ADVERTISEMENT

ಕೆಂಪೇಗೌಡ ಜಯಂತಿ: ಮಾಗಡಿಯ ಮುಕುಟಮಣಿಗೆ ನುಡಿ ನಮನ...

ಮೇಜರ್‌ ಡಾ.ಮುನಿರಾಜಪ್ಪ
Published 27 ಜೂನ್ 2022, 7:44 IST
Last Updated 27 ಜೂನ್ 2022, 7:44 IST
 ನಾಡಪ್ರಭು ಕೆಂಪೇಗೌಡ
ನಾಡಪ್ರಭು ಕೆಂಪೇಗೌಡ   

ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರ ಅವರ 513ನೇ ಜಯಂತಿ ಇಂದು. ಈ ನಿಮಿತ್ತ ನಾಡಿನ ಗಣ್ಯರು, ರಾಜಕೀಯ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ. ಈ ನಿಮಿತ್ತಕೆಂಪೇಗೌಡರ ಬಗ್ಗೆ 2019ರ ಜೂನ್‌ನಲ್ಲಿ ಪ್ರಕಟಿಸಿದ ಲೇಖನವನ್ನು ಮರು ಓದಿಗೆ ನೀಡಲಾಗಿದೆ.

***

ದಕ್ಷಿಣ ಕರ್ನಾಟಕದ ಮಹತ್ವದ ಸ್ಥಳವಾಗಿ, ಚರಿತ್ರೆ ಮತ್ತು ಸಾಂಸ್ಕತಿಕ ಹಿರಿಮೆಗೆ ಹೆಸರಾದ ಮಾಗಡಿ ಭವ್ಯ ಪರಂಪರೆಯಿಂದ ಮೆರೆದಿರುವ ಊರು. ಇದಕ್ಕೊಂದು ಸುಂದರ ರೂಪ ನೀಡುವಲ್ಲಿ ಹಲವು ರಾಜಮನೆತನಗಳು ಶ್ರಮಿಸಿವೆ. ಅವರಲ್ಲಿ ಕೆಂಪೇಗೌಡರು ಮತ್ತವರ ವಂಶಜರು ಪ್ರಮುಖರು.

ADVERTISEMENT

ಮಾಗಡಿ ಎಂದರೆ ಸುವಾಸನೆ ಬೀರುವ ಮಲ್ಲಿಗೆ ಹೂ, ನಿಬ್ಬೆರಗಾಗುವ ಸಾಂಸ್ಕೃತಿಕ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುವ ಮಣ್ಣು. ಇದು ಕಾಲಚಕ್ರ ಉರುಳಿದಂತೆ ದುರ್ಗರಾಷ್ಟ್ರ, ಮಾಕುಟಿಪುರ, ಕೃಷ್ಣರಾಜನಗರ, ಮೈನಾಯಕನದುರ್ಗ ಮುಂತಾಗಿ ಕರೆಸಿಕೊಂಡಿದೆ. ಇಲ್ಲಿನ ದಟ್ಟವಾದ ಕೇದಿಕಾರಣ್ಯ ಬೆಟ್ಟಗುಡ್ಡಗಳ ಸಾಲು, ನಿಸರ್ಗದತ್ತ ಗುಹೆಗಳು, ಅಸಮತಟ್ಟಾದ ಭೂ ರಚನೆ, ಸಣ್ಣ ಪುಟ್ಟ ಝರಿಗಳು, ಶಿಲಾಯುಗದಲ್ಲೇ ಮಾನವ ನೆಲೆಸಲು ಆಸರೆ. ಸಾವಿರಾರು ವರ್ಷಗಳ ಹಿಂದಿನ ಕಬ್ಬಿಣ ಯುಗದ ನೂರಾರು ಬೃಹತ್ ಶಿಲಾ ಗೋರಿಗಳನ್ನು ಇಂದಿಗೂ ನೋಡಬಹುದು.

ಫಾದರ್ ಹೆರಾಸ್ ಅವರು ತಮ್ಮ ಬರಹದಲ್ಲಿ, ‘ಸಿಂಧೂ ಕಣಿವೆಯ ನಾಗರಿಕತೆಯ ಸಮಕಾಲೀನ ಚರಿತ್ರೆಯ ಕುರುಹುಗಳು ಇಲ್ಲಿವೆ. ಇಲ್ಲಿನ ಜನಾಂಗದ ಸಮಾಜ, ಧರ್ಮ, ಕಸುಬು, ರೂಢಿ, ಸಂಪ್ರದಾಯ, ನಂಬಿಕೆ, ಕಲೆ ಮುಂತಾದ ವಿಶಿಷ್ಟ ಸಂಸ್ಕೃತಿ ಮಹತ್ವದ ಇತಿಹಾಸ. ನೂರಾರು ಮಠಗಳ ಹತ್ತಾರು ಅಗ್ರಹಾರಗಳು ಬ್ರಹ್ಮಪುರಿ, ಮಹಾಮನೆ, ನಿಷಿದಿ ಗುಡ್ಡಗಳು ಇತಿಹಾಸದಲ್ಲಿ ಲೀನವಾದ ಹಲವಾರು ಪ್ರಾಚೀನಪಟ್ಟಣಗಳಿದ್ದ ಕುರುಹುಗಳಿವೆ’ ಎಂದುಉಲ್ಲೇಖಿಸಿದ್ದಾರೆ.

‘ಕ್ರಿ.ಶ. ನಾಲ್ಕನೆಯ ಶತಮಾನದಿಂದ ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕತಿಕ ಚರಿತ್ರೆಗೆ ಅಡಿಪಾಯ ಹಾಕಿದ ತಲಕಾಡಿನ ಗಂಗರು ಮಾಗಡಿಸೀಮೆಯನ್ನಾಳಿದ್ದಾರೆ. ನೆರೆಯ ಕುಣಿಗಲ್ ಅವರ ಆಡಳಿತ ಕೇಂದ್ರವಾಗಿತ್ತು. ನಂತರದಲ್ಲಿ ಚಾಲುಕ್ಯರ ವಿಮಲಾದಿತ್ಯ, ಅಮೋಘ ವರ್ಷನ ಮಗಳಾದ ಚಂದ್ರಲಬ್ಬೆ ಈ ಸೀಮೆಯ ರಾಜ್ಯಪಾಲರಾಗಿ ಆಳಿದ್ದಾರೆ’ ಎಂದು ಬರೆದಿದ್ದಾರೆ.

ಕೋಟೆ

ಚೋಳರ ಕಾಲದಲ್ಲಿ ಕುಣಿಗಲ್, ರಾಜೇಂದ್ರ ಚೋಳಪುರವಾಗಿತ್ತು. ಮಾಗಡಿ ಪ್ರದೇಶ ರಾಜೇಂದ್ರ ಚೋಳ ಒಳನಾಡು ಮತ್ತು ನೆಲಮಂಗಲ ಮಣ್ಣೆನಾಡಿನಲ್ಲಿ ಸೇರಿಹೋಗಿತ್ತು. ಗಂಗವಾಡಿಯಿಂದ ಚೋಳರನ್ನು ಓಡಿಸಿದವರೇ ಹೊಯ್ಸಳರು. ಇವರ ಶಿಲ್ಪಕಲಾ ಕೊಡುಗೆಗಳು ಜಗತ್ತಿಗೆ ಮಾದರಿಯಾಗಿವೆ. ಹೊಯ್ಸಳರ ಕಾಲದ ಹಲವಾರು ಶಾಸನಗಳು ಸಂಕೀಘಟ್ಟ, ಕರ್ಲಮಂಗಲ, ನಾರಸಂದ್ರ, ಗಜಗಾರಕುಪ್ಪೆ, ವಿರುಪಾಪುರ, ಬಿಸ್ಕೂರು, ಹುಳ್ಳೇನಹಳ್ಳಿ ಮುಂತಾದ ಸ್ಥಳಗಳಲ್ಲಿವೆ.

ಹೊಯ್ಸಳ ವಿಜಯನಗರದ ನಡುಗಾಲಕ್ಕೆ ಮಾಗಡಿ ಕಾಕತೀಯರ ಆಳ್ವಿಕೆಗೆ ಒಳಪಟ್ಟಿದ್ದು ಅಚ್ಚರಿಯ ಸಂಗತಿ. ಇದಕ್ಕೆ ಸಾಕ್ಷ್ಯಾಧಾರಗಳಿವೆ. ಆ ಕಾಲಕ್ಕೆ ಹುತ್ರಿದುರ್ಗ ಪಾಳೆಪಟ್ಟುಗಳ ಆಡಳಿತಕ್ಕೆ ಒಳಪಟ್ಟಿತ್ತು. ಕಾಕತೀಯರ ಪ್ರತಾಪರುದ್ರದೇವ ಶಿವಗಂಗೆಯಲ್ಲಿ ಅನಂತಪುರ ಅಗ್ರಹಾರ ಸ್ಥಾಪಿಸಿದ್ದಾನೆ. ಪಾಲ್ಕುರಿಕೆಯಿಂದ ಕಲ್ಯಕ್ಕೆ ಬಂದಿರುವ ತ್ರಿಭಾಷಾ ಪಂಡಿತ
ಸೋಮನಾಥಾರಾಧ್ಯರ ಸಂಬಂಧಗಳು, ಸಾಹಿತ್ಯ ಧರ್ಮ, ಸಂಸ್ಕೃತಿಯ ಅಧ್ಯಯನಕ್ಕೆ ಕೊಂಡಿಯಂತಿದೆ. ವಿಜಯನಗರ
ಸ್ಥಾಪಕರಾದ ಹರಿಹರ ಬುಕ್ಕರು ಮಾಗಡಿ ಸೀಮೆಯವರೆಂಬ ವಿಚಾರ ಸಂಶೋಧನೆ ಮೂಲಕ ಇನ್ನೂ ಗಟ್ಟಿಗೊಳ್ಳಬೇಕಾಗಿದೆ.

ವಿಜಯನಗರದ ಸಾಮಂತರಾಗಿ, ಸಾಮಾನ್ಯ ರೈತ ಕುಟುಂಬದಿಂದ ಬಂದು, ತಮ್ಮ ಸಜ್ಜನಿಕೆ, ಪ್ರಜಾಹಿತ ಕಾರ್ಯಗಳಿಂದಲೇ ಧರ್ಮ ಪ್ರಭುಗಳಾಗಿ ಏಳ್ಗೆಗೆ ಬಂದ ಯಲಹಂಕದ ಪ್ರಭುಗಳಿಗೆ ಮಾಗಡಿ ಕಾಯಂ ನೆಲೆ. ಅವರ ರಾಜಧಾನಿ ಕೂಡ. ನಂತರ ಸಾವನದುರ್ಗದ ನೆಲೆಪಟ್ಟಣ ಇವರರಾಜಧಾನಿಯಾಗಿತ್ತು.

ಯಲಹಂಕ ವಂಶಸ್ಥರಾದ ಹಿರಿಯ ಕೆಂಪೇಗೌಡ ನವ ಬೆಂಗಳೂರು ಸ್ಥಾಪಿಸಿ ವಿಜಯನಗರ ಅರಸರಿಂದ ಶಹಭಾಷ್ ಗಿರಿ ಪಡೆದನು. ಇಮ್ಮಡಿ ಕೆಂಪೇಗೌಡ ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಪ್ರಸಿದ್ಧಿಗೊಳಿಸಿದ ಕೀರ್ತಿಗೆ ಪಾತ್ರನಾದನು.

ಕ್ರಿ.ಶ. 1638ರಲ್ಲಿ ಬಿಜಾಪುರದ ಸುಲ್ತಾನನ ಸೇನೆಯಿಂದ ಸೋತ ಇಮ್ಮಡಿ ಕೆಂಪೇಗೌಡ ಬೆಂಗಳೂರನ್ನು ಸುಲ್ತಾನನಿಗೆ ಒಪ್ಪಿಸಿ ಮಾಗಡಿಯತ್ತ ಬರಬೇಕಾಯಿತು. ಇದು ಯಲಹಂಕ ವಂಶಸ್ಥರ ರಾಜಕೀಯ ಸೋಲು. ಆದರೆ ಮಾಗಡಿ ಪ್ರದೇಶದ ನಿಜವಾದ ಗೆಲುವು.

ಇಲ್ಲಿಯವರೆಗೆ ಸೈನಿಕ ನೆಲೆಯಾಗಿ ಗಮನ ಸೆಳೆದಿದ್ದ ಮಾಗಡಿ, ಜನಜೀವನಕ್ಕೆ ಅನುಕೂಲಕರ ಸೌಲಭ್ಯ
ಗಳೊಂದಿಗೆ ಬೆಳೆಯತೊಡಗಿತು. ಕೆರೆ, ಕಟ್ಟೆ, ಕಲ್ಯಾಣಿ, ದೇವಾಲಯ ನಿರ್ಮಾಣವಾದವು. ದಾನ ದತ್ತಿಗಳ ಮೂಲಕ ಕೃಷಿ ಚಟುವಟಿಕೆಗಳು ಬೆಳೆದವು. ಆಯಗಾರವ್ಯವಸ್ಥೆಯಡಿಯಲ್ಲಿ ಊರುಗಳು ಸ್ವಾವಲಂಬಿಗಳಾಗಿ ಪುಟ್ಟ ಗಣರಾಜ್ಯದಂತೆ ಕಾಣತೊಡಗಿದವು. ಪ್ರತಿಯೊಂದು ಗ್ರಾಮ ಹಲವು ಕಸುಬುದಾರರ ಸಮೂಹ. ಇದು ಬೇಸಾಯಕ್ಕೆ ಬೇಕಾಗಿತ್ತು. ವಿವಿಧ ಜಾತಿ ಧರ್ಮಗಳ ನಡುವೆ ಸುಂದರ ಬದುಕಿನ ಬೆಸುಗೆ. ಶಾಂತಿ, ಸಹೋದರತ್ವ, ಸಹಜೀವನ ಸಹಜವಾಗಿ ಬೆಳೆಯತೊಡಗಿತು.

ಈಗ ಹುಲಿಕಲ್ಲಿನಲ್ಲಿರುವ ಇವರ ಸೋದರ ಸಂಬಂಧಿ ವಂಶಸ್ಥರಿಗೆ ಕೆಂಪವೀರಪ್ಪಗೌಡರು ಬರೆದ ಓಲೆಗರಿಯಿದೆ. ರೈತ ಸೈನಿಕ
ವ್ಯವಸ್ಥೆಯಲ್ಲಿ ಪ್ರಾಬಲ್ಯಕ್ಕೆ ಬಂದ ಕೆಂಪೇಗೌಡರುಪ್ರಜಾನುರಾಗಿಗಳು. ಜನಸಾಮಾನ್ಯರ ನೋವು- ನಲಿವುಗಳಲ್ಲಿ ಭಾಗಿಯಾಗಿದ್ದರು. ಅವರ ಬದುಕಿಗೆ ಸೌಲಭ್ಯ ಕಲ್ಪಿಸುವತ್ತ ಗಮನ ಹರಿಸಿದರು. ಜನರ ಬಾಯಲ್ಲಿ ಪ್ರಭುಗಳೆಂದೇ ಕರೆಸಿ ಕೊಂಡರು. ಬೌದ್ಧ, ಜೈನ, ವೈಷ್ಣವ ಮತ್ತು ಶೈವಧರ್ಮಕ್ಕೆ ಈ ಪ್ರದೇಶ ಆಸರೆಯಾಗಿದ್ದು ಇಲ್ಲಿರುವ ಮಠಮಾನ್ಯಗಳು ಕರ್ನಾಟಕದ ಧಾರ್ಮಿಕ ಪರಂಪರೆಗೆ ಸಾಕ್ಷಿಗುಡ್ಡೆ
ಗಳಂತಿವೆ. ಬಿಸ್ಕೂರು, ಸಂಕೀಘಟ್ಟ, ಕೊತ್ತಗೆರೆ, ಹೂಜಿಗಲ್ಲು, ಕಲ್ಯಾ, ಸಾತನೂರು, ಸಾವನದುರ್ಗ, ಮಾನಗಲ್ಲು, ಹರ್ತಿ, ಶಿವಗಂಗೆ ಪ್ರಸಿದ್ಧ ಸಾಂಸ್ಕೃತಿಕ ನೆಲೆಗಳಾಗಿ ಚರಿತ್ರೆಯ ಪುಟದಲ್ಲಿ ರಾರಾಜಿಸುತ್ತಿವೆ. ಕೆಂಪೇಗೌಡರ ವಂಶಜರ ಹುಲಿಕಲ್ಲು ದೊರೆ
ಮನೆಯಲ್ಲಿದೆ.

ಕೆಂಪೇಗೌಡರ ರಕ್ಷಣಾತ್ಮಕ ರಾಜಧಾನಿ ನೆಪಟ್ನದ ಕುರುಹುಗಳು ಸಾವನದುರ್ಗದಲ್ಲಿವೆ. ವಿಶ್ವವಿಖ್ಯಾತ ಔಷಧೀಯ ಸಸ್ಯಗಳ ನೆಲೆಯಾಗಿ ಸಾವನದುರ್ಗ ಕಂಗೊಳಿಸುತ್ತಿದೆ. ಸಾವನದುರ್ಗದಲ್ಲಿ ತಯಾರಾಗುತ್ತಿದ್ದ ಯುದ್ಧ ಶಸ್ತ್ರಾಸ್ತ್ರಗಳಿಗೆ ಉತ್ತರ ಭಾರತದಲ್ಲಿ ಬೇಡಿಕೆ ಇತ್ತೆಂದು ಉಲ್ಲೇಖಗಳಿವೆ.

ಮಾದರಿಯಾಗದ ಮಾಗಡಿ:ಇಂತಹ ಭವ್ಯ ಇತಿಹಾಸ ಪರಂಪರೆಯುಳ್ಳ ಮಾಗಡಿ ಈಗ ಏನಾಗಿದೆ? ಬೆಂಗಳೂರಿಗೆ 55 ಕಿ.ಮೀ. ದೂರದ ಮಾಗಡಿ ಪಟ್ಟಣ ಮಾದರಿಯಾಗಿ ಬೆಳೆದಿಲ್ಲ. ರಸ್ತೆ, ಒಳಚರಂಡಿ, ಮಾರುಕಟ್ಟೆಗಳು, ಉದ್ಯಾನ, ಸುಸಜ್ಜಿತ ಶಿಕ್ಷಣ ಸಂಸ್ಥೆಗಳಿಲ್ಲದೆ ಸೊರಗಿದೆ. ಇಲ್ಲಿ ಜನರ ಕುಡಿಯುವ ನೀರಿನ ಬವಣೆ ತಪ್ಪಿರುವುದು ಇತ್ತೀಚೆಗಷ್ಟೇ. ಅತ್ಯವಶ್ಯಕವಾದ ಕೃಷಿ ಮಾರುಕಟ್ಟೆ, ಸಾಹಿತ್ಯ ಸಂಸ್ಕತಿ ಚಟುವಟಿಕೆಗಳಿಗಾಗಿ ಸುಸಜ್ಜಿತವಾದ ಸಮುದಾಯ ಭವನ, ರಾಜ್ಯಮಟ್ಟದ ಗ್ರಂಥಾಲಯ, ಪ್ರಾಕ್ಚಾರಿತ್ರಿಕ ಇಲಾಖೆ, ಉದ್ಯಾನ ರಾಜಬೀದಿಗಳಿರಬೇಕಾಗಿತ್ತು.

ಮಾಗಡಿ ದನಗಳ ಜಾತ್ರೆಗೆ ಚಾರಿತ್ರಿಕ ಮಹತ್ವವಿದೆ. ಕರ್ನಾಟಕದಲ್ಲೇ ವಿನೂತನವಾದ ನೀರು ನೆರಳಿನ ಸೌಲಭ್ಯವುಳ್ಳ ಕಾಯಂ ಜಾತ್ರೆ ಮೈದಾನದ ತೋಪು ಸಿದ್ಧಗೊಳ್ಳಬೇಕಾಗಿದೆ. ಕೆರೆ ಕಲ್ಯಾಣಿ ಕೋಟೆಗಳು, ಮಠಗಳು, ದೇವಾಲಯಗಳು, ಶಿಲ್ಪಾಧಾರಗಳು ಐತಿಹಾಸಿಕ ಸ್ಮಾರಕಗಳಾಗಿ ಉಳಿಯಬೇಕಾಗಿದೆ.

ಮಾಗಡಿ, ಶಿವಗಂಗೆ, ಕಲ್ಯ, ಸಾವನದುರ್ಗ, ಹುತ್ರಿದುರ್ಗ, ಹುಲಿಕಲ್ಲು, ಸಂಕೀಘಟ್ಟ, ಸಾತನೂರು, ಶಿವಗಂಗೆ, ಬಿಸ್ಕೂರು, ಮಂಚನಬೆಲೆ, ಮುಂತಾದವು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಗೊಳ್ಳಬೇಕು. ಮಾಗಡಿಯಲ್ಲಿರುವ ಸೋಮನಾಥ ಮತ್ತು ಗವಿ ಗಂಗಾಧರನ ಗುಡಿ, ಕೋಟೆ ಪುನರುಜ್ಜೀವನಗೊಳ್ಳಬೇಕು. ಅತ್ಯಂತ ಪುರಾತನ ಕಾಲಾವತಿ ಪಟ್ಟಣ ದೇಶದ ಪ್ರಪ್ರಥಮ ಹೂವಿನ ಬೆಟ್ಟವಾಗಿಸಬೇಕು. ಸಾವನದುರ್ಗದ ಔಷಧೀಯ ಸಸ್ಯಗಳೊಂದಿಗೆ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಬೇಕಾಗಿದೆ. ಬೆಂಗಳೂರು ನಗರದ ಸಮಸ್ಯೆಗೆ ಶಾಶ್ವತ ಪರಿಹಾರ ಎಂಬಂತೆ ಮಾಗಡಿ ಉಪನಗರವಾಗಿ ಬೆಳೆಯಬೇಕಾಗಿದೆ.

ಮಾಗಡಿಗೆ ಜೀವನದಿಗಳ ಆಶ್ರಯವಿಲ್ಲ. ಮಳೆ ಆಧರಿತ ಕೆರೆಕಟ್ಟೆಗಳೇ ಜನರ ಜೀವನಾಧಾರ. ಕೆರೆ ಕಟ್ಟೆಗಳ ಜೀರ್ಣೋದ್ಧಾರದೊಂದಿಗೆ ಮಳೆನೀರಿನ ಸಂಗ್ರಹಕ್ಕಾಗಿ ಯೋಜನೆಗಳು ತಯಾರಾಗಬೇಕು. ಹೇಮಾವತಿ, ಮೇಕೆದಾಟು ಯೋಜನೆ ಜಾರಿಗೆ ಜನಪರ ಹೋರಾಟ ನಡೆಯಬೇಕಿದೆ. ತಾಲ್ಲೂಕಿನಲ್ಲಿ ನಿರ್ಮಾಣಗೊಂಡಿರುವ ಮೂರು ಅಣೆಕಟ್ಟೆಗಳಿಂದ ಭಾಗಶಃ ನೀರಾದರೂ ಏತ ನೀರಾವರಿ ಯೋಜನೆ ಮೂಲಕ ಬರಡು ಭೂಮಿಗೆ ಹರಿದರೆ ನ್ಯಾಯ ಸಮ್ಮತ.

ಇತಿಹಾಸ ಪ್ರಸಿದ್ಧ ಮಾಗಡಿಯಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸಿರುವುದು ಸಂತೋಷದಸಂಗತಿ. ಕೆಂಪೇಗೌಡರ ಆದರ್ಶ, ಜನಪರ ಚಿಂತನೆಗಳನ್ನುಪ್ರತಿಷ್ಠಾಪಿಸುವುದು ತಕ್ಷಣದ ಅವಶ್ಯಕತೆ.ಇತ್ತೀಚೆಗೆ ಗಮನ ಸೆಳೆದಿರುವ ಕೆಂಪಾಪುರದೊಂದಿಗೆ ಕೆಂಪೇಗೌಡರ ಕಾಲದ ವಿಲ್ಲಾ ಸ್ಮಾರಕಗಳೂ ಕ್ರಿಯಾಶೀಲವಾಗಿ ಸಂರಕ್ಷಣೆಯಾಗಬೇಕಿದೆ. ಕಾಗದದ ಮೇಲಿರುವ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ
ಕ್ರಿಯಾಶೀಲವಾಗಬೇಕಿದೆ.

ಕವಿ, ಲೇಖಕರ ನಂಟು:ಮಾಗಡಿ ಸೀಮೆಯ ಸಾಹಿತ್ಯ ಸಿರಿ ಓದುಗರಿಗೆ ಅಚ್ಚರಿ. ಕುಮಧೇಂಧು ಸಿರಿಭೂವಲಯ ಸಮಂತಭದ್ರಸ್ವಾಮಿ, ಎರಡನೇ ಶಿವಮಾರ ಎರೆಮಪ್ಪ, ಪದ್ಮಕವಿ, ಚಿಕ್ಕಪದ್ಮಣಶೆಟ್ಟಿ, ಜೀವಸೇನವೃತಿ, ಶೋಚನೆ ರಂಗದಾಸ, ತಿರುಮಲೆ ಶ್ರೀನಿವಾಸ ಕವಿ, ದೇವಲ್ ದೇವಣ್ಣ, ಬತ್ತೀಸಪುತ್ಥಳಿ. ಬಸವೇಲಿಂಗ ಕವಿ, ಗಂಗಕವಿ, ಇಮ್ಮಡಿ ಹಿರಿಯ ಕೆಂಪೇಗೌಡ, ಸದ್ಗುರು ನಂಜೇಶ, ಏಕಾಂಬರ ದೀಕ್ಷಿತ್, ಕಳಲೆನಂಜರಾಜ, ಸಿದ್ದನಂಜೇಶ ಸಹಿತ ಹಲವು ಪ್ರಸಿದ್ಧ ಕವಿಗಳು, ಲೇಖಕರು ಈ ನೆಲದ ನಂಟು ಹೊಂದಿದ್ದಾರೆ. ಈ ಹಿನ್ನೆಲೆಯೊಂದಿಗೆ ಇಲ್ಲಿ ಸಂಸ್ಕತ ವಿಶ್ವವಿದ್ಯಾಲಯ ಅರಳಬೇಕಾಗಿದೆ.

ಕೆರೆ ಕಟ್ಟಿಸಿದ ‘ಮಳೆ ಕೆಂಪರಾಯ’

ಇಮ್ಮಡಿ ಕೆಂಪೇಗೌಡರ ನಂತರ ಮುಮ್ಮಡಿ ಕೆಂಪೇಗೌಡರು, ಕೆಂಪಸಾಗರ ಕೆರೆ ಕಟ್ಟಿಸಿ ‘ಮಳೆ ಕೆಂಪರಾಯ’ ಎಂದೇ ಜನಪ್ರಿಯರಾದರು. ನಂತರ ದೊಡ್ಡವೀರಪ್ಪ ಗೌಡರು, ಕೆಂಪವೀರಪ್ಪಗೌಡರು ಮಾಗಡಿಯನ್ನಾಳಿದರು. ಇಮ್ಮಡಿ ಹಿರಿಯ ಕೆಂಪೇಗೌಡ ಕುಣಿಗಲ್ ಪ್ರದೇಶವನ್ನು ನೋಡಿಕೊಂಡಿರುವ ಆಧಾರಗಳಿವೆ. ದಳವಾಯಿಗಳ ನಾಯಕತ್ವದ ಮೈಸೂರಿನ ಸೇನೆ ಕೆಂಪವೀರಪ್ಪಗೌಡರನ್ನು ಬಂಧಿಸಿ ಶ್ರೀರಂಗಪಟ್ಟಣದ ಸೆರೆಯಲ್ಲಿಟ್ಟಿತು. ಅಲ್ಲೇ ಕೊನೆಯುಸಿರೆಳೆದ ಕೆಂಪವೀರಪ್ಪಗೌಡರು ಮಾಗಡಿಯನ್ನಾಳಿದ ಕೊನೆಯ ನಾಡಪ್ರಭು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.