ADVERTISEMENT

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತಕ್ಕೆ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಓರ್ಡೊಸ್, ಚೀನಾ (ಪಿಟಿಐ): ಚುರುಕಿನ ಆಟಕ್ಕೆ ತಂತ್ರಗಾರಿಕೆಯಿಂದ ತಕ್ಕ ಉತ್ತರ ನೀಡಿದ ಭಾರತ ತಂಡದವರು 5-3 ಗೋಲುಗಳ ಅಂತರದಿಂದ ದಕ್ಷಿಣ ಕೊರಿಯಾ ತಂಡಕ್ಕೆ ಆಘಾತ ನೀಡಿದರು.

ಮಹತ್ವದ ಈ ಪಂದ್ಯದಲ್ಲಿನ ಗೆಲುವಿನೊಂದಿಗೆ ರಾಜ್ಪಾಲ್ ಸಿಂಗ್ ನಾಯಕತ್ವದ ಪಡೆಯು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಲೀಗ್ ಹಂತದಲ್ಲಿ ತನ್ನ ಸ್ಥಿತಿಯನ್ನು ಉತ್ತಮಪಡಿಸಿಕೊಂಡಿತು. ಚೀನಾ ವಿರುದ್ಧ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಭಾರತವು ಆನಂತರ ಜಪಾನ್ ಎದುರು ಡ್ರಾಗೆ ಸಮಾಧಾನ ಪಟ್ಟಿತ್ತು. ಆದ್ದರಿಂದ ಮಂಗಳವಾರದ ಪಂದ್ಯದಲ್ಲಿ ಗೆಲುವು ಅಗತ್ಯವಾಗಿತ್ತು.

ಇಂಥ ಒತ್ತಡದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ಭಾರತದ ಆಟಗಾರರು ಪ್ರಬಲ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿದರು. ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದ್ದ ಕೊರಿಯಾ ಎದುರು ಜಯ ಸಾಧಿಸುವುದು ಹೆಚ್ಚು ಕಷ್ಟವೇನು ಆಗಲಿಲ್ಲ. ಆರಂಭದಲ್ಲಿಯೇ ಸಿಕ್ಕ ಮೂರು ಗೋಲುಗಳು ಒತ್ತಡವೆಲ್ಲ ನಿವಾರಣೆ ಆಗುವಂತೆ ಮಾಡಿದವು.

ಕೋಚ್ ಮೈಕಲ್ ನಾಬ್ಸ್ ಅವರು ರೂಪಿಸಿದ ದಾಳಿಯ ತಂತ್ರವು ಫಲ ನೀಡಿತು. ಕೊರಿಯಾ ಎದುರು ಜಯ ಸಿಕ್ಕಿದ್ದರಿಂದ ಲೀಗ್ ಪಟ್ಟಿಯಲ್ಲಿ ಒಟ್ಟು ಏಳು ಪಾಯಿಂಟುಗಳೊಂದಿಗೆ ಭಾರತ ಅಗ್ರಸ್ಥಾನಕ್ಕೆ ಏರಿತು.

ಪಂದ್ಯದ ನಾಲ್ಕನೇ ನಿಮಿಷದಲ್ಲಿ ಕೊರಿಯಾ ರಕ್ಷಣಾ ಆಟಗಾರರು ಮಾಡಿದ ತಪ್ಪಿನ ಫಲವಾಗಿ ಸಿಕ್ಕ ಪೆನಾಲ್ಟಿ ಸ್ಟ್ರೋಕ್ ಅವಕಾಶದಲ್ಲಿ ರೂಪಿಂದರ್ ಸಿಂಗ್ ಚೆಂಡನ್ನು ತೀರ ಕೆಳಮಟ್ಟದಲ್ಲಿ ಫ್ಲಿಕ್ ಮಾಡಿ ಗೋಲು ಪೆಟ್ಟಿಗೆ ಸೇರಿಸಿದರು. ಒಂದೇ ನಿಮಿಷದ ನಂತರ ಗುರ್ವಿಂದರ್ ಸಿಂಗ್ ಚಾಂಡಿ ಎದುರಾಳಿ ಪಡೆಯ ಮೂವರು ಡಿಫೆಂಡರ್‌ಗಳನ್ನು ವಂಚಿಸಿ, ಎಡದಿಂದ ಮುನ್ನುಗ್ಗಿ ಅದ್ಭುತ ಎನಿಸುವಂಥ ಗೋಲು ಗಳಿಸಿದರು.

ಎಸ್.ವಿ.ಸುನಿಲ್ ಅವರು ಏಳನೇ ನಿಮಿಷದಲ್ಲಿ ಚಾಂಡಿ ಗೋಲ್ ಆವರಣಕ್ಕೆ ತಳ್ಳಿದ ಚೆಂಡನ್ನು ಸರಾಗವಾಗಿ ಗುರಿ ಮುಟ್ಟಿಸಿದರು. ಆಗ ಭಾರತಕ್ಕೆ 3-0 ಗೋಲುಗಳ ಮುನ್ನಡೆ. ಆದರೆ ಒಂದೇ ನಿಮಿಷದ ಅಂತರದಲ್ಲಿ ಕೊರಿಯಾದ ಲೀ ನಾಮ್ ಯೊಂಗ್ ಅಂತರವನ್ನು 1-3 ಆಗಿಸಿದರು. ಇಂಥ ಪರಿಸ್ಥಿತಿಯಲ್ಲಿಯೂ ಎದೆಗುಂದದೇ ದಾಳಿಯತ್ತ ಗಮನ ನೀಡಿದ ಭಾರತಕ್ಕೆ ನಾಯಕ ರಾಜ್ಪಾಲ್ ಪ್ರಯತ್ನದಿಂದ ಮತ್ತೊಂದು ಗೋಲು ಬಂತು. ಮತ್ತೆ ತಿರುಗಿಬಿದ್ದ ಕೊರಿಯಾದವರು ವಿರಾಮದ ಹೊತ್ತಿಗೆ ಅಂತರ 2-4 ಆಗುವಂತೆ ಮಾಡಿದರು. ಕೊರಿಯಾಕ್ಕೆ ಎರಡನೇ ಗೋಲ್ ಗಳಿಸಿ ಕೊಟ್ಟಿದ್ದು ಕೂಡ ಯೊಂಗ್ (26ನೇ ನಿ.).

ಉತ್ತರಾರ್ಧದಲ್ಲಿ ಉಭಯ ತಂಡದವರು ಮಂದಗತಿಯ ಆಟವಾಡಿದರು. ದಾಳಿಯಲ್ಲಿ ಬಲ ತೋರಿ ಭಾರತ ಮತ್ತೊಂದು ಗೋಲು ಗಳಿಸಿತು. 62ನೇ ನಿಮಿಷದಲ್ಲಿ ಯುವರಾಜ್ ವಾಲ್ಮಿಕಿ ಚೆಂಡನ್ನು ಗುರಿ ಸೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.