ಹಳ್ಳಿಯ ಜನರ ಕಷ್ಟಗಳಿಗೆ ದನಿಯಾಗಬೇಕಾದ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾದ ಗ್ರಾಮ ಸಭೆಗಳು ಕೋಲಾರ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಮುಖಂಡರ ಪ್ರತಿಷ್ಠೆಯ ಪ್ರದರ್ಶನಕ್ಕೆ ವೇದಿಕೆಗಳಾಗಿ ಬಳಕೆಯಾಗುತ್ತಿವೆ.
ಗ್ರಾಮ ಪಂಚಾಯಿತಿಯ ಬಹುತೇಕ ಪ್ರತಿನಿಧಿಗಳೂ ಮುಖಂಡರ ಮರ್ಜಿಯಲ್ಲೇ ತಮ್ಮನ್ನು ಗುರುತಿಸಿಕೊಳ್ಳುವ ಸೀಮಿತ ವ್ಯಕ್ತಿತ್ವದವರೇ ಆಗಿರುವುದರಿಂದ, ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಸಭೆಗಳ ಘನತೆಗೂ ಚ್ಯುತಿ ಬರುತ್ತಿದೆ, ಗ್ರಾಮ ಪಂಚಾಯಿತಿ ಮೇಲಿನ ಸಂಸ್ಥೆಗಳ ಬಹುತೇಕ ಜನಪ್ರತಿನಿಧಿಗಳು ಗ್ರಾಮ ಸಭೆಗಳನ್ನು ತಮ್ಮ ಸವಾರಿ ಕುದುರೆಗಳಂತೆ, ಪ್ರಚಾರ ಕಾರ್ಯಕ್ರಮಗಳಂತೆ ಭಾವಿಸಿರುವುದು ಎದ್ದು ಕಾಣುತ್ತಿದೆ.
ಏರ್ಪಾಡಾದ ಸಭೆಗಳು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ನಡುವಿನ ವಾಗ್ವಾದಕ್ಕೆ ಸ್ಥಳ ಮತ್ತು ಸಮಯಾವಕಾಶವನ್ನು ಗುತ್ತಿಗೆಗೆ ನೀಡಿದ ರೀತಿಯಲ್ಲಿ ನಡೆದು, ರದ್ದಾಗುತ್ತಿರುವುದು ಸದ್ಯದ ವಿಪರ್ಯಾಸ. ಹಳ್ಳಿ ಮತ್ತು ಹಳ್ಳಿ ಜನರ ಸಮಸ್ಯೆಗಳ ಕುರಿತ ಗಂಭೀರ ಚರ್ಚೆಗಳು ನಡೆಯಬೇಕಾಗಿರುವ ಸ್ಥಳದಲ್ಲಿ ರಾಜಕೀಯ ಪ್ರೇರಿತವಾದ ಧರಣಿ, ಪ್ರತಿಭಟನೆಯ ಪ್ರಹಸನಗಳು ನಡೆಯುತ್ತಿವೆ.
ಜನರ ಕಷ್ಟಗಳ ಹೆಸರು ಹೇಳುತ್ತಲೇ ಮೇಲಿನ ಹಂತದ ಜನಪ್ರತಿನಿಧಿಗಳು, ಅವರ ಬೆಂಬಲಿಗ ಮುಖಂಡರು ಗ್ರಾಮ ಸಭೆಯ ಮುಂದೆ ಧರಣಿ–ಪ್ರತಿಧರಣಿಗಳನ್ನು ಹಮ್ಮಿಕೊಳ್ಳುತ್ತಿರುವುದರಿಂದ ಜನರಲ್ಲೂ ಆಕ್ರೋಶ ಹೆಚ್ಚಾಗುತ್ತಿದೆ. ಮುಖಂಡರ ಭಾಷಣಗಳು, ಮರ್ಜಿ, ಮಸಲತ್ತುಗಳಿಗೆ ಮಾತ್ರವೇ ಗ್ರಾಮ ಸಭೆಗಳು ನಡೆಯುವುದಾದರೆ ಬೇಡವೇ ಬೇಡ ಎನ್ನುತ್ತಿದ್ದಾರೆ ಹಳ್ಳಿ ಜನ.
ರಾಜಕೀಯ ಮೇಲಾಟ
ಅಕ್ಟೋಬರ್ 17ರಂದು ಕೆಜಿಎಫ್ ವಿಧಾನಸಭಾ ಕ್ಷೇತ್ರದ ಮಾರಿಕುಪ್ಪ ಮತ್ತು ಪಾರಂಡಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಏರ್ಪಾಡಾಗಿದ್ದ ಗ್ರಾಮ ಸಭೆಗಳು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ವೈಯಕ್ತಿಕ ಪ್ರತಿಷ್ಠೆಗಳ ಪ್ರದರ್ಶನಕ್ಕೆ ಮೀಸಲಾದ ಪರಿಣಾಮ, ವಾಗ್ವಾದ ವಿಜೃಂಭಿಸಿ ಗದ್ದಲದ ಗೂಡಾಗಿದ್ದವು. ಆರೋಪ–ಪ್ರತ್ಯಾರೋಪಗಳ ನಡುವೆ ಗ್ರಾಮ ಸಭೆಗಳು ದಿಢೀರನೆ ರದ್ದಾದವು.
ಮಾರಿಕುಪ್ಪ ಗ್ರಾಮ ಸಭೆಯ ಆರಂಭದಲ್ಲೇ ಕೆಜಿಎಫ್ ಶಾಸಕಿ, ಬಿಜೆಪಿಯ ವೈ.ರಾಮಕ್ಕ ಅಧಿಕಾರಿಗಳ ಗೈರುಹಾಜರು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅವರಿಗೆ ಬೆಂಬಲವಾಗಿ ನಿಂತ ಅವರ ಮಗ ಮಾಜಿ ಶಾಸಕ ವೈ.ಸಂಪಂಗಿ, ಅಧಿಕಾರಿಗಳು ಬರುವ ತನಕ ಸಭೆ ಮುಂದೂಡಿ ಎಂದರು.
ಅದಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ನಾರಾಯಣರೆಡ್ಡಿ ವಿರೋಧಿಸಿದರು. ಕಾಂಗ್ರೆಸ್ ಮುಖಂಡೆ ರೂಪಕಲಾ ಕೂಡ ವಿರೋಧಿಸಿದರು. ಪಂಚಾಯಿತಿ ಅಧ್ಯಕ್ಷೆ ಹಂಸವೇಣಿ ಅಧಿಕಾರಿಗಳ ಗೈರುಹಾಜರಿಯನ್ನು ಖಂಡಿಸಿ ಸಭೆಯನ್ನು ರದ್ದುಗೊಳಿಸಿದರು. ಕೂಡಲೇ ಕಾಂಗ್ರೆಸ್ ಕಾರ್ಯಕರ್ತರ ಧರಣಿ ಶುರುವಾಯಿತು. ಅದಕ್ಕೆ ಪ್ರತಿಯಾಗಿ ಶಾಸಕಿ ರಾಮಕ್ಕ ಕೂಡ ಧರಣಿಗೆ ಮುಂದಾದರು.
ಇದೇ ವೇಳೆ ಪಕ್ಷದ ಪರವಾಗಿ ಮಾತನಾಡಲಿಲ್ಲ, ಧರಣಿಯನ್ನು ಬೆಂಬಲಿಸಲಿಲ್ಲ ಎಂದು ದೂರಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವೆಂಕಟರತ್ನಮ್ಮ ಅವರಿಗೆ ಕಾಂಗ್ರೆಸ್ ಮುಖಂಡರು ಛೀಮಾರಿ ಹಾಕಿದರು. ಇಂಥ ಸನ್ನಿವೇಶದಲ್ಲೇ ನಿದ್ದೆಗೆ ಜಾರಿದ್ದ ವೆಂಕಟರತ್ನಮ್ಮ ಜನರ ಕೂಗಿಗೆ ಎಚ್ಚೆತ್ತ ಘಟನೆಯೂ ನಡೆಯಿತು!
ಈ ಸಭೆ ರದ್ದಾದ ಬಳಿಕ ಈ ಮುಖಂಡರು ಪಾರಂಡಹಳ್ಳಿ ಗ್ರಾಮ ಪಂಚಾಯಿತಿಗೆ ಬಂದರು. ಅಲ್ಲಿಯೂ ಅಧಿಕಾರಿಗಳ ಗೈರು ಎದ್ದುಕಂಡಿತು. ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣರೆಡ್ಡಿ ಮಾತನಾಡಲಾರಂಭಿಸಿದಾಗ ಜನ ವಿರೋಧಿಸಿದರು. ವೈ.ಸಂಪಂಗಿ ಮಾತನಾಡಲಾರಂಭಿಸಿದಾಗಲೂ ವಿರೋಧಿಸಿದರು. ಎರಡೂ ಗುಂಪುಗಳ ನಡುವೆ ಘರ್ಷಣೆ ಶುರುವಾಯಿತು. ಪಂಚಾಯಿತಿ ಅಧ್ಯಕ್ಷೆ ಭಾರತಮ್ಮ ಸಭೆಯನ್ನು ರದ್ದುಗೊಳಿಸಿದರು.
ಈ ಸಭೆಗಳಿಗೂ ಮುಂಚಿನ ದಿನ ಟಿ.ಗೊಲ್ಲಳ್ಳಿ ಮತ್ತು ಬೇತಮಂಗಲ ಗ್ರಾಮ ಪಂಚಾಯಿತಿಗಳಲ್ಲಿ ನಿಗದಿಯಾಗಿದ್ದ ಗ್ರಾಮ ಸಭೆಗಳೂ ಮುಂದೂಡಲ್ಪಟ್ಟವು. ಮುಖಂಡರ ಹೆಸರುಗಳನ್ನು ಹಾಕಲಿಲ್ಲ ಎಂಬ ಕಾರಣವೇ ಅಲ್ಲಿ ದೊಡ್ಡದಾಗಿತ್ತು.
‘ಗ್ರಾಮಸಭೆ ಹೇಗೆ ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಬಂದ’ ಸಂಸದ ಕೆ.ಎಚ್.ಮುನಿಯಪ್ಪ ಅವರ ಮಗಳು ರೂಪಕಲಾ ಅವರನ್ನು ‘ಸುಂದರಪಾಳ್ಯದ ಸಭೆಯ ವೇದಿಕೆಯಲ್ಲಿ ಕೂರಿಸಬಾರದು’ ಎಂದು ಬಿಜೆಪಿ ಆಗ್ರಹಿಸಿದ ಕಾರಣಕ್ಕೆ ಮತ್ತು ಕಮ್ಮಸಂದ್ರದ ಗ್ರಾಮ ಸಭೆಯಲ್ಲಿಯೂ ಅವರಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಗದ್ದಲವಾಗಿತ್ತು.
‘ಸಮಾಜ ಸೇವಕಿಯಾಗಿ ನಾನು ಬಂದಿದ್ದೇನೆ. ಅಲ್ಲದೆ, ನಾನು ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ’ ಎಂಬುದು ರೂಪಕಲಾ ಅವರ ಪ್ರತಿಪಾದನೆಯಾಗಿತ್ತು, ‘ಕಾಂಗ್ರೆಸ್ ದಬ್ಬಾಳಿಕೆ ಮಾಡುತ್ತಿದೆ’ ಎಂಬುದು ಬಿಜೆಪಿಯ ನೇರ ಆರೋಪ. ಎರಡೂ ಪಕ್ಷಗಳ ಇಂಥ ವಾಗ್ವಾದಗಳ ನಡುವೆ ಗ್ರಾಮ ಸಭೆಯ ಅಸ್ತಿತ್ವ ಮತ್ತು ಅದರ ಘನತೆ ಮಾತ್ರ ಅಂಚಿಗೆ ಸರಿದಿತ್ತು. ಅದನ್ನು ಕೇಂದ್ರ ಸ್ಥಾನಕ್ಕೆ ಕರೆತರುವವರೂ ಅಲ್ಲಿ ಯಾರೂ ಇರಲಿಲ್ಲ.
ಉದ್ದೇಶ ಭಂಗ
ಸಭೆಯನ್ನು ನಡೆಸಬೇಕೇ ಬೇಡವೇ? ಸಭೆಯ ಆಹ್ವಾನ ಪತ್ರಿಕೆಯಲ್ಲಿ ಯಾರ ಹೆಸರನ್ನು ಮುದ್ರಿಸಬೇಕಾಗಿತ್ತು? ಯಾಕೆ ಮುದ್ರಿಸಿಲ್ಲ? ಯಾರನ್ನು ವೇದಿಕೆಗೆ ಕರೆಯಬೇಕು? ಯಾರನ್ನು ಬೇಡ? ಎಂಬ ಕುರಿತಂತೆ, ಮೇಲಿನ ಹಂತದ ಜನಪ್ರತಿನಿಧಿಗಳು ಮತ್ತು ಮುಖಂಡರ ಪ್ರತಿಪಾದನೆಯ ವಿಜೃಂಭಣೆಯ ನಡುವೆ, ಗ್ರಾಮಪಂಚಾಯಿತಿಗಳ ಅಧ್ಯಕ್ಷರಿಗೆ ತಮ್ಮ ವಿವೇಚನೆಯನ್ನು ಬಳಸಿ ತೀರ್ಮಾನ ಕೈಗೊಳ್ಳುವ ಅವಕಾಶ ಈ ಸಭೆಗಳಲ್ಲಿ ಇರಲಿಲ್ಲ. ಬದಲಿಗೆ, ನಾವು ಗ್ರಾಮ ಪಂಚಾಯಿತಿಗಿಂತಲೂ ಮೇಲಿನ ಅಧಿಕಾರ ಸ್ಥಾನದಲ್ಲಿದ್ದೇವೆ. ಜನರ ಬಗೆಗಿನ ನಮ್ಮ ಕಾಳಜಿಯೂ ಪ್ರಶ್ನಾತೀತ. ಗ್ರಾಮ ಸಭೆಯೂ ನಮ್ಮ ಜನಪರ ಕಾಳಜಿಯ ಅಭಿವ್ಯಕ್ತಿಗೆ ವೇದಿಕೆಯಾಬೇಕಷ್ಟೇ ಎಂಬ ನಿಲುವು ಅಲ್ಲಿ ವಿಜೃಂಭಿಸಿತ್ತು.
ಗ್ರಾಮೀಣ ಜೀವನ ನಿರ್ವಹಣೆ, ಸಮಸ್ಯೆಗಳು ಮತ್ತು ಪರಿಹಾರಕ್ಕೆ ಸಂಬಂಧಿಸಿ ಹಳ್ಳಿಜನರ ಸಾಮೂಹಿಕ ಒತ್ತಾಸೆಗಳಿಗೆ ಗ್ರಾಮ ಸಭೆಗಳು ವೇದಿಕೆಗಳಾಗಬೇಕು ಎಂಬುದು ಪಂಚಾಯತ್ ರಾಜ್ ವ್ಯವಸ್ಥೆಯ ಮೂಲ ಆಶಯ. ಆದರೆ ಹಳ್ಳಿ ಜನರ ಮನದಾಳಕ್ಕೆ ಅಭಿವ್ಯಕ್ತಿಯ ರೂಪವನ್ನು ಕೊಡಲು ಮೀಸಲಿರಬೇಕಾದ ಗ್ರಾಮಸಭೆಗಳು ಈಗ ಮೇಲು ಹಂತದ ಜನಪ್ರತಿನಿಧಿಗಳ ಮತ್ತು ಅವರ ಬೆಂಬಲಿಗರ ಠೇಂಕಾರ, ಒಣ ಪ್ರತಿಷ್ಠೆಯ ಮಾತುಗಳಿಗೆ ಕಿವಿಗಳಾಗುತ್ತಿವೆ. ಗ್ರಾಮ ಸಭೆಗಳನ್ನು ಗಣ್ಯರು ನಾಜೂಕಾಗಿ, ಕೆಲವೊಮ್ಮೆ ಬಲವಂತವಾಗಿ ವಶಕ್ಕೆ ಪಡೆದುಕೊಳ್ಳುವ ಪ್ರಯತ್ನಗಳೇ ಹೆಚ್ಚುತ್ತಿವೆ.
ಈ ಸಮಯದಲ್ಲಿ ಗ್ರಾಮ ಸಭೆಯ ನೋಡಲ್ ಅಧಿಕಾರಿಗಳಾಗಿ ನೇಮಕಗೊಂಡವರು, ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ತಾವು ನಿಮಿತ್ತ ಮಾತ್ರ. ತಮ್ಮದೇನೂ ಇಲ್ಲಿ ಅಧಿಕಾರವಿಲ್ಲ ಎಂಬ ಭಾವ ತಾಳಿ ನಿರ್ಲಿಪ್ತರಾಗಿ ಉಳಿಯುತ್ತಾರೆ.
ಸ್ವಯಂ ಆಡಳಿತ ಸಂಸ್ಥೆಗಳಾಗಿ ಗ್ರಾಮ ಪಂಚಾಯಿತಿಗಳಿಗೆ ಕಾಯ್ದೆಯ ಮೂಲಕ ನೀಡಲಾಗಿರುವ ಅಧಿಕಾರಗಳ ಕುರಿತಂತೆ ಬಹುತೇಕ ಶಾಸಕರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಬಹುತೇಕ ಸದಸ್ಯರು ನಿರೀಕ್ಷಿತ ಗೌರವ ಭಾವನೆಯನ್ನು ಹೊಂದಿಲ್ಲ ಎಂಬುದಕ್ಕೆ ಈ ಘಟನೆಗಳು ಸಾಕ್ಷಿಯಾಗಿವೆ.
ಹೀಗಾಗಿಯೇ ಗ್ರಾಮ ಸಭೆಗಳು ಪ್ರಜಾಸತ್ತಾತ್ಮಕ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ನಡೆಯುತ್ತಿವೆ. ಸನ್ನಿವೇಶ ನಿಯಂತ್ರಣ ಮೀರುವುದರಿಂದಾಗಿ ಗ್ರಾಮ ಸಭೆಗಳಲ್ಲೂ ಪೊಲೀಸರಿಗೆ ಈಗ ಹೆಚ್ಚಿನ ಕೆಲಸ. ಗ್ರಾಮ ಸಭೆಗಳಲ್ಲಿ ನಡೆಯುವ ಇಂಥ ಅಸಾಂವಿಧಾನಿಕವಾದ ಚಟುವಟಿಕೆಗಳ ಫಲವಾಗಿ, ವಿವಿಧ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಎಂಬುದು ಅಂತಿಮಗೊಳ್ಳುವುದೇ ಇಲ್ಲ.
ಅಧಿಕಾರಿ–ಜನಪ್ರತಿನಿಧಿ ಸಮರ
ಗ್ರಾಮ ಸಭೆಗಳ ಬಗ್ಗೆ ಅಧಿಕಾರಶಾಹಿ ಒಂದು ಬಗೆಯ ಧೋರಣೆ ತಾಳಿದರೆ ಅದಕ್ಕೆ ತದ್ವಿರುದ್ಧವಾಗಿ ನಿಲುವನ್ನು ರಾಜಕೀಯ ನಾಯಕತ್ವ ತಳೆಯುತ್ತದೆ.
‘ಗ್ರಾಮಸಭೆಗೆ ನಾವು ಹೋಗದಿದ್ದರೇನಂತೆ ಬಿಡು’ ಎಂಬುದು ಬಹುತೇಕ ಅಧಿಕಾರಿಗಳ ಧೋರಣೆಯಾದರೆ, ‘ಗ್ರಾಮ ಸಭೆಯಲ್ಲೂ ತಮ್ಮದೊಂದು ಠಸ್ಸೆ ಒತ್ತಿ ಬಿಡೋಣ’ ಎಂಬಂತೆ ಜನಪ್ರತಿನಿಧಿಗಳು, ಪುಡಾರಿಗಳು, ಮುಖಂಡರು ತಂಡೋಪತಂಡವಾಗಿ ಉತ್ಸಾಹದಿಂದ ಬರುತ್ತಾರೆ.
ಬಂಗಾರಪೇಟೆ ವಿಧಾನಸಭೆಯಲ್ಲಿ ಎಲ್ಲಿಯೇ ಗ್ರಾಮ ಸಭೆ ನಡೆದರೂ, ಅಲ್ಲಿ ಶಾಸಕ ಕೆ.ಎಂ. ನಾರಾಯಣಸ್ವಾಮಿಯವರದೊಂದು ಭಾಷಣ ಇರಲೇಬೇಕು ಎಂಬ ಸನ್ನಿವೇಶ ಇದೆ. ಶಾಸಕರು ಬರುತ್ತಾರಾದ್ದರಿಂದ ಸಭೆಗೆ ಹೋಗಲೇಬೇಕು ಎಂದು ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಬರುತ್ತಾರೆ. ‘ಅಲ್ಲಿ ಕಡ್ಡಾಯ ಎಂಬಂತೆ ಗ್ರಾಮ ಸಭೆಗಳಿಗೆ ಬರುವ ಅಧಿಕಾರಿಗಳು, ತಮ್ಮ ಕ್ಷೇತ್ರದಲ್ಲಿ ಮಾತ್ರ ಬರುವುದೇ ಇಲ್ಲ’ ಎಂಬುದು ಕೆಜಿಎಫ್ ಶಾಸಕಿ ವೈ.ರಾಮಕ್ಕ ಅವರ ಅಳಲು.
ಬಂಗಾರಪೇಟೆಯಲ್ಲಿ ಆಡಳಿತ ಪಕ್ಷದ ಶಾಸಕರಿರುವುದರಿಂದ ಅಧಿಕಾರಿಗಳು ಕಾಳಜಿ ವಹಿಸುತ್ತಾರೆ. ಕೆಜಿಎಫ್‌ನಲ್ಲಿ ಬಿಜೆಪಿ ಶಾಸಕಿ ಇರುವುದರಿಂದ ಬರುವುದೇ ಇಲ್ಲ ಎಂಬ ದೂರು ಗ್ರಾಮ ಸಭೆಗಳನ್ನು ಮುಂದೂಡುವ, ಹಲವು ಬಗೆಯಲ್ಲಿ ನಿಯಂತ್ರಿಸುವ ಮಟ್ಟಿಗೆ ಬಲಿಷ್ಠಗೊಂಡಿದೆ ಎಂಬುದು ಸದ್ಯದ ಬೆಳವಣಿಗೆ.
40 ಮಂದಿಗೆ ಹೂವಿನ ಹಾರ!
ದೀಪಾವಳಿ ಹಬ್ಬದ ವಾರದಲ್ಲಿ ಬಂಗಾರಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿಯೊಂದರಲ್ಲಿ ನಿಗದಿಯಾಗಿರುವ ಗ್ರಾಮ ಸಭೆಗೆ ಬರುವ ಗಣ್ಯರಿಗೆ ಹಾಕಲೆಂದೇ ಅಭಿವೃದ್ಧಿ ಅಧಿಕಾರಿಯೊಬ್ಬರು ಹೂವಿನ 40 ಹಾರಗಳನ್ನು ಖರೀದಿಸಲು ಹಣ ನಿಗದಿ ಮಾಡಿದ್ದಾರೆ. ಸಭೆಗೆ ಬರುವ ಗಣ್ಯರ ಉಪಚಾರಕ್ಕೆಂದು, ಕಡಿಮೆ ಎಂದರೂ, 3 ಸಾವಿರ ರೂಪಾಯಿ ಬೇಕಾಗುತ್ತದೆ ಎಂಬುದು ಅವರ ಅಂದಾಜು!
ಗಣ್ಯರು ಅಧಿಕಾರ ಸ್ಥಾನದಲ್ಲಿರುವರು ಮತ್ತು ಅವರ ಬೆಂಬಲಿಗರೇ ಆಗಿರುವುದರಿಂದ ಅವರನ್ನು ಬರಬೇಡಿ ಎನ್ನಲಾಗುವುದಿಲ್ಲ. ಬಂದ ಮೇಲೆ ವೇದಿಕೆಗೆ ಕರೆಯದೇ ಇರುವಂತಿಲ್ಲ. ಅದಕ್ಕಾಗಿ ಹೆಚ್ಚಿನ ಕುರ್ಚಿಗಳನ್ನು ತರಿಸಲೇಬೇಕು. ಕುಳಿತುಕೊಂಡ ಗಣ್ಯರೆಲ್ಲರ ಮಾತುಗಳನ್ನು ಕೇಳಿಸಿಕೊಳ್ಳಲೇಬೇಕು.
ಇದು ಗ್ರಾಮ ಸಭೆ, ರಾಜಕೀಯ ಪ್ರಚಾರ ಸಭೆಯಲ್ಲ ಎಂದು ನೇರವಾಗಿ ಹೇಳಿದರೆ ನಮಗೆ ಉಳಿಗಾಲ ಇರುವುದಿಲ್ಲ ಎಂಬ ಅಧೈರ್ಯ ಅಭಿವೃದ್ಧಿ ಅಧಿಕಾರಿಗಳನ್ನು ಮೂಕರನ್ನಾಗಿಸಿದೆ.
ಕೆಳಗಿನ ಹಂತದಲ್ಲಿದ್ದಾರೆ ಎಂಬ ಕಾರಣಕ್ಕೆ ಕೀಳರಿಮೆ ಭಾವನೆಯಲ್ಲೇ ನರಳುವ ಗ್ರಾಮ ಪಂಚಾಯಿತಿಗಳ ಬಹುತೇಕ ಸದಸ್ಯರೂ ಗ್ರಾಮ ಸಭೆಗಳಲ್ಲಿ ತಮಗೆ ಮೀಸಲಿದ್ದ ಸ್ಥಳ, ಸಮಯವನ್ನು ಬಿಟ್ಟುಕೊಟ್ಟು, ಕೈ ಕಟ್ಟಿ ಕುಳಿತುಬಿಡುತ್ತಾರೆ.
ಸಭೆಯ ಕೇಂದ್ರ ಬಿಂದುಗಳಾಗಬೇಕಿದ್ದ ಜನ ಮಾತ್ರ ತಮ್ಮ ಪಾಲ್ಗೊಳ್ಳುವಿಕೆ ಮತ್ತು ಒಳಗೊಳ್ಳುವಿಕೆ ಎಲ್ಲಿ ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ನಿಲ್ಲುತ್ತಾರೆ. ಗ್ರಾಮ ಸಭೆಯನ್ನು ಹೇಗೆ ನಡೆಸಬೇಕು ಎಂದು ರೂಪಿಸಲಾಗಿರುವ ನಿಯಮಗಳು ಇಲ್ಲಿ ಯಾರಿಗೂ ನೆನಪಾಗುವುದಿಲ್ಲ.
ಆಕ್ಷೇಪವೂ ಉಂಟು...
ಗ್ರಾಮ ಸಭೆಗಳು ಸರಿಯಾಗಿ ನಡೆಯದೇ ಇರುವ ಬಗ್ಗೆ 2011ರ ಸೆಪ್ಟೆಂಬರ್ 21ರಂದು ನಡೆದಿದ್ದ ಕರ್ನಾಟಕ ವಿಧಾನ ಮಂಡಳದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಅದೇ ಹಿನ್ನೆಲೆಯಲ್ಲಿ, ಗ್ರಾಮ ಸಭೆಗಳು ಸಮಂಜಸ ರೀತಿಯಲ್ಲಿ ನಡೆಯುವ ಬಗ್ಗೆ ಹಲವು ಸುತ್ತೋಲೆಗಳನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಹೊರಡಿಸುತ್ತಲೇ ಇದೆ. ಆದರೆ ಸುತ್ತೋಲೆಗಳು ಮತ್ತು ಅದರ ನಿಯಮಗಳ ಪಾಲನೆ ವಿಚಾರದಲ್ಲಿ ಮಾತ್ರ ಪಂಚಾಯಿತಿಗಳು ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸಲೇ ಬೇಕಾದ ಅಗತ್ಯ ಸೃಷ್ಟಿಯಾಗಿದೆ. ಪಂಚಾಯತಿ ಸದಸ್ಯರಿಂದ ಆರಂಭಿಸಿ ಅಧಿಕಾರಿಗಳ ತನಕದ ಅಸಹಾಯಕತೆ ಇದು.
ಹಸ್ತಕ್ಷೇಪದ ಸಮಸ್ಯೆ
ಮೇಲಿನ ಹಂತದ ಬಹುತೇಕ ಜನಪ್ರತಿನಿಧಿಗಳ ಹಸ್ತಕ್ಷೇಪದಿಂದ ಗ್ರಾಮ ಸಭೆಗಳು ಸಮರ್ಪಕವಾಗಿ ನಡೆಯದ ಸನ್ನಿವೇಶಗಳು ನಿರ್ಮಾಣವಾಗಿವೆ. ಈ ಹಸ್ತಕ್ಷೇಪವನ್ನು ನಿಯಂತ್ರಿಸುವ ಕೆಲಸ ಮೊದಲಿಗೆ ಆಗಬೇಕು. ಗ್ರಾಮಸಭೆಗಳನ್ನು ಹೇಗೆ ನಡೆಸಬೇಕು ಎಂಬುದು ಸೇರಿದಂತೆ ಹಲವು ಬಗೆಯ ತರಬೇತಿಗಳನ್ನು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಮತ್ತು ಸಿಬ್ಬಂದಿಗೆ ನೀಡಲಾಗುತ್ತಿದೆ. ಅದರ ಫಲವನ್ನು ಅರಿಯಲು ಗ್ರಾಮ ಸಭೆಗಳು ಕೈಮರದಂತೆ ಕೆಲಸ ಮಾಡುತ್ತವೆ. ಆದರೆ ಆ ಅವಕಾಶವೂ ಈಗ ಕಡಿಮೆಯಾಗಿದೆ ಎಂಬುದು ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತರಬೇತುದಾರ ಎಸ್.ಎಚ್.ಚೌಡಪ್ಪ ಅವರ ನುಡಿ.
ಶಾಸಕರು, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು ತಮ್ಮ ಕ್ಷೇತ್ರ ಅಭಿವೃದ್ಧಿ ನಿಧಿ ಅಡಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಅನುದಾನ ನೀಡಲು ಅವಕಾಶವಿದೆ. ಆದರೆ ಅದೇ ಕಾರಣದಿಂದ ಗ್ರಾಮ ಸಭೆಗಳನ್ನು ಅತಿಕ್ರಮಿಸಬಾರದಷ್ಟೇ ಎನ್ನುತ್ತಾರೆ ಅವರು.
ವಸತಿ ಯೋಜನೆ ಇಂದಿರಾ ಆವಾಸ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸುವ ಕೆಲಸ ಗ್ರಾಮ ಸಭೆಗಳಲ್ಲಿ ನಡೆಯಬೇಕು. ಈಗ ನಡೆಯುತ್ತಿರುವ ಗ್ರಾಮ ಸಭೆಗಳ ಮುಖ್ಯ ಗುರಿಯೂ ಅದೇ. ಆದರೆ ಆ ಕುರಿತ ಪ್ರಸ್ತಾಪವೇ ಗ್ರಾಮಸಭೆಗಳಲ್ಲಿ ಬರುತ್ತಿಲ್ಲ. ಯಾವುದು ಪ್ರಸ್ತಾಪವಾಗಬಾರದೋ ಅಂಥ ವಿಷಯಗಳು ಪ್ರಸ್ತಾಪವಾಗುತ್ತಿವೆ ಎಂಬ ವಿಷಾದ ಅವರದು.
ಗ್ರಾಮ ಸಭೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರಚಾರಕ್ಕೆ ಖರ್ಚು ಮಾಡಬೇಕಾದ ಹಣವನ್ನು ವೇದಿಕೆಯ ನಿರ್ಮಾಣಕ್ಕೆ, ಆಹ್ವಾನಪತ್ರಿಕೆ ಮುದ್ರಣಕ್ಕೆ ಖರ್ಚು ಮಾಡಲಾಗುತ್ತಿದೆ. ಹೀಗಾಗಬಾರದು ಎನ್ನುತ್ತಾರೆ ಅವರು.
ಗ್ರಾಮ ಸಭೆಯೊಂದರಲ್ಲಿ ಪಾಲ್ಗೊಂಡ ಮಹಿಳೆಯೊಬ್ಬರು ಗಣ್ಯರ ಕಡೆ ನೋಡುತ್ತಾ ಹೇಳಿದರಂತೆ. ‘ನೀವೇನೋ ಕುರ್ಚಿ ಹಾಕಿಕೊಂಡು ವೇದಿಕೆ ಮೇಲೆ ಕುಳಿತು ಭಾಷಣ ಮಾಡಿ ಹೋಗುತ್ತೀರಿ. ಆದರೆ, ಒಂದು ವರ್ಷದ ಹಿಂದೆ ವಸತಿ ಯೋಜನೆ ಅಡಿ ಸಾಲ ಮಾಡಿ ಕಟ್ಟಿದ ಮನೆಗೆ ಸಂಬಂಧಿಸಿದ ಇನ್ನೂ ನಂಗೆ ಯಾರೂ ಕೊಟ್ಟಿಲ್ಲ...’ ಆ ಮಹಿಳೆಯ ಮಾತನ್ನು ಯಾರೂ ಕೇಳಿಸಿಕೊಳ್ಳದ ಸ್ಥಿತಿಯಲ್ಲೇ ಗ್ರಾಮ ಸಭೆಯೂ ನಡೆಯಿತು. ಮುಗಿದೂ ಹೋಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.