ADVERTISEMENT

ಎರಡೇ ದಿನಗಳಲ್ಲಿ ಮುಗಿದ ಪಂದ್ಯ: ಚೊಚ್ಚಲ ಟೆಸ್ಟ್‌ನಲ್ಲಿ ಸೋತ ಅಫ್ಗಾನಿಸ್ತಾನ

ಭಾರತ ತಂಡಕ್ಕೆ ಗೆಲುವು

ಗಿರೀಶದೊಡ್ಡಮನಿ
Published 15 ಜೂನ್ 2018, 19:33 IST
Last Updated 15 ಜೂನ್ 2018, 19:33 IST
ಗೆದ್ದ ಸಂಭ್ರಮದಲ್ಲಿ ಭಾರತ ತಂಡ ಪ್ರಜಾವಾಣಿ ವಾರ್ತೆ/ಆರ್. ಶ್ರೀಕಂಠ ಶರ್ಮಾ
ಗೆದ್ದ ಸಂಭ್ರಮದಲ್ಲಿ ಭಾರತ ತಂಡ ಪ್ರಜಾವಾಣಿ ವಾರ್ತೆ/ಆರ್. ಶ್ರೀಕಂಠ ಶರ್ಮಾ   

ಬೆಂಗಳೂರು: ‘ಎರಡೇ ದಿನಗಳಲ್ಲಿ ಪಂದ್ಯ ಮುಗಿಯುತ್ತದೆ ಎಂದು ನಾವು ಊಹಿಸಿರಲೂ ಇಲ್ಲ’–

ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಮಾತುಗಳನ್ನು ಹೇಳಿದ ಭಾರತ ಕ್ರಿಕೆಟ್ ತಂಡದ ನಾಯಕ ಅಜಿಂಕ್ಯ ರಹಾನೆ ಅವರ ಕಣ್ಣುಗಳಲ್ಲಿ ಅಚ್ಚರಿ ಮಿನುಗುತ್ತಿತ್ತು.

ಇಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಫ್ಗಾನಿಸ್ತಾನ ತಂಡದ ವಿರುದ್ಧ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡವು ಜಯಿಸುವುದು ನಿರೀಕ್ಷಿತವಾಗಿತ್ತು. ಆದರೆ ಅಫ್ಗನ್ ತಂಡವು ಸ್ವಲ್ಪಮಟ್ಟಿಗೆ ಹೋರಾಟ ನೀಡುವ ನಿರೀಕ್ಷೆಯೂ ಇತ್ತು. ಆದರೆ,  ಒಂದೇ  ದಿನ ಎರಡೂ ಇನಿಂಗ್ಸ್‌ಗಳಲ್ಲಿ ಆಲೌಟ್ ಆದ ತಂಡವು ಸುಲಭವಾಗಿ ಶರಣಾಯಿತು.

ADVERTISEMENT

ಈ ರೀತಿ ಸೋತ ನಾಲ್ಕನೇ ತಂಡವಾಗಿ ಅಫ್ಗಾನಿಸ್ತಾನ ದಾಖಲೆ ಪುಟ ಸೇರಿತು. ಎರಡೇ ದಿನಗಳಲ್ಲಿ ಸೋತ ಎರಡನೇ ತಂಡವೂ ಇದಾಯಿತು. 1989ರಲ್ಲಿ ದಕ್ಷಿಣ ಆಫ್ರಿಕಾ ತಂಡವೂ ಇದೇ ರೀತಿ ಸೋತಿತ್ತು.

ಆತಿಥೇಯ ತಂಡವು ಇನಿಂಗ್ಸ್‌ ಮತ್ತು 262 ರನ್‌ಗಳಿಂದ ಗೆಧ್ದಿತು. ಇದರೊಂದಿಗೆ ಭಾರತ ಅತಿ ಹೆಚ್ಚು ಅಂತರದಿಂದ ಗೆದ್ದ ದಾಖಲೆಯನ್ನೂ ಬರೆಯಿತು.

ಮೊದಲ ದಿನವಾದ ಗುರುವಾರ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡದ ಶಿಖರ್ ಧವನ್, ಮುರಳಿ ವಿಜಯ್ ಅವರು ತಲಾ ಒಂದು ಶತಕ ದಾಖಲಿಸಿದ್ದರು. ಕೆ.ಎಲ್. ರಾಹುಲ್ ಅರ್ಧಶತಕ ದಾಖಲಿಸಿದ್ದರು.

ಆದರೆ ಚಹಾ ವಿರಾಮದ ನಂತರ ಆತಿಥೇಯರ ಬಳಗದ ಐದು ವಿಕೆಟ್‌ಗಳನ್ನು ಉರುಳಿಸಿದ್ದ ಅಫ್ಗನ್ ಬೌಲರ್‌ಗಳು ತಿರುಗೇಟು ನೀಡಿದ್ದರು. 78 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 347 ರನ್‌ ಗಳಿಸಿದ್ದ ಭಾರತ ದಿನದಾಟ ಮುಗಿಸಿತ್ತು.

ಕ್ರೀಸ್‌ನಲ್ಲಿದ್ದ ಹಾರ್ದಿಕ್ ಪಾಂಡ್ಯ ಮತ್ತು ಆರ್. ಅಶ್ವಿನ್ ಎರಡನೇ ದಿನ ರನ್‌ ಗಳಿಕೆಗೆ ವೇಗ ನೀಡಿದರು. ಅದರಲ್ಲೂ ಹಾರ್ದಿಕ್ (71; 94ಎ, 10ಬೌಂ) ಅರ್ಧಶತಕ ಗಳಿಸಿ ಮಿಂಚಿದರು. ಅಶ್ವಿನ್ (18), ರವೀಂದ್ರ ಜಡೇಜ (20)  ಅಲ್ಪ ಕಾಣಿಕೆ ನೀಡಿದರು. ಕೊನೆಯ ಕ್ರಮಾಂಕದಲ್ಲಿ ಬಂದ ಉಮೇಶ್ ಯಾದವ್ ಎರಡು ಬೌಂಡರಿ, ಎರಡು ಸಿಕ್ಸರ್‌ ಸಿಡಿಸಿದರು.

ಒಟ್ಟು 21 ಎಸೆತಗಳಲ್ಲಿ 26 ರನ್‌ ಗಳಿಸಿ ಔಟಾಗದೇ ಉಳಿದರು. ಊಟಕ್ಕೂ ಮುನ್ನವೇ ಅಫ್ಗನ್ ಬೌಲರ್‌ಗಳು ಭಾರತದ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಭಾರತವು 474 ರನ್‌ಗಳ ಮೊತ್ತ ಗಳಿಸಿತು.

ವಿರಾಮದ ನಂತರ ಆರಂಭವಾದ ಅಫ್ಗನ್ ತಂಡದ ಮೊದಲ ಇನಿಂಗ್ಸ್‌ ಬರೋಬ್ಬರಿ ಚಹಾ ವಿರಾಮದ ಹೊತ್ತಿಗೆ ಕೊನೆಯಾಯಿತು. 109 ರನ್‌ ಗಳಿಸಿದ ತಂಡ  ಆಲೌಟ್ ಆಯಿತು. ಇಶಾಂತ್ ಶರ್ಮಾ ಎರಡು, ಆರ್. ಅಶ್ವಿನ್ ನಾಲ್ಕು, ರವೀಂದ್ರ ಜಡೇಜ ಎರಡು ಮತ್ತು ಉಮೇಶ್ ಯಾದವ್ ಒಂದು ವಿಕೆಟ್ ಪಡೆದರು. ಅಫ್ಗನ್ ತಂಡದ ಪರ ಮೊಹಮ್ಮದ್ ನಬಿ (24 ರನ್) ಅತಿ ಹೆಚ್ಚು ರನ್ ಗಳಿಸಿದರು. ಮುಜೀಬ್ ಉರ್ ರೆಹಮಾನ್ ಒಂದು ಸಿಕ್ಸರ್‌ ಹೊಡೆದರು.

365 ರನ್‌ಗಳ ಮುನ್ನಡೆ ಪಡೆದ ಭಾರತವು ಅಫ್ಗನ್ ತಂಡಕ್ಕೆ ಫಾಲೋ ಆನ್ ನೀಡಿತು.

ರವೀಂದ್ರ ಜಡೇಜ (17ಕ್ಕೆ4) ಮತ್ತು ಉಮೇಶ್ ಯಾದವ್ (26ಕ್ಕೆ3) ಅವರ ದಾಳಿಗೆ ಅಫ್ಗನ್ ಬ್ಯಾಟ್ಸ್‌ಮನ್‌ಗಳು ಕಾಲೂರಲು ಸಾಧ್ಯವಾಗಲಿಲ್ಲ. ನಾಯಕ ಅಸ್ಗರ್ ಸ್ಥಾನಿಕ್ ಜಾಯ್ (25; 58ಎ, 4ಬೌಂ, 1ಸಿ) ಮತ್ತು ಹಶಮತ್‌ ಉಲ್ಲಾ ಶಹೀದಿ (36; 88ಎ, 6ಬೌಂ) ಅವರಿಬ್ಬರೂ ತುಸು ಪ್ರತಿರೋಧ ಒಡ್ಡಿದರು. ಆದರೆ ತಾಳ್ಮೆಯಿಂದ  ಆಡದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ದಾರಿ ಹಿಡಿದರು.

**
ತಂಡದ ಸೋಲಿನಿಂದ ನನಗೆ ಬೇಸರವಾಗಿಲ್ಲ. ಆದರೆ ನಮ್ಮ ಆಟಗಾರರು ಆಡಿದ ರೀತಿ ಸರಿಯಿರಲಿಲ್ಲ. ಕೊಂಚವೂ ಹೋರಾಟ ತೋರದೇ ಮಣಿದಿರುವುದು ವಿಷಾದನೀಯ.

–ಫಿಲ್ ಸಿಮನ್ಸ್‌, ಅಫ್ಗನ್ ತಂಡದ ಮುಖ್ಯ ಕೋಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.