ನೀವು ಇವರ ಬಲ್ಲಿರೇನು?
ಪಂಜೆ ಮಂಗೇಶರಾವ್
‘ನಾಗರ ಹಾವೇ! ಹಾವೊಳು ಹೂವೇ! ಬಾಗಿಲ ಬಿಲದಲಿ ನಿನ್ನಯ ಠಾವೇ?’ ಎಂದು ಬರೆದು ಕನ್ನಡ ನಾಡಿನ ಮಕ್ಕಳಲ್ಲಿ ರೋಮಾಂಚನ ಮೂಡಿಸಿದವರು ‘ಕವಿಶಿಷ್ಯ’ ಎಂದೇ ಖ್ಯಾತರಾದ ಪಂಜೆ ಮಂಗೇಶರಾಯರು. ಕನ್ನಡ ಪಂಡಿತರಾಗಿ, ಶಾಲಾ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡಿದ, ಕಿರು ಕಾದಂಬರಿ, ಪತ್ತೇದಾರಿ ಕಾದಂಬರಿ, ಐತಿಹಾಸಿಕ ಕಥೆ ಮುಂತಾಗಿ ಹಲವು ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ ಇವರು ಖ್ಯಾತರಾಗಿದ್ದು ‘ಶಿಶು ಸಾಹಿತ್ಯದ ಜನಕ’ ಎಂದು. ‘ಮೂಡುವನು ರವಿ ಮೂಡುವನು..’ ಎಂದು ‘ಉದಯರಾಗ’ ಹಾಡಿ, ಮಕ್ಕಳ ಕಲ್ಪನೆಯೊಂದಿಗೆ ಆಟ ಆಡಿದವರು ಪಂಜೆ ಮಂಗೇಶರಾಯರು.
ದಿನಕರ ದೇಸಾಯಿ
ಜನನಾಯಕರಾಗಿ, ಜನಪ್ರತಿನಿಧಿಯಾಗಿ, ರೈತ, ಕಾರ್ಮಿಕ ಮುಖಂಡರಾಗಿ ನಾಡಿಗೆ ಅಪಾರ ಸೇವೆ ಸಲ್ಲಿಸಿದವರು ದಿನಕರ ದೇಸಾಯಿ. ಸಾಹಿತ್ಯ ಕ್ಷೇತ್ರದಲ್ಲೂ ಇವರದ್ದು ಪ್ರಮುಖ ಹೆಸರು. ವಿಶಿಷ್ಟ ಲವಲವಿಕೆ, ಲಯ, ಗೇಯದ ಚೌಪದಿಗಳನ್ನು ಬರೆದು ‘ಚುಟುಕು ಬ್ರಹ್ಮ’ನೆಂದು ಹೆಸರಾದ ಇವರಿಗೆ ಮಕ್ಕಳ ಬಗ್ಗೆ ವಿಶೇಷ ಕಳಕಳಿ. ಮಕ್ಕಳನ್ನು ಕುರಿತು ಇವರು ಬರೆದ ‘ಟಿಕ್ ಟಿಕ್ ಗೆಳೆಯಾ’, ‘ಬೆಕ್ಕು’ ಚಿಣ್ಣರು ಗುನುಗುವಂಥ ಜನಪ್ರಿಯ ಕವನಗಳು.
ಕುವೆಂಪು
‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ ಬರೆದು ರಸಋಷಿ ಎನ್ನಿಸಿಕೊಂಡರೂ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಅವರು ಮಕ್ಕಳನ್ನು ಮರೆಯಲಿಲ್ಲ. ‘ದೇವರಪೆಪ್ಪರಮೆಂಟೇನಮ್ಮಾ ಗಗನದೊಳಲೆಯುವ ಚಂದಿರನು’ (ಅರ್ಧ ಚಂದ್ರ ಕವಿತೆ) ಎಂದು ತಮ್ಮ ಕಲ್ಪನಾ ವಿಲಾಸ ಮೆರೆದ ಅವರು ‘ಕಿಂದರಿ ಜೋಗಿ’ಯ ಮೂಲಕ ಕನ್ನಡ ನಾಡಿನ ಮಕ್ಕಳನ್ನು ಮಂತ್ರಮುಗ್ಧರನ್ನಾಗಿಸಿದರು. ಇವರ ‘ನನ್ನ ಮನೆ’, ‘ತಿಂಗಳ್ ಮಾವ’, ‘ಬಣ್ಣದ ಚುಕ್ಕಿ’, ‘ಒಡವೆಗಳು’ ಮುಂತಾದ ಕವಿತೆಗಳು ಕಿರಿಯರ ಜತೆಗೆ ಹಿರಿಯರಿಗೂ ಪ್ರಿಯವಾದುದಾಗಿವೆ.
ಜಿ.ಪಿ.ರಾಜರತ್ನಂ
‘ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ’ (‘ತುತ್ತೂರಿ’ ಕವನ) ಎಂಬ ಸರಳ, ಸುಂದರ ರಚನೆಯ ಮೂಲಕ ಹಲವು ತಲೆಮಾರುಗಳ ಕನ್ನಡಿಗರ ಸ್ಮೃತಿಯಲ್ಲಿ ಉಳಿದವರು ಜಿ.ಪಿ.ರಾಜರತ್ನಂ. ಕನ್ನಡ ಪಂಡಿತರಾಗಿ, ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಇವರು ತಾವು ಬರೆದಷ್ಟೇ ಪ್ರಮುಖವಾಗಿ ಇತರರಿಂದಲೂ ಬರೆಯಿಸಿದವರು. ‘ನಮ್ಮ ಮನೆಯಲೊಂದು ಸಣ್ಣ ಪಾಪ ಇರುವುದು’, ‘ಒಂದು ಎರಡು, ಬಾಳೆಲೆ ಹರಡು’, ‘ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ’, ‘ರೊಟ್ಟಿ ಅಂಗಡಿ ಕಿಟ್ಟಪ್ಪಾ’ ಇಂತಹ ಶಿಶುಗೀತೆಗಳನ್ನು ಬರೆದು, ಬರೆಸಿ ಮಕ್ಕಳ ಸಾಹಿತ್ಯ ಪ್ರಕಾರದ ಬೆಳವಣಿಗೆಗೆ ಕಾರಣರಾದ ಪ್ರಾತಃಸ್ಮರಣೀಯರು.
ಸಿಸು ಸಂಗಮೇಶ
ಕನ್ನಡದ ಮಕ್ಕಳ ಸಾಹಿತ್ಯದಲ್ಲಿ ಮರೆಯಲಾಗದ ಹೆಸರು ಸಿಸು ಸಂಗಮೇಶ ಅವರದ್ದು. ವೃತ್ತಿಯಿಂದ ಅಧ್ಯಾಪಕರಾಗಿದ್ದ ಅವರು ಮಕ್ಕಳಿಗೆ ಪಾಠ ಹೇಳುವ ತನ್ಮಯತೆ ಮತ್ತು ಶ್ರದ್ಧೆಯಿಂದ ಶಿಶು ಸಾಹಿತ್ಯ ರಚಿಸಿದವರು. ಅವರು ಬಾಲ ಭಾರತಿ ಪ್ರಕಾಶನದಡಿ ಸುಮಾರು 80ಕ್ಕೂ ಹೆಚ್ಚು ಕೃತಿ ಪ್ರಕಟಿಸಿದರು. ಅವರ ‘ನಾಯಿ ಫಜೀತಿ’, ‘ಮಂಕು ಮರಿ’, ‘ಯಾರು ಜಾಣರು?’, ‘ಆಶೆಬುರುಕಿ ಆಶಾ’, ‘ದಾರಿಯ ಬುತ್ತಿ’ ಮುಂತಾದ ಕೃತಿಗಳು ಮಕ್ಕಳಿಗೆ ಅಚ್ಚುಮೆಚ್ಚು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.