ಆಹಾರ ಸಬ್ಸಿಡಿ ಮತ್ತು ಪಡಿತರ ವಿತರಣೆ ವ್ಯವಸ್ಥೆಯು ದೇಶದಲ್ಲಿ ಆಹಾರ ಅಭದ್ರತೆಯನ್ನು ಅಳೆಯಲು, ಆ ಅಭದ್ರತೆಯನ್ನು ಹೋಗಲಾಡಿಸಲು ಇರುವ ಮೂಲ ಆಧಾರಗಳು. ಆಹಾರ ಭದ್ರತೆ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು. ರಾಜ್ಯ ಸರ್ಕಾರವು 2015 ಮೇ ತಿಂಗಳಿನಿಂದ ಪರಿಷ್ಕೃತ ಪಡಿತರ ವಿತರಣಾ ವ್ಯವಸ್ಥೆಯನ್ನು (ಅನ್ನಭಾಗ್ಯ) ಜಾರಿಗೆ ತಂದಿದೆ. ರಾಜ್ಯದಾದ್ಯಂತ ಇರುವ ಆದ್ಯತೆಯ ಕುಟುಂಬಗಳಿಗೆ ಕರ್ನಾಟಕ ಸರ್ಕಾರವು ಆಹಾರ ಧಾನ್ಯಗಳನ್ನು ಈ ಯೋಜನೆಯ ಅಡಿ ಉಚಿತವಾಗಿ ವಿತರಿಸುತ್ತಿದೆ.
ಅಂತ್ಯೋದಯ ಅಥವಾ ಬಿಪಿಎಲ್ ಚೀಟಿ ಹೊಂದಿರುವ ಒಟ್ಟು 108.98 ಲಕ್ಷ (1.08 ಕೋಟಿ) ಕುಟುಂಬಗಳು ಈ ಯೋಜನೆ ವ್ಯಾಪ್ತಿಯಲ್ಲಿವೆ. ಅಂತ್ಯೋದಯ ಚೀಟಿ ಹೊಂದಿರುವವರಿಗೆ 35 ಕೆ.ಜಿ. ಧಾನ್ಯ, ಬಿಪಿಎಲ್ ಚೀಟಿ ಹೊಂದಿರುವವರಿಗೆ ಪ್ರತಿ ಯೂನಿಟ್‌ಗೆ 5 ಕೆ.ಜಿ. ಧಾನ್ಯ ಸಿಗುತ್ತದೆ.
ಉಚಿತವಾಗಿ ಧಾನ್ಯ ವಿತರಿಸುವುದು ಅಪೌಷ್ಠಿಕತೆ ನಿವಾರಣೆಯ ನಿಟ್ಟಿನಲ್ಲಿ ಒಳ್ಳೆಯದು.
ತಲಾ ಒಂದು ಕೆ.ಜಿ. ತಾಳೆ ಎಣ್ಣೆ, ಸಕ್ಕರೆ ಮತ್ತು ಅಯೋಡಿನ್ ಯುಕ್ತ ಉಪ್ಪನ್ನು ಧಾನ್ಯದ ಜೊತೆಯಲ್ಲೇ ಹಂಚಿಕೆ ಮಾಡುವುದು ಇನ್ನಷ್ಟು ಉಪಕಾರಿ. ಹಸಿವು ಮತ್ತು ಆಹಾರ ಅಭದ್ರತೆಯ ಸಮಸ್ಯೆಯನ್ನು ನಿವಾರಿಸುವಲ್ಲಿ, ಅದರಲ್ಲೂ ಬಡವರು ಎದುರಿಸುತ್ತಿರುವ ಇಂಥ ಸಮಸ್ಯೆಯನ್ನು ನಿವಾರಿಸುವಲ್ಲಿ, ಈ ಯೋಜನೆ ಮಹತ್ವದ್ದು.
ಅಭಿವೃದ್ಧಿ ಹೊಂದುತ್ತಿರುವ ಬಹುಪಾಲು ರಾಷ್ಟ್ರಗಳಲ್ಲಿನ ಜನ ತಮ್ಮ ಒಟ್ಟು ಆದಾಯದ ಶೇಕಡ 8ರಿಂದ 10ರಷ್ಟು ಹಣವನ್ನು ಮಾತ್ರ ಆಹಾರಕ್ಕಾಗಿ ಖರ್ಚು ಮಾಡುತ್ತಾರೆ. ಆದರೆ ಭಾರತದ ಬಡವರು ಮಾತ್ರ ತಮ್ಮ ಒಟ್ಟು ಆದಾಯದ ಶೇಕಡ 70ರಷ್ಟನ್ನು ಆಹಾರಕ್ಕಾಗಿ ಖರ್ಚು ಮಾಡುತ್ತಾರೆ. ನಿರ್ದಿಷ್ಟ ಆದಾಯ ಇಲ್ಲದಿರುವಿಕೆ ಸೃಷ್ಟಿಸುವ ಅನಿಶ್ಚಿತತೆಯೊಂದೇ ಅಲ್ಲದೆ, ಆಹಾರಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಿದ ನಂತರ ಬಡವರಿಗೆ ತಮ್ಮ ಇತರ ಅಗತ್ಯಗಳನ್ನು ಪೂರೈಸಿಕೊಳ್ಳಲು ತೀರಾ ಕಡಿಮೆ ಹಣ ಉಳಿಯುತ್ತದೆ.
ಆದರೆ, ಈಗ ಆಹಾರ ಉಚಿತವಾಗಿ ಅಥವಾ ತೀರಾ ಕಡಿಮೆ ದರಕ್ಕೆ ಸಿಗುವ ಕಾರಣ, ಬಡವರು ತಮ್ಮಲ್ಲಿ ಉಳಿಯುವ ಹಣವನ್ನು ಇತರ ಅಗತ್ಯಗಳಿಗಾಗಿ ಬಳಸಿಕೊಳ್ಳಬಹುದು. ಬಡವರಲ್ಲಿ ಸಾಕಷ್ಟು ಜಾಗೃತಿ ಮೂಡಿದಾಗ, ನಿಶ್ಚಿತ ಆದಾಯ ತರುವ ಉದ್ಯೋಗ ಸಿಕ್ಕಾಗ, ಅರ್ಥವ್ಯವಸ್ಥೆಯ ಮುಖ್ಯವಾಹಿನಿಯಲ್ಲಿ ಅವರನ್ನು ಸೇರಿಸಿಕೊಂಡಾಗ, ಅವರಿಗೆ ಉತ್ತಮ ಕೌಶಲಗಳನ್ನು ನೀಡಿದಾಗ ಮಾತ್ರ ಬಡವರು ತಮ್ಮ ಹಣವನ್ನು ಬೇರೆಡೆ ಹೂಡಿಕೆ ಮಾಡುತ್ತಾರೆ.
ಆದರೆ ಇದ್ಯಾವುದೂ ಇಲ್ಲದೆ, ಅನ್ನಭಾಗ್ಯ ಯೋಜನೆಗೆ ಪೂರಕವಾಗಿ ಸಮಗ್ರ ಯೋಜನೆಯೊಂದನ್ನು ರೂಪಿಸದೆ ಇದ್ದರೆ ಆಹಾರ ಭದ್ರತೆಯ ಉದ್ದೇಶ ಈಡೇರುವುದಿಲ್ಲ. ಅನ್ನಭಾಗ್ಯ ಯೋಜನೆಯನ್ನು ಸರ್ಕಾರವು ಆಹಾರ ಭದ್ರತೆಯ ದೃಷ್ಟಿಯಿಂದ ಮಾತ್ರವಲ್ಲದೆ, ಬಡತನ ವಿರುದ್ಧ ಹೋರಾಟ ನಡೆಸುವ ಪ್ರಮುಖ ಅಸ್ತ್ರವನ್ನಾಗಿ ನೋಡಬೇಕು.
ಪ್ರತಿ ತಿಂಗಳೂ ದೊಡ್ಡ ಪ್ರಮಾಣದಲ್ಲಿ ಆಹಾರ ಧಾನ್ಯ ಸಂಗ್ರಹಿಸಿ, ಅದನ್ನು ಹಂಚಿಕೆ ಮಾಡುವ ಸರ್ಕಾರದ ಯತ್ನ ಪ್ರಶಂಸಾರ್ಹವೇ ಆದರೂ, ವ್ಯವಸ್ಥೆಯಲ್ಲಿ ಇನ್ನೂ ಉಳಿದಿರುವ ಹಲವು ಸವಾಲುಗಳನ್ನು ನಾವು ನಿರ್ಲಕ್ಷಿಸಲಾಗದು. ಖೊಟ್ಟಿ ಮತ್ತು ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆ ಮಾಡಲು ನಿರುತ್ಸಾಹದಿಂದ ಪ್ರಯತ್ನಿಸಿದ ನಂತರವೂ, ನೈಜ ಬಡವರನ್ನು ನಾವು ಇನ್ನಷ್ಟೇ ಗುರುತಿಸಬೇಕಿದೆ.
1.3 ಕೋಟಿ ಕುಟುಂಬಗಳ ಪೈಕಿ 1.09 ಕೋಟಿಯನ್ನು ‘ಆದ್ಯತಾ ಕುಟುಂಬಗಳು’ ಎಂದು ಪಟ್ಟಿ ಮಾಡಿರುವುದರಿಂದ, ಕರ್ನಾಟಕವು ಬಡತನದಲ್ಲಿ ಮುಳುಗಿಹೋಗಿದೆ ಎಂಬ ಸಂದೇಶ ರವಾನೆಯಾಗುತ್ತದೆ. ಬಡ ಕುಟುಂಬಗಳು ಎಲ್ಲಾ ರೀತಿಯ ಬೆಂಬಲಗಳಿಗೆ ಅರ್ಹವಾಗಿವೆ. ಆದರೆ, ಬಡವರಿಗೆ ಮಾತ್ರ ದಕ್ಕಬೇಕಾದ ಸೌಲಭ್ಯಗಳನ್ನು ಕರ್ನಾಟಕದ ಶೇಕಡ 83ರಷ್ಟು ಜನ ಪಡೆಯುತ್ತಿದ್ದಾರೆ ಎಂಬುದನ್ನು ಸಮರ್ಥಿಸಿಕೊಳ್ಳುವುದು ಕಷ್ಟ. ಇವೆಲ್ಲದರ ಪರಿಣಾಮವಾಗಿ, ಅರ್ಹ ಬಡವರಿಂದ ಸಬ್ಸಿಡಿಯನ್ನು ಕಸಿದುಕೊಂಡು, ಅನರ್ಹ ಶ್ರೀಮಂತರಿಗೆ ಅದನ್ನು ಮರು ಹಂಚಿಕೆ ಮಾಡುವ ಕೆಲಸ ಆಗುತ್ತಿದೆ.
ಬಡತನವನ್ನು ಗುರುತಿಸಲು ಸರ್ಕಾರ ಸ್ಪಷ್ಟ ಮಾರ್ಗವನ್ನು ಕಂಡುಕೊಳ್ಳಬೇಕು. ಬಡ ಸಮುದಾಯದ ಆಹಾರ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಮಾತ್ರ ಪರಿಹರಿಸುವತ್ತ ಗಮನ ಕೇಂದ್ರೀಕರಿಸಬೇಕು. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಸಂಪನ್ಮೂಲ ದೊರೆಯುತ್ತದಲ್ಲದೆ, ಕಿರು ಪ್ರಮಾಣದ ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ, ದಕ್ಷವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ.
ರಾಜ್ಯದ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಸೋರಿಕೆಯ ಕಾರಣ ಆಗುತ್ತಿರುವ ವಾರ್ಷಿಕ ನಷ್ಟ ₹ 1,737.6 ಕೋಟಿ ಎಂದು ನಾನು ವಿಶೇಷ ತನಿಖೆ ನಡೆಸಿ, ಲೋಕಾಯುಕ್ತಕ್ಕೆ ವರದಿ ನೀಡಿದ್ದೆ. ಆ ವರದಿಯಲ್ಲಿ ಮಾಡಿದ ಶಿಫಾರಸುಗಳನ್ನು ಆಧರಿಸಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿತ್ತು. ಆದರೆ, ನಡುವಿನಲ್ಲಿ ಆಸಕ್ತಿ ಕಳೆದುಕೊಂಡಿತು.
ಸೋರಿಕೆಯನ್ನು ತಡೆಯದಿದ್ದರೆ, ಬಡವರಿಗೆ ಮೀಸಲಾದ ಅಮೂಲ್ಯ ಸಂಪನ್ಮೂಲವನ್ನು ಶ್ರೀಮಂತರು, ಬಲಾಢ್ಯರು ಕೊಳ್ಳೆ ಹೊಡೆಯುವುದು ಮುಂದುವರಿಯುತ್ತದೆ. ಈಗ ಜಾರಿಯಲ್ಲಿರುವ ವ್ಯವಸ್ಥೆಯನ್ನು ನಿರ್ವಹಿಸುವ ಹೊಣೆ ಇಲಾಖೆಯ ಮೇಲಿದೆ. ಆಹಾರ ಧಾನ್ಯ ಸಂಗ್ರಹ, ಸಾಗಾಟ ಮತ್ತು ಅದನ್ನು ರಾಜ್ಯದಾದ್ಯಂತ ಇರುವ ಅಂದಾಜು 20,778 ನ್ಯಾಯಬೆಲೆ ಅಂಗಡಿಗಳ ಮೂಲಕ ಹಂಚುವ ಹೊಣೆ ಇಲಾಖೆಯದ್ದು. ಆದರೆ, ಇಲಾಖೆಯು ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಮುಖ್ಯವಾಗಿ, ತಳ ಮಟ್ಟದಲ್ಲಿ ಈ ಸಮಸ್ಯೆ ಇದೆ.
ತಹಶೀಲ್ದಾರ್ ಕಚೇರಿಯೊಂದರಲ್ಲಿ ಇರುವ ಆಹಾರ ನಿರೀಕ್ಷಕನೊಬ್ಬ ಸಾಮಾನ್ಯ ಸಂದರ್ಭಗಳಲ್ಲಿ 100ರಿಂದ 150 ನ್ಯಾಯಬೆಲೆ ಅಂಗಡಿಗಳ ಮೇಲೆ ನಿಗಾ ಇಡಬೇಕು. ತನ್ನ ವ್ಯಾಪ್ತಿಗೆ ಬರುವ ನ್ಯಾಯಬೆಲೆ ಅಂಗಡಿಗಳ ಚಟುವಟಿಕೆಗಳ ಮೇಲೆ ವಿಸ್ತೃತ ಗಮನಹರಿಸಬೇಕು ಎಂದು ಹೇಳುವ ಆಹಾರ ನಿರೀಕ್ಷಕರ ಕೆಲಸಗಳ ಪಟ್ಟಿಯನ್ನು ನೋಡಿದರೆ ಸಾಕು, ಅವರಿಗೆ ವಹಿಸಿರುವ ಕೆಲಸ ಅದೆಷ್ಟು ಕಷ್ಟಕರ ಎಂಬುದು ಗೊತ್ತಾಗುತ್ತದೆ. ಇದರಿಂದಾಗಿ, ತಳಮಟ್ಟದಲ್ಲಿ ನಡೆಯುವ ಸಗಟು ಮತ್ತು ಚಿಲ್ಲರೆ ಅಂಗಡಿಗಳ ಮೇಲೆ ತೀರಾ ಕನಿಷ್ಠ ಅಥವಾ ನಿಗಾ ಇಲ್ಲದಿರುವ ಸ್ಥಿತಿ ನಿರ್ಮಾಣವಾಗಿದೆ.
ಆಹಾರ ಧಾನ್ಯ ವಿತರಣಾ ವ್ಯವಸ್ಥೆಯ ಕೊನೆಯು ಕೊಂಡಿ ನ್ಯಾಯಬೆಲೆ ಅಂಗಡಿ. ಅಲ್ಲದೆ, ಅನ್ನಭಾಗ್ಯ ಯೋಜನೆಯ ಮುಖ ಕೂಡ ಹೌದು. ಹಣದ ಪಾವತಿ, ದಾಸ್ತಾನು ವಿವರ ನೀಡುವ ಸಮಸ್ಯೆ ಮಾತ್ರವಲ್ಲದೆ, ನ್ಯಾಯಬೆಲೆ ಅಂಗಡಿಗಳು ಇತರ ಸಮಸ್ಯೆಗಳನ್ನೂ ಎದುರಿಸುತ್ತಿವೆ. ಪಡಿತರ ಖಾತರಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದರೂ, ನ್ಯಾಯಬೆಲೆ ಅಂಗಡಿಗಳು ತಿಂಗಳಲ್ಲಿ 3–4 ದಿನ ಮಾತ್ರ ಕೆಲವೇ ಗಂಟೆಗಳ ಕಾಲ ತೆರೆದಿರುತ್ತವೆ.
ಮಾರಾಟದಿಂದ ತಮಗೆ ಸಿಗುವುದು ತೀರಾ ಅಲ್ಪ ಪ್ರಮಾಣದ ಹಣವಾಗಿರುವ ಕಾರಣ, ತಿಂಗಳಿಡೀ ಅಂಗಡಿ ತೆರೆದಿಡಲು ಆಗದು ಎಂದು ನ್ಯಾಯಬೆಲೆ ಅಂಗಡಿಯವರು ಹೇಳುತ್ತಾರೆ. ನ್ಯಾಯಬೆಲೆ ಅಂಗಡಿಗಳನ್ನು ರಾಜಕೀಯ ಭಿಕ್ಷೆಯ ರೂಪದಲ್ಲಿ ನೋಡಲಾಗುತ್ತದೆ. ಅವುಗಳನ್ನು ನಿರ್ವಹಿಸುವುದು ಹಣಕಾಸಿನ ದೃಷ್ಟಿಯಿಂದ ಕಷ್ಟಸಾಧ್ಯವಾಗುವ ರೀತಿಯಲ್ಲೇ ರೂಪಿಸಲಾಗಿರುತ್ತದೆ. ಇದರಿಂದಾಗಿ, ನ್ಯಾಯಬೆಲೆ ಅಂಗಡಿಯವರಿಗೆ ಸಣ್ಣ–ಪುಟ್ಟ ಕಳ್ಳ ವ್ಯವಹಾರ ನಡೆಸಲು, ಗ್ರಾಹಕರಿಗೆ ಮೋಸ ಮಾಡಲು ಒಂದು ನೆಪ ಸಿಗುತ್ತದೆ.
ಆಹಾರ ಧಾನ್ಯಗಳನ್ನು ಜನರಿಗೆ ತಲುಪಿಸಲು ಸಂವೇದನಾಶೀಲವಾದ, ಜವಾಬ್ದಾರಿಯುತವಾದ ಮತ್ತು ಪರಿಣಾಮಕಾರಿಯಾದ ವ್ಯವಸ್ಥೆಯೊಂದನ್ನು ರೂಪಿಸಲು ವ್ಯವಸ್ಥಿತ ಹಾಗೂ ಗಟ್ಟಿ ಪ್ರಯತ್ನ ನಡೆಸುವವರೆಗೆ ಜನರಿಗೆ ಆಹಾರ ಭದ್ರತೆ ಒದಗಿಸುವ ತನ್ನ ಇರಾದೆ ಕನಸಿನ ರೂಪದಲ್ಲೇ ಉಳಿಯುತ್ತದೆ, ದೂರದೃಷ್ಟಿ ಇಲ್ಲದ ರಾಜಕೀಯ ಅಸ್ತ್ರವಾಗಿ ಮಾತ್ರವೇ ಇರುತ್ತದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.
ಸರ್ಕಾರದ ಉತ್ಸಾಹವು ಆಹಾರ ಧಾನ್ಯ ಸಂಗ್ರಹಣೆ ಮತ್ತು ಬಜೆಟ್‌ನಲ್ಲಿ ಅನುದಾನ ಮೀಸಲಿಡುವುದಕ್ಕೆ ಮಾತ್ರ ಸೀಮಿತವಾಗದೆ, ಈಗಿರುವ ವ್ಯವಸ್ಥೆಯಲ್ಲಿ ದೋಷಗಳನ್ನು ತಿದ್ದುವಲ್ಲಿಯೂ ಕಾಣಬೇಕು. ಇಲ್ಲವಾದರೆ, ಈ ಯೋಜನೆಯು ಸಾಮಾನ್ಯ ನಾಗರಿಕನಿಗೆ ತೊಂದರೆ ಕೊಟ್ಟು, ಭ್ರಷ್ಟ ಮತ್ತು ಅಸಮರ್ಥ ವ್ಯವಸ್ಥೆಗೆ ಹಣ ಮಾಡಿಕೊಳ್ಳಲು ಇನ್ನೊಂದು ಮಾರ್ಗ ಆಗುತ್ತದೆ.
(ಲೇಖಕ: ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ನ ಸಂಸ್ಥಾಪಕರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.