ADVERTISEMENT

ಯಮಹಾದ ಸ್ಟ್ರೀಟ್‌ ಬೈಕ್‌ ಹೊಸ ಎಫ್‌ಝಡ್‌ 25

ರಾಕೇಶ ವಿ.ತಾಳಿಕೋಟಿ
Published 16 ಫೆಬ್ರುವರಿ 2017, 16:15 IST
Last Updated 16 ಫೆಬ್ರುವರಿ 2017, 16:15 IST
ಯಮಹಾದ ಸ್ಟ್ರೀಟ್‌ ಬೈಕ್‌ ಹೊಸ ಎಫ್‌ಝಡ್‌ 25
ಯಮಹಾದ ಸ್ಟ್ರೀಟ್‌ ಬೈಕ್‌ ಹೊಸ ಎಫ್‌ಝಡ್‌ 25   

ಸ್ಪೋರ್ಟ್ಸ್‌ ಬೈಕ್‌ ವಿನ್ಯಾಸಕ್ಕೆ ಹೆಸರುವಾಸಿಯಾದ ಜಪಾನಿ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಯಮಹಾ, ಸ್ಟ್ರೀಟ್‌ ಬೈಕ್‌ಗಳಿಂದಲೇ ವಿಶ್ವದೆಲ್ಲೆಡೆ ಹೆಸರು ಮಾಡಿದೆ. ಆರ್‌ ಎಕ್ಸ್‌, ಆರ್‌ ಡಿ, ವೈ ಝಡ್‌ ಮಾದರಿ ನಂತರ ಭಾರತದಲ್ಲಿ ವಿನೂತನ ವಿನ್ಯಾಸಗಳ ಮೂಲಕ ಮರುರೂಪ ಪಡೆದು ಜನಪ್ರಿಯವಾಗಿತ್ತು. ಎಫ್‌ಝಡ್‌ ಹೆಸರಿನಲ್ಲಿ 2008ರಲ್ಲಿ ‘ಲಾರ್ಡ್‌ ಆಫ್‌ ದಿ ಸ್ಟ್ರೀಟ್’ ಎಂಬ ತಲೆಬರಹದೊಂದಿಗೆ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿತ್ತು.

ಭಾರತದಲ್ಲಿ ನೇಕೆಡ್‌ ಬೈಕ್‌ಗಳ ಹಾವಳಿ ಹೆಚ್ಚಿರುವ ಕಾಲದಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ಯಮಹಾ ಬೈಕ್‌ ಜನಪ್ರಿಯಗೊಳಿಸಲು ಕಂಪೆನಿ ತನ್ನ ಜನಪ್ರಿಯ ಹೆಸರಿನಲ್ಲಿ ಬೈಕಿನ ಎಂಜಿನ್‌ ಸಾಮರ್ಥ್ಯವನ್ನು ಹೆಚ್ಚಿಸಿ ಪೈಪೋಟಿಗೆ ಮುಂದಾಗಿದೆ. ತಂತ್ರಜ್ಞಾನ, ಬೆಲೆ, ವಿನ್ಯಾಸದಲ್ಲಿ ವಿವಿಧತೆಯ ಮೂಲಕ ಯುವಕರನ್ನು ಆಕರ್ಷಿಸಲು ತಯಾರಾಗಿದೆ.

150 ಸಿಸಿ ಬೈಕ್‌ ಸೆಗ್ಮೆಂಟ್‌ನಲ್ಲಿ ಎಫ್‌ಝಡ್‌ ಮತ್ತು ಆರ್‌15 ಮಾದರಿಗಳೊಂದಿಗೆ ಕೆಲ ವರ್ಷ ಮಾರುಕಟ್ಟೆಯಲ್ಲಿ ಯಮಹಾ ಪ್ರಾಬಲ್ಯ ಮೆರೆದಿತ್ತು. ನಂತರ ಇವುಗಳ ಸುಧಾರಿತ ಆವೃತ್ತಿಗಳನ್ನು ಕಾಲಾನುಕ್ರಮೇಣ ಹೊರತರುತ್ತ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಹೋರಾಟ ನಡೆಸಿದ್ದೂ ಇದೆ.

ಇದೀಗ ಹೆಚ್ಚಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ನವಯುಗಕ್ಕೆ ಅನುಗುಣವಾಗಿ 250ಸಿಸಿ ಸಾಮರ್ಥ್ಯದ ಹೊಸ ಬೈಕನ್ನು ಸದ್ದಿಲ್ಲದೆ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಅದೇ ಎಫ್‌ಝಡ್ 25. ಈ ಬೈಕ್‌ ವಿನ್ಯಾಸ ಮತ್ತು ಸಾಮರ್ಥ್ಯವು  ಆರ್‌15 ಮತ್ತು ವೈಝಡ್‌ ಎಫ್‌–ಆರ್‌3 ಇವೆರಡರ ಮಧ್ಯೆ ಇದೆ.

ADVERTISEMENT

ಅಂದರೆ, ಯಮಹಾದ ಪ್ರಭಾವಶಾಲಿ ಮಾದರಿಗಳ ಎರಡು ಬಗೆಯನ್ನು ಈ ಬೈಕಿನಲ್ಲಿ ಮಿಶ್ರಣಗೊಳಿಸಿ ಸಿದ್ಧಪಡಿಸಲಾಗಿದೆ. ಇಂಡೋನೇಷ್ಯಾದಲ್ಲಿ ಚಾಲ್ತಿಯಲ್ಲಿರುವ ಯಮಹಾ ಎಮ್‌–ಸ್ಲಾಜ್‌ ಮಾದರಿಯನ್ನೇ ನೂತನ ಎಫ್‌ಝಡ್‌25 ವಿನ್ಯಾಸ  ಹೋಲುತ್ತದೆ.

ಬೈಕ್‌ ವಿಶೇಷತೆಗಳು
249ಸಿಸಿ ಎಂಜಿನ್‌, ವಿಶೇಷ ಇಂಧನ ಟ್ಯಾಂಕ್‌, ಹೊರಭಾಗದಲ್ಲಿ ರೇಸ್‌ ಬೈಕಿನಲ್ಲಿರುವಂತೆ ಏರೊಡೈನಮಿಕ್ ವಿನ್ಯಾಸ, ಎಲ್‌ಇಡಿ ಹೆಡ್‌ಲ್ಯಾಂಪ್‌ ಮತ್ತು ಟೇಲ್‌ ಲ್ಯಾಂಪ್‌, (ಆಟೊಮ್ಯಾಟಿಕ್‌ ಹೆಡ್‌ಲ್ಯಾಂಪ್‌) ಡಿಜಿಟಲ್‌ ಮೀಟರ್‌, 20.9 ಬಿಎಚ್‌ಪಿ ಸಾಮರ್ಥ್ಯ, 20 ಎನ್‌ಎಂ ಟಾರ್ಕ್‌, 14 ಲೀಟರ್‌ ಇಂಧನ ಟ್ಯಾಂಕ್‌, ಎರಡು ಟೈರ್‌ಗಳಿಗೂ ಡಿಸ್ಕ್‌ ಬ್ರೇಕ್‌ (ಮುಂದಿನ ಚಕ್ರ 282ಎಂಎಂ, ಹಿಂದಿನ ಚಕ್ರ 220 ಎಂಎಂ), 148 ಕೆ.ಜಿ. ಭಾರ (ತನ್ನ ಮಾದರಿಯಲ್ಲೇ ಅತಿ ಕಡಿಮೆ ಭಾರ), ಸಿಂಗಲ್‌ ಸಿಲಿಂಡರ್‌ ಫ್ಯುಯೆಲ್‌ ಇಂಜಕ್ಷನ್‌ ಎಂಜಿನ್‌ (ಏರ್‌ ಕೂಲ್ಡ್‌), 41 ಎಂಎಂ ಬಲಿಷ್ಠ ಟೆಲಿಸ್ಕೋಪಿಕ್‌  ಫ್ರಂಟ್‌ ಫೋರ್ಕ್‌, 5 ಸ್ಟೀಡ್‌ ಗೇರ್‌ ಬಾಕ್ಸ್‌, ಮೋನೊಶಾಕ್ಸ್‌, ಟ್ಯೂಬ್‌ಲೆಸ್‌ ಮತ್ತು ಅಲಾಯ್‌ ವೀಲ್ಸ್‌, ವೀಲ್‌ಬೇಸ್‌

1360 ಎನ್‌ಎಂ.
200ಸಿಸಿಗಿಂತ ಅಧಿಕ ಸಾಮರ್ಥ್ಯದ ಬೈಕುಗಳಲ್ಲಿ ರೋಡ್‌ಗ್ರಿಪ್‌ಗಾಗಿ ಮತ್ತು ವೇಗದ ಚಾಲನೆಯ ಸುರಕ್ಷಿತ ನಿಯಂತ್ರಣಕ್ಕೆ ಎಬಿಎಸ್‌ (ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಂ) ಅಳವಡಿಕೆ ಅಗತ್ಯ. ಆದರೆ ಕಡಿಮೆ ಬೆಲೆಯಲ್ಲಿ ಬೈಕ್‌ ನೀಡಲು ಮುಂದಾಗಿರುವ ಯಮಹಾ ಎಬಿಎಸ್‌ ಅಳವಡಿಸದಿರುವುದು ಸುರಕ್ಷತೆ ದೃಷ್ಟಿಯಿಂದ ಸವಾಲಾಗಿ ಪರಿಣಮಿಸಿದೆ.

ಪ್ರತಿ ಲೀಟರ್‌ ಪೆಟ್ರೋಲ್‌ಗೆ 43 ಕಿ.ಮೀ. ದೂರ ಕ್ರಮಿಸಬಲ್ಲದು ಎಂದು ಕಂಪೆನಿ ತಿಳಿಸಿದೆ. ಆದರೆ 200ಸಿಸಿ ಮೀರಿದ ಯಾವುದೇ ಬೈಕ್‌ 40 ಕಿ.ಮೀ/ಲೀಟರ್‌ ಮೈಲೇಜ್‌ ನೀಡುವುದು ಕಷ್ಟಸಾಧ್ಯ ಎಂದು ಬೈಕ್ ತಜ್ಞರು ಅಭಿಪ್ರಾಯ ಪಡುತ್ತಾರೆ.

ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸದ್ಯ ಹೆಸರು ಮಾಡಿರುವ ಕೆಟಿಎಮ್‌ ಡ್ಯೂಕ್‌, ಬಜಾಜ್‌ ಪಲ್ಸರ್‌ ಎನ್‌ ಎಸ್‌ 200, ಹೋಂಡಾ ಸಿಬಿಆರ್‌ 250 ಆರ್‌, ಟಿವಿಎಸ್‌ ಅಪಾಚೆ ಆರ್‌ಟಿಆರ್‌200 4ವಿ, ಮಹಿಂದ್ರಾ ಮೊಜೊಗೆ ಸಡ್ಡು ಹೊಡೆಯಲು ಎಫ್‌ಝಡ್‌ 25 ಮೂಲಕ ಭಾರತದಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಮರಳಿದೆ.

ಇದರಲ್ಲಿ ನೈಟ್‌ ಬ್ಲ್ಯಾಕ್‌, ಬ್ಯಾಲಿಸ್ಟಿಕ್‌ ಬ್ಲೂ, ವಾರಿಯರ್‌ ವೈಟ್‌ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಬೆಲೆ– ₹1.20 ಲಕ್ಷ (ಎಕ್ಸ್‌ ಶೋರೂಂ ಬೆಲೆ ಬೆಂಗಳೂರು), ₹1.30 ಲಕ್ಷ (ಆನ್‌ ರೋಡ್‌ ಬೆಲೆ)

ಅಗಲವಾದ ಪೆಟ್ರೋಲ್‌ ಟ್ಯಾಂಕ್‌, ಪ್ರತ್ಯೇಕ ಸೀಟುಗಳ ವಿನ್ಯಾಸ, ಫುಟ್‌ಪ್ಯಾಡ್‌ಗಳ ವಿನ್ಯಾಸವನ್ನು ಆಧುನಿಕತೆಗೆ ತಕ್ಕಂತೆ ಸ್ಟೈಲಿಶ್‌ ಆಗಿ ತಯಾರಿಸಲಾಗಿದೆ. ಮಡ್‌ಗಾರ್ಡ್‌ಗಳನ್ನು ರೇಸಿಂಗ್‌ ಬೈಕುಗಳಿಗೆ ಬೇಕಾದ ಮಾದರಿಯಲ್ಲೇ ತಯಾರಿಸಲಾಗಿದೆ. 2008ರಲ್ಲಿ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದ ಯಮಹಾ ಅಂದಿನಿಂದ ತನ್ನ ವಿನ್ಯಾಸ ಹಾಗೂ ಕ್ಷಮತೆಯಿಂದ ಹೆಸರು ಮಾಡಿದೆ.

2015–16ನೇ ಸಾಲಿನಲ್ಲಿ ಕಂಪೆನಿಯ ಬೈಕುಗಳ ಮಾರಾಟವು 5.95ಲಕ್ಷ ಯುನಿಟ್‌ನಿಂದ 7.86 ಯುನಿಟ್‌ಗಳಿಗೆ ಹೆಚ್ಚಳವಾಗಿದೆ ಎಂದು ಬೈಕ್‌ ಬಿಡುಗಡೆ ಸಂದರ್ಭದಲ್ಲಿ ಕಂಪೆನಿ ಮಾರುಕಟ್ಟೆ ವಿಭಾಗದ ತಜ್ಞರು ಹೇಳಿಕೆ ನೀಡಿದ್ದಾರೆ.

‘ನ್ಯೂ ಬ್ರೀಡ್‌ ಆಫ್‌ ರೈಡರ್ಸ್‌ ಕಮಿಂಗ್‌ ಟು ಟೌನ್‌’ (ನಗರಕ್ಕೆ ಹೊಸ ಪೀಳಿಗೆಯ ಸವಾರರ ಆಗಮನ) ಎಂಬ ಪಂಚಿಂಗ್‌ ಟ್ಯಾಗ್‌ಲೈನ್‌ ಮೂಲಕ ಜಾಹೀರಾತು ಬಿತ್ತರಿಸುತ್ತಿರುವ ಯಮಹಾ ಬಿಡುಗಡೆಗೂ ಮುನ್ನವೇ ಸಾವಿರಕ್ಕೂ ಹೆಚ್ಚು ಅಡ್ವಾನ್ಸ್‌ ಬುಕಿಂಗ್‌ ಆಗಿದ್ದವು. ಸಂಪೂರ್ಣ ಕ್ರೀಡಾ ಮನೋಭಾವ ಬಿಂಬಿಸುವ ಹಲವಾರು ವೈಶಿಷ್ಟ್ಯಗಳನ್ನು ಎಫ್‌ಝಡ್‌ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.