ಕರ್ನಾಟಕದ ಪ್ರಸಕ್ತ ಸರ್ಕಾರವನ್ನು ಅಹಿಂದ ಸರ್ಕಾರ ಎನ್ನಲಾಗುತ್ತಿದೆ. ದಲಿತ ಮುಖ್ಯಮಂತ್ರಿ ಬೇಕು ಎಂಬ ಬೇಡಿಕೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ‘ನಾನೂ ಕೂಡ ದಲಿತನೆ’ ಎಂಬ ಹೇಳಿಕೆ ಕೊಟ್ಟರು. ಆದರೆ, ಅವರ ಸರ್ಕಾರದ ದಲಿತ ಅಭ್ಯುದಯದ ಕಾರ್ಯಕ್ರಮಗಳನ್ನು ವಿಮರ್ಶೆಗೆ ಒಳಪಡಿಸಿದರೆ ಅವು ದಲಿತರ ಹಿತಾಸಕ್ತಿಗೆ ಅನುಗುಣವಾಗಿಲ್ಲ.
ರಾಜ್ಯದ 2015–16 ನೇ ಸಾಲಿನ ಮುಂಗಡ ಪತ್ರವನ್ನು ದಲಿತ ಬಜೆಟ್ ಎಂಬಂತೆ ಬಿಂಬಿಸಲಾಯಿತು. ಆದರೆ, ಬಜೆಟ್ಟಿನ ಕೆಲ ಅಂಶಗಳು ದಲಿತರ ಪ್ರಗತಿಗೆ ಪೂರಕವೋ ಅಥವಾ ಮಾರಕವೋ ಎಂಬ ವಿಶ್ಲೇಷಣೆಯಾಗಲಿಲ್ಲ. ಸಿಇಟಿ ಮತ್ತು ಕಾಮೆಡ್-ಕೆ ಮೂಲಕ ಸೀಟು ಪಡೆದು ಖಾಸಗಿ ಕಾಲೇಜುಗಳಲ್ಲಿ ಓದುವ ₹ 2.5 ಲಕ್ಷದಿಂದ ₹ 10 ಲಕ್ಷ ರೂಪಾಯಿಗಳ ಆದಾಯವಿರುವ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೇ 50 ರಷ್ಟು ಶುಲ್ಕವನ್ನು ಸರ್ಕಾರ ಭರಿಸುತ್ತದೆ ಎಂದು ಮುಂಗಡಪತ್ರದಲ್ಲಿ ತಿಳಿಸಲಾಯಿತು.
ಇದಕ್ಕೆ ಸಂಬಂಧಿಸಿದ ಆದೇಶ ಡಿಸೆಂಬರ್ 31, 2015ರಲ್ಲಿ ಹೊರಬಿದ್ದಿದೆ. ಇದರಿಂದ ಹಲವಾರು ದಶಕಗಳಿಂದ ಇದ್ದ ಪೂರ್ಣ ಶುಲ್ಕ ರಿಯಾಯಿತಿಯ ಸೌಲಭ್ಯವನ್ನು ಮೊಟಕುಗೊಳಿಸಲಾಗಿದೆ. ಖಾಸಗಿ ಕಾಲೇಜುಗಳಷ್ಟೇ ಅಲ್ಲದೆ ಸರ್ಕಾರಿ ಕಾಲೇಜುಗಳಲ್ಲೂ ದಲಿತ ವಿದ್ಯಾರ್ಥಿಗಳು ಶೇ 50ರಷ್ಟು ಶುಲ್ಕ ಪಾವತಿಸಬೇಕು. ಇದು ದಲಿತರ ಶಿಕ್ಷಣಕ್ಕೆ ಮಾರಕ. ಇಂತಹ ದಲಿತ ವಿರೋಧಿ ನಿರ್ಧಾರವನ್ನು ಅಹಿಂದ ಸರ್ಕಾರ ಯಾಕೆ ಕೈಗೊಂಡಿತು ಎಂಬುದೇ ಯಕ್ಷಪ್ರಶ್ನೆ.
ಬಿ. ಸೋಮಶೇಖರ್ ಅವರು ಶಿಕ್ಷಣ ಸಚಿವರಾಗಿದ್ದಾಗ 1997 ರಲ್ಲಿ ಪೂರ್ಣ ಶುಲ್ಕವನ್ನು ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಅನುದಾನದಿಂದ ಪಾವತಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಶುಲ್ಕ ಮರು ಪಾವತಿಗಾಗಿ 2011ರಿಂದ 3 ವರ್ಷದಲ್ಲಿ ಇದಕ್ಕಾಗಿ ತಗುಲಿದ ವೆಚ್ಚ ಕೇವಲ ₹ 45 ಕೋಟಿ ಎಂದು ಶಿಕ್ಷಣ ಸಚಿವರಾಗಿದ್ದ ದೇಶಪಾಂಡೆಯವರು ಹೇಳಿಕೆ ನೀಡಿದ್ದಾರೆ.
ಎಂಜಿನಿಯರಿಂಗ್, ವೈದ್ಯಕೀಯ ಮತ್ತಿತರ ಕೋರ್ಸುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಪಡೆಯುವ ಪರಿಶಿಷ್ಟರ ಸಂಖ್ಯೆ ಒಂದು ಅಂದಾಜಿನಂತೆ 2500 ಮಾತ್ರ. ಅವರ ಶುಲ್ಕ ಮರುಪಾವತಿಗೆ ವಾರ್ಷಿಕ ₹ 15 ಕೋಟಿಗಳಾಗಬಹುದು. 2015–16 ರ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಗಾಗಿ ₹ 16,356 ಕೋಟಿ ತೆಗೆದಿರಿಸಲಾಗಿದೆ.
ಅದರಲ್ಲಿ ಪರಿಶಿಷ್ಟರ ಶುಲ್ಕ ಪಾವತಿಸಲು ಹೆಚ್ಚೆಂದರೆ ₹ 20 ಕೋಟಿಯಾಗುತ್ತಿತ್ತಷ್ಟೆ. ದಲಿತರ ಶೈಕ್ಷಣಿಕ ಏಳಿಗೆಯ ಮನಸ್ಸು ಈ ಸರ್ಕಾರಕ್ಕೆ ಇನ್ನಾದರೂ ಬರಬೇಕಿದೆ. ರಾಜ್ಯ ಬಜೆಟ್ಟಿನಲ್ಲಿ 2014–15 ಸಾಲಿಗೆ ನಿಗದಿಪಡಿಸಿದ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯ ₹ 15,834 ಕೋಟಿ ಗಳಲ್ಲಿ ₹ 6 ಸಾವಿರ ಕೋಟಿ ವೆಚ್ಚವಾಗಿಲ್ಲ. ಆಂಧ್ರ ಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಕಾಯ್ದೆ ತರಲಾಗಿದೆ.
ಈ ಕಾಯ್ದೆಯಲ್ಲಿ ದಲಿತರ ಅಭ್ಯುದಯಕ್ಕೆ ವ್ಯತಿರಿಕ್ತವಾಗಿರುವ ಉಪಕಲಂ ಅನ್ನು ರದ್ದುಪಡಿಸಲು ದಲಿತ ಸಂಘಟನೆಗಳು ಒತ್ತಾಯಿಸಿದವು. ಕಲಂ 7 ಡಿ ಅನ್ನು ತೆಗೆದುಹಾಕಿದಾಗ ಮಾತ್ರ ಈ ಶಾಸನಕ್ಕೆ ದಲಿತರ ನೈಜ ಸಬಲೀಕರಣದ ಅರ್ಥ ಬರುತ್ತದೆ. ಕೇಂದ್ರ ಸರ್ಕಾರದಲ್ಲಿ ಬ್ಯಾಕ್‌ಲಾಗ್ ಭರ್ತಿಗೆ ಕ್ರಾಂತಿಕಾರಿ ಸ್ಪರ್ಶ ನೀಡಿದವರು ಅಂದಿನ ಪ್ರಧಾನಿಯಾದ ರಾಜೀವ್ ಗಾಂಧಿಯವರು. ಕೇಂದ್ರದ ಆದೇಶ ರಾಜ್ಯದಲ್ಲೂ ಜಾರಿಗೆ ಬಂತು.2001ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣರವರು ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ವಿಶೇಷ ಆದೇಶ ಹೊರಡಿಸಿದರು.
ಸಂಪುಟದ ಉಪಸಮಿತಿ ರಚಿಸಿ ಕಾಲಕಾಲಕ್ಕೆ ಬ್ಯಾಕ್‌ಲಾಗ್ ಭರ್ತಿಯ ಪ್ರಗತಿ ಪರಿಶೀಲನೆ ಮಾಡುವಂತೆ ನೋಡಿಕೊಂಡರು. ಆ ಸಮಿತಿಯಲ್ಲಿ ಕೆ. ಎಚ್. ರಂಗನಾಥ್, ಮಲ್ಲಿಕಾರ್ಜುನ ಖರ್ಗೆ, ಕಾಗೋಡು ತಿಮ್ಮಪ್ಪ ಅವರಂತಹ ನಾಯಕರಿದ್ದರು. ಆದರೆ, ಈಗಿನ ಸರ್ಕಾರದಲ್ಲಿ ಪರಿಶಿಷ್ಟರ ಹಿಂಬಾಕಿ ಹುದ್ದೆಗಳ ಭರ್ತಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿಲ್ಲ, ಹಿಂಬಾಕಿ ಹುದ್ದೆಗಳನ್ನು ಗುರುತಿಸುತ್ತಿಲ್ಲ. ಈಗ ನಾವು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 125 ನೇ ಜಯಂತಿಯ ಸಂದರ್ಭದಲ್ಲಿದ್ದೇವೆ.
ವರ್ಷಪೂರ್ತಿ ಅವರ ಜಯಂತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಲಾಯಿತು. ಅದೂ ಆಗಲಿಲ್ಲ. ಹಿಂದುಳಿದ ವರ್ಗಗಳ ಪಿಎಚ್.ಡಿ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹ 5 ಸಾವಿರ ರೂಪಾಯಿಗಳ ಶಿಷ್ಯವೇತನ ನೀಡುವ ಸರ್ಕಾರದ ಆದೇಶವನ್ನು 2015ರ ಆಗಸ್ಟ್ ನಲ್ಲಿ ಹೊರಡಿಸಲಾಗಿದೆ. ಇಂತಹ ಭಾಗ್ಯ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಪರಿಶಿಷ್ಟರಿಗೆ ಸಿಗುತ್ತಿಲ್ಲ. ಆಯಾಯ ವಿಶ್ವವಿದ್ಯಾಲಯಗಳ ನೀತಿನಿಯಮಗಳಂತೆ ಪರಿಶಿಷ್ಟರಿಗೆ ಶಿಷ್ಯವೇತನ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಕಾಪಾಡುವಲ್ಲಿ ಇನ್ನಷ್ಟು ಮುತುವರ್ಜಿ ವಹಿಸಬೇಕಿದೆ. ಉಳಿದ ಅವಧಿಯಲ್ಲಾದರೂ ಅಹಿಂದ ಸರ್ಕಾರ ಅಂತಹ ಕಾಳಜಿಯನ್ನು ರೂಡಿಸಿಕೊಳ್ಳಬೇಕಿದೆ.
-ಪ್ರೊ. ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು
***
ಕಣ್ಣಿಗೆ ಕಾಣುವ ಸಾಧನೆ ಇಲ್ಲ
ಸಿದ್ದರಾಮಯ್ಯ ಅವರ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದ್ದರೂ ಕಣ್ಣಿಗೆ ಕಾಣುವಂತಹ ಯಾವುದೇ ಸಾಧನೆ ಇಲ್ಲ. ಅಧಿಕಾರಿಗಳ ವರ್ಗಾವಣೆಯಲ್ಲಿಯೇ ಕಾಲ ಹರಣ ಮಾಡಲಾಗುತ್ತಿದೆ. ಕೆಲವು ಸಚಿವರು ವಿಧಾನಸೌಧಕ್ಕೇ ಬರುತ್ತಿಲ್ಲ. ಮುಖ್ಯಮಂತ್ರಿ ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಅಹಿಂದ ವರ್ಗವನ್ನು ಓಲೈಸುವ ಬದಲು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.
-ಶಿವರಾಜ್ ಸಿ. ಶಿವಮೊಗ್ಗ
***
ರೈತರನ್ನು ತಲುಪದ ಯೋಜನೆಗಳು
ಸರ್ಕಾರ ರೈತರಿಗಾಗಿ ಎಷ್ಟೆಲ್ಲಾ ಯೋಜನೆ ರೂಪಿಸಿದರೂ ದಿನದಿಂದ ದಿನಕ್ಕೆ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆಂದರೆ ಇದಾವುದೂ ರೈತರನ್ನು ತಲುಪಿಯೇ ಇಲ್ಲ ಎಂದರ್ಥ. ಈ ವರ್ಷ ಬರಗಾಲದಿಂದಾಗಿ ರೈತರು ತೊಂದರೆ ಅನುಭವಿಸಿದರೂ, ಕಳೆದ ಆಯವ್ಯಯದಲ್ಲೇ ಘೋಷಿಸಿದ್ದ ವಿಕೋಪ ಉಪಶಮನ ನಿಧಿ ಯಿಂದ ಹೆಚ್ಚಿನ ಸಹಾಯ ದೊರಕಿದಂತೇನೂ ಕಾಣುತ್ತಿಲ್ಲ.
ತರಕಾರಿ, ಹಣ್ಣು, ಆಹಾರ ಧಾನ್ಯಗಳು ಹೀಗೆ ಯಾವುದೇ ಬೆಳೆ ಬೆಳೆಯಲು ಮಾಡಿದ ಖರ್ಚು ಸಹ ಬಾರದಂತಹ ಸ್ಥಿತಿ ಇದೆ. ಪ್ರತಿಯೊಂದು ಬೆಳೆಯೂ ದರ ಕುಸಿತದ ಆಪತ್ತಿಗೆ ಸಿಲುಕಿದೆ. ರೈತರಿಗಾಗುತ್ತಿರುವ ನಷ್ಟದ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎಂದರೆ ಅದೊಂದು ದೊಡ್ಡ ಲೋಪವಲ್ಲವೇ?
ನಾವು ಸರ್ಕಾರದಿಂದ ನಿರೀಕ್ಷಿಸಿದ್ದು
* ಬೆಳೆದ ಬೆಳೆಗೆ ಉತ್ತಮ ಬೆಲೆ.
* ಸಕಾಲದಲ್ಲಿ ಗುಣಮಟ್ಟದ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಸುರಕ್ಷಿತ ಕೀಟ, ಕ್ರಿಮಿ, ಕಳೆನಾಶಕಗಳು.
* ಸಕಾಲದಲ್ಲಿ, ಸಮರ್ಪಕವಾಗಿ, ಅರ್ಹ ರೈತರಿಗೆ ಕೃಷಿಗಾಗಿ ನೀಡುತ್ತಿರುವ ಸಬ್ಸಿಡಿಗಳನ್ನು ವಿತರಿಸುವ ಯೋಜನೆಗಳು.
* ವಿಶ್ವವಿದ್ಯಾಲಯಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ, ರೈತರಿಗಾಗಿ ನಡೆಸುತ್ತಿರುವ ಸಂಶೋಧನೆಗಳು, ಶೀಘ್ರವಾಗಿ, ರೈತರ ಜಮೀನುಗಳನ್ನು ತಲುಪಲು ಬೇಕಾದ ಸಮರ್ಪಕ ಕೃಷಿ ವಿಸ್ತರಣೆ ಕಾರ್ಯಕ್ರಮ
* ಪಶುವೈದ್ಯರ ಕೊರತೆ ನೀಗಿಸಿ, ಸುಸಜ್ಜಿತ ಸಂಚಾರಿ ಪಶುವೈದ್ಯಕೀಯ ಆಸ್ಪತ್ರೆ ರೈತರ ಮನೆಬಾಗಿಲಿಗೆ ಬರುವ ವ್ಯವಸ್ಥೆ.
* ಬೆಳಗಿನ ಹೊತ್ತು, ಕನಿಷ್ಠ 8 ಗಂಟೆಗಳ ಕಾಲ 3 ಫೇಸ್ ವಿದ್ಯುತ್
ಆದರೆ ಸರ್ಕಾರ ನಮ್ಮ ನಿರೀಕ್ಷೆಯನ್ನೂ ಮೀರಿ ಭರವಸೆಗಳ ಬಳುವಳಿ ಕೊಟ್ಟಿತು. ಆಯವ್ಯಯ ಮಂಡಿಸುವಾಗ ಇರುವ ಆಸಕ್ತಿ, ಯೋಜನೆಗಳನ್ನು ಜಾರಿಗೆ ತರುವಾಗ ಇದ್ದಿದ್ದರೆ ರೈತರ ಬದುಕು ಸಹ್ಯವಾಗುತ್ತಿತ್ತು. ರೈತರ ಆತ್ಮಹತ್ಯೆಗಳ ಪ್ರಮಾಣ ತಗ್ಗುತ್ತಿತ್ತು. ಕೃಷಿ ಕ್ಷೇತ್ರದ ಮೂಲಭೂತ ತೊಂದರೆಗಳು, ಸಮಸ್ಯೆಗಳನ್ನು ಗುರುತಿಸಿಯೂ, ರೈತರ ಯಾವ ಸವಾಲಿಗೂ ಪರಿಹಾರ ಸಾವಿರ ದಿನಗಳಲ್ಲೂ ದೊರಕಲಿಲ್ಲವೆಂದರೆ, ರೈತರು ಈ ಸರ್ಕಾರದಿಂದ ಇನ್ನೇನನ್ನೂ ತಾನೇ ನಿರೀಕ್ಷಿಸಲು ಸಾಧ್ಯ.
-ಸಿ. ಎಸ್. ಅನುರಾಧಾ, ರಾಯರಹುಂಡಿ ಮೈಸೂರು ಜಿಲ್ಲೆ
***
ನಿರಾಶಾದಾಯಕ ಸಾವಿರ ದಿನ
ಸರ್ಕಾರವು ಸಾವಿರ ದಿನಗಳನ್ನು ಪೂರೈಸಿದೆ, ಆದರೆ ಯಾವುದೇ ರೀತಿಯ ಮಹತ್ವದ ಯೋಜನೆಗಳು ಜಾರಿಯಾಗಿಲ್ಲ. ರಾಜ್ಯದಲ್ಲಿ ಬದಲಾವಣೆ ಕಂಡುಬಂದಿಲ್ಲ. ಇದನ್ನು ನೋಡಿದರೆ ಸರ್ಕಾರಕ್ಕೆ ಯಾವುದೇ ದಿಕ್ಸೂಚಿ ಇದ್ದಂತೆ ಕಾಣುತ್ತಿಲ್ಲ. ಕೇವಲ ದಿನಗಳನ್ನು ಮುಂದುಹಾಕುತ್ತಿದೆ. ಉದ್ಯೋಗದಲ್ಲಿ ಯಾವುದೇ ರೀತಿಯ ಹೆಚ್ಚಿನ ನೇಮಕಾತಿಗಳು ಆಗಿಲ್ಲ. ಕೆಪಿಎಸ್ಸಿಗೆ ಸರಿಯಾದ ರೀತಿಯಲ್ಲಿ ಸದಸ್ಯರ ನೇಮಕಾತಿಯಾಗಿಲ್ಲ. ಅದು ತನ್ನ ಜವಾಬ್ದಾರಿ ಮರೆತು, ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಹೊಸ ಸರ್ಕಾರ ಬಂದಾಗಿನಿಂದ ಹಿಡಿದು ಇಂದಿನವರೆಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಉನ್ನತ ಶಿಕ್ಷಣವಂತೂ ಸಂಪೂರ್ಣ ಹಾಳಾಗಿದೆ. ಆಯಾ ಖಾತೆಗಳ ಸಚಿವರು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಬೇರೆ ಖಾತೆಗಳ ಸಚಿವರು ಹಾಗೂ ಮುಖ್ಯಮಂತ್ರಿಯೂ ಕೂಡ ಇದಕ್ಕೆ ಹೊರತಾಗಿಲ್ಲ. ಆರೋಗ್ಯ, ಪಡಿತರ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿಯೂ ಪ್ರಗತಿ ಕಂಡಿಲ್ಲ. ಸರ್ಕಾರಕ್ಕೆ ಇನ್ನೂ ಒಳ್ಳೆಯ ಅವಕಾಶವಿದೆ. ಈಗಲಾದರೂ ಎಚ್ಚೆತ್ತು ಎಲ್ಲ ವಿಭಾಗಗಳಲ್ಲಿ ಕ್ರಾಂತಿಕಾರಕ ಅಭಿವೃದ್ಧಿ ಸಾಧಿಸಲು ಪಣ ತೊಡಬೇಕಾಗಿದೆ.
-ರಾಜು ಕಾಂಬಳೆ, ಧಾರವಾಡ
***
ಸ್ಪಂದಿಸದ ಸರ್ಕಾರ
ಸರ್ಕಾರದ ಮಹಾತ್ವಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಸರಿಯಾದ ರೀತಿಯಲ್ಲಿ ಜಾರಿಯಾಗಲಿಲ್ಲ. ಇದರ ಬಗ್ಗೆ ದೂರು ನೀಡಿದರೂ ಏನು ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೌಕರಿ ಮಾಡುತ್ತಿರುವ ನಮ್ಮಂಥವರ ಸಮಸ್ಯೆಗಳ ಬಗ್ಗೆ ಕೇಳುವರಿಲ್ಲ.
ನಮಗೆ ವೇತವನ್ನು ಸರಿಯಾಗಿ ನೀಡುತ್ತಿಲ್ಲ. ಸಾರ್ವಜನಿಕರು ಓಡಾಡುವ ಕೆ.ಎಸ್.ಆರ್.ಟಿ ಬಸ್ಸುಗಳಲ್ಲಿ ಒಮ್ಮೆಲೇ ಮಾಸಿಕ ಪಾಸ್ ದರವನ್ನು ₹ 500 ಹೆಚ್ಚಿಸಲಾಗಿದೆ. ಸತತವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಆಗುತ್ತಿದ್ದರೂ ಬಸ್ ಪ್ರಯಾಣ ದರ ಕಡಿಮೆಯಾಗಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ.
-ನವೀನ ಕುಮಾರ್, ದೇವನಹಳ್ಳಿ
***
ಕುಟುಂಬ ದೂರ ಇಟ್ಟ ರಾಜಕಾರಣಿ
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುಟುಂಬದ ಜನರನ್ನು ಆಡಳಿತದಿಂದ ದೂರ ಇಟ್ಟಿದ್ದಾರೆ. ಅಲ್ಲದೆ ತಮ್ಮ ಜಾತಿಯ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ಆಡಳಿತದಲ್ಲಿ ಸಣ್ಣಪುಟ್ಟ ತಪ್ಪುಗಳು ಆಗಿರಬಹುದು. ಆದರೆ ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಕಪ್ಪು ಚುಕ್ಕಿಗಳು ಕಡಿಮೆ. ಮೂಲ ಕಾಂಗ್ರೆಸ್ಸಿಗರು, ವಲಸೆ ಕಾಂಗ್ರೆಸ್ಸಿಗರ ಕಚ್ಚಾಟದ ನಡುವೆಯೂ ಸಿದ್ದರಾಮಯ್ಯ ಅವರು ಸಾವಿರ ದಿನಗಳನ್ನು ಪೂರೈಸಿದ್ದು ಉತ್ತಮ ಸಾಧನೆ. ಮುಂದಿನ ದಿನಗಳಲ್ಲಿಯೂ ಅವರು ಇನ್ನಷ್ಟು ಉತ್ತಮ ಆಡಳಿತ ನೀಡುವಂತಾಗಲಿ.
-ಕೆ.ತಮ್ಮಯ್ಯ, ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.