ADVERTISEMENT

ಮಾಧವ ಗಾಡ್ಗೀಳ್ ವರದಿ ಅನುಷ್ಠಾನ ಅಸಾಧ್ಯ - ಉಮ್ಮನ್ ಚಾಂಡಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 19:30 IST
Last Updated 11 ಜೂನ್ 2012, 19:30 IST

ತಿರುವನಂತಪುರ (ಪಿಟಿಐ): `ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯ, ಪರಿಸರವಾದಿ ಪ್ರೊ. ಮಾಧವ ಗಾಡ್ಗೀಳ್ ಅವರು ಕೇಂದ್ರಕ್ಕೆ ಸಲ್ಲಿಸಿರುವ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ~ ಎಂದು ಹೇಳಿರುವ ಕೇರಳ ಸರ್ಕಾರ, ವರದಿಯಲ್ಲಿ ಸೂಚಿಸಿರುವ ಸಲಹೆಗಳು ಪ್ರಾಯೋಗಿಕವಲ್ಲ ಎಂದು ತಿಳಿಸಿದೆ.

ಪಶ್ಚಿಮ ಘಟ್ಟಗಳ ರಕ್ಷಣೆ ಕುರಿತು ಗಾಡ್ಗೀಳ್ ಅವರು ಕೇಂದ್ರಕ್ಕೆ ಸಲ್ಲಿಸಿರುವ ವರದಿ ಅನುಷ್ಠಾನ ಸಂಬಂಧ ಸೋಮವಾರ ವಿಧಾನಸಭೆಯಲ್ಲಿ ಸಿಪಿಐ-ಎಂ ಸದಸ್ಯ ಎ.ಕೆ.ಬಾಲನ್ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಈಗಿರುವ ಕಾನೂನು ಪರಿಮಿತಿಯಲ್ಲೇ ಸರ್ಕಾರ ಪಶ್ಚಿಮ ಘಟ್ಟ ಸಂರಕ್ಷಣೆಗೆ ಮುಂದಾಗಲಿದೆ~ ಎಂದು ಸ್ಪಷ್ಟಪಡಿಸಿದ್ದಾರೆ.

`ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ ಮುಖ್ಯಸ್ಥರೂ ಆಗಿರುವ ಗಾಡ್ಗೀಳ್ ಅವರು ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ಪಶ್ಚಿಮ ಘಟ್ಟಗಳಲ್ಲಿ ಮಾನವ ಚಟುವಟಿಕೆ ನಿಯಂತ್ರಣ ಕುರಿತ ಅನೇಕ ನಿರ್ಬಂಧಗಳಿವೆ. ಅವುಗಳನ್ನು ನಮ್ಮ ರಾಜ್ಯದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಕಾನೂನಿನ ಇತಿ-ಮಿತಿಯಲ್ಲಿ ಪಶ್ಚಿಮ ಘಟ್ಟವನ್ನು ರಕ್ಷಿಸುವುದಾಗಿ~ ಚಾಂಡಿ ತಿಳಿಸಿದ್ದಾರೆ.

`ಪ್ರೊ.ಗಾಡ್ಗೀಳ್ ಅವರ ವರದಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ವರದಿಯಲ್ಲಿ ಸೂಚಿಸಿರುವ ಒಂಬತ್ತು ಸಲಹೆಗಳಿಗೆ ಪತ್ರದಲ್ಲಿ ಉತ್ತರ ನೀಡಿದ್ದೇವೆ. ಆ ಒಂಬತ್ತು ಸಲಹೆಗಳಲ್ಲಿ, `50 ವರ್ಷಗಳಷ್ಟು ಹಳೆಯದಾದ ಜಲಾಶಯಗಳನ್ನು ಸ್ಥಗಿತಗೊಳಿಸಬೇಕೆಂಬ~ ಒಂದು ಸಲಹೆಯನ್ನು ಜಾರಿಗೊಳಿಸುವುದು ಅಸಾಧ್ಯವೇ ಸರಿ. ಒಂದು ಪಕ್ಷ ಈ ಸಲಹೆ ಅನುಷ್ಠಾನಕ್ಕೆ ಮುಂದಾದರೆ, ರಾಜ್ಯದಲ್ಲಿ ಜಲವಿದ್ಯುತ್ ಯೋಜನೆಗಳಿಗೆ ತೀವ್ರ ಪೆಟ್ಟು ಬೀಳುತ್ತದೆ~ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.