ADVERTISEMENT

ಕಲ್ಲರಳಿ ಹೂವಾಗಿ: ಕಲಾಕೃತಿಗಳ ಪ್ರದರ್ಶನ

ಮಂಜುಶ್ರೀ ಎಂ.ಕಡಕೋಳ
Published 19 ಅಕ್ಟೋಬರ್ 2024, 5:04 IST
Last Updated 19 ಅಕ್ಟೋಬರ್ 2024, 5:04 IST
ರೂಮಿ ಹರೀಶ್ ಅವರ ಕಲಾಕೃತಿ
ರೂಮಿ ಹರೀಶ್ ಅವರ ಕಲಾಕೃತಿ   

ಪ್ರಕೃತಿಯಲ್ಲಿ ಹೆಣ್ಣಾಗಲೀ, ಗಂಡಾಗಲೀ ಇಬ್ಬರೂ ಪರಿಪೂರ್ಣರಲ್ಲ. ಆದರೆ, ಪರಿಪೂರ್ಣತೆಯ ಅನ್ವೇಷಣೆ ನಿರಂತರವಾದದ್ದು. ಪುರುಷತ್ವ ಮತ್ತು ಸ್ತ್ರೀತತ್ವಗಳ ಅನ್ವೇಷಣೆಯ ಭಾಗವಾಗಿ ‘ಕಲ್ಲಿನ ಹೂವು... ಬಾಡಿ ಸಾಂಗ್’ ಕಲಾಕೃತಿಗಳ ಪ್ರದರ್ಶನವನ್ನು ನಗರದಲ್ಲಿ ಆಯೋಜಿಸಲಾಗಿದೆ.

ಲಿಂಗಪರಿವರ್ತಿತ (ಟ್ರಾನ್ಸ್‌ಮ್ಯಾನ್) ರೂಮಿ ಹರೀಶ್ ಅವರು ರಚಿಸಿರುವ ಒಟ್ಟು 68 ಕಲಾಕೃತಿಗಳು ಇಲ್ಲಿವೆ. ಮೂಲತಃ ಹಿಂದೂಸ್ಥಾನಿ ಸಂಗೀತಗಾರ್ತಿಯಾಗಿದ್ದ ರೂಮಿ, ಲಿಂಗ ಪರಿವರ್ತನೆಯಾದ ಬಳಿಕ ಹಾಡುಗಾರಿಕೆಯ ಜತೆಗೆ ಚಿತ್ರಕಲೆ, ಕಾವ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಈಚೆಗಷ್ಟೇ ಅವರ ಪ್ರಥಮ ಕವನ ಸಂಕಲನ ‘ಆ ಚಾಚಿದ ಕೈಗಳು’ ಬಿಡುಗಡೆಯಾಗಿತ್ತು. ಇದೀಗ ‘ಕಲ್ಲಿನ ಹೂವು’ ಶೀರ್ಷಿಕೆಯಡಿ ಅವರ ಕಲಾಕೃತಿಗಳ ಪ್ರಥಮ ಪ್ರದರ್ಶನವನ್ನು ‘ಮರ’ ಸಂಸ್ಥೆ ಹಾಗೂ ನಂ.1ಶಾಂತಿನಗರ ಸ್ಟುಡಿಯೋ/ಗ್ಯಾಲರಿ ಆಯೋಜಿಸಿದೆ.

ಸಾಹಿತ್ಯ, ಸಂಗೀತ, ಚಿತ್ರಕಲೆ ಮೂರು ಪ್ರಕಾರಗಳಲ್ಲೂ ತೊಡಗಿಕೊಂಡಿದ್ದರೂ ಸಂಗೀತವೇ ಪ್ರಧಾನ ಎನ್ನುವ ರೂಮಿ ಹರೀಶ್‌ ಅವರಿಗೆ, ಚಿತ್ರ ರಚಿಸುವಾಗಲೂ ಸಂಗೀತದ ಗುಂಗೇ ತುಂಬಿಕೊಂಡಿರುತ್ತದಂತೆ. ಅವರ ಎಲ್ಲ ಸೃಜನಶೀಲ ಚಟುವಟಿಕೆಗಳ ಜೀವದ್ರವ್ಯವೇ ‘ಖಯಾಲ್‌’ (ಹಿಂದೂಸ್ಥಾನಿ ಸಂಗೀತದ ಪರಿಭಾಷೆಯಲ್ಲಿ ಖಯಾಲ್ ಎಂದರೆ ಕಲ್ಪನೆ, ಆಲೋಚನೆ ಎಂದರ್ಥ). 

ADVERTISEMENT

‘ನಾನು ಹೆಣ್ಣು ಆಗಿದ್ದಾಗಲೂ ಪರಿಪೂರ್ಣವಾಗಿರಲಿಲ್ಲ. ಗಂಡಾದಾಗಲೂ ಪರಿಪೂರ್ಣವಾಗಲಿಲ್ಲ. ಹೀಗೆ ನಾನು ಕಂಡುಕೊಂಡ ಅನುಭವಗಳನ್ನೇ ಈ ಕಲಾಕೃತಿಗಳಲ್ಲಿ ಮೂಡಿಸಲು ಯತ್ನಿಸಿದ್ದೇನೆ. ಹೆಣ್ಣು–ಗಂಡು ಇಬ್ಬರೂ ಪರಿಪೂರ್ಣರಲ್ಲ ಎಂಬುದನ್ನು ಪ್ರಕೃತಿಯೇ ನಿರೂಪಿಸಿದೆ. ಅಂತೆಯೇ ಲಿಂಗತ್ವ ಅಲ್ಪಸಂಖ್ಯಾತರ ಜೀವನವೂ ಪ್ರಕೃತಿಯ ಭಾಗವೇ ಆಗಿದೆ’ ಎಂಬುದು ರೂಮಿ ಹರೀಶ್ ಅವರ ಅಭಿಮತ.

‘ನನ್ನ ಕಲಾಕೃತಿಗಳು ವರ್ಣಮಯವಾಗಿವೆ. ಕೆಲವರು ನಿರ್ದಿಷ್ಟ ಬಣ್ಣಗಳನ್ನಷ್ಟೇ ಬಳಸಬೇಕು ಎನ್ನುತ್ತಾರೆ. ಕೆಲವು ಬಣ್ಣಗಳ ಬಳಕೆಯೇ ನಿಷಿದ್ಧ. ಆದರೆ, ಆ ಎಲ್ಲ ಚೌಕಟ್ಟಗಳನ್ನು ಮೀರಿ ನಾನು ಚಿತ್ರಗಳನ್ನು ರಚಿಸಿದ್ದೇನೆ. ನನ್ನ ಕಲಾಕೃತಿಗಳಲ್ಲಿ ಮಂದ ಅಥವಾ ಬೂದು ಬಣ್ಣಗಳಿಲ್ಲ. ನಮ್ಮೆಲ್ಲರ ಜೀವನ ವರ್ಣಮಯವಾಗಿದೆ ಎಂಬುದನ್ನು ಹೇಳಲು ಯತ್ನಿಸಿದ್ದೇನೆ. ಅಂತೆಯೇ ಪುರುಷತ್ವ, ಸ್ತ್ರೀತತ್ವವನ್ನು ಮೀರಿ ಹೊಸ ಪ್ರಪಂಚದ ಸಾಧ್ಯತೆಯನ್ನು ಮನಗಾಣಿಸಬೇಕೆಂಬುದು ನನ್ನಾಸೆ’ ಎನ್ನುತ್ತಾರೆ ಅವರು.

‘ಸಾಮಾನ್ಯವಾಗಿ ಹೂವನ್ನು ಹೆಣ್ಣಿಗೆ, ಮೃದುತ್ವಕ್ಕೆ ಹೋಲಿಸಲಾಗುತ್ತದೆ. ಆದರೆ, ಪ್ರಕೃತಿಯಲ್ಲಿ ಕೆಲವು ಗಂಡು ಹೂವುಗಳೂ ಇವೆ. ಉದಾಹರಣೆಗೆ ಅಲಂಕಾರಿಕವಾಗಿ ಬಳಸುವ ‘ಸ್ವರ್ಗದ ಹಕ್ಕಿ’ ಎನ್ನುವ ಹೂವು. ಅಂತೆಯೇ ಹೂಗುಚ್ಛಗಳಲ್ಲಿ ಬಳಸಲಾಗುವ ಆಂಥೋರಿಯಂ ಕೂಡಾ ಗಂಡು ಹೂವೇ. ನಾನು ಕಂಡುಕೊಂಡಂತೆ ಗಂಡು–ಹೆಣ್ಣು ಇಬ್ಬರಲ್ಲೂ ಸಮಾನ ಅಂಶಗಳಿವೆ. ಆದರೆ, ನಮ್ಮ ಸಮಾಜ ಗಂಡೆಂದರೆ ಹೀಗೇ ಇರಬೇಕು. ಹೆಣ್ಣೆಂದರೆ ಹೀಗೇ ಇರಬೇಕು ಎನ್ನುವ ಚೌಕಟ್ಟು ಹಾಕಿದೆ. ಆದರೆ, ಆ ಚೌಕಟ್ಟುಗಳಾಚೆಗೆ ಬದುಕು ಕಂಡುಕೊಳ್ಳುವ ಬಯಕೆ ನನ್ನದು’ ಎಂದು ತಮ್ಮ ಚಿತ್ರಸರಣಿಯ ಹಿಂದಿನ ಉದ್ದೇಶ ಬಿಚ್ಚಿಡುತ್ತಾರೆ ರೂಮಿ ಹರೀಶ್. 

ಸ್ಥಳ: ನಂ. 1 ಶಾಂತಿರೋಡ್, ಶಾಂತಿನಗರ, ಬೆಂಗಳೂರು.

ಚಿತ್ರ ಪ್ರದರ್ಶನ ಅ. 22ರವರೆಗೆ ಇರುತ್ತದೆ. ಉಚಿತ ಪ್ರವೇಶ.

ರೂಮಿ ಹರೀಶ್ ಅವರ ಕಲಾಕೃತಿ
ರೂಮಿ ಹರೀಶ್ ಅವರ ಕಲಾಕೃತಿ

ರೂಮಿ ಹರೀಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.