ADVERTISEMENT

ಉದ್ಯೋಗ– ವೈಯಕ್ತಿಕ ಜೀವನ ಸಮತೋಲನ: ವಿದೇಶದಲ್ಲಿರುವ ಪ್ರಮುಖ ಕಾನೂನುಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಸೆಪ್ಟೆಂಬರ್ 2024, 10:31 IST
Last Updated 24 ಸೆಪ್ಟೆಂಬರ್ 2024, 10:31 IST
<div class="paragraphs"><p>ಕೆಲಸದ ಒತ್ತಡ</p></div>

ಕೆಲಸದ ಒತ್ತಡ

   

– ಗೆಟ್ಟಿ ಚಿತ್ರ

ಬೆಂಗಳೂರು: ಕೆಲಸದ ಒತ್ತಡದಿಂದಾಗಿ 26 ವರ್ಷದ ಅನ್ನಾ ಸೆಬಾಸ್ಟಿಯನ್ ಪೆರಿಲ್ ಅವರ ಸಾವು ದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ಹಿಂಸಾತ್ಮಕವಾಗಿರುವ ಕೆಲಸದ ಸಂಸ್ಕೃತಿ, ಉದ್ಯೋಗಿಗಳ ಕ್ಷೇಮದ ಬಗ್ಗೆ ಹೆಚ್ಚಿನ ಕಾಳಜಿ ಇರದ ಕಾರ್ಮಿಕ ಕಾನೂನು, ಕೆಲಸದ ಗಂಟೆಗಳಿಗೆ ಮಿತಿ ಹಾಗೂ ಕಂಪನಿಗಳ ಉದ್ಯೋಗ ನೀತಿಯಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ.

ADVERTISEMENT

ಆಕರ್ಷಕ ಸಂಬಳದ ಆಸೆ ಹುಟ್ಟಿಸಿ ಅವಧಿ ಮೀರಿ ಉದ್ಯೋಗಿಗಳನ್ನು ದುಡಿಸಿಕೊಳ್ಳುವ, ಟಾರ್ಗೆಟ್ ಹೆಸರಿನಲ್ಲಿ ಮಾಡುವ ಶೋಷಣೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾದ ಚರ್ಚೆಗಳು ನಡೆಯುತ್ತಿವೆ. ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆಗಳು ಆಗಬೇಕು ಎನ್ನುವ ಆಗ್ರಹ ಕೇಳಿ ಬಂದಿವೆ. ಕಾರ್ಮಿಕರ ಭದ್ರತೆ ಹಾಗೂ ಯೋಗಕ್ಷೇಮಕ್ಕೆ ಹಲವು ದೇಶಗಳಲ್ಲಿರುವ ಕಾನೂನುಗಳು ನಮ್ಮಲ್ಲೂ ಜಾರಿಗೆ ಬರಬೇಕು ಎನ್ನುವ ಚರ್ಚೆಗಳು ಸಾಗಿವೆ.

ವಾರಕ್ಕೆ ಇಂತಿಷ್ಟೇ ಗಂಟೆಗಳು ಕೆಲಸ ಮಾಡಬೇಕು, ಕಡ್ಡಾಯ ರಜೆಗಳನ್ನು ನೀಡಬೇಕು, ಕೆಲಸ ಅವಧಿಯ ಬಳಿಕ ನೌಕರರಿಗೆ ಉದ್ಯೋಗ ಸಂಬಂಧ ಯಾವುದೇ ನಿರ್ದೇಶನಗಳನ್ನು ನೀಡುವಂತಿಲ್ಲ ಮುಂತಾದ ಕಾನೂನುಗಳನ್ನು ಭಾರತವೂ ಅಳವಡಿಸಿಕೊಳ್ಳಬೇಕು. ವೃತ್ತಿ ಹಾಗೂ ವೈಯಕ್ತಿಕ ಜೀವನ ಸಮತೋಲನ ಮುಂಬರುವ ಕಾನೂನಿನ ಗುರಿಯಾಗಿರಬೇಕು ಎಂಬೆಲ್ಲಾ ಚರ್ಚೆಗಳು ಭರದಿಂದಲೇ ಸಾಗಿವೆ.

ಹಾಗಾದರೆ ಉದ್ಯೋಗಿಗಳ ಕ್ಷೇಮಕ್ಕೆ ಬೇರೆ ಬೇರೆ ದೇಶಗಳಲ್ಲಿ ಜಾರಿಯಲ್ಲಿರುವ, ಭಾರತ ಎರವಲು ಪಡೆಯಬಹುದಾದ ಪ್ರಮುಖ 5 ಕಾನೂನುಗಳು ಇಲ್ಲಿವೆ.

1. ಕಚೇರಿಯಿಂದ ‘ಸಂಪರ್ಕ ಕಡಿದುಕೊಳ್ಳುವ ಹಕ್ಕು’ (Right to Disconnect)

ಕೆಲಸ ಅವಧಿ ಮುಗಿದ ಬಳಿಕ ಕಚೇರಿಯಿಂದ ಬರುವ ಯಾವುದೇ ಸಂವಹನವನ್ನು ನಿರಾಕರಿಸುವ ಹಕ್ಕನ್ನು 2017ರಲ್ಲಿ ಫ್ರಾನ್ಸ್ ಜಾರಿಗೆ ತಂದಿತು. ಈ ನಿಯಮದನ್ವಯ ಕೆಲಸ ಸಂಬಂಧ ಕಚೇರಿಯಿಂದ ಬರುವ ಯಾವುದೇ ಸಂವಹನವನ್ನು ಉದ್ಯೋಗಿ ನಿರಾಕರಿಸಬಹುದು. ಅದು ಉದ್ಯೋಗಿಯ ಹಕ್ಕು. ಈಗಾಗಲೇ ಈ ನಿಯಮವನ್ನು ಸ್ಪೇನ್‌, ಬೆಲ್ಜಿಯಂ, ಇಟಲಿ, ಐರ್ಲೆಂಡ್ ಅಳವಡಿಸಿಕೊಂಡಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ಕೂಡ ಈ ಕಾನೂನನ್ನು ಜಾರಿಗೆ ತಂದಿದೆ. ಕೆಲಸ ಅವಧಿ ಮುಗಿದ ಬಳಿಕ ಉದ್ಯೋಗಿಗೆ ಕರೆ ಮಾಡಿದ ಮ್ಯಾನೇಜರ್‌ಗಳಿಗೆ ದಂಡ ವಿಧಿಸಿದ ಪ್ರಕರಣ ಪೋರ್ಚುಗಲ್‌ನಲ್ಲಿ ನಡೆದಿದೆ.

2. ವಾರಕ್ಕೆ 4 ದಿನ ಕೆಲಸ

ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಕೆಲಸದ ಸಂಸ್ಕೃತಿಗೆ ಒಗ್ಗಿಕೊಳ್ಳಲು ಹಲವು ರಾಷ್ಟ್ರಗಳಲ್ಲಿ ವಾರಕ್ಕೆ 4 ದಿನ ಕೆಲಸ ಮಾಡುವ ನಿಯಮ ಜಾರಿಯಲ್ಲಿದೆ. ಉತ್ಪಾದಕತೆ ಹೆಚ್ಚಿಸುವುದು ಹಾಗೂ ಉದ್ಯೋಗಿಗಳನ್ನು ಸಂತೋಷವಾಗಿಡುವುದು ಇದರ ಉದ್ದೇಶ. ಬೆಲ್ಜಿಯಂ, ಜಪಾನ್ ಹಾಗೂ ನೆದರ್ಲೆಂಡ್ ಸೇರಿ ಹಲವು ದೇಶಗಳಲ್ಲಿ ಈಗಾಗಲೇ ವಾರಕ್ಕೆ 4 ದಿನ ಕೆಲಸದ ಕಾನೂನು ಇದೆ.

3. ಕಡ್ಡಾಯ ರಜೆ

ಒಂದು ಕಂಪನಿಯಲ್ಲಿ 6 ತಿಂಗಳಿಗಿಂತ ಹೆಚ್ಚಿನ ಕಾಲಾವಧಿ ಕೆಲಸ ಮಾಡಿದ ಉದ್ಯೋಗಿಗಳಿಗೆ ವಾರ್ಷಿಕ ಕನಿಷ್ಠ 5 ದಿನಗಳ ವೇತನ ಸಹಿತ ರಜೆ ನೀಡುವ ಕಾನೂನು ಆಸ್ಟ್ರಿಯಾದಲ್ಲಿದೆ. ಕೆಲವೊಮ್ಮೆ ರಜೆ ತೆಗೆದುಕೊಳ್ಳುವುದು ಉದ್ಯೋಗಿಗಳಿಗೆ ಕಷ್ಟ ಎನಿಸಬಹುದು. ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಿಗೆ ಉತ್ತಮ ಭಾವನೆ ಉಂಟು ಮಾಡಲು ಹಾಗೂ ಒತ್ತಡ ಇಲ್ಲದೆ ಕೆಲಸ ನಿರ್ವಹಿಸಲು ಈ ಕಾನೂನು ಜಾರಿ ಮಾಡಲಾಗಿದೆ.

4. ವೃತ್ತಿ ವಿರಾಮ

ಕೆಲಸ ಕಳೆದುಕೊಳ್ಳದೆ ವೃತ್ತಿಯಿಂದ ಒಂದು ವರ್ಷಗಳ ಕಾಲ ವಿರಾಮ ತೆಗೆದುಕೊಳ್ಳುವ ಅವಕಾಶ ಬೆಲ್ಜಿಯಂನಲ್ಲಿದೆ! ಈ ಅವಧಿಯಲ್ಲಿ ಉದ್ಯೋಗಿ ಸಂಪೂರ್ಣವಾಗಿ ರಜೆ ತೆಗೆದುಕೊಳ್ಳಬಹುದು ಅಥವಾ ಪಾರ್ಟ್ ಟೈಮ್ ಆಗಿ ಕೆಲಸ ಮಾಡಬಹುದು. ಆದರೂ ಪೂರ್ಣ ಪ್ರಮಾಣದ ವೇತನ ಪಾವತಿಯಾಗಲಿದೆ. ಇದನ್ನು 6 ವರ್ಷಗಳವರೆಗೆ ವಿಸ್ತರಿಸಿಕೊಳ್ಳಬಹುದು. ಈ ಕಾನೂನು ಭಾರತದಲ್ಲಿ ಜಾರಿಗೆ ಕಷ್ಟವಾದರೂ, ಉದ್ಯೋಗಿಗಳ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವ ಇನ್ನು ಅನೇಕ ಉಪಕ್ರಮಗಳನ್ನು ತೆಗೆದುಕೊಳ್ಳಬಹುದು ಎನ್ನುವ ಚರ್ಚೆಗಳು ನಡೆಯುತ್ತಿವೆ.

5. ವಾರದಲ್ಲಿ ಇಂತಿಷ್ಟು ದಿನ ಕೆಲಸ

ಉತ್ಪಾದಕತೆ ಹೆಚ್ಚಲು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣಮೂರ್ತಿಯವರು ಕೆಲ ದಿನಗಳ ಹಿಂದೆ ಹೇಳಿದ ಮಾತುಗಳು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅವರ ಹೇಳಿಕೆಗೆ ಟೀಕೆಗಳು ದೊಡ್ಡ ಪ್ರಮಾಣದಲ್ಲಿ ವ್ಯಕ್ತವಾದವು. ಇದೀಗ ಅನ್ನಾ ಸಾವಿನ ಬಳಿಕ ವಾರದ ಕೆಲಸದ ಗಂಟೆಗಳಿಗೆ ಮಿತಿ ಹೇರಬೇಕು ಎನ್ನುವ ಒತ್ತಾಯಗಳು ಕೇಳಿ ಬರುತ್ತಿವೆ.

ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಪ್ರಕಾರ ಭಾರತದಲ್ಲಿ ವಾರದ ಕೆಲಸ ಗಂಟೆ ಸರಾಸರಿ 46.7ರಷ್ಟಿದೆ. ಇದರ ಅನ್ವಯ ವಾರದಲ್ಲಿ ಅತಿ ಹೆಚ್ಚು ಕೆಲಸದ ಗಂಟೆಗಳು ಇರುವ ಪ್ರಪಂಚದ 13ನೇ ದೇಶ ಭಾರತ. ದೇಶದ ಶೇ 51 ರಷ್ಟು ಕಾರ್ಮಿಕರು ವಾರಕ್ಕೆ 49ಕ್ಕೂ ಅಧಿಕ ಗಂಟೆ ಕೆಲಸ ಮಾಡುತ್ತಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಅಧಿಕ. ಇದಕ್ಕೆ ಕಡಿವಾಣ ಹಾಕಬೇಕು ಎನ್ನುವ ಆಗ್ರಹ ಕಾರ್ಮಿಕ ವಲಯದಿಂದ ಕೇಳಿ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.