ADVERTISEMENT

ಭಾರತಕ್ಕೆ ಮೊದಲ ಚಿನ್ನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2014, 19:30 IST
Last Updated 20 ಸೆಪ್ಟೆಂಬರ್ 2014, 19:30 IST

ಇಂಚೆನ್‌: ನಿಖರ ಗುರಿ ಹಿಡಿದ ಭಾರತದ ಶೂಟರ್‌ಗಳು  17ನೇ ಏಷ್ಯನ್‌ ಕ್ರೀಡಾಕೂಟದ ಮೊದಲ ದಿನ ಎರಡು ಪದಕಗಳನ್ನು ತಂದಿತ್ತರು.

ಜಿತು ರಾಯ್‌ ಶನಿವಾರ ನಡೆದ ಪುರುಷರ 50 ಮೀ. ಪಿಸ್ತೂಲ್‌ ವಿಭಾಗದಲ್ಲಿ ಬಂಗಾರ ಗೆದ್ದರೆ,  ಶ್ವೇತಾ ಚೌಧರಿ ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಕಂಚು ಜಯಿಸಿದರು.

ಬ್ಯಾಡ್ಮಿಂಟನ್‌ ಮತ್ತು ಸ್ಕ್ವಾಷ್‌ನಲ್ಲಿ ಭಾರತ ಕನಿಷ್ಠ ಕಂಚಿನ ಪದಕಗಳನ್ನು ಖಚಿತಪಡಿಸಿಕೊಂಡಿದೆ. ಈ ಮೂಲಕ ಪ್ರಸಕ್ತ ಕೂಟದಲ್ಲಿ ಉತ್ತಮ ಆರಂಭ­ವನ್ನೇ ಪಡೆದಿದೆ. ಈ ಋತುವಿನ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಜಿತು ಪದಕ ಗೆಲ್ಲುವ ನೆಚ್ಚಿನ ಶೂಟರ್‌ ಎನಿಸಿಕೊಂಡಿದ್ದರು. ನಿರೀಕ್ಷೆಯಂತೆಯೇ ಅವರು ಬಂಗಾರದ ನಗು ಬೀರಿದ್ದಾರೆ. ಭಾರತದ ಶೂಟರ್‌ ಫೈನಲ್‌ನಲ್ಲಿ ಒಟ್ಟು 186.2 ಪಾಯಿಂಟ್‌ ಕಲೆಹಾಕಿದರು.

ಇದಕ್ಕೂ ಮುನ್ನ ನಡೆದ ಮಹಿಳೆ­ಯರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಕಂಚು ಗೆಲ್ಲುವ ಮೂಲಕ ಶ್ವೇತಾ ಭಾರತದ ಪದಕದ ‘ಬೇಟೆ’ಗೆ ಚಾಲನೆ ನೀಡಿದ್ದರು. ಶ್ವೇತಾ ಫೈನಲ್‌ನಲ್ಲಿ  176.4 ಪಾಯಿಂಟ್‌ ಗಿಟ್ಟಿಸಿಕೊಂಡರು.

ಮಿಂಚಿದ ಸೈನಾ, ಸಿಂಧು: ಸೈನಾ ನೆಹ್ವಾಲ್‌ ಮತ್ತು ಪಿ.ವಿ. ಸಿಂಧು ಅವರ ಉತ್ತಮ ಪ್ರದರ್ಶನದ ನೆರವಿನಿಂದ ಭಾರತ

ಮಹಿಳಾ ತಂಡದವರು ಬ್ಯಾಡ್ಮಿಂಟನ್‌­ನಲ್ಲಿ ಸೆಮಿಫೈನಲ್‌ ಪ್ರವೇಶಿಸಿ ಕಂಚಿನ ಪದಕ ಖಚಿತಪಡಿಸಿ­ಕೊಂಡರು.

ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ 3–2 ರಲ್ಲಿ ಥಾಯ್ಲೆಂಡ್‌ ತಂಡವನ್ನು ಮಣಿಸಿತು. ಏಷ್ಯನ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್‌ನಲ್ಲಿ ಭಾರತ ಪದಕ ಗೆಲ್ಲದೆ 28 ವರ್ಷಗಳು ಕಳೆದಿವೆ. ಕಂಚು ಖಚಿತವಾದ ಕಾರಣ ಭಾರತದ ಪದಕದ ಬರ ನೀಗಿದೆ.

ಕ್ವಾರ್ಟರ್‌ ಫೈನಲ್‌ಗೆ ದೀಪಿಕಾ, ಜೋತ್ಸ್ನಾ: ದೀಪಿಕಾ ಪಳ್ಳಿಕಲ್ ಮತ್ತು ಜೋತ್ಸ್ನಾ ಚಿಣ್ಣಪ್ಪ ಅವರು ಸ್ಕ್ವಾಷ್‌ ಸ್ಪರ್ಧೆಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಪರಸ್ಪರ ಎದುರಾಗಲಿದ್ದಾರೆ.ಇದರಿಂದ ಭಾರತದ ಸ್ಪರ್ಧಿ­ಯೊಬ್ಬರು ಸೆಮಿಫೈನಲ್‌ ಪ್ರವೇಶಿಸು­ವುದು ಖಚಿತವಾಗಿದ್ದು, ಕನಿಷ್ಠ ಕಂಚಿನ ಪದಕ ದೊರೆಯಲಿದೆ.

ವಾಲಿಬಾಲ್‌ನಲ್ಲಿ ಭಾರತದ ಪುರುಷರ ತಂಡ ಹಾಂಕಾಂಗ್‌ ವಿರುದ್ಧ ಗೆದ್ದರೆ, ಮಹಿಳೆಯರು ದಕ್ಷಿಣ ಕೊರಿಯ ಕೈಯಲ್ಲಿ ಸೋಲು ಅನುಭವಿಸಿದರು. ದಕ್ಷಿಣ ಕೊರಿಯಾ ಮತ್ತು ಚೀನಾ ತಲಾ ಐದು ಚಿನ್ನದ ಪದಕಗಳೊಂದಿಗೆ ಮೊದಲ ದಿನದ ಗೌರವವನ್ನು ಹಂಚಿ­ಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT