ADVERTISEMENT

ಪಿರಮಿಡ್ಡುಗಳು ಕೌತುಕ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 19:30 IST
Last Updated 19 ಅಕ್ಟೋಬರ್ 2019, 19:30 IST
ಪಿರಮಿಡ್
ಪಿರಮಿಡ್   

ಪಿರಮಿಡ್ಡುಗಳು ಪುರಾತನ ನಾಗರಿಕತೆಗಳು ನಿರ್ಮಿಸಿ, ಬಿಟ್ಟುಹೋದ ಮಹೋನ್ನತ ಸ್ಮಾರಕಗಳು. ವರ್ಷಗಳಿಂದ ಅವುಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದರೂ, ವಿದ್ವಾಂಸರು ಅವುಗಳ ರಹಸ್ಯವನ್ನು ಪೂರ್ತಿಯಾಗಿ ಬಗೆಹರಿಸಿಲ್ಲ. ಪಿರಮಿಡ್ಡುಗಳನ್ನು ಕಟ್ಟಿದ್ದು ಏಕೆ, ಅವುಗಳನ್ನು ಹೇಗೆ ಕಟ್ಟಲಾಯಿತು ಎಂಬುದು ಗೊತ್ತಾಗಿಲ್ಲ.

ಮೂರು ಅಥವಾ ಅದಕ್ಕಿಂತ ಹೆಚ್ಚಿನ ತ್ರಿಕೋನಾಕಾರದ ಮೈ ಇರುವ ರಚನೆಗಳು ಈ ಪಿರಮಿಡ್ಡುಗಳು. ತ್ರಿಕೋನಾಕಾರದ ಮೇಲ್ಮೈಗಳು ಪಿರಮಿಡ್ಡುಗಳು ಮೇಲ್ಭಾಗದಲ್ಲಿ ಒಂದನ್ನೊಂದು ಸಂಧಿಸುತ್ತವೆ. ಹೆಚ್ಚಿನ ಪಿರಮಿಡ್ಡುಗಳು ತಳಭಾಗ ಚೌಕಾಕಾರದಲ್ಲಿ ಇದ್ದು, ಅವು ತ್ರಿಕೋನಾಕಾರದ ನಾಲ್ಕು ಮೈಗಳನ್ನು ಹೊಂದಿರುತ್ತವೆ.

ಪಿರಮಿಡ್ಡುಗಳಪಾಲಿನ ಸ್ವರ್ಗ ಅಂದರೆ ಈಜಿಪ್ಟ್‌. ಅಲ್ಲಿನ ಸಾಮ್ರಾಟರ ಗೋರಿಗಳ ರೂಪದಲ್ಲಿ, ನೈಲ್ ನದಿಯ ಪಶ್ಚಿಮ ದಂಡೆಯಲ್ಲಿ ಪಿರಮಿಡ್ಡುಗಳನ್ನು ನಿರ್ಮಿಸಲಾಯಿತು. ಸೂರ್ಯ ಮುಳುಗುವ ಸ್ಥಳದಲ್ಲಿ ‘ಮೃತರ ಸಾಮ್ರಾಜ್ಯ’ ಇರುತ್ತದೆ ಎಂದು ಈಜಿಪ್ಟ್‌ನ ಪುರಾಣ ಹೇಳುತ್ತದೆ. 2008ರ ವೇಳೆಗೆ ಈಜಿಪ್ಟ್‌ನಲ್ಲಿ ಒಟ್ಟು 135 ಪಿರಮಿಡ್ಡುಗಳನ್ನು ಪತ್ತೆ ಮಾಡಲಾಗಿದೆ. ಅವುಗಳ ಪೈಕಿ ಅತ್ಯಂತ ಹಳೆಯದ್ದೆಂದರೆ, ಜೊಸೆರ್‌ನ ‘ಸ್ಟೆಪ್‌ ಪಿರಮಿಡ್’. ಇದನ್ನು ಕ್ರಿಸ್ತಪೂರ್ವ 2630ರಿಂದ 2611ರ ಸುಮಾರಿಗೆ ನಿರ್ಮಿಸಲಾಯಿತು. ಇದನ್ನು ಪಿರಮಿಡ್ಡುಗಳ ಮಹಾನ್ ವಾಸ್ತುಶಿಲ್ಪಿ ಇಮ್ಹೂಟೆಪ್‌ ನಿರ್ಮಿಸಿದ.

ADVERTISEMENT

ಇದರ ನಿರ್ಮಾಣ ಆದರ ನಂತರ, ಇನ್ನಷ್ಟು ದೊಡ್ಡದಾದ ಹಾಗೂ ಇನ್ನಷ್ಟು ಭವ್ಯವಾದ ಪಿರಮಿಡ್ಡುಗಳನ್ನು ನಿರ್ಮಿಸಲಾಯಿತು. ಗಿಜಾದಲ್ಲಿ ಅತ್ಯಂತ ದೊಡ್ಡದಾದ ಪಿರಮಿಡ್ಡುಗಳು ಇವೆ. ಗಿಜಾದಲ್ಲಿನ ‘ಗ್ರೇಟ್‌ ಪಿರಮಿಡ್’ಅನ್ನು ನಿರ್ಮಿಸಲು 20 ವರ್ಷಗಳು ಬೇಕಾದವು. ಇದಕ್ಕಾಗಿ ಸಾವಿರಾರು ಕೆಲಸಗಾರರು ಕೆಲಸ ಮಾಡಿದ್ದರು. ತನ್ನ ನಿರ್ಮಾಣದ ನಂತರ ಇದು 3,800 ವರ್ಷಗಳ ಕಾಲ ವಿಶ್ವದ ಅತಿದೊಡ್ಡ ಕಟ್ಟಡವಾಗಿತ್ತು.

146.5 ಮೀಟರ್‌ ಎತ್ತರ ಇರುವ ಇದು ವಿಶ್ವದ ಅತ್ಯಂತ ಎತ್ತರದ ಪಿರಮಿಡ್ ಕೂಡ ಹೌದು. ಕಲ್ಲು ಮತ್ತು ಸುಟ್ಟ ಇಟ್ಟಿಗೆಗಳಿಂದ ಪಿರಮಿಡ್ಡುಗಳನ್ನು ನಿರ್ಮಿಸಲಾಗಿದೆ. ಸುಣ್ಣದಕಲ್ಲಿನ ಗಾರೆ ಇವಕ್ಕಿದೆ. ಮರುಭೂಮಿಯ ನಡುವೆ, ಕಲ್ಲಿನ ಕ್ವಾರಿಗಳಿಂದ ಬಹುದೂರದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ.ಒಂದೊಂದು ಕಲ್ಲು ಕೂಡ 2.5 ಟನ್ ಭಾರ ಇರುವಾಗ, ಅವುಗಳನ್ನು ಮರುಭೂಮಿಯಲ್ಲಿ ಸಾಗಿಸಿದ್ದು ಹೇಗೆ ಎಂಬುದು ಇತಿಹಾಸಕಾರರನ್ನು ಇಂದಿಗೂ ಒಗಟಾಗಿ ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.