ಬೆಂಗಳೂರು: ಲಾರೆನ್ಸ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ವೆಟರನ್ಸ್ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಸಿ’ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.
ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಹಣಾಹಣಿಯಲ್ಲಿ ವೆಟರನ್ಸ್ 3–0 ಗೋಲುಗಳಿಂದ ವೇಲು ಸೋಷಿಯಲ್ಸ್ ತಂಡವನ್ನು ಮಣಿಸಿತು.
ವಿಜಯಿ ತಂಡದ ಲಾರೆನ್ಸ್ 13 ಮತ್ತು 20ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ನವೀನ್ ಅಂಥೋಣಿ 66ನೇ ನಿಮಿಷದಲ್ಲಿ ಗೋಲು ದಾಖಲಿಸಿ ಗೆಲುವಿನ ಅಂತರ ಹೆಚ್ಚಿಸಿದರು. ಇನ್ನೊಂದು ಪಂದ್ಯದಲ್ಲಿ ಕೊಂಕಣ್ 5–0 ಗೋಲುಗಳಿಂದ ವಿನಾಯಕ ತಂಡವನ್ನು ಪರಾಭವಗೊಳಿಸಿತು.
ಕೊಂಕಣ್ ತಂಡದ ಭರತ್ ಚೆಟ್ರಿ 30, 48 ಮತ್ತು 56ನೇ ನಿಮಿಷಗಳಲ್ಲಿ ಗೋಲು ಬಾರಿಸಿ ಗಮನ ಸೆಳೆದರು. ಉತ್ತಪ್ಪ 22 ಮತ್ತು 29ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಸನ್‌ರೈಸಿಂಗ್ ತಂಡ 4–1 ಗೋಲುಗಳಿಂದ ರೋವರ್ಸ್ ತಂಡವನ್ನು ಸೋಲಿಸಿತು.
ಸನ್ ರೈಸಿಂಗ್ ಪರ ನಿಕ್ಸನ್ (2ನೇ ನಿಮಿಷ), ಜೊಶುವಾ (28 ಮತ್ತು 30ನೇ ನಿ.) ಹಾಗೂ ಸಬಾನಿ (60ನೇ ನಿ.) ಗೋಲು ಹೊಡೆದರು. ಧರ್ಮರಾಜ ಯೂನಿಯನ್ ಮತ್ತು ಜುನೊ ತಂಡಗಳ ನಡುವಣ ಪಂದ್ಯ 2–2 ಗೋಲುಗಳಿಂದ ಡ್ರಾ ಆಯಿತು.
ಧರ್ಮರಾಜ ತಂಡದ ಪರ ಅಭಿಜೀತ್ ಸುಭೊ (30+1ನೇ ನಿಮಿಷ) ಮತ್ತು ಬಾಬು (51ನೇ ನಿ.) ಗೋಲು ದಾಖಲಿಸಿದರು. ಜುನೊ ತಂಡದ ವಿಕಿ ಮತ್ತು ಶಾನ್ ಅವರು ಕ್ರಮವಾಗಿ 7 ಮತ್ತು 30ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.