ಚಿಣ್ಣರಿಗೆ ಪ್ರೇರಣೆ ಇವರು
ಅಬ್ದುಲ್ ಕಲಾಂ
ಜ್ಞಾನವನ್ನೇ ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡಿದ್ದ ಅಬ್ದುಲ್ ಕಲಾಂ ಮಕ್ಕಳಿಗೆ ತುಂಬಾ ಅಚ್ಚುಮೆಚ್ಚು. ವಿಜ್ಞಾನಿಯಾಗಿ, ದೇಶದ ಮೊದಲ ಪ್ರಜೆಯಾಗಿ (ರಾಷ್ಟ್ರಪತಿ) ಮಕ್ಕಳೊಂದಿಗೆ ಸದಾ ಒಡನಾಟ ಹೊಂದಿದ್ದವರು. ಮಗುವಿನ ಮನಸ್ಸಿನ ಕಲಾಂ, ಬಡತನದಿಂದ ಬೆಳೆದು ಎಲ್ಲರಿಗೂ ಮಾದರಿಯಾಗುವಂತೆ ಅರಳಿದ ಪ್ರತಿಭೆ. ಶ್ರದ್ಧೆ, ಸಾಧಿಸುವ ಛಲ ಇದ್ದರೆ ಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡಬಹುದು ಎನ್ನುವುದಕ್ಕೆ ನಿದರ್ಶನವಾಗಿರುವ ಅಬ್ದುಲ್ ಕಲಾಂ ಎಲ್ಲರಿಗೂ ಆದರ್ಶಪ್ರಾಯ. ವಿಜ್ಞಾನ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಬಯಸುವ ಚಿಣ್ಣರಿಗೆ ಸ್ಫೂರ್ತಿಯ ಚಿಲುಮೆ ಅವರು.
ಶಿವರಾಮ ಕಾರಂತ
ಮೇರು ಸಾಹಿತಿ ಕೋಟ ಶಿವರಾಮ ಕಾರಂತ ಅವರು ಮಕ್ಕಳ ಪಾಲಿಗೆ ಪ್ರೀತಿಯ ಕಾರಂತಜ್ಜ. ಸಾಹಿತ್ಯ, ಯಕ್ಷಗಾನ, ಪರಿಸರ ವಿಜ್ಞಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಿವರಾಮ ಕಾರಂತರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಅವರ ಮಕ್ಕಳ ಪ್ರೀತಿಗೆ ಸಾಕ್ಷಿಯಾಗಿ ನಿಲ್ಲುತ್ತದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ಬಾಲವನ. ಮಕ್ಕಳಿಗೆ ಪೂರಕವಾದ ಸಾಹಿತ್ಯ, ವಿಜ್ಞಾನ ಸಾಹಿತ್ಯವನ್ನು ಬರೆದು ಚಿಣ್ಣರ ಕಲಿಕೆಯನ್ನು ಸುಲಭವಾಗಿಸಲು ಯತ್ನಿಸಿದ್ದರು. ಹೊಸದನ್ನು ಕಲಿಯುವ ಹಂಬಲವಿರುವ ಮಕ್ಕಳಿಗೆ ಕಾರಂತಜ್ಜ ಯಾವಾಗಲೂ ಮಾದರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.