ADVERTISEMENT

ಹಳೆಯದಿಲ್ಲದೆ ಹೊಸತಿಲ್ಲ

ಬೆಳದಿಂಗಳು

ಸೃಜನಾನಂದ
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST

ಮತ್ತೊಂದು ಕ್ಯಾಲೆಂಡರ್ ಬದಲಾಗಿದೆ. ಅದನ್ನು ನಾವು ಗುರುತಿಸುತ್ತಿದ್ದೇವೆ. ಏಕೆಂದರೆ ನಾವು ವರ್ಷಕ್ಕೊಂದು ಸಾರಿ ಅದನ್ನು ಪ್ರಜ್ಞಾಪೂರ್ವಕವಾಗಿ ಬದಲಾಯಿಸುತ್ತಿರುತ್ತೇವೆ. ಆದರೆ ನಮ್ಮ ಅರಿವಿಗೆ ಬಂದು ಮತ್ತು ಬಾರದೆ ಪ್ರತಿ ಕ್ಷಣವೂ ನಡೆಯುತ್ತಿರುವ ಬದಲಾವಣೆಯ ಪ್ರಕ್ರಿಯೆಯ ಜೊತೆಗೆ ಆಲೋಚಿಸಿದರೆ ನಿರ್ದಿಷ್ಟ ಮಾದರಿಯ ಕಾಲಮಾನವೊಂದರಲ್ಲಿ ವರ್ಷವೊಂದು ಉರುಳುವುದು ಅಷ್ಟೇನೂ ಮುಖ್ಯ ವಿಚಾರವಲ್ಲ.

ಆದರೂ ಈ ಬದಲಾವಣೆಗೆ ಒಂದು ಮಹತ್ವವಿದೆ. ಸಾಧ್ಯವೋ ಅಸಾಧ್ಯವೋ ಈ ಕ್ಷಣದಲ್ಲಿ ಕೆಲವು ತೀರ್ಮಾನಗಳನ್ನು ಕೈಗೊಳ್ಳುತ್ತೇವೆ. ಏನೇನೋ ಮಾಡುತ್ತೇವೆಂಬ ನಿರ್ಧಾರಕ್ಕೆ ಬರುತ್ತೇವೆ.

ಕಾಲಗಣನೆಯ ಮಾನಕಗಳು ಮುಖ್ಯವಾಗುವುದೇ ಈ ಕಾರಣಕ್ಕಾಗಿ. ಅದು ಸೆಕೆಂಡ್‌ನ ಸಹಸ್ರಾಂಶವಾದರೂ ಸರಿಯೇ. ಅಂಥ ಸೆಕೆಂಡ್‌ಗಳ ಗುಚ್ಛವಾದರೂ ಸರಿಯೇ. ಇಂಥದ್ದೊಂದು ಗಣನೆಯ ಪದ್ಧತಿ ಇಲ್ಲವಾದರೆ ನಾವು ಸುಮ್ಮನೆ ಗೊಂದಲಕ್ಕೆ ಒಳಗಾಗುತ್ತಿದ್ದೆವು. ಕೇವಲ ಲೆಕ್ಕಾಚಾರದ ಕಾರಣಕ್ಕಾಗಿಯಾದರೂ ಇವುಗಳನ್ನು ಅಳವಡಿಸಿಕೊಳ್ಳಲೇಬೇಕಾಗುತ್ತದೆ.

ಒಂದು ವರ್ಷ ಉರುಳುವುದು ಪ್ರತಿಯೊಂದು ಬದುಕಿನಲ್ಲೂ ತನ್ನದೇ ಆದ ರೀತಿಯ ಪರಿಣಾಮ ಬೀರುತ್ತವೆ. ನಿರಾಶಾವಾದಿಗಳು ಸಾಯುವ ದಿನ ಹತ್ತಿರವಾಯಿತು ಎಂದುಕೊಂಡರೆ, ಉತ್ಸಾಹಿಗಳು ತಾನು ಇನ್ನಷ್ಟು ಪ್ರಬುದ್ಧನಾದೆ ಎಂದು ಸಂತೋಷ ಪಡುತ್ತಾರೆ.

ಈ ವಿಶಾಲ ವಿಭಾಗೀಕರಣಗಳ ಆಚೆಗೆ ಆಲೋಚಿಸಿದರೆ ವರ್ಷವೊಂದು ಉರುಳುವ ಪ್ರಕ್ರಿಯೆಯ ಸೂಕ್ಷ್ಮಗಳು ನಮಗೆ ಕಾಣಿಸುತ್ತವೆ. ಏಕೆಂದರೆ ಯಾವುದೇ ಕ್ಷಣದಿಂದ ಅದರ ಹಿಂದಿನ ಮುನ್ನೂರಾ ಅರವತ್ತೈದು ದಿನಗಳನ್ನು ಲೆಕ್ಕ ಹಾಕಿದರೆ ಅದೊಂದು ವರ್ಷ. ವರ್ಷದ ತುಂಬ ಅನೇಕ ಘಟನೆಗಳು ಮತ್ತು ನೆನಪುಗಳು ನಮ್ಮಲ್ಲಿರುತ್ತವೆ.

ಹಳೆಯ ಹಳಹಳಿಕೆಗಳನ್ನು ಬಿಟ್ಟು ಬಿಡಬೇಕೇ ಅಥವಾ ಅವುಗಳನ್ನು ಸದಾ ಉಳಿಸಿಕೊಳ್ಳಬೇಕೇ? ಈ ಪ್ರಶ್ನೆಗೆ ಹೇಗೆ ಉತ್ತರ ಕಂಡುಕೊಂಡರೂ ಒಂದೇ. ಹಳೆಯದನ್ನು ಬಿಡುತ್ತೇವೆ ಎನ್ನುವಾಗಲೂ ನಾವು ಹಳೆಯದನ್ನು ಒಂದು ಪರಾಮರ್ಶೆಯ ಘಟಕವಾಗಿ ಬಳಸುತ್ತಿರುತ್ತೇವೆ. ಅಂದರೆ ಹೊಸತನ್ನು ನಿರ್ಮಿಸಲು ಹೊರಡುವುದು ಹಳತನ್ನು ಮರೆತಲ್ಲ. ಬದಲಿಗೆ ಹಳೆಯದನ್ನು ಸೋಪಾನವಾಗಿ ಬಳಸಿಕೊಂಡು.

ಹಿಂದೊಮ್ಮೆ ಐನ್‌ಸ್ಟೀನ್ ವೈಜ್ಞಾನಿಕ ಸಂಶೋಧನೆಗಳ ಕುರಿತು ಇದೇ ಮಾತು ಹೇಳಿದ್ದರು. ಸಂಶೋಧನೆ ಎಂದರೆ ಬೆಟ್ಟವನ್ನು ಏರುವ ಕ್ರಿಯೆಯಂತೆ. ನಮ್ಮ ಆರೋಹಣ ಆರಂಭವಾಗುವುದು ನಮ್ಮ ಹಿಂದಿನವರು ತಲುಪಿದ್ದ ಎತ್ತರದ ನಂತರ. ಅಂದರೆ ನಮ್ಮೆಲ್ಲರ ಆರೋಹಣದ ಒಂದಷ್ಟು ಹಾದಿಯನ್ನು ನಮ್ಮ ಹಿಂದಿನವರು ಏರಿರುತ್ತಾರೆ.

ಅಲ್ಲಿಂದ ಮುಂದಕ್ಕೆ ನಾವು ಸಾಗಬೇಕು. ಅವರು ಏರಿದ ಎತ್ತರವನ್ನು ನಮಗೆ ಕಡೆಗಣಿಸಲು ಸಾಧ್ಯವಿಲ್ಲ. ಹಳತು ಮತ್ತು ಹೊಸತರ ನಡುವಣ ಸಂಬಂಧವೂ ಇಂಥದ್ದೇ. ಹೊಸತು ಹುಟ್ಟುವುದು ಹಳೆಯ ಅನುಭವಗಳಿಂದ. ಅದು ಒಳ್ಳೆಯದಾಗಿದ್ದಾಗಲೂ ನಿಜ. ಕೆಟ್ಟದಾಗಿದ್ದಾಗಲೂ ನಿಜವೇ.

ಹಳತನ್ನು ಕಳೆದುಕೊಳ್ಳುವುದು ಎನ್ನುವಾಗ ನಾವು ಮರೆಯದೇ ಇರಬೇಕಾದುದು ಇದನ್ನೇ. ಇನ್ನು ಹೊಸತನ್ನು ಸೃಷ್ಟಿಸುವುದು ಹೇಗೆ ಎಂದು ಕೇಳಿದರೆ, ಹಳೆಯದು ನಮಗೆ ನೆನಪಾಗಿರಬೇಕೇ ಹೊರತು ಅದು ನಮ್ಮ ಹೊಸತನ್ನು ಸೃಷ್ಟಿಸುವ ಕೆಲಸಕ್ಕೊಂದು ಸವಾಲಾಗಬಾರದು. ನಮ್ಮ ಸಾಮರ್ಥ್ಯವನ್ನು ಹಳೆಯದರಿಂದ ಕಳಚಿಕೊಳ್ಳುವುದಕ್ಕೆ ವ್ಯಯಿಸುವ ಬದಲಿಗೆ ಹೊಸತನ್ನು ಸೃಷ್ಟಿಸುವುದಕ್ಕೆ ಬಳಸಬೇಕು. ಆಗ ಮಾತ್ರ ನಿಜವಾದ ಅರ್ಥದ ಬದಲಾವಣೆ ಸಾಧ್ಯ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.