ADVERTISEMENT

ಇರಾನಿ ಟ್ರೋಫಿ ಪಂದ್ಯ: ಬೃಹತ್ ಮೊತ್ತ ಕಲೆ ಹಾಕಿದ ವಿದರ್ಭ

ದಿನದಾಟಕ್ಕೆ ಮಳೆ ಅಡ್ಡಿ; ತ್ರಿಶತಕದಿಂದ ವಂಚಿತರಾದ ವಸೀಂ ಜಾಫರ್‌

ಪಿಟಿಐ
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST
ಭಾರತ ಇತರೆ ತಂಡದ ವಿರುದ್ಧದ ಇರಾನಿ ಟ್ರೋಫಿ ಕ್ರಿಕೆಟ್ ಪಂದ್ಯದ ಮೂರನೇ ದಿನ ಅಜೇಯ 99 ರನ್‌ ಗಳಿಸಿದ ಅಪೂರ್ವ ವಾಂಖಡೆ ಅವರ ಬ್ಯಾಟಿಂಗ್ ಶೈಲಿ ಪಿಟಿಐ ಚಿತ್ರ
ಭಾರತ ಇತರೆ ತಂಡದ ವಿರುದ್ಧದ ಇರಾನಿ ಟ್ರೋಫಿ ಕ್ರಿಕೆಟ್ ಪಂದ್ಯದ ಮೂರನೇ ದಿನ ಅಜೇಯ 99 ರನ್‌ ಗಳಿಸಿದ ಅಪೂರ್ವ ವಾಂಖಡೆ ಅವರ ಬ್ಯಾಟಿಂಗ್ ಶೈಲಿ ಪಿಟಿಐ ಚಿತ್ರ   

ನಾಗಪುರ (ಪಿಟಿಐ): ಮಳೆ ಕಾಡಿದ ದಿನದಾಟದಲ್ಲಿ ಅಪೂರ್ವ್‌ ವಾಂಖೆಡೆ ಅವರ ಅಮೋಘ ಬ್ಯಾಟಿಂಗ್ ಬಲದಿಂದ ವಿದರ್ಭ ತಂಡವು ಬೃಹತ್ ಮೊತ್ತ ಕಲೆ ಹಾಕಿತು.

ಜಮ್ತಾದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇರಾನಿ ಟ್ರೋಫಿ ಕ್ರಿಕೆಟ್ ಪಂದ್ಯದ ಮೂರನೇ ದಿನವಾದ ಶುಕ್ರವಾರ ಈ ತಂಡ ಐದು ವಿಕೆಟ್‌ಗಳಿಗೆ 702 ರನ್‌ ಗಳಿಸಿತು.

ವಸೀಂ ಜಾಫರ್ ಅವರ ದ್ವಿಶತಕ ಮತ್ತು ಗಣೇಶ್ ಸತೀಶ್ ಅವರ ಶತಕದ ಬಲದಿಂದ ಗುರುವಾರ ಮೂರು ವಿಕೆಟ್‌ಗಳಿಗೆ 598 ರನ್‌ ಗಳಿಸಿದ್ದ ವಿದರ್ಭದ ಇನಿಂಗ್ಸ್‌ಗೆ ಶುಕ್ರವಾರ ಬೆಳಿಗ್ಗೆ ಮಳೆ ಕಾಡಿತು. ದಿನದಾಟದಲ್ಲಿ 28 ಓವರ್‌ಗಳ ಆಟ ಮಾತ್ರ ನಡೆಯಿತು.

ADVERTISEMENT

ಗುರುವಾರ 285 ರನ್ ಗಳಿಸಿದ್ದ ವಸೀಂ ಜಾಫರ್ ಈ ಮೊತ್ತಕ್ಕೆ ಕೇವಲ ಒಂದು ರನ್ ಸೇರಿಸಿ ಔಟಾದರು. ಅವರನ್ನು ಸಿದ್ಧಾರ್ಥ್ ಕೌಲ್ ಬೌಲ್ಡ್ ಮಾಡಿದರು. ಆದರೆ ಎರಡನೇ ದಿನ 44 ರನ್‌ ಗಳಿಸಿದ್ದ ಅಪೂರ್ವ್‌ ವಾಂಖೆಡೆ ಉತ್ತಮ ಬ್ಯಾಟಿಂಗ್ ಮುಂದುವರಿಸಿದರು. 99 ರನ್ ಗಳಿಸಿದ ಅವರು ಶನಿವಾರಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. 172 ಎಸೆತ ಎದುರಿಸಿದ ವಾಂಖೆಡೆ ಎರಡು ಭರ್ಜರಿ ಸಿಕ್ಸರ್‌ ಮತ್ತು 12 ಬೌಂಡರಿ ಗಳಿಸಿ ಮಿಂಚಿದರು.

ಅವರಿಗೆ ಉತ್ತಮ ಸಹಕಾರ ನೀಡಿದ ಅಕ್ಷಯ್‌ ವಾಡಕರ್  37 ರನ್‌ ಗಳಿಸಿದರು. ತಂಡವನ್ನು 700 ರನ್‌ಗಳ ಸಮೀಪ  ತಂದ ಅವರು ಔಟಾದ ನಂತರ ವಾಂಖೆಡೆ ಅವರ ಜೊತೆಗೂಡಿದ ಆದಿತ್ಯ ಸರವಟೆ ಮತ್ತಷ್ಟು ವಿಕೆಟ್‌ಗಳು ಉರುಳದಂತೆ ನೋಡಿಕೊಂಡರು.

ಸಂಕ್ಷಿಪ್ತ ಸ್ಕೋರ್‌

ವಿದರ್ಭ, ಮೊದಲ ಇನಿಂಗ್ಸ್‌ (ಗುರುವಾರದ ಅಂತ್ಯಕ್ಕೆ 180 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 598): 208 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 702 (ವಸೀಂ ಜಾಫರ್‌ 286, ಅಪೂರ್ವ ವಾಂಖೆಡೆ ಬ್ಯಾಟಿಂಗ್‌ 99, ಅಕ್ಷಯ್‌ ವಾಡಕರ್‌ 37; ಸಿದ್ದಾರ್ಥ್‌ ಕೌಲ್‌ 91ಕ್ಕೆ2, ಆರ್‌.ಅಶ್ವಿನ್‌ 123ಕ್ಕೆ1, ಜಯಂತ್‌ ಯಾದವ್‌ 202ಕ್ಕೆ1). ಭಾರತ ಇತರೆ ತಂಡದ ವಿರುದ್ಧದ ಪಂದ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.