ADVERTISEMENT

ರಾಜ್ಯ ಚೆಸ್ ಚಾಂಪಿಯನ್‌ಷಿಪ್ : ಅಮಿತ್, ನಿಶಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2011, 19:30 IST
Last Updated 15 ಆಗಸ್ಟ್ 2011, 19:30 IST

ಗುಲ್ಬರ್ಗ: ಚಾಕಚಕ್ಯತೆಯ ಆಟ ಪ್ರದರ್ಶಿಸಿದ ಬೆಂಗಳೂರಿನ ಅಮಿತ್ ಎ, ಹಾಗೂ ಶಿವಮೊಗ್ಗದ ನಿಶಾ ಎನ್. ಪಾಟ್ಕರ್ ಅವರು ಗುಲ್ಬರ್ಗ ಜಿಲ್ಲಾ ಚೆಸ್ ಸಂಸ್ಥೆ ಹಾಗೂ ಯುನೈಟೆಡ್ ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಬೆಂಗಳೂರು ಆಶ್ರಯದಲ್ಲಿ ಇಲ್ಲಿ ನಡೆದ 19 ವರ್ಷ ವಯೋಮಿತಿ ಒಳಗಿನ ರಾಜ್ಯ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು.

  ಇಲ್ಲಿನ ಮೆಹತಾ ಶಾಲೆಯಲ್ಲಿ ಸೋಮವಾರ ಕೊನೆಗೊಂಡ ಚಾಂಪಿಯನ್‌ಷಿಪ್‌ನಲ್ಲಿ ಅಮಿತ್ ಎ, ಒಟ್ಟು 6 ಪಾಯಿಂಟ್ ಗಳಿಸಿದರು. ಎಲ್ಲಾ ಸುತ್ತುಗಳಲ್ಲಿ ಈ ಆಟಗಾರ ಉತ್ತಮ ಪ್ರದರ್ಶನ ನೀಡಿದರು. ಈ ಆಟಗಾರನಿಗೆ ಸಮನಾದ ಪಾಯಿಂಟ್ ಗಳಿಸುವಲ್ಲಿ ಶಿವಮೊಗ್ಗದ ಕೇದಾರ್ ಉಮೇಶ ಕೂಡ ಯಶಸ್ವಿಯಾದರು. ಆದರೆ  ಒಟ್ಟಾರೆ ಉತ್ತಮ ಪ್ರದರ್ಶನ ನೀಡಿದ ಅಮಿತ್ ಅಗ್ರಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾದರು.

ಧಾರವಾಡದ ಅಕ್ಷಯ ವಿ. ಹಲಗಣ್ಣನವರ್ ಹಾಗೂ ಗುಲ್ಬರ್ಗದ ಗಿರೀಶ ಬಿ. ರೆಡ್ಡಿ ತಲಾ 5.5 ಪಾಯಿಂಟ್ ಪಡೆದು ಸಮಸ್ಥಾನ ಹಂಚಿಕೊಂಡರು. ಈ ಮೂಲಕ ಸೆಪ್ಟಂಬರ್ 5ರಿಂದ ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಚೆಸ್ ಟೂರ್ನಿಗೆ ಸ್ಥಾನ ಪಡೆದುಕೊಂಡರು.

ನಿಶಾಗೆ ಪ್ರಶಸ್ತಿಯ ಗರಿ: ಇದೇ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದಲ್ಲಿ ಶಿವಮೊಗ್ಗದ ನಿಶಾ ಎನ್. ಪಾಟ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅವರು ಒಟ್ಟು 4.5 ಪಾಯಿಂಟ್ ಗಳಿಸಿದರು. ಮೈಸೂರಿನ ಮಾನಸ ಎಚ್. ಆರ್. (4.5) ಸಹ ಇವರೊಂದಿಗೆ ಅಗ್ರಸ್ಥಾನವನ್ನು ಹಂಚಿಕೊಂಡರು. ಬೆಂಗಳೂರಿನ ಪವಿತ್ರಾ ಜಗತಾಪ್ (4) ಗುಲ್ಬರ್ಗದ ಅಂಜಲಿ ಠಾಕೂರ್ 3 ಪಾಯಿಂಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.