ಓರ್ಡೊಸ್, ಚೀನಾ (ಪಿಟಿಐ): ಚುರುಕಿನ ಆಟವಾಡುವ ದಕ್ಷಿಣ ಕೊರಿಯಾ ವಿರುದ್ಧ ಅಗತ್ಯ ಗೆಲುವು ಪಡೆಯಬೇಕಿರುವ ಭಾರತ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಮಿಂಚಿನ ವೇಗದಲ್ಲಿ ದಾಳಿಗೆ ಒತ್ತುಕೊಟ್ಟು ಹೋರಾಡುವುದು ಅಗತ್ಯವಾಗಿದೆ.
ತನ್ನ ಮೊದಲ ಪಂದ್ಯದಲ್ಲಿ ಭಾರತವು 5-0 ಗೋಲುಗಳ ಅಂತರದಿಂದ ಆತಿಥೇಯ ಚೀನಾ ವಿರುದ್ಧ ವಿಜಯ ಸಾಧಿಸಿ ಉತ್ತಮ ಆಂಭವನ್ನೇ ಪಡೆಯಿತು. ಆದರೆ ಜಪಾನ್ ಎದುರು ಜಯ ಸಾಧ್ಯವಾಗಲಿಲ್ಲ. ಭಾನುವಾರದ ಪಂದ್ಯವು 1-1 ಗೋಲಿನಿಂದ ಡ್ರಾ ಆಯಿತು. ಆದರೂ ಭಾರತದ ಸ್ಥಿತಿ ತೀರ ಚಿಂತಾಜನಕವೇನು ಆಗಿಲ್ಲ.
ಹಾಗೆಂದು ನಿಶ್ಚಿಂತೆಯಿಂದ ಇರುವಂಥ ಪರಿಸ್ಥಿತಿಯೂ ಇಲ್ಲ. ಪ್ರಶಸ್ತಿಯ ಕನಸು ನನಸಾಗಿಸಿಕೊಳ್ಳಲು ಉತ್ತಮ ಪ್ರದರ್ಶನದ ಹಾದಿಯಲ್ಲಿ ಸಾಗಬೇಕು. ಯುವ ಆಟಗಾರರನ್ನು ಹೆಚ್ಚಾಗಿ ಹೊಂದಿರುವ ತಂಡವು ಹೊಸ ಕೋಚ್ ಮೈಕಲ್ ನಾಬ್ಸ್ ಮಾರ್ಗದರ್ಶನದಲ್ಲಿ ಚೆನ್ನಾಗಿ ಆಡುತ್ತಿದೆ ಎಂದು ಭಾರಿ ವಿಶ್ವಾಸದಿಂದ ಹೇಳಲಾಗದು. ಕಾರಣ ಮೊದಲ ಪಂದ್ಯದಲ್ಲಿನ ಅಬ್ಬರವನ್ನು ಆನಂತರ ಕಾಯ್ದುಕೊಳ್ಳುವಲ್ಲಿ ತಂಡವು ವಿಫಲವಾಗಿದೆ.
ಜಪಾನ್ ಎದುರು ಗೆಲುವು ಪಡೆಯುವಲ್ಲಿ ವಿಫಲವಾದ ತಂಡವು ಕೊರಿಯಾದಂಥ ಬಲಾಢ್ಯ ಹಾಕಿ ಪಡೆಯ ಸದ್ದಡಗಿಸುವುದು ಸುಲಭವಂತೂ ಅಲ್ಲ. ಚೀನಾ ಹಾಗೂ ಜಪಾನ್‌ಗಿಂತ ಕೊರಿಯಾದವರ ಆಟ ಹೆಚ್ಚು ವೇಗವಾದದ್ದು. ಹತ್ತಿರದ ಪಾಸ್‌ಗಳನ್ನು ನೀಡುತ್ತಾ ಮುನ್ನುಗ್ಗುವ ಅವರ ಸಾಮರ್ಥ್ಯಕ್ಕೆ ಸರಿಹೊಂದುವ ಮಟ್ಟವನ್ನು ಮುಟ್ಟಿದರೆ ಖಂಡಿತವಾಗಿ ಯಶಸ್ಸು ಸಿಗುತ್ತದೆ.
ಸೋಲು ಇಲ್ಲವೆ ಡ್ರಾ ಬಗ್ಗೆ ಯೋಚನೆ ಮಾಡುವ ಸ್ಥಿತಿಯಂತೂ ಇಲ್ಲ. ಏಕೆಂದರೆ ನಂತರದ ಪಂದ್ಯಗಳು ಬಹಳಷ್ಟು ಕಷ್ಟದವು. ಏಷ್ಯನ್ ಕ್ರೀಡಾಕೂಟದ ಚಾಂಪಿಯನ್ ಪಾಕಿಸ್ತಾನ ಹಾಗೂ ರನ್ನರ್ ಅಪ್ ಮಲೇಷ್ಯಾ ವಿರುದ್ಧ ಆಡಬೇಕು. ಆಗ ರಾಜ್ಪಾಲ್ ಸಿಂಗ್ ನಾಯಕತ್ವದ ತಂಡದ ಮೇಲಿನ ಒತ್ತಡ ಸಾಕಷ್ಟು ಹೆಚ್ಚುತ್ತದೆ.
ಕೊರಿಯಾ ವಿರುದ್ಧ ಭಾರತವು ಮಧ್ಯಕ್ಷೇತ್ರದಲ್ಲಿ ಚೆಂಡನ್ನು ಸಮರ್ಥವಾಗಿ ನಿಯಂತ್ರಿಸುವುದು ನಿರ್ಣಾಯಕ ಅಂಶವಾಗಲಿದೆ. ಈ ವಿಭಾಗದಲ್ಲಿನ ಸಣ್ಣ ತಪ್ಪುಗಳು ಅಪಾಯಕಾರಿ. ರಕ್ಷಣಾ ಆಟಗಾರರ ಮೇಲೆಯೂ ಹೊರೆ ಹೆಚ್ಚು. ರೂಪಿಂದರ್ ಪಾಲ್ ಸಿಂಗ್ ಹಾಗೂ ವಿ.ರಘುನಾಥ್ ಅವರು ಮೊದಲ ಎರಡು ಪಂದ್ಯಗಳಲ್ಲಿ ತಮ್ಮ ಮೇಲಿನ ನಿರೀಕ್ಷೆಯ ಭಾರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕೊರಿಯಾ ಎದುರು ಕೂಡ ಅಂಥ ಆಟವಾಡಿದಲ್ಲಿ ಎದುರಾಳಿಗಳನ್ನು ಒತ್ತಡದಲ್ಲಿ ಇಡಬಹುದು.
ಗುರ್ಬಾಜ್ ಸಿಂಗ್ ಹಾಗೂ ರವಿ ಪಾಲ್ ಅವರನ್ನು ಕೋಚ್ ನಾಬ್ಸ್ ಪ್ರಭಾವಿಯಾಗಿ ಬಳಸಿಕೊಳ್ಳುವ ಉತ್ಸಾಹ ಹೊಂದಿದ್ದಾರೆ. ರೋಷನ್ ಮಿಂಜ್ ಹಾಗೂ ರಾಜ್ಪಾಲ್‌ಗೆ ಇವರು ಉತ್ತಮ ಬೆಂಬಲ ನೀಡುವಂಥ ಆಟಗಾರರಾಗಿದ್ದಾರೆ. ಆದ್ದರಿಂದ ಅವರಿಗೆ ಪಂದ್ಯದ ಆರಂಭದಲ್ಲಿಯೇ ಕ್ಷೇತ್ರಕ್ಕೆ ಇಳಿಸುವ ಸಾಧ್ಯತೆಯಿದೆ.
ಕೊರಿಯಾದವರು ತಮ್ಮ ಮೊದಲ ಎರಡು ಪಂದ್ಯಗಳಲ್ಲಿ ಜಯಿಸಿದ್ದಾರೆ. 3-2ರಲ್ಲಿ ಜಪಾನ್ ವಿರುದ್ಧ ಹಾಗೂ 4-3ರಲ್ಲಿ ಮಲೇಷ್ಯಾ ಎದುರು ಗೆದ್ದಿರುವುದು ಗಮನ ಸೆಳೆಯುವಂಥ ಅಂಶ. ಆದ್ದರಿಂದಲೇ ಭಾರತದ ಪಾಳಯದಲ್ಲಿ ಆತಂಕ ಹೆಚ್ಚಿದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.