ಕರ್ನಾಟಕದಲ್ಲಿ ಕೃಷಿಯನ್ನು ಅವಲಂಬಿಸಿದವರ ಸಂಖ್ಯೆ ಸುಮಾರು ಶೇ 70 ರಷ್ಟಿದೆ. ಅಖಿಲ ಭಾರತದ ಚಿತ್ರದಂತೆಯೇ ಕರ್ನಾಟಕದ ಕೃಷಿ ಚಿತ್ರಣವೂ ಯಾವ ರೀತಿಯಲ್ಲೂ ಉತ್ತಮವಾಗಿಲ್ಲದಿರುವುದನ್ನು ಕಾಣಬಹುದು. ಕರ್ನಾಟಕದ ಸ್ಥಿತಿ ಇನ್ನೂ ದುಃಸ್ಥಿತಿಯಲ್ಲಿದೆ. ಏಕೆಂದರೆ ಈ ವರ್ಷದ ಮುಂಗಾರಿನಿಂದ ಡಿಸೆಂಬರ್‌ವರೆಗೆ 1002 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯಾವುದೇ ಲೆಕ್ಕಾಚಾರದಲ್ಲೂ ಇದು ಕರ್ನಾಟಕದ ಕೃಷಿ ಮತ್ತು ರೈತರ ದುಃಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇತ್ತೀಚೆಗೆ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯೇ ಈ ಆತ್ಮಹತ್ಯೆಯ ಅಧ್ಯಯನ ನಡೆಸಿ ಬಿಡುಗಡೆ ಮಾಡಿದ ಅಂಕಿ ಸಂಖ್ಯೆಗಳ ಪ್ರಕಾರವೇ ಈ 1002 ರೈತರ ಆತ್ಮಹತ್ಯೆಗಳಲ್ಲಿ ಎಲ್ಲಾ ಬೆಳೆ ಬೆಳೆಯುವ ರೈತರೂ ಇದ್ದಾರೆ. ಇದ್ದುದರಲ್ಲಿ ಅಡಿಕೆ ಬೆಳೆಗಾರರಲ್ಲಿ ಇದು ಕಡಿಮೆ ಕಂಡುಬಂದಿದೆ.
ಅಂದರೆ ಯಾವ ಬೆಳೆ ಬೆಳೆಯುವ ರೈತನ ಸ್ಥಿತಿಯೂ ಉತ್ತಮವಾಗಿಲ್ಲ. ಅದರಲ್ಲೂ ಕಬ್ಬು ಬೆಳೆಗಾರರು, ಹತ್ತಿ ಬೆಳೆಗಾರರು ಮತ್ತು ರೇಷ್ಮೆ ಬೆಳೆಗಾರರಲ್ಲಿ ಅತಿಹೆಚ್ಚು ಆತ್ಮಹತ್ಯೆಗಳು ಕಂಡುಬಂದಿವೆ. ಜಿಲ್ಲಾವಾರು ನೋಡುವುದಾದರೆ ಮಂಡ್ಯ, ಬೆಳಗಾವಿ, ಬಿಜಾಪುರ, ರಾಯಚೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಂಡದ್ದು ಕಂಡುಬಂದಿದೆ. ಇದು ಏನನ್ನು ಹೇಳುತ್ತದೆ ಎಂದರೆ ಕಬ್ಬು ಬೆಳೆದ ರೈತನ ಸ್ಥಿತಿ ತುಂಬಾ ಚಿಂತಾಜನಕವಾಗಿರುವುದರಿಂದ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಿದೆ. ಅದರ ನಂತರ ಹತ್ತಿ ಬೆಳೆ, ನಂತರದ ಸ್ಥಾನ ರೇಷ್ಮೆ ರೈತನದ್ದು.
ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ನಡೆ ತೀವ್ರ ಖಂಡನೀಯವಾಗಿದೆ. ಕಳೆದ ಮೂರು ವರ್ಷಗಳಿಂದ, ಸರ್ಕಾರ ತಾನೇ ನಿಗದಿ ಮಾಡಿದ ಬೆಲೆಯನ್ನು ಕಬ್ಬಿಗೆ ಕೊಡಿಸುವಲ್ಲಿ ಪೂರ್ಣವಾಗಿ ಸೋತಿದೆ. 12 ತಿಂಗಳು ಕಷ್ಟಪಟ್ಟು ಬೆಳೆದ ಕಬ್ಬಿಗೆ ವರ್ಷ ವರ್ಷಕ್ಕೆ ಅದರ ಬಾಬ್ತು ಹಣ ರೈತನ ಕೈ ಸೇರದಿದ್ದರೆ ಅವನ ಕಷ್ಟದ ಕೋಟಲೆಗಳು ಇಮ್ಮಡಿಯಾಗಿ, ನೂರ್ಮಡಿಯಾಗಿ ಹತಾಶೆಗೆ ದೂಡುತ್ತವೆ. ಅಂತಹ ಸ್ಥಿತಿಯಲ್ಲಿ ಅವನಿಗೆ ಬೇರೆ ಮಾರ್ಗವಿಲ್ಲದೆ ಆತ್ಮಹತ್ಯೆಗೆ ಶರಣಾಗುತ್ತಾನೆ.
ರೈತ ಕಾರ್ಖಾನೆಗೆ ಸಾಗಿಸಿದ ಕಬ್ಬಿಗೆ ಸರ್ಕಾರ ನಿಗದಿಮಾಡಿದ ಬೆಲೆಯನ್ನು ಪೂರ್ಣವಾಗಿ ಪಾವತಿಸದೇ, 13–14 ತಿಂಗಳಾದರೂ ಕಾರ್ಖಾನೆಗಳು ಬೆಳೆದ ಕಬ್ಬನ್ನೂ ಸಾಗಿಸದೇ ಗದ್ದೆಯಲ್ಲಿ ರಸ ಕಳೆದುಕೊಂಡು ಮಾಗುವ ಸಾಧ್ಯತೆಗಳು ಜಾಸ್ತಿ. ಇಂತಹ ಸ್ಥಿತಿಯಿಂದ ರೈತರನ್ನು ಹೊರತರಲು, ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವ ಕೆಲಸವನ್ನು ಸಮಯಕ್ಕೆ ಸರಿಯಾಗಿ ಆರಂಭಿಸಿ ಪೂರ್ಣ ಅರೆಯುವವರೆಗೆ ಕಾರ್ಖಾನೆಗಳನ್ನು ಕೆಲಸ ಮಾಡುವಂತೆ ಸರ್ಕಾರ ನೋಡಿಕೊಳ್ಳಬೇಕು.
ಇದನ್ನು ಮಾಡಲು ಸೋಲುವುದರಿಂದಲೂ ಕಬ್ಬು ಬೆಳೆಗಾರ ಹತಾಶನಾಗುತ್ತಾನೆ. ಇದೂ ರೈತರನ್ನು ಆತ್ಮಹತ್ಯೆಗೆ ದೂಡುತ್ತದೆ. ನಿರಂತರವಾಗಿ ಹೆಚ್ಚಾಗುತ್ತಿರುವ ಕಬ್ಬಿನ ಬೆಳೆ ವೆಚ್ಚವನ್ನಾಧರಿಸಿ ಸುಪ್ರೀಂಕೋರ್ಟ್ ವಾರ್ಷಿಕ ಶೇ 20ರ ಹೆಚ್ಚುವರಿ ಬೆಲೆ ನೀಡಬೇಕು ಎಂದು ಹೇಳಿದ್ದರೂ, ಕಾರ್ಖಾನೆಗಳಾಗಲಿ, ಸರ್ಕಾರಗಳಾಗಲಿ ಈ ಹೆಚ್ಚಳಕ್ಕೆ ಮುಂದಾಗಿಲ್ಲ.
ಸಕ್ಕರೆ ಕಾರ್ಖಾನೆಗಳಿಗೆ ರೈತ ಸಾಗಿಸುವ ಕಬ್ಬಿನಿಂದ ಒಳ್ಳೆ ಇಳುವರಿಯಿದ್ದರೂ ಕಾರ್ಖಾನೆಗಳು ಒಳ್ಳೆ ಬೆಲೆ ಹೋಗಲಿ ಸರ್ಕಾರ ನಿಗದಿ ಮಾಡುವ ಬೆಲೆಯನ್ನು ನೀಡುತ್ತಿಲ್ಲ. ರೈತರನ್ನು ಅಸಹಾಯಕನನ್ನಾಗಿಸಿ, ಹತಾಶೆಗೆ ದೂಡುವ ಕಾರ್ಖಾನೆಗಳ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸರ್ಕಾರದ ದಿವ್ಯ ನಿರ್ಲಕ್ಷ್ಯ.
ಜಾಗತೀಕರಣದ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕುಸಿಯಬಹುದು, ಆದರೆ ಹೆಚ್ಚು ಸಮಯ ಈ ಕುಸಿತ ಕಾಣದಿದ್ದರೂ ಕಾರ್ಖಾನೆಗಳು ರೈತರಿಗೆ ಉತ್ತಮ ಬೆಲೆ ಕೊಡುವ ಮನಸ್ಸು ಮಾಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಸರ್ಕಾರ ರೈತರ ಹಿತವನ್ನು ಕಾಯಲು ಮಾರುಕಟ್ಟೆಗೆ ಪ್ರವೇಶಮಾಡಿ ರೈತನ ಹಿತ ಕಾಯುವ ಕೆಲಸವನ್ನು ಮಾಡಬೇಕಿತ್ತು. ರಾಜ್ಯ ಸರ್ಕಾರ ಅಂತಹ ಕ್ರಮಕ್ಕೆ ಮುಂದಾಗಿಲ್ಲ.
ರೇಷ್ಮೆ ವ್ಯವಹಾರದಲ್ಲಂತೂ ಸರ್ಕಾರ ಪೂರ್ಣ ಸೋತಿದೆ. ಮೊದಲಿನಿಂದಲೂ ಕಳ್ಳ ಮಾರ್ಗಗಳ ಮೂಲಕ ದೇಶದೊಳಗೆ ಬರುವ ರೇಷ್ಮೆ ಇಲ್ಲಿಯ ಬೆಳೆಗಾರರನ್ನು ನಾಶ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಚೀನಾ ಭೇಟಿ ಸಂದರ್ಭದಲ್ಲಿ ಮಾನ್ಯ ಮಾಡಿದ ಶೇ. 10ರ ಆಮದು ಸುಂಕ ಕಡಿತ ರೇಷ್ಮೆ ಆಮದಿಗೆ ಕಾರಣವಾಗಿ ರೇಷ್ಮೆ ಉದ್ಯಮವನ್ನೆ ನಾಶಮಾಡುವ ವ್ಯವಸ್ಥಿತ ತಂತ್ರವಾಯ್ತು. ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಮಾರುಕಟ್ಟೆ ಪ್ರವೇಶ ಮಾಡಿ ₹ 200 ಗಳ ನೆರವು ದರವನ್ನು ರೇಷ್ಮೆಗೆ ಘೋಷಿಸಿದ್ದರೆ ರೇಷ್ಮೆ ರೈತರ ಆತ್ಮಹತ್ಯೆ ತಡೆಯಬಹುದಿತ್ತು.
ಹತ್ತಿ ಬೆಳೆಗಾರನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇತ್ತೀಚೆಗೆ ಕಾಯಿಕೊರಕದ ಹಾವಳಿ ಬಿ.ಟಿ. ಹತ್ತಿಯನ್ನು ಬಿಡದೆ ಇಳುವರಿಯಲ್ಲಿ ಅತ್ಯಂತ ಕನಿಷ್ಠ ಮಟ್ಟ ಮುಟ್ಟಿದೆ. ಇದರ ಜೊತೆಗೆ ಮಾರುಕಟ್ಟೆ ದರವೂ ಕುಸಿದಿರುವುದರಿಂದ ಹತ್ತಿ ಬೆಳೆದ ರೈತನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಇದರೊಂದಿಗೆ ಕರ್ನಾಟಕದ 175 ತಾಲ್ಲೂಕುಗಳಲ್ಲಿ ಸುಮಾರು 140 ತಾಲ್ಲೂಕುಗಳಲ್ಲಿ ಮುಂಗಾರು ಮಳೆ ಅಭಾವವಾಯಿತು. ರಾಜ್ಯದಲ್ಲಿ ಅತ್ಯಂತ ಗಂಭೀರವಾದ ಬರ ಇದೆ.
ಇಂತಹ ಸ್ಥಿತಿಯಲ್ಲಿ ಸಿದ್ದರಾಮಯ್ಯ ಸರ್ಕಾರ ರೈತರ ನೆರವಿಗೆ ಧಾವಿಸಲು ನಿಧಾನ ಮಾಡಿತು. ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಾ ಕಾಲಹರಣ ಮಾಡಿತು. ಇದು ಇನ್ನೂ ಹೇಯವಾದ ನಡವಳಿಕೆ. ಬರದಂತಹ ಸ್ಥಿತಿ ಗ್ರಾಮೀಣ ಬದುಕನ್ನು ತೀವ್ರ ಸಂಕಷ್ಟಕ್ಕೆ ದೂಡುತ್ತದೆ. ತತ್‌ಕ್ಷಣದ ಕ್ರಮವಾಗಿ ಸರ್ಕಾರ ಜನರ ಬದುಕಿಗೆ ಆಸರೆಯಾಗಿ ಪರಿಹಾರ ಕಾರ್ಯ ತುರ್ತಾಗಿ ತೆಗೆದುಕೊಳ್ಳಬೇಕು. ಜನರಿಗೆ ಉದ್ಯೋಗಾವಕಾಶ, ಜಾನುವಾರಿಗೆ ನೀರು, ಮೇವು ಒದಗಿಸುವ ಕೆಲಸ ತುರ್ತಾಗಿ ಆಗಬೇಕು. ಇದರಲ್ಲಿ ಯಾವ ಮೀನಮೇಷ ಎಣಿಸದೇ ಕೆಲಸಗಳು ನಡೆಯಬೇಕು.
136 ತಾಲ್ಲೂಕುಗಳಲ್ಲಿ ತೀವ್ರ ಮುಂಗಾರಿನ ಕೊರತೆಯಿರುವುದನ್ನು ಪ್ರಕಟಿಸುವ ಸರ್ಕಾರ ಬರ ಪರಿಹಾರ ಕೆಲಸ ಪ್ರಾರಂಭಿಸುವಲ್ಲಿನ ಧೋರಣೆ ತೀರಾ ಖಂಡನೀಯ. ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸುವುದಷ್ಟೆ ಅಲ್ಲ ತುರ್ತಾಗಿ ತನ್ನ ಸಂಪನ್ಮೂಲದಿಂದಲೇ ಪರಿಹಾರ ಕಾರ್ಯವನ್ನೂ ಆರಂಭಿಸಬೇಕು. ಆದರೆ ಕರ್ನಾಟಕದಲ್ಲಿ ಕಂಡುಬಂದದ್ದು ರಾಜಕೀಯ ಕೆಸರೆರೆಚಾಟ. ಇದು ಅಕ್ಷಮ್ಯ ಅಪರಾಧ.
ಕೃಷಿಯ ದುಃಸ್ಥಿತಿ ಇವತ್ತಿನದ್ದಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ಕೃಷಿ ಅಂಗರಚನೆಗಳನ್ನು ಸದೃಢ ಮಾಡುವ ಕೆಲಸ ನಡೆಯಲಿಲ್ಲ. ಇದಕ್ಕೆ ಕಾರಣ ಕೈಗಾರಿಕೀಕರಣದಲ್ಲಿನ ನಂಬುಗೆ. ರಾಷ್ಟ್ರದ ಬಹುಪಾಲು ಸಂಪನ್ಮೂಲವನ್ನು ಕೈಗಾರಿಕೀಕರಣದ ಕಡೆಗೆ ಹರಿಸಿ, ಸಾರ್ವಜನಿಕ ಸಂಪನ್ಮೂಲ ಕೃಷಿಗೆ ಹರಿಯದ್ದರಿಂದ ವ್ಯವಸ್ಥಿತವಾದ ಆಸ್ತಿ ಸೃಷ್ಟಿ ಕೃಷಿ ಕ್ಷೇತ್ರದಲ್ಲಿ ಆಗಲಿಲ್ಲ. ಆಸ್ತಿಸೃಷ್ಟಿ ಎಂದರೆ ಬೀಜೋತ್ಪಾದನೆ, ನೀರಾವರಿ ವ್ಯವಸ್ಥೆ, ಗೊಬ್ಬರ ಉತ್ಪಾದನೆ, ಕೀಟನಾಶಕ, ಕ್ರಿಮಿನಾಶಕಗಳು, ಮಾರುಕಟ್ಟೆ ವ್ಯವಸ್ಥೆ ಮೂಲಕ ರೈತನ ಉತ್ಪನ್ನಗಳ ಮಾರಾಟಕ್ಕೆ ಉತ್ತಮ ವ್ಯವಸ್ಥೆ, ಆ ಮೂಲಕ ರೈತನಿಗೆ ಉತ್ತಮ ಬೆಲೆ, ತಾಂತ್ರಿಕ ಸೇವೆಗಳ ಬೆಳವಣಿಗೆ.
ಈ ಆಸ್ತಿಗಳನ್ನು ಉಪಯೋಗಿಸಿ ರೈತ ತನ್ನ ಬಂಡವಾಳವಾದ ಶ್ರಮ ಹಾಕಿ ಬೆಳೆ ಬೆಳೆದು ಉತ್ತಮ ಸ್ಥಿತಿ ಕಾಣಬಹುದು. ಇದಾಗದ್ದರಿಂದ ಸ್ವಾತಂತ್ರ್ಯಾನಂತರದ 67 ವರ್ಷಗಳ ಅಭಿವೃದ್ಧಿಯ ಹಂತದಲ್ಲಿ ಕೃಷಿ ಒಂದು ಉತ್ಪಾದನಾ ಕ್ಷೇತ್ರವಾಗಿ ಅತ್ಯಂತ ದುರ್ಬಲವಾಗಿ ಶೇ 70 ರಷ್ಟು ಜನರ ಕ್ಷೇತ್ರವಾಗಿದ್ದರೂ ರಾಷ್ಟ್ರೀಯ ಉತ್ಪನ್ನಕ್ಕೆ ಶೇ 14.2 ರಷ್ಟು ಕೊಡುಗೆ ಮಾತ್ರ ಕೊಡುತ್ತದೆ.|
ಇಂದಿಗೂ ಸುಮಾರು 3,60,000 ರೈತರು ಆತ್ಮಹತ್ಯೆಯಾಗಿದ್ದರೂ ಸರ್ಕಾರಗಳು, ರೈತರನ್ನು ಉಳಿಸುವ, ಕೃಷಿಯ ಮೂಲಭೂತ ಸಮಸ್ಯೆಗಳ ಬೇರುಗಳನ್ನು ಹುಡುಕಿ ಪರಿಹಾರ ಕಂಡಿಕೊಳ್ಳುವ ಬದಲು, ಹಣಕಾಸಿನ ಪರಿಹಾರ, ಸಾವಿನ ಅಂಕಿ ಸಂಖ್ಯೆಯ ಜಗ್ಗಾಟದಲ್ಲಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸವನ್ನು ಕೇಂದ್ರ, ರಾಜ್ಯ ಸರ್ಕಾರಗಳೆರಡೂ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಇಡೀ ಕೃಷಿ ಕ್ಷೇತ್ರ ನಲುಗಿ ಹೋಗಿ, ದುಡಿಯುವವನಿಗೆ ಯಾವುದೇ ಆಶಾಕಿರಣ ಮೂಡಿಸದೆ ಅವನನ್ನು ಹತಾಶಸ್ಥಿತಿಗೆ ತಳ್ಳುತ್ತಿವೆ.
(ಲೇಖಕ: ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.