ಶಾಸಕಾಂಗದ ಪರಿಧಿಯಲ್ಲಿ ಸೃಷ್ಟಿಯಾದ ಸಂಸ್ಥೆಗಳಿಗೆ ಕ್ರಿಯಾಶೀಲವಾಗಿರಲು ಅವಕಾಶ ಮಾಡಿಕೊಟ್ಟಾಗ, ತಮಗೆ ವಹಿಸಿದ ಕಾರ್ಯ ಪೂರೈಸಲು ಅನುವು ಮಾಡಿಕೊಟ್ಟಾಗ ಮಾತ್ರ ಪ್ರಜಾತಂತ್ರ ಎಂಬ ವ್ಯವಸ್ಥೆಯು ಜನತೆಯ ಪಾಲಿಗೆ ಅರ್ಥಪೂರ್ಣವಾಗಲು ಸಾಧ್ಯ.
ನಿಯಮಗಳನ್ನು ರಚಿಸುತ್ತ, ಅವುಗಳನ್ನು ಅನುಷ್ಠಾನಕ್ಕೆ ತರುತ್ತ ಸಮಾಜದಲ್ಲಿ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದಕ್ಕೆ ಮತ್ತು ಮಾನವನ ಅಭಿವೃದ್ಧಿಗೆ ಪ್ರಜಾತಾಂತ್ರಿಕ ಸಂಸ್ಥೆಗಳು ಅವಶ್ಯಕ. ನೈತಿಕ ಶಕ್ತಿ ಹೊಂದಿರುವ, ಸಂಸ್ಥೆಯನ್ನು ಮುನ್ನಡೆಸುವ ಶಕ್ತಿ ಹೊಂದಿರುವ ವ್ಯಕ್ತಿಗಳನ್ನು ನೇಮಿಸಿದಾಗ ಮಾತ್ರ ಅಂಥ ಸಂಸ್ಥೆಗಳು ನಿಜವಾಗಿಯೂ ಪರಿಣಾಮಕಾರಿಯಾಗಲು ಸಾಧ್ಯ. ನಮ್ಮಂಥ ‘ಗದ್ದಲದ’, ‘ಅನಾರೋಗ್ಯಕರ’ ಪ್ರಜಾಪ್ರಭುತ್ವ ಇರುವ ದೇಶಗಳಲ್ಲಿ ಇಂಥ ಸಂಸ್ಥೆಗಳ ಪಾತ್ರ ಮಹತ್ವದ್ದು.
ಭಾರತದಂತಹ ದೇಶಗಳಲ್ಲಿ ಸಾಮಾನ್ಯ ಸಂದರ್ಭಗಳಲ್ಲಿ ಜನ ನಿಯಮಗಳನ್ನು ಪಾಲಿಸುವುದಿಲ್ಲ. ಇಂಥ ವ್ಯವಸ್ಥೆ ಇರುವ ದೇಶದಲ್ಲಿ ಈ ಸಂಸ್ಥೆಗಳ ಪಾತ್ರ ದೊಡ್ಡದಿರುತ್ತದೆ. ಬಹುಪಾಲು ಪ್ರಜಾತಾಂತ್ರಿಕ ಸಂಸ್ಥೆಗಳು ನಿಯಂತ್ರಕನ, ನಿಯಮ ಜಾರಿಗೊಳಿಸುವವನ ಪಾತ್ರ ನಿರ್ವಹಿಸುತ್ತವೆ. ನಿರ್ದಿಷ್ಟ ಕೆಲಸವೊಂದನ್ನು ಮಾಡುವುದರಿಂದ ತಮಗೆ ಇಂಥ ಲಾಭ ಸಿಗುತ್ತದೆ ಅಥವಾ ಇಂಥ ಶಿಕ್ಷೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಎಷ್ಟು ಆಳವಾಗಿದೆ ಎಂಬುದರ ಮೇಲೆ ಈ ಸಂಸ್ಥೆಗಳ ಸಾರ್ಥಕ್ಯ ನಿಂತಿದೆ.
ನಾಗರಿಕರು ಮತ್ತು ಕಾನೂನು ರಚಿಸುವ ಶಾಸಕರು ಇಂಥ ಸಂಸ್ಥೆಗಳಿಗೆ ಕೊಡಬೇಕಾಗಿರುವ ಗೌರವವನ್ನು ಕೊಟ್ಟಾಗ ಮಾತ್ರ ಸಂಸ್ಥೆಗಳು ತಮಗೆ ವಹಿಸಿದ ಕೆಲಸ ಮಾಡಬಲ್ಲವು. ಸಂಸ್ಥೆಗಳಿಗೆ ಗೌರವ ಕೊಡುವ ಅತಿದೊಡ್ಡ ಮಾರ್ಗವೆಂದರೆ, ಆ ಸಂಸ್ಥೆಗಳು ಅನುಷ್ಠಾನಗೊಳಿಸಬೇಕಿರುವ ನಿಯಮಗಳನ್ನು ಪಾಲಿಸುವುದು.
ರಾಜನಿಗೆ ತಾಕತ್ತು ಬರುವುದು ಆತನ ಬಳಿ ಇರುವ ಸೈನ್ಯದಿಂದ ಅಲ್ಲ. ಅವನ ಶಕ್ತಿ ಇರುವುದು, ರಾಜನ ಮಾತನ್ನು ಎಲ್ಲರೂ ಕೇಳುತ್ತಾರೆ ಎಂಬ ನಂಬಿಕೆ ಸೈನ್ಯದಲ್ಲಿರುವ ವ್ಯಕ್ತಿಗಳಲ್ಲಿ ಇರುವುದರಿಂದ, ರಾಜನ ಮಾತು ಕೇಳುವುದೇ ಉತ್ತಮ ಕಾರ್ಯ ಎಂಬ ನಂಬಿಕೆಯಿಂದ. ಪ್ರಜಾಜಾಂತ್ರಿಕ ಸಂಸ್ಥೆಗಳು ಹೊಂದಿರುವ ವಿಶ್ವಾಸಾರ್ಹತೆ, ಬೆಳೆಸಿಕೊಂಡಿರುವ ಪ್ರತಿಷ್ಠೆ ಕೂಡ ಆ ಸಂಸ್ಥೆಗಳು ಸುಗಮವಾಗಿ ಕೆಲಸ ಮಾಡಿಕೊಂಡಿರುವಲ್ಲಿ ಮಹತ್ವದ ಪಾತ್ರವಹಿಸುತ್ತವೆ.
ಪ್ರಜಾಜಾಂತ್ರಿಕ ಸಂಸ್ಥೆಗಳು ಎಷ್ಟು ಪರಿಣಾಮಕಾರಿಯಾಗಿವೆ, ದಕ್ಷವಾಗಿವೆ ಎಂಬ ವಿಚಾರಗಳು ರಾಜ್ಯದ ಅಥವಾ ದೇಶದ ಉತ್ತಮ ಆಡಳಿತದ ಸೂಚಕಗಳೂ ಹೌದು. ಇದನ್ನು ಆಧರಿಸಿ ಹೇಳುವುದಾದರೆ, ಕರ್ನಾಟಕದದ್ದೊಂದು ವಿಷಾದದ ಕತೆ ಇದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದ ಹಲವು ಪ್ರಜಾತಾಂತ್ರಿಕ ಸಂಸ್ಥೆಗಳು ವ್ಯವಸ್ಥಿತ ಕುಸಿತ ಕಂಡಿವೆ.
ಇದಕ್ಕಿಂತ ಮುಖ್ಯವಾಗಿದ್ದು, ಪ್ರಜಾತಾಂತ್ರಿಕ ಸಂಸ್ಥೆಗಳ ಬಗ್ಗೆ ರಾಜಕೀಯ ವಲಯ ತೋರಿರುವ ನಗಣ್ಯ ಎನ್ನಬಹುದಾದ ಗೌರವ. ಈ ಬೆಳವಣಿಗೆ, ಪ್ರಜಾತಂತ್ರಕ್ಕೆ ಕೆಟ್ಟ ಸುದ್ದಿಯಷ್ಟೇ ಅಲ್ಲ, ಇದು ರಾಜ್ಯ ಮತ್ತೆಂದೂ ಸುಧಾರಿಸಿಕೊಳ್ಳಲು ಆಗದಂತಹ ಪರಿಣಾಮ ಬೀರಿರುವಂತಿದೆ.
ಅಧಿಕಾರಶಾಹಿಯ ನಿರ್ವಹಣೆ ಮತ್ತು ಎಲ್ಲ ಹಂತದ ಅಧಿಕಾರಿಗಳ ವರ್ಗಾವಣೆಯ ವಿಚಾರವನ್ನು ಒಮ್ಮೆ ಪರಿಶೀಲಿಸೋಣ. ಸಿಬ್ಬಂದಿ ಆಡಳಿತವನ್ನು ರಾಜಕೀಯಗೊಳಿಸುವುದು ಆಡಳಿತದ ಅವನತಿಯ ಆರಂಭವನ್ನು ಹೇಳುತ್ತದೆ. ಪ್ರಜಾತಂತ್ರ ವ್ಯವಸ್ಥೆಯೊಂದು ಪರಿಣಾಮಕಾರಿ ಆಗಿರಬೇಕು ಎಂದಾದರೆ, ಕಾರ್ಯಾಂಗವು ರಾಜಕೀಯ ಲಾಭಗಳಿಗೆ ಸ್ಪಂದಿಸಬಾರದು. ಅಲ್ಲದೆ, ರಾಜಕಾರಣಿಗಳ ವಲಯವು, ವರ್ಗಾವಣೆ ಮತ್ತು ನಿಯೋಜನೆಯನ್ನು ತಮ್ಮ ಮಾತು ಕೇಳುವ ಅಧಿಕಾರಿಗಳಿಗೆ ಉಡುಗೊರೆ ನೀಡುವ ರೂಪದಲ್ಲಿ ಬಳಸಿಕೊಳ್ಳಬಾರದು.
ರಾಜ್ಯದ ಎಲ್ಲೆಡೆ ಉನ್ನತ ಹುದ್ದೆಗಳಿಗೆ ಜಾತಿ ಆಧಾರದಲ್ಲಿ ನಿಯೋಜನೆ ನಡೆದ ಕಾರಣ ರಾಜ್ಯದ ಆಡಳಿತ ಚೌಕಟ್ಟು ಇನ್ನಷ್ಟು ದುರ್ಬಲಗೊಂಡಿದೆ. ಇವತ್ತು ಪ್ರಮುಖ ಮತ್ತು ಉನ್ನತವಾದ 400 ಹುದ್ದೆಗಳಲ್ಲಿ ನಿರ್ದಿಷ್ಟ ಜಾತಿಯೊಂದಕ್ಕೆ ಸೇರಿದ ವ್ಯಕ್ತಿಗಳೇ ತುಂಬಿಕೊಂಡಿದ್ದಾರೆ.
ಆಡಳಿತ ಯಂತ್ರವನ್ನು ದುರ್ಬಲಗೊಳಿಸುವುದೊಂದೇ ಅಲ್ಲದೆ, ಇದು ರಾಜ್ಯದ ಸೂಕ್ಷ್ಮ ಸಾಮಾಜಿಕ ಸಂರಚನೆಯಲ್ಲೂ ತಳಮಳ ಉಂಟುಮಾಡುತ್ತದೆ. ದುರದೃಷ್ಟದ ಸಂಗತಿಯೆಂದರೆ, ಇದು ಜಾತಿ ಆಧಾರಿತ ನೇಮಕಗಳನ್ನು ಮುಂದಿನ ಸರ್ಕಾರಗಳು ಸಹಜ ಎಂಬಂತೆ ನಡೆಸಲು ಅನುವು ಮಾಡಿಕೊಡುತ್ತದೆ.
ಸಾರ್ವಜನಿಕ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ನಮೂದಿಸಿಲ್ಲ ಎಂಬ ಕಾರಣಕ್ಕೆ ಅಥವಾ ತಮ್ಮ ಕರೆಯನ್ನು ಸ್ವೀಕರಿಸಲಿಲ್ಲ ಎಂಬಂತಹ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಪಟ್ಟು ಹಿಡಿಯುವ ಶಾಸಕರು, ಸಚಿವರು ನಮ್ಮಲ್ಲಿದ್ದಾರೆ. ಇದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.
ವ್ಯಕ್ತಿಯ ಸಾಮರ್ಥ್ಯ, ದಕ್ಷತೆಯ ಆಧಾರದಲ್ಲಿ ಆಯೋಗಗಳಿಗೆ ನೇಮಕ ನಡೆಯುತ್ತಿಲ್ಲ. ಆ ವ್ಯಕ್ತಿ ಮುಖ್ಯಮಂತ್ರಿಗೆ ಎಷ್ಟು ಹತ್ತಿರದವರು, ಅವರ ಜಾತಿ ಯಾವುದು, ಅವರ ರಾಜಕೀಯ ನಿಲುವು ಎಂಥದ್ದು ಎಂಬುದೇ ಇಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ಭಾಸವಾಗುತ್ತಿದೆ.
ರಾಜ್ಯ ಲೋಕಸೇವಾ ಆಯೋಗಕ್ಕೆ ಸದಸ್ಯರ ನೇಮಕದ ಸಂದರ್ಭದಲ್ಲಿ ಉಂಟಾದ ವಿವಾದ ಎಲ್ಲರಿಗೂ ತಿಳಿದಿದೆ. ಮಾಹಿತಿ ಆಯೋಗಕ್ಕೆ ಈಚೆಗೆ ನಡೆದ ಸದಸ್ಯರ ನೇಮಕವು ಸರ್ಕಾರದ ಮನಸ್ಥಿತಿ ಏನು ಎಂಬುದನ್ನು ಬಹಿರಂಗಪಡಿಸಿದೆ. ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರು ಅಧಿಕೃತವಾಗಿ ನಿವೃತ್ತಿಯಾಗುವುದಕ್ಕೂ ಮೊದಲೇ ಅವರಿಗೆ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಯ ಉಡುಗೊರೆ ನೀಡಲಾಗಿದೆ.
ಇತರ ಸದಸ್ಯರ ನೇಮಕವು ಅವರ ರಾಜಕೀಯ ಒಲವು, ಅವರು ಹಿಂದೆ ಸರ್ಕಾರದ ಸೇವೆಯಲ್ಲಿ ಇದ್ದಾಗ ರಾಜಕೀಯ ಮುಖಂಡರಿಗೆ ತೋರಿದ ನಿಷ್ಠೆಯನ್ನು ಆಧರಿಸಿ ನಡೆದಿದೆ. ಸರ್ಕಾರವನ್ನು ಸಾಮಾಜಿಕವಾಗಿ ಉತ್ತರದಾಯಿಯನ್ನಾಗಿ ಮಾಡುವಲ್ಲಿ ಮಾಹಿತಿಯ ಅಸಮತೆಯನ್ನು ನೀಗಿಸುವುದು ಪ್ರಮುಖ ಹೆಜ್ಜೆ. ರಾಜಕೀಯ ಒಲವು ಹೊಂದಿರುವ ಮಾಹಿತಿ ಆಯೋಗವು ತನ್ನ ಹೊಣೆಗಾರಿಕೆಗೆ ಹೇಗೆ ನ್ಯಾಯ ಒದಗಿಸುತ್ತದೆ ಎಂಬುದು ಕುತೂಹಲದ ಸಂಗತಿ.
ಲೋಕಾಯುಕ್ತ ಸಂಸ್ಥೆ ಈಚೆಗೆ ಎದುರಿಸಿದ ಬಿಕ್ಕಟ್ಟು, ಅಲ್ಲಿಂದ ವರದಿಯಾದ ಭ್ರಷ್ಟಾಚಾರದ ಹಗರಣವು ಸಂಸ್ಥೆಯು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತದೆ ಎಂದು ಜನರು ಇಟ್ಟಿದ್ದ ನಂಬಿಕೆಯನ್ನು ಅಳಿಸಿಹಾಕಿದೆ. ನಿಕಟಪೂರ್ವ ಲೋಕಾಯುಕ್ತರ ಮಗನ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ಆರೋಪ, ಪದಚ್ಯುತಿ ಇನ್ನೇನು ಸಮೀಪಿಸಿತು ಎನ್ನುವವರೆಗೂ ಲೋಕಾಯುಕ್ತರು ತಮ್ಮ ಹುದ್ದೆಗೆ ಅಂಟಿಕೊಂಡಿದ್ದು ಈ ಸಂಸ್ಥೆಯನ್ನು ಸಾರ್ವಜನಿಕವಾಗಿ ನಗೆಪಾಟಲಿಗೆ ಈಡಾಗಿಸಿತು.
ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸುವಂತೆ, ಕೊಳೆಯುತ್ತಿರುವ ಈ ಸಂಸ್ಥೆಗೆ ಒಬ್ಬ ನಾಯಕನನ್ನು ನೇಮಿಸಲು ಸರ್ಕಾರ ವಿಶ್ವಾಸಾರ್ಹ ಯತ್ನವನ್ನೇ ಮಾಡಿಲ್ಲ. ಈ ಸಂಸ್ಥೆಗೆ ಪ್ರತಿಷ್ಠೆಯನ್ನು ತಂದುಕೊಡುವ, ಪಾರದರ್ಶಕತೆಯನ್ನು ತಂದುಕೊಡುವ ವಿಶ್ವಾಸಾರ್ಹ ವ್ಯಕ್ತಿಯ ನೇಮಕ ಆಗಲಿದೆಯೋ ಅಥವಾ ರಾಜಕೀಯ ಮತ್ತು ಇತರ ಒತ್ತಡಗಳಿಗೆ ಮಣಿದು ನೇಮಕ ನಡೆಯುತ್ತದೆಯೋ ಎಂಬ ಕುತೂಹಲ ಇದೆ.
ಮಕ್ಕಳ ಹಕ್ಕುಗಳ ಆಯೋಗ, ಮಹಿಳಾ ಆಯೋಗಗಳಿಗೆ ಸದಸ್ಯರು ಇದ್ದಾರಾದರೂ, ಅಲ್ಲಿ ಕೂಡ ರಾಜಕೀಯ ಅನುಗ್ರಹ, ಜಾತಿ ಲೆಕ್ಕಾಚಾರ ಕೆಲಸ ಮಾಡಿರುವುದನ್ನು ಕಾಣಬಹುದು. ಪ್ರಭುತ್ವವು ತನ್ನ ವ್ಯಾಪ್ತಿಯನ್ನು ಮೀರಿ ವರ್ತಿಸದಂತೆ ನೋಡಿಕೊಳ್ಳುವಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದಂತಹ ಸಂಸ್ಥೆಗಳು ಮಹತ್ವದ ಪಾತ್ರ ಹೊಂದಿವೆ. ಈಗ ಅದರ ಅಧ್ಯಕ್ಷ ಹುದ್ದೆಗೂ ಲಾಬಿ ನಡೆದಿದೆ, ಸಂಸ್ಥೆಯ ಪ್ರಾಮುಖ್ಯತೆ ಕಳೆದುಹೋಗುತ್ತಿದೆ. ಇದು ಆತಂಕಕಾರಿ.
ಆಡಳಿತವು ಆಕಸ್ಮಿಕವಾಗಿ ಆಗಿಹೋಗುವುದಿಲ್ಲ ಎಂಬುದನ್ನು ಮುಖ್ಯಮಂತ್ರಿಯವರು ಮತ್ತು ಅವರ ಮಂತ್ರಿ ಪರಿಷತ್ತಿನ ಸದಸ್ಯರು ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಜನರಿಗೆ ಒಳ್ಳೆಯ ಆಡಳಿತ ನೀಡಬೇಕು ಎಂಬ ಉದ್ದೇಶ, ಚಾಣಾಕ್ಷ ನಡೆ ಇರಬೇಕು.
ಪ್ರಜಾತಾಂತ್ರಿಕ ಸಂಸ್ಥೆಗಳು ವ್ಯವಸ್ಥೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ, ಪ್ರಭುತ್ವ ಮತ್ತು ನಾಗರಿಕರ ನಡುವೆ ರಚನಾತ್ಮಕ ಸಂಬಂಧ ಮೂಡಿಸುವ ಪ್ರಮುಖ ಕೆಲಸವನ್ನು ನಿರ್ವಹಿಸುತ್ತವೆ. ಇಂಥ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವುದಲ್ಲದೆ, ಆ ಸಂಸ್ಥೆಗಳ ಮಹತ್ವಕ ಕಡಿಮೆಯಾಗುವಂತೆ ಮಾಡುವುದರಿಂದ ಅವುಗಳ ಕಾರ್ಯದ ಬಗ್ಗೆ ಜನ ಇಟ್ಟಿರುವ ನಂಬಿಕೆ ಇನ್ನಷ್ಟು ಕುಸಿಯುವಂತಾಗುತ್ತದೆ. ಇದರಿಂದ ನಷ್ಟ ಅನುಭವಿಸಬೇಕಾದವರು ಜನ ಮಾತ್ರವಲ್ಲ. ರಾಜಕೀಯ ವಲಯ ಸೇರಿದಂತೆ ಇಡೀ ರಾಜ್ಯ ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ.
(ಲೇಖಕ ಅಭಿವೃದ್ಧಿ ಕಾರ್ಯಕರ್ತ ಮತ್ತು ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ನ ಸಂಸ್ಥಾಪಕ.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.