ADVERTISEMENT

ವೃತ್ತಿಜೀವನಕ್ಕೆ ಕೈದೀವಿಗೆಯಾದ ‘ಕೌಶಲ’

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸುಮಂತ್

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 19:58 IST
Last Updated 29 ಡಿಸೆಂಬರ್ 2021, 19:58 IST
ಪ್ರಶಸ್ತಿಗೆ ಪಾತ್ರವಾದ ‘ಕೌಶಲ’
ಪ್ರಶಸ್ತಿಗೆ ಪಾತ್ರವಾದ ‘ಕೌಶಲ’   

ಬೆಂಗಳೂರು: ಈಗ ಪದವಿ, ಗಳಿಸಿದ ಅಂಕಪಟ್ಟಿ, ಪ್ರಮಾಣಪತ್ರಗಳಷ್ಟೇ ಕೈಯಲ್ಲಿದ್ದರೆ ಸಾಲದು. ಶೇ 99 ಅಂಕ ಗಳಿಸಿದರೂ ಕೌಶಲ ಇಲ್ಲದೇ ಇದ್ದರೆ ಅವಕಾಶ ಗಿಟ್ಟಿಸಿಕೊಳ್ಳುವುದು ಕಷ್ಟ. ಕೌಶಲವೆಂದರೆ ವೃತ್ತಿ ಜೀವನಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಅದು ವೈಯಕ್ತಿಕ ಜೀವನದ ಯಶಸ್ಸಿಗೂ ಕೈದೀವಿಗೆ. ಕೌಶಲಸಿದ್ದಿಸಿಕೊಂಡರೆ ಯಶಸ್ಸು, ಉನ್ನತ ಮಟ್ಟಕ್ಕೆ ಹೋಗಬಹುದು ಎನ್ನುವುದಕ್ಕೆ ಈ ಸುಮಂತ್ ಉದಾಹರಣೆ.

ಬಡತನದಲ್ಲೇ ಶಿಕ್ಷಣ ಪಡೆದು, ಸಿಕ್ಕ ಅವಕಾಶ ಬಳಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಕೌಶಲ‘ ಪ್ರದರ್ಶಿಸಿ, ಗುರುತಿಸಿಕೊಂಡ ಸುಮಂತ್‌, ಟೊಯೊಟಾ ಸಂಸ್ಥೆಯಲ್ಲಿ ಈಗ ‘ಕೌಶಲ ತರಬೇತುದಾರ’. ಬಾಲ್ಯದಿಂದಲೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಕನಸುಕಂಡಿದ್ದ ಅವರು, ಛಲದಿಂದ ಸಾಧಿಸಿದವರು. ಅಂತರರಾಷ್ಟ್ರೀಯ ಮಟ್ಟದ ಕೌಶಲ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿ, ಪ್ರಶಸ್ತಿ ಬಾಚಿಕೊಂಡವರು.

ತುಮಕೂರಿನ ಸುಮಂತ್‌ ಸದ್ಯ ಬೆಂಗಳೂರು ನಿವಾಸಿ. 2019ರಲ್ಲಿರಷ್ಯಾದಲ್ಲಿ ನಡೆದ ಜಾಗತಿಕ ಕೌಶಲ ಸ್ಪರ್ಧೆಯಲ್ಲಿ ಭಾಗವಹಿಸಿ ‘ಮೆಡಲಿಯನ್‌ ಆಫ್‌ ಎಕ್ಸ್‌ಲೆನ್ಸ್‌’ ಗೌರವಕ್ಕೆ ಪಾತ್ರರಾಗಿದ್ದಾರೆ. ಮೆಕಾಟ್ರಾನಿಕ್ಸ್‌ ವಿಭಾಗದಲ್ಲಿ ತೋರಿದ ಕೌಶಲ ಅವರಿಗೆ ಈ ಪ್ರಶಸ್ತಿಯನ್ನು ಮುಡಿಗೇರಿಸಿದೆ.‌

ADVERTISEMENT

‘ಬಡತನದಲ್ಲೇ ಬೆಳೆದವನು ನಾನು. ಎಸ್ಸೆಸ್ಸೆಲ್ಸಿ ಬಳಿಕ ನಿರೀಕ್ಷೆಯಂತೆ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಅರ್ಧಕ್ಕೆ ಶಿಕ್ಷಣ ನಿಲ್ಲಿಸಿ ಉದ್ಯೋಗ ಹುಡುಕುತ್ತಿದ್ದಾಗ ಟೊಯೊಟಾ ಸಂಸ್ಥೆ ನೀಡುತ್ತಿದ್ದ ಉಚಿತ ಡಿಪ್ಲೊಮಾ ತರಬೇತಿ ಬಗ್ಗೆ ಗೊತ್ತಾಯಿತು. ಡಿಪ್ಲೊಮಾ ಬಳಿಕ ಎಂಜಿನಿಯರಿಂಗ್‌ ಸೇರಿಕೊಂಡೆ. ಈ ನಡುವೆ, ಈ ಅಂತರರಾಷ್ಟ್ರೀಯಮಟ್ಟದ ಸ್ಪರ್ಧೆಯ ಬಗ್ಗೆ ತಿಳಿಯಿತು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಸ್ಥಳೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದೆ. ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ನನ್ನನ್ನು ಗುರುತಿಸಿ, ಆರ್ಥಿಕ ನೆರವು ನೀಡಿದ್ದರಿಂದ ಬದುಕಿಗೊಂದು ಹೊಸ ತಿರುವು ಸಿಕ್ಕಿತು’ ಎಂದು ನೆನಪಿಸಿಕೊಂಡರು ಸುಮಂತ್‌.

‘ಕೌಶಲ ಭಾರತ ಯೋಜನೆಯಡಿ ಎನ್‌ಎಸ್‌ಡಿಸಿಯು ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ‌ಸ್ಥಳೀಯ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ‌ ಮಟ್ಟದ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶದ ಬಾಗಿಲು ತೆರೆದುಕೊಳ್ಳುತ್ತದೆ. 2019ರಲ್ಲಿ ರಷ್ಯಾದಲ್ಲಿ ನಡೆದ 45ನೇ ಜಾಗತಿಕ ಕೌಶಲ ಸ್ಪರ್ಧೆಯಲ್ಲಿ 60 ರಾಷ್ಟ್ರಗಳಿಂದ 56 ವಿಭಾಗಗಳಿಗೆ 1,600 ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ‘ಮೆಡಲಿಯನ್‌ ಆಫ್‌ ಎಕ್ಸ್‌ಲೆನ್ಸ್‌ ಪದಕ ಸಿಕ್ಕಿದೆ’ ಎಂದು ಸಂತಸ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.