ADVERTISEMENT

ಮಳೆಗಾಲಕ್ಕೆ ವಿವಿಧ ವಿನ್ಯಾಸದ ರೇನ್‌ಕೋಟ್

ರೂಪಾ .ಕೆ.ಎಂ.
Published 8 ಜೂನ್ 2024, 0:30 IST
Last Updated 8 ಜೂನ್ 2024, 0:30 IST
   
ಜಿಟಿ ಜಿಟಿ ಮಳೆ ಸುರಿಯುವ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳ ಮನೆಗಳಲ್ಲಿ ಗೊರಬು ಇದ್ದರೆ ಮುಗೀತು. ಎಂಥ ಕೆಲಸವೂ ಸರಾಗವೆಂಬ ಕಾಲವೊಂದಿತ್ತು. ಅದರಲ್ಲಿಯೂ ಈ ಭಾಗದ ಕೃಷಿಕರು ಗಾಳಿ ಮಳೆಯೆನ್ನದೆ ಗೊರಬು ಹಾಕಿಕೊಂಡು ನೆಡುವ, ಉಳುವ ಚಿತ್ರ ಕಣ್ಮುಂದೆ ಬರುತ್ತದೆ. ಕೇವಲ ಮರದ ಎಲೆ ಹಾಗೂ ಕಡ್ಡಿ ಉಪಯೋಗಿಸಿ ಮಾಡಿದ ಈ ಪರಿಸರಸ್ನೇಹಿ ಗೊರಬುಗಳ ಜಾಗವನ್ನು ಆಧುನಿಕ ವಿನ್ಯಾಸಗಳನ್ನು ಹೊತ್ತ ರೇನ್‌ಕೋಟ್‌ಗಳು ಆಕ್ರಮಿಸಿ ಹಲವು ವರ್ಷಗಳೇ ಕಳೆದಿವೆ. 

ಮಳೆಗಾಲದ ಬರುವಿಕೆಯನ್ನು ಕಾಯುತ್ತಲೇ ಮಾರುಕಟ್ಟೆಗೆ ವಿವಿಧ ವಿನ್ಯಾಸದ ರೇನ್‌ಕೋಟ್‌ಗಳು ಬಂದಿಳಿದಿವೆ. ಸಂದರ್ಭಕ್ಕಾನುಸಾರ ತೊಡುವ ಫ್ಯಾಷನ್‌ ಬಂದ ಮೇಲಂತೂ ರೇನ್‌ಕೋಟ್‌ಗಳು ಬಟ್ಟೆ, ಗಾತ್ರ, ಬಣ್ಣದ ಆಧಾರದ ಮೇಲೆ  ಹೊಸ ಸ್ವರೂಪ ಪಡೆದು ಬೀಗುತ್ತಿವೆ. ಅಂಥ ಕೆಲವು ರೇನ್‌ಕೋಟ್‌ಗಳ ಸ್ಯಾಂಪಲ್‌ ಇಲ್ಲಿವೆ.

ಟ್ರೆಂಚ್‌ಕೋಟ್‌ 

 ಪ್ರಸಿದ್ಧ ವಸ್ತ್ರವಿನ್ಯಾಸಕಾರ ಥಾಮಸ್‌ ಬರ್ಬೆರ್ರಿ ಅವರು ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಯೋಧರಿಗಾಗಿ ವಿನ್ಯಾಸ ಮಾಡಿದ ಕೋಟ್‌ ಇದು. ಕಾಲಕ್ರಮೇಣ ಈ ವಿನ್ಯಾಸವನ್ನು ಹಾಗೆ ಉಳಿಸಿಕೊಂಡು ಹೊಸ ಆವಿಷ್ಕಾರ ಮಾಡಲಾಗಿದೆ.  ಉತ್ಕೃಷ್ಟ ಕಾಟನ್ ಬಟ್ಟೆಗೆ ರಾಸಾಯನಿಕ ಅಂಶಗಳನ್ನು ಸೇರಿಸಿ ಮಾಡುವುದರಿಂದ ಮಳೆಯ ನೀರು ಅಂಟುವುದಿಲ್ಲ. ಅಗಲವಾದ  ಕೊರಳುಪಟ್ಟಿಗೆ ಎರಡೂ ಕಡೆಗಳಲ್ಲಿ ಬಟನ್‌ ಇರುತ್ತದೆ. ಈ ಕೋಟ್ ಉದ್ದವಿದ್ದು, ಸೊಂಟದ ಭಾಗದಲ್ಲಿ ಬೆಲ್ಟ್‌ ಹಾಕಿಕೊಳ್ಳಬೇಕು. ಇದನ್ನು ಧರಿಸಿದವರ ನಿಲುವಿನಲ್ಲಿ ಸಹಜವಾದ ಗತ್ತೊಂದು ರೂಪುಗೊಂಡಿರುತ್ತದೆ.

ಪೊಂಚೋಸ್‌

ಬಿರುಮಳೆಯಲ್ಲಿಯೂ ಒಂದಿಷ್ಟು ನೆನೆಯದಂತೆ ರಕ್ಷಿಸಲು ಪೊಂಚೋಸ್  ನೆರವು ನೀಡಬಲ್ಲವು. ಇದು ಬಹಳ ಅಗಲವಾಗಿರುವ ತಲೆಯನ್ನು ಸುಲಭವಾಗಿ ಹುದುಗಿಸಲು ಅವಕಾಶವಿರುವಷ್ಟು ದೊಡ್ಡದಾಗಿರುತ್ತದೆ. ಸೊಂಟದವರೆಗೆ ಹಾಗೂ ಮೊಣಕಾಲಿನಷ್ಟು ಉದ್ದವಿರುವ ಪೊಂಚೋಸ್‌ಗಳು ಲಭ್ಯವಿದೆ. 

ADVERTISEMENT

ವಾಟರ್‌ಪ್ರೂಫ್‌ ರೇನ್‌ಕೋಟ್‌

ಮಳೆಗಾಲಕ್ಕೆ ಹೇಳಿ ಮಾಡಿಸಿದ ರೇನ್‌ಕೋಟ್‌ಗಳಿವು. ಅದರಲ್ಲಿಯೂ ಸ್ವಲ್ಪ ನೆನದರೂ ಕೆಮ್ಮು, ಶೀತ, ಜ್ವರಕ್ಕೆ ತುತ್ತಾಗುವವರಿಗೆ ವಾಟರ್‌ಪ್ರೂಫ್‌ ಉತ್ತಮ ಆಯ್ಕೆ. ಗಾಢಬಣ್ಣದಲ್ಲಿರುವ ವಾಟ್‌ಪ್ರೂಫ್‌ ರೇನ್‌ಕೋಟ್‌ಗಳಿಗೆ ಬೇಡಿಕೆ ಹೆಚ್ಚಿದೆ. ಶಾಲೆ ಹೋಗುವ ಮಕ್ಕಳಿಗೆ, ನಿತ್ಯ ಹೊರಗೆ ದುಡಿಯುವ ಉದ್ಯೋಗಸ್ಥರಿಗೆ ಅಗತ್ಯವೆನಿಸುವ ರೇನ್‌ಕೋಟ್‌ ಇದು. ದೂರದೂರುಗಳಿಗೆ, ಬೆಟ್ಟಗಳಿಗೆ, ಮರುಭೂಮಿ ಹಾಗೂ ಹಿಮಾಚಲ ಪ್ರದೇಶಗಳಿಗೆ ಪ್ರಯಾಣ ಹೊರಡುವವರಿಗಾಗಿ  ‘ವಿಂಡ್‌ ಪ್ರೂಫ್‌’ ಜಾಕೆಟ್‌ಗಳನ್ನು ರೂಪಿಸಲಾಗಿದೆ.  ಇವು ಎಂಥ ಗಾಳಿಯು ಮೈಸೋಕದಂತೆ ಮಾಡುವಷ್ಟು ತಾಕತ್ತನ್ನು ಹೊಂದಿರುತ್ತವೆ. 

ಬ್ರೀದೇಬಲ್‌ ರೇನ್‌ಕೋಟ್‌

ಬ್ರೀದೇಬಲ್‌ ರೇನ್‌ಕೋಟ್‌ಗಳು ಸಾಮಾನ್ಯವಾಗಿ ವಾಟರ್‌ ರೆಸಿಸ್ಟೆಂಟ್ ಅಥವಾ ವಾಟರ್‌ಪ್ರೂಫ್‌ ರೇನ್‌ಕೋಟ್‌ಗಳಾಗಿರುತ್ತವೆ. ಬ್ರೀದೇಬಲ್‌ ಎಂದರೆ ಈ ಕೋಟ್‌ಗಳನ್ನು ಧರಿಸಿದಾಗ ಬಟ್ಟೆಯಿಂದಾಗಿ ಹೆಚ್ಚಿನ ಶಾಖ ಉತ್ಪತ್ತಿಯಾಗಿ, ಮೈ ಬೆವರುವುದಿಲ್ಲ. ಅಷ್ಟರಮಟ್ಟಿಗೆ ಬಟ್ಟೆಯು ಮಳೆಯಿಂದ ರಕ್ಷಿಸುವುದಲ್ಲದೇ, ಮೈ ಶಾಖಗೊಳ್ಳದಂತೆ ತಡೆಯುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.