ನವದೆಹಲಿ: ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ತನ್ನ ಅಧೀನಕ್ಕೊಳಪಡುವ ಎಲ್ಲಾ ಪ್ರಾದೇಶಿಕ ಕೇಂದ್ರಗಳ ಗುಣಮಟ್ಟ ಪರಿಶೀಲಿಸಲು ನಿರ್ಧರಿಸಿದೆ.
ಬೆಂಗಳೂರಿನಲ್ಲಿರುವ ಸಾಯ್ ಕೇಂದ್ರದಲ್ಲಿ ತಿಗಣೆ, ಕೀಟಗಳು ಇರುವ ಆಹಾರವನ್ನು ಪೂರೈಸಲಾಗಿದೆ ಎಂದು ಭಾರತ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ಹರೇಂದ್ರ ಸಿಂಗ್ ಸೋಮವಾರ ಆರೋಪಿಸಿದ್ದರು. ಈ ಸಂಬಂಧ ಹಾಕಿ ಇಂಡಿಯಾದ (ಎಚ್‌ಐ) ಅಧ್ಯಕ್ಷ ರಾಜಿಂದರ್ ಸಿಂಗ್‌ಗೆ ಅವರು ಪತ್ರ ಬರೆದಿದ್ದರು.
‘ಸಾಯ್ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಅಥ್ಲೀಟ್‌ಗಳಿಗೆ ಗುಣಮಟ್ಟದ ಆಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಶುಚಿತ್ವ ಕಾಪಾಡುವಂತೆಯೂ ತಿಳಿಸಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನ ಸಾಯ್ ಕೇಂದ್ರಕ್ಕೆ ಭೇಟಿ ನೀಡಿದ್ದ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಅಲ್ಲಿನ ಸೌಲಭ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು’ ಎಂದು ಸಾಯ್ ಮಹಾ ನಿರ್ದೇಶಕಿ ನೀಲಂ ಕಪೂರ್ ತಿಳಿಸಿದ್ದಾರೆ.
‘ಶುಚಿತ್ವ ಕಾಪಾಡುವುದು ಮತ್ತು ಗುಣಮಟ್ಟದ ಆಹಾರ ಪೂರೈಸುವುದು ಆಯಾ ಕೇಂದ್ರಗಳ ನಿರ್ದೇಶಕರ ಜವಾಬ್ದಾರಿಯಾಗಿದೆ. ಅದನ್ನು ಅವರು ಸಮರ್ಥವಾಗಿ ನಿಭಾಯಿಸಬೇಕು. ಇನ್ನು ಮುಂದೆ ಇಂತಹ ದೂರುಗಳು ಬಂದರೆ ಸಂಬಂಧಪಟ್ಟ ನಿರ್ದೇಶಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.
‘ಹರೇಂದ್ರ ಅವರು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಸಂಬಂಧ ಹೊಸದಾಗಿ ನೇಮಕವಾಗಿರುವ ಅಡುಗೆಯವರ ವಿಚಾರಣೆ ನಡೆಸಿ ವರದಿ ನೀಡುವಂತೆ ಅಲ್ಲಿನ ನಿರ್ದೇಶಕರಿಗೆ ಸೂಚಿಸಿದ್ದೇವೆ. ಜೊತೆಗೆ ಪೌಷ್ಠಿಕ ಆಹಾರ ಒದಗಿಸುವಂತೆಯೂ ನಿರ್ದೇಶಕರಿಗೆ ತಾಕೀತು ಮಾಡಿದ್ದೇನೆ’ ಎಂದು ಅವರು ನುಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.