ADVERTISEMENT

ಬೆಂಗಳೂರಿನಿಂದ ಎನ್‌ಸಿಎ ಸ್ಥಳಾಂತರ

ಸುದ್ದಿ 2 ನಿಮಿಷ

​ಪ್ರಜಾವಾಣಿ ವಾರ್ತೆ
Published 1 ಮೇ 2015, 19:30 IST
Last Updated 1 ಮೇ 2015, 19:30 IST

ಬೆಂಗಳೂರು: ಯುವ ಕ್ರಿಕೆಟಿಗರಿಗೆ ತರಬೇತಿ ನೀಡಲು ಮತ್ತು ಆಟಗಾರರ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದೊಂದಿಗೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 15 ವರ್ಷಗಳ ಹಿಂದೆ ಆರಂಭವಾಗಿದ್ದ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯನ್ನು  (ಎನ್‌ಸಿಎ) ಬೇರೆಡೆಗೆ ಸ್ಥಳಾಂತರಿಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ನಿರ್ಧರಿಸಿದೆ.

ಯುವ ಆಟಗಾರರಲ್ಲಿನ ಕೌಶಲ ಹೆಚ್ಚಿಸುವುದು ಮತ್ತು ಫಾರ್ಮ್‌ ಕಳೆದುಕೊಂಡ ಆಟಗಾರರಿಗೆ ಸೂಕ್ತ ತರಬೇತಿ ನೀಡುವುದು ಎನ್‌ಸಿಎನ ಕೆಲಸವಾಗಿತ್ತು. ಬ್ಯಾಟಿಂಗ್‌, ಬೌಲಿಂಗ್ ಮತ್ತು ಫೀಲ್ಡಿಂಗ್‌ ಹೀಗೆ ಎಲ್ಲಾ ವಿಭಾಗಗಳಿಗೂ ಪ್ರತ್ಯೇಕ ತರಬೇತುದಾರರು ಇದ್ದರು. ರಾಜ್ಯ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿ ಬ್ರಿಜೇಶ್ ಪಟೇಲ್‌ ಎನ್‌ಸಿಎನ ನಿರ್ದೇಶಕರಾಗಿದ್ದಾರೆ. ಟಿ.ಸಿ. ಮ್ಯಾಥ್ಯೂ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ.

ನವದೆಹಲಿಯಲ್ಲಿ ಗುರುವಾರ ನಡೆದ ಬಿಸಿಸಿಐ ಸಭೆಯಲ್ಲಿ ಎನ್‌ಸಿಎಯನ್ನು ಉದ್ಯಾನನಗರಿಯಿಂದ ಪುಣೆ ಅಥವಾ ಹಿಮಾಚಲ ಪ್ರದೇಶಕ್ಕೆ ಸ್ಥಳಾಂತರಿಸುವ ತೀರ್ಮಾನ ಕೈಗೊಳ್ಳಲಾಯಿತು.

‘ಅನುರಾಗ್‌ ಠಾಕೂರ್ ಹಿಮಾಚಲ ಪ್ರದೇಶದವರಾದ ಕಾರಣ ಅಕಾಡೆಮಿಯನ್ನು ಅಲ್ಲಿಗೆ ಸ್ಥಳಾಂತರಿಸುವ ಸಾಧ್ಯತೆಯೇ ಅಧಿಕವಾಗಿದೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ತಂಡದ ಆಟಗಾರ ಯುವರಾಜ್‌ ಸಿಂಗ್‌ ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಬಳಿಕ ಅಭ್ಯಾಸಕ್ಕಾಗಿ ಇಲ್ಲಿನ ಎನ್‌ಸಿಎಗೆ ಬಂದಿದ್ದರು. ಹಲವು ತಿಂಗಳು ಅಭ್ಯಾಸ ನಡೆಸಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದರು.   ಕ್ರಿಕೆಟ್‌ ಅಕಾಡೆಮಿಯ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಬಿಸಿಸಿಐ ಕ್ರಿಕೆಟ್‌ ಆಸ್ಟ್ರೇಲಿಯಾ ಜೊತೆ ಒಪ್ಪಂದವನ್ನೂ ಮಾಡಿಕೊಂಡಿದೆ.

ಅಕಾಡೆಮಿಗೆ ಸ್ವತಂತ್ರವಾದ ಕಟ್ಟಡ ನಿರ್ಮಿಸಿ ನೇಪಾಳದ ಕ್ರಿಕೆಟಿಗರಿಗೆ ನೆರವಾಗಬೇಕೆನ್ನುವ ಆಲೋಚನೆಯೂ ಬಿಸಿಸಿಐ ಮನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.