನೂ ಅಂಜುತ್ತ ಅಲ್ಲೇ ನಿಂತಿದ್ದೆ. ಕ್ಲಾಸಿಗೆ ತಡವಾಗಿ ಒಂಟಿಯಾದಾಗ ಹೋದರೆ ಮಾತ್ರ ‘ಏಕೆ ಲೇಟು?’ ಎಂದು ಪ್ರಶ್ನಿಸುತ್ತಾರೆ. ಆದರೆ ಗುಂಪಿನಲ್ಲಿ ಹೋದಾಗ ಅಲ್ಲ. ನೀನೇ ಸರಿಯಾದ ‘ಬಲಿ ಕಾ ಬಕ್ರಾ’ ಎಂದುಕೊಂಡು ಒಟ್ಟಿಗೆ ತರಗತಿಗೆ ಹೋಗಲು ಕರೆದೆ, ಏನೋ ಸಬೂಬು ಹೇಳಿ ಕ್ಲಾಸಿನ ಒಳಕ್ಕೆ ಹೊಕ್ಕೆವು. ಅದೇಕೊ ಆ ದಿನದ ಚಿತ್ರಣ ನನ್ನ ಮನಸ್ಸಿನಲ್ಲಿ ಹಾಗೇ ಇದೆ. ನೆನ್ನೆ ಮೊನ್ನೆ ನಡೆದ ರೀತಿ. ಅವತ್ತು ಮೊದಲ ದಿನ ನಾವು ಒಟ್ಟಿಗೆ ಹೆಜ್ಜೆ ಇಟ್ಟಿದ್ದೆವು. ಜೊತೆಗೂಡಿ ನಕ್ಕಿದ್ದೆವು. ಎರಡೇ ನಿಮಿಷದ ಆ ಭೇಟಿಯಲ್ಲೇ ನನ್ನನ್ನು ತುಂಬಾ ಆಕರ್ಷಿಸಿಬಿಟ್ಟಿದ್ದೆ ನೀನು. ನಿನ್ನ ನುಣುಪಾದ ಕೆನ್ನೆ, ನಕ್ಕಾಗ ಗುಳಿ ಬೀಳುವ ಕೆನ್ನೆ, ನೋಡಿದರೆ ನೋಡುತ್ತಲೇ ಇರಬೇಕೆಂದೆನಿಸುತ್ತದೆ. ಎಷ್ಟೆಂದರೂ ಮಲನಾಡಿನವನಲ್ಲವಾ ನೀನು, ಅದಕ್ಕೆ ಅಷ್ಟು ಚಂದ ಬಣ್ಣ ಇರಬೇಕು. ನಿನ್ನ ಕಣ್ಣು ನೋಡಿದರೆ ಎಷ್ಟು ತುಂಟ ಅನ್ನಿಸ್ತೀಯಾ ಗೊತ್ತಾ? ಮನಸ್ಸಿನಲ್ಲಿ ಏನೋ ಹೊಂಚು ಹಾಕ್ತಿರೋ ಹಾಗೆ, ಬಹುಶಃ ಅದಕ್ಕೆ ಅಷ್ಟೊಂದು ಸೆಳೆದುಬಿಟ್ಟೆ ನೀನು ನನ್ನ ಮತ್ತೆ ನಿನ್ನನ್ನು ಅರ್ಥ ಮಾಡಿಕೊಳ್ಳುವ ನನ್ನ ಪಯಣ ಶುರುವಾಯ್ತು. ಹೀಗೆ ನಿಧಾನವಾಗಿ ದಿನ ಕಳೆದಂತೆಲ್ಲಾ ನಿನ್ನ ಮೇಲಿದ್ದ ಪ್ರೀತಿ ಇನ್ನೂ ಹೆಚ್ಚುತ್ತಾ ಹೋಯಿತು. ಈಗಂತೂ ನನ್ನ ಮನವಿಡೀ ನೀನೆ ತುಂಬಿಬಿಟ್ಟಿರುವೆ.

ಇದೇ ಮೊದಲಲ್ಲ ನನಗೆ ನಿನ್ನ ಮೇಲಿರುವ ಭಾವನೆ ವ್ಯಕ್ತಪಡಿಸುತ್ತಿರುವುದು. ತುಂಬಾ ಪ್ರಯತ್ನಪಟ್ಟಿದ್ದೇನೆ ಆದರೆ ಅದೇಕೋ ನೀನು

ಎದುರಿಗೆ ಬಂದಾಗ ನನ್ನ ಮಾತೂ ಗಾಳಿ ಇಲ್ಲದ ಬಲೂನಿನ ಹಾಗೆ ಠುಸ್‌ ಆಗುತ್ತದೆ. ಏನೋ ಹೇಳಲು ಹೋಗಿ ಇನ್ನೇನೋ ಹೇಳಿರುತ್ತೇನೆ. ನಾನು ಹೇಳಿಕೇಳಿ ಬಾಯಿಬಡಕಿ, ನನ್ನ ಮಾತಿನ ಭರಾಟೆ ಮಧ್ಯೆ ಮುಖ್ಯ ವಿಷಯ ಬಿಟ್ಟು ಪೀಠೀಕೆನೆ ಜಾಸ್ತಿ ಹಾಕಿರಬೇಕು, ಅದಕ್ಕೇನೆ ನನ್ನ ‘ಲವ್ವು’ ನಿನಗೆ ಗೊತ್ತೇ ಆಗಲಿಲ್ಲ. ಆಮೇಲೆ ಏನಾಯಿತು ಗೊತ್ತಿಲ್ಲ ಇದ್ದಕ್ಕಿದ್ದ ಹಾಗೆ ನನ್ನ ಸಂಗಡ ಮಾತೇ ಬಿಟ್ಟುಬಿಟ್ಟೆ ನೀನು. ಕನಿಷ್ಠ ಪಕ್ಷ ಜಗಳ ಆದರೂ ಮಾಡಿ ಹೋಗಬೇಕಿತ್ತು, ಅದೂ ಇಲ್ಲ. ತುಂಬಾ ಬೇಜಾರಾಯ್ತು. ನೀನು ದೂರ ಹೋದರೂ ನಿನ್ನ ಮೇಲಿದ್ದ ಪ್ರೀತಿ ಇನ್ನೂ ಹಾಗೇ ಇದೆ. ಎರಡನೇ ವರ್ಷದಲ್ಲಿದ್ದಾಗ ನೀನು ನನ್ನ ಹತ್ತಿರ ನೋಟ್‌್ಸ ಬರೆಯಲು ಪೆನ್ನು ಕೇಳಿದ್ದೆ. ಆ ರೀಫಿಲ್‌ ಇಲ್ಲದ ಪೆನ್ನನ್ನು ಇನ್ನೂ ಹಾಗೇ ಇಟ್ಟುಕೊಂಡಿರೋದು ಗೊತ್ತು ನನಗೆ. ಕೇಳಲಿಲ್ಲ ಎಂದಾಕ್ಷಣ ನೋಡಲು ಇಲ್ಲ ಅಂದ್ಕೋಬೇಡ. ನಾನೂ ನೀನು ಕೊಟ್ಟ ಡೈರಿಮಿಲ್‌್ಕ ಚಾಕಲೇಟಿನ ಬಣ್ಣದ ಕಾಗದವನ್ನು ಪುಸ್ತಕದ ಮಧ್ಯದಲ್ಲಿ ಭದ್ರವಾಗಿರಿಸಿದ್ದೇನೆ.

ನೀನು ನಿನ್ನ ಬೈಕಿನಲ್ಲಿ ಬಿರುಗಾಳಿಯ ಹಾಗೆ ಹೋಗುವುದನ್ನು ನೋಡುವುದೇ ಒಂಥರಾ ಖುಷಿ. ಬೈಕ್‌ನ ಮೇಲೆ ಕಪ್ಪು ಜಾಕೇಟು, ಗ್ಲೌಸು, ನೀಲಿ ಹೆಲ್ಮೆಟ್‌ ಹಾಕಿ, ಗಾಳೀಲಿ ತೇಲಿದ ಹಾಗೇ ನೀನು ಗಾಡಿ ಓಡಿಸುತ್ತಾ ಇದ್ದರೆ ಯಾವ ಹೀರೊಗೂ ಕಮ್ಮಿ ಇಲ್ಲ ಗೊತ್ತಾ. ಎಷ್ಟಾದರೂ ನನ್ನ ಲೈಫಿನ ಹೀರೊ ನೀನೇ ಅಲ್ವಾ, ಅದಿಕ್ಕೆ ಅದರಲ್ಲೇ ಒಂದು ದಿನ ಸಮುದ್ರ ತೀರಕ್ಕೆ ಹೋಗಿದ್ದಾಗ, ನೀನು ನೀರೇ ಕಾಣದ ಪುಟ್ಟ ಹುಡುಗನ ಹಾಗೇ ತೆರೆ ಹಿಡೀತ್ತಿದ್ದೆ. ಮರಳಿನ ರಾಶಿಯಲ್ಲಿ ನಮ್ಮಿಬ್ಬರ ಹೆಸರು ಬರೆದೆ. ಇಂಥ ಸಣ್ಣ ಪುಟ್ಟ ವಿಷಯದಲ್ಲೇ ನನ್ನನ್ನು ತುಂಬಾ ಸಂತೋಷಪಡಿಸುತ್ತೀಯಾ ನೀನು.  ಆ ಸಮುದ್ರ ತೆರೆ ಹಾಗೆ ನೀನೂ ಒಂದೊಂದು ಸಲ ಶಾಂತವಾಗಿರುತ್ತೀಯಾ, ತಕ್ಷಣ ರೌದ್ರಾವತಾರ ಬರುತ್ತೆ. ಆದರೂ ನೀನು ಮುನಿಸಿಕೊಂಡಾಗ ಆ ನಿನ್ನ ಮುಖವೆಲ್ಲಾ ಕೆಂಪು ಬಿಳಿಯಾಗಿ ಥೇಟ್‌ ಸೇಬಿನ ಹಾಗೆ ಅನ್ನಿಸ್ತೀಯಾ ಆಗ. ಕೋಪ ಬಂತಾ? ಹೇಗಿದ್ದರೂ ಸಖತ್‌ ಆಗೇ ಕಾಣಿಸ್ತೀಯಾ ಬಿಡು ನೀನು. ಪ್ರತಿ ಸಲ ಹೋಟೆಲ್‌ಗೆ ಹೋದಾಗ ನೀನು ವೆನಿಲ್ಲಾ ಐಸ್‌ಕ್ರೀಂ ತಿನ್ನುವುದು ನೋಡಿ, ನಿನಗೆ ಒಂದೇ ಐಸ್‌ಕ್ರೀಂ ತಿಂದು ಬೇಜಾರು ಆಗಲ್ವಾ ಅನ್ನಿಸ್ತಿತ್ತು. ಆಗ ನೀನು ಹೇಳಿದ್ದೆ, ನಾವು ದಿನ ಅನ್ನ ತಿಂತೀವಿ ಬೇಜಾರಾಗುತ್ತಾ? ಒಂದು ವಸ್ತು ಹಿಡಿಸಿದರೆ ಕೊನೆವರೆಗೂ ಅದೇ ಅಂತ. ಆಗ ನಿನಗೆ ನಾನು ಎಷ್ಟು ಹಾಳು ಮುದುಕಿಯಾದರೂ ನನ್ನ ಕೈಬಿಡಲ್ಲ ಅನ್ನಿಸಿತ್ತು.

ವಾದಕ್ಕೆ ನಿಂತರೆ ನಿನ್ನನ್ನು ಸೋಲಿಸುವುದು ತುಂಬಾ ಕಷ್ಟ. ಆದರೂ ಕೆಲವೊಮ್ಮೆ ನನ್ನ ಸಮರ್ಥನೆಯನ್ನೂ ಕೇಳಿ ಅದಕ್ಕೆ ತಲೆಬಾಗಿದ್ದೀಯಾ, ನೀನು ಎಲ್ಲಾ ವಿಷಯದಲ್ಲೂ ವಿಮರ್ಶಿಸಿಯೇ ನಿರ್ಧಾರ ತೆಗೆದುಕೊಳ್ಳುವುದು ನನಗೆ ತುಂಬಾ ಹಿಡಿಸುತ್ತೆ. ಕಾಲೇಜಿನಲ್ಲಿ ಮೊದಲ ಸಲ ಯಾವುದೋ ಕಾರ್ಯಕ್ರಮಕ್ಕೆ ವಂದನಾರ್ಪಣೆ ಮಾಡಲು ಹೋಗಿ ಕೆಟ್ಟದಾಗಿ ಭಾಷಣ ಮಾಡಿ ಮೂಲೆಯಲ್ಲಿ ಕೂತು ಅಳುತ್ತಿದ್ದಾಗ ನೀನು ನನಗೆ ಸಮಾಧಾನ ಹೇಳಿದ್ದೆ. ಮುಂದಿನ ಸಲ ಚೆನ್ನಾಗಿ ಮಾಡುತ್ತೀಯಾ, ಆದರೆ ವೇದಿಕೆಗೆ ಹೋಗಲು ಎಂದೂ ಹಿಂಜರಿಯಬೇಡ ಎಂದು ಆತ್ಮಸ್ಥೈರ್ಯ ತುಂಬಿದ್ದೆ. ನನ್ನ ಸುಖ ದುಃಖ ಎಲ್ಲದರಲ್ಲೂ ಜೊತೆ ಆದೆ ನೀನು. ಮನುಷ್ಯನಲ್ಲಿ ಹುಳುಕು ಇರುವುದು ಸಾಮಾನ್ಯ ಎಂದೆ. ನನ್ನೊಳಗೆ ಹೊಸ ಕನಸನ್ನು ಹುಟ್ಟಿಸಿದೆ. ಹೊಸ ಆಸೆಗಳನ್ನು ಮೂಡಿಸಿದೆ. ಮತ್ತಷ್ಟು ಬೆಳೆಯುವ ಹಂಬಲವನ್ನು ಚಿಗುರಿಸಿದೆ. ಇದೆಲ್ಲಾ ಪ್ರೀತಿ ಅಲ್ಲದೇ ಮತ್ತಿನ್ನೇನು? ನೀನೂ ಹೇಳಲು ಹಿಂಜರಿದೆ, ನಾನೂ ಪ್ರಯತ್ನಪಟ್ಟು ಸೋತೆ.

ಆದರೂ ನಿನ್ನ ವಾತ್ಸಲ್ಯಪೂರಿತ ಮಾತು, ನನ್ನನ್ನೇ ನೋಡುವ ಪರಿ, ಬೀರುವ ನಗೆ, ಪ್ರೀತಿಯ ಕಂಪನ್ನೇ ಸೂಸುತ್ತಿತ್ತು. ನನಗೆ ಅಷ್ಟೇ ಸಾಕು. ಆದರೂ ನಿನ್ನ ಅಪ್ಪ–ಅಮ್ಮ ನನಗೆ ಮೋಸ ಮಾಡಿದ್ದಾರೆ. ಹೋಗಿ ಹೋಗಿ ಈ ಕಾಲದಲ್ಲಿ ರಾಮಣ್ಣ ಅಂತ ಹೆಸರಿಟ್ಟಿದ್ದಾರೆ, ಯಾರ ನೆನಪಲ್ಲೋ ಗೊತ್ತಿಲ್ಲ. ನೀನು ಯಾರನ್ನಾದರೂ ಪ್ರೀತಿಸುತ್ತೀಯಾ ಎಂದು ಕೇಳಿದರೆ ರಾಮಣ್ಣನ್ನ ಅಂಥ ಹೇಳಕ್ಕಾಗುತ್ತಾ, ರಾಮು ಅಂಥ ಹೇಳಕ್ಕೆ ಆ ಹೆಸರಿನಲ್ಲಿ ನಮ್ಮ ಕ್ಲಾಸಿನಲ್ಲಿ ಇನ್ನೂ ನಾಲ್ಕು ಹುಡುಗರು ಇದ್ದಾರೆ. ಇರಲಿ ಬಿಡು, ಹೇಗೂ ಸುಧಾರಿಸಿಕೊಳ್ತೀನಿ.

ಇದೆಲ್ಲಾ ಪಕ್ಕಕ್ಕಿಡು, ಕೊನೆಗೆ ನಾವಿಬ್ಬರೂ ಜೊತೆಯಲ್ಲಿ ಒಂದೇ ಕನಸನ್ನು ಕಾಣಬೇಕು. ಹೀಗೆ ನಮ್ಮ ಗುದ್ದಾಟ, ವಾದ, ಮುನಿಸು ಮತ್ತೆ ರಮಿಸುವಿಕೆ ಸದಾ ಮುಂದುವರಿಯಬೇಕು. ಸಮುದ್ರ ತೀರದಲ್ಲಿ ಹಾಗೆಯೇ ಎಲ್ಲಾ ಜಂಜಾಟಗಳನ್ನು ಮರೆಯಬೇಕು. ಒಟ್ಟಿಗೆ ಕೂಡಿ ನಮ್ಮದೇ ಪುಟ್ಟ ಪ್ರಪಂಚ ಕಟ್ಟಬೇಕು ಇದೇ ನನ್ನ ಆಸೆ. ಎಲ್ಲಿಗೂ ಹೋಗಬೇಡ ಕಣೋ, ಇಲ್ಲೇ ನನ್ನೊಂದಿಗೆ ಇರು. ಇಲ್ಲಾಂದರೇ ನನ್ನನ್ನೂ ನಿನ್ನ ಜೊತೆ ಕರೆದುಕೊಂಡು ಹೋಗು. ಕಡೆಗೆ ಅದೂ ಆಗದಿದ್ದರೆ, ಕೊನೆಯ ಪಕ್ಷ ಹೋಗುವ ಮುಂದೆ, ನಿನ್ನ ಆ ಹಸಿರು ಗಾಜಿನ ಕಣ್ಣುಗಳನ್ನು ಹಾಗೇ ಒಂದು ಕ್ಷಣ ನೋಡಲು ಬಿಡು. ಅಲ್ಲೇ ನನ್ನ ಮನದ ಸೇತುವೆ ಕಟ್ಟಿ, ಅಷ್ಟಿಷ್ಟು ಪ್ರೀತಿ ಮುಟ್ಟಿಸಿ, ಮರೆಯಾಗುತ್ತೇನೆ.  ಜೀವನ ಸಾಗಿಸಲು, ಈ ಹಾಳು ಬಡಪಾಯಿ ಹೃದಯಕ್ಕೆ ಅಷ್ಟು ಸಾಕು.
– ಶ್ವೇತಾ , ಮಂಗಳೂರು.
****************************************************************************************************************

ಬರೀ ಪ್ರೀತಿ ಮತ್ತು ನಾನು-ನೀನು...

ADVERTISEMENT

ನಿಂದೊಳ್ಳೆ ಕತೆ ಆಯ್ತು ಮಾರಾಯ್ತಿ,ನೀನ್ ಏನೂ ಮಾತಾಡದೂ ಇಲ್ಲ ಅತ್ಲಾಗೆ ಸುಮ್ನೆ ಇರಾದೂ ಇಲ್ಲ. ನನ್ನ ನೋಡಿದ್ ಕೂಡ್ಲೆ ಕಿಸಕ್ಕಂತ ಹಲ್ಲ್ ಬಿಡ್ತೀಯ. ಹಿಂಗೇ ಮಾಡ್ತೀರು ನೀನು ಯಾದಾರ ಟೂಥ್ ಪೇಸ್ಟ್ ಕಂಪ್ನಿಗೆ ಮಾಡೆಲ್ ಆಗೋಕೆ ಕರೀಬಹುದು. ಅಲ್ಲೇ ಹುಡ್ಗಿ ನಿನ್ನ ನೆನಸ್ಕೊಂಡು ದಿನಾ ಊಟ ತಿಂಡಿ ಸರಿಯಾಗ್ ತಿನ್ನದೆ ಈ ಜೀವ ತೆಳ್ಳಗ್ ಆಯ್ತಿದೆ ಅಂತ ನಿಂಗೆಂಗೆ ಗೊತ್ತಾಗತ್ತೆ ಹೇಳು, ಆ ಕಡೆ ನಮ್ಮವ್ವ ಮಗ್ನಿಗೆ ದೆಯ್ಯ ಮೆಟ್ಟದೆ ಅಂತ ಜಕ್ಣಿ, ಕಲ್ಕುಡ, ಭೂತರಾಯ, ಚೌಡಿ ಅಂತ ತಿರುಗ್ತಿದಾಳೆ, ನಮ್ಮಪ್ಪಯ್ಯ ನೋಡಿದ್ರೆ ನೀನು ಓದಿ ದಬ್ಬಾಕಿದ್ದು ಸಾಕು, ನಡೀಲ ಗದ್ದೆಗೆ ಮಂಗ್ ಮುಂಡೆದೇ ಅಂತ ಬಯ್ಯತ್ತೆ.

ರೀ ಜಾಹ್ನವಿಯವರೆ ಏನ್ರೀ ನಮ್ ಗೋಳಿದು, ನೀನಂತು ಕಾಲೇಜಲ್ಲಿ ಮಾತಾಡೋಕೆ ಸಿಗಲ್ಲ ಸಾಯ್ಲಿ ಅಂಥ ನಿಮ್ಮೂರಿಗ್ ಬಂದ್ರೆ ಮಾತಾಡ್ದೆ ಕಣ್ಣ್ ಹೊಡ್ದು ಓಡ್ ಹೋಗ್ತೀಯ, ನಿಮ್ಮಪಯ್ಯ ಅಷ್ಟೆ ಅಲ್ಲ ನಮ್ಮಪ್ಪಯ್ಯನೂ ಸತ್ರೂ ಒಂದ್ ಮೊಬೈಲು ಕೊಡ್ಸೊ ಹಾಗೆ ಕಾಣ್ತಿಲ್ಲ, ಅದಕ್ಕೆ ಈ ಪತ್ರ ಬರಿತಿದೀನಿ ಕಣೆ. ಜಾನು ಸೀರಿಯಸ್ಸಾಗಿ ನೀನ್ ಇಲ್ದೆ ನಾನು ಉದ್ಧಾರ ಆಗೋದು ಡೌಟು ಮಾರಾಯ್ತಿ, ನೀನು ಪಟಪಟ ಅಂಥ ಗಣಿತದ ಲೆಕ್ಕ ಬಿಡ್ಸೋದು ನೋಡಿದ್ರೆ ನಂಗೆ ಮುಂದೆ ನಾವು ದುಡ್ಡು ಉಳಿಸಿ ಶ್ರೀಮಂತರಾಗೋದು ಗ್ಯಾರಂಟಿ ಅನ್ಸತ್ತೆ ಮಾರಾಯ್ತಿ.

ನಿಂಗೆ ಹೆಂಗ್ ಹೇಳೋದು ಅಂಥ ಗೊತ್ತಾಗ್ತ ಇಲ್ಲ ಆದ್ರೂ ಹೇಳ್ತಿನ್ ಕೇಳು, ನೀನು ನಿಮ್ಮಪ್ಪಯ್ಯನ್ ಜೊತೆ ನಮ್ಮೂರ್ ಜಾತ್ರೆಗೆ ಹೋದ್

ಸರಿ ಬಂದಿದ್ದಲ್ಲ ಆಗ್ಲೆ ನಿನ್ ಮೇಲೆ ಲೈಟಾಗ್ ಕ್ರಷ್ ಆಗಿತ್ತು,ಅದ್ಕೇಯ ತೇರ್ ಎಳೆಯೋದ್ ಬಿಟ್ಟು ನಿನ್ಕಡೆನೆ ನೋಡ್ತಿದ್ದೆ, ಆ ಪೂಜಾರಪ್ಪ ಮತ್ತೆ ನಮ್ಮ ಅಮ್ನೂವೆ ಸಂಜೆ ಮಂಗಳಾರತಿ ಮಾಡಿದ್ರು. ಅಲ್ಲೇ ಜಾನು ಏನ್ ಚನ್ನಾಗಿ ಕಾಣ್ತಿದ್ದೆ ಕಣೆ ನೀನವತ್ತು, ನೀನು ಹೊರಟು ಹೋದಾಗ ‘ಮಿಸ್ಸಿಂಗ್ ಲಿಂಕು’ ಅಂತ ನನ್ನ್ ಫ್ರೆಂಡ್ಸ್ ಹತ್ರ ಅತ್ತ್ ಬಿಟ್ಟಿದ್ದೆ ಮಾರಾಯ್ತಿ.

ಬೇಡ ಬೇಡ ಅಂದ್ರು ನಮ್ಮಪ್ಪಯ್ಯ ಸೈನ್ಸ್‌ಗೆ ಸೇರಿಸಿದ್ದ ನೋಡಿ ಎಲ್ಲಾರ ದೇಸಾಂತ್ರ ಹೋಗೋಣ ಅನ್ಕೊಂಡಿದ್ದೆ ಕಣಮ್ಮಿ, ಆದ್ರೆ ನಿನ್ ಮುಖಾನ ಕ್ಲಾಸಲ್ಲಿ ನೋಡಿದ್ ಮೇಲೆ  ಸೈನ್ಸು ಲೈಟಾಗಿ ಹೆಲ್ಪ್ ಮಾಡ್ತಲ್ಲ ಶಿವ್ನೆ ಅನ್ಕೊಂಡು ನಮ್ಮೂರ್ ದೇವ್ರಿಗೆ ಜೋಡ್ ಹಣ್ಮುಕಾಯಿ ಮಾಡ್ಸಿದ್ದೆ, ನಗ್ಬೇಡ ಮಾರಾಯ್ತಿ ನಿನ್ನ್ ಆಣೆಗೂ ಸತ್ಯ ಹೇಳ್ತಿದಿನಿ. ಜಾನು ನೀನು ನನ್ನ ಪ್ರೀತಿನ ಒಪ್ಕೊಂಡ್ರೆ ನಿನ್ನ ರಾಣಿ ತರ ಇಡ್ತೀನಿ, ತಾಜ್ ಮಹಲ್ ಕಟ್ಟಿಸ್ತೀನಿ ಅನ್ನೋ ಹಸಿ ಹಸಿ ಸುಳ್ಳು ಹೇಳೋಕೆ ನನ್ನಿಂದಾಗಲ್ಲ, ಆದ್ರೆ ಒಂದಂತು ನಿಜ ನನ್ನ ಉಸಿರು ಇರೋವರೆಗೂ ನಿನ್ನ ಮೇಲೆ ಇಟ್ಟಿರೋ ಪ್ರೀತಿನಂತೂ ಕಡಿಮೆ ಮಾಡೊಲ್ಲ. ಮುಂದಿನ ನಮ್ಮ ಜೀವನ ನಾವಿಬ್ರೂ ಸೇರಿ ನಿರ್ಧಾರ ಮಾಡುವಂಥದು, ಅದು ಏನೇ ಆದರೂ ನಿನ್ನ ಜೊತೆ ನಾನಿರ್ತೀನಿ ಅಂತ ಮಾತು ಕೊಡ್ತಿನಿ ಮಾರಾಯ್ತಿ.

ಫುಲ್ ಸೀರಿಯಾಸ್ಸಾಗ್ಬಿಟ್ಟೆ ಅಲ್ಲ, ಇರಲಿ ಸ್ವಲ್ಪ ಅಡ್ಜಸ್ಟ್ ಮಾಡ್ಕೊ, ಏನೋ ಜಾನು ನೀನೇನು ನಂಗೆ ಪ್ರತಿ ಕ್ಷಣ ನೆನಪಿಗೆ ಬರಲ್ಲ. ಹಾಗಂತ ಯೋಚಿಸೋದೆ ಇಲ್ಲ ಅಂಥಾನು ಇಲ್ಲ, ನೆನಪಿಸಿ ಕೊಳ್ಳದೇ ಇದ್ರು ನೆನಪಿಗೆ ಬರ್ತೀಯ, ಕರೀದೆ ಇದ್ರು ಕನಸಲ್ಲಿ ಬರ್ತೀಯ, ನನ್ನೊಳಗೆ ನಾನಲ್ದೆ ನೀನು ಇರೋದು ಖಾತ್ರಿಯಾಗ್ಬಿಟ್ಟಿದೆ. ಬಡ್ಡಿ ಮಕ್ಳು ನನ್ ಫ್ರೆಂಡ್ಸ್ಗಳಿಗೆ ಅದೇಗೋ ವಾಸನೆ ಹತ್ಬಿಟ್ಟಿದೆ ‘ಮಗಾ, ಇತ್ತೀಚಿಗೆ ನೀನು ನಮ್ ಜೊತೆ ಸರಿ ಬೆರೀತಾನೇ ಇಲ್ಲ, ಯಾದೋ ಲೋಕ್ದಲ್ಲಿ ಇರ್ತೀಯ, ದೇವ್ರಾಣೆ ನಿಂಗೆ ಲವ್ವಾಗದೆ, ಯಾರೋ ಅದು ನಿನ್ನ ಮಂಡೆ ಕೆಡ್ಸಿದ್ದು’ ಅಂತೀದಾರಮ್ಮಿ. ಅವರಿಗೆ ಸಮಾಧಾನ ಮಾಡೋದೆ ದೊಡ್ ಕೆಲ್ಸ ಆಗೋಗಿದೆ ನಂಗೆ. ಅಲ್ಲ ಜಾನು ಯಾವಾಗ್ ನೋಡಿದ್ರೂ ಅದೇನೋ ಬುಕ್ಕೊಳಗೆ ಹೊಕ್ಕೊಂಡಿರ್ತಿಯಲ್ಲ ಅದೇನ್ ಓದಿ ದಬ್ಬಾಕ್ತೀಯ ಮಾರಾಯ್ತಿ, ನಿಂಗೆ ಓದೋ ಹುಚ್ಚು ಜಾಸ್ತಿ ಇರೋದ್ ತಿಳ್ದೆ ನಾನ್ ಇಷ್ಟುದ್ದ ಪತ್ರ ಬರಿತಿರೋದು, ಯಂಗು ನೀನ್ ಓದ್ತೀಯ ನನ್ನ ಮನಸಲ್ಲಿರೋದನ್ನ ಅರ್ಥ ಮಾಡ್ಕತೀಯ ಅನ್ನೋ ನಂಬಿಕೆ.

ಸ್ವಾರಿ ಜಾನು ಹೇಳೋದಕ್ಕೆ ತುಂಬಾ ಲೇಟ್ ಮಾಡ್ದೆ, ನೀನೆ ಸಿಕ್ಕಾಗೆಲ್ಲ ಹೇಳ್ತಿದ್ಯಲ್ಲ ‘ಏನಾದ್ರು ಹೇಳೋದಿದ್ರೆ ಹೇಳು ರಾಹುಲ್ ಅಂತ, ಆದ್ರೆ ನಂಗೆ ಧೈರ್ಯ ಸಾಕಾಗಿಲ್ಲ’, ನಗ್ಬೇಡ ಮಾರಾಯ್ತಿ, ‘ಇಡೀ ಕಾಲೇಜ್ಗೆ ಹೀರೋ ಆಗಿ, ಅವಾಜ್ ಹಾಕ್ತ ತಿರುಗೋ ನಂಗೆ ಹೆದ್ರಿಕೇನ ಅಂತ ಅನ್ಕೋಬೇಡ’. ನಂಗೂ ಭಾವನೆಗಳಿವೆ. ಈ ಹಾಳಾದ ಹೃದಯ ನಿನ್ನ ಬಿಟ್ಟು ಇರೋದಕ್ಕೆ ಒಪ್ತಾಯಿಲ್ಲ, ನೀನು ಏನೋ ಅನ್ಕೋತಿಯೋ ಅನ್ನೋ ಭಯ.

ನಿನ್ ಮೇಲೆ ನನಗೆ ಇರೋದು ಬರೀ ಅಟ್ರ್ಯಾಕ್ಷನ್ ಇರಬಹುದು ಅಂತ ನಾನೂ ಅನ್ಕೊಂಡಿದ್ದಿದೆ, ಆದ್ರೆ ದಿನಾ ಕಳೆದಂಗೂ ನೀನು ಪೂರ್ತಿಯಾಗಿ ನನ್ನನ್ನ ಆವರಿಸಿಕೊಳ್ತಾನೇ ಇದೀಯ. ಏನಕ್ಕೆ ಲವ್ ಮಾಡ್ತಿದೀನಿ, ಹೇಗೆ ಲವ್ ಮಾಡ್ತಿದೀನಿ, ಎಷ್ಟು ಅಂತ ಕೇಳ್ಬೇಡ ಪ್ಲೀಸ್, ಕಾರಣನೇ ಇಲ್ದೆ ನಿನ್ನನ್ನ ಇಷ್ಟಪಟ್ಟೆ, ನಂತರ ಯಾದಾರ ಕಾರಣ ಬೇಕು ಅಂತ ಅನಿಸಿಲ್ಲ, ನಿಜ ಹೇಳೋದಾದ್ರೆ ನಿನ್ನನ್ನ ನೀನಾಗಿ ನಾನು ಇಷ್ಟ ಪಡ್ತೀನಿ ಜಾನು. ನಿನ್ನನ್ನ ಚಂದ್ರಂಗೋ ಸೂರ್ಯಂಗೋ ಹೋಲಿಸಿ ನಾನು ಇಷ್ಟ ಪಟ್ಟಿಲ್ಲ, ಯಾಕಂದ್ರೆ ನೀನು ಪ್ರತಿದಿನ ನನಗೆ ವಿಭಿನ್ನವಾಗಿ ಕಾಣ್ತೀಯ, ನಿನ್ನನ್ನ ಬೇರೆ ಯಾರಿಗೋ ಹೋಲಿಸಬೇಕು ಅಂತ ಅನ್ಸೋದೆ ಇಲ್ಲ.

‘ಐ ಲವ್ ಯು ಜಾನು, ನಿನ್ನನ್ನ ನಾನು ಮನಸಾರೆ ಇಷ್ಟ ಪಡ್ತಿದೀನಿ’, ನೀನು ನನ್ನನ್ನೇ ಪ್ರೀತಿಸಬೇಕು ಅಂತ ನಾನು ಕೇಳ್ತಿಲ್ಲ, ನಿನ್ನ ಮನಸ್ಸಿಗೆ ಸರಿಯೆನೆಸಿದ ನಿರ್ಧಾರ ನೀನು ಮಾಡ್ತೀಯ ಅನ್ನೋ ಭರವಸೆ ಇದೆ. ಈ ಪತ್ರದ ಲ್ಲಿರೋ ಭಾವನೆಗಳಿಗೆ ಜೀವ ತುಂಬಿ ನನಗೂ ಉಸಿರಾಗ್ತೀಯ ಅಂತ ಅನ್ಕೊಂಡಿದೀನಿ ಜಾನು... ಬಿರುಗಾಳಿ ಬದುಕಿನ ನಿರ್ವಾತ ಹೃದಯದಲಿ ನಿನ್ನಿಂದ ತಂಗಾಳಿಯನು ಆಶಿಸುವ....
–ರಮೇಶ್ ನೆಲ್ಲಿಸರ, ಶಿವಮೊಗ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.