ADVERTISEMENT

ವಿದರ್ಭ ಮುಡಿಗೆ ಚೊಚ್ಚಲ ಕಿರೀಟ

ಇರಾನಿ ಕಪ್‌ ಕ್ರಿಕೆಟ್‌: ಭಾರತ ಇತರೆ ತಂಡಕ್ಕೆ ನಿರಾಸೆ; ಹನುಮ ವಿಹಾರಿ ಹೋರಾಟ ವ್ಯರ್ಥ

ಪಿಟಿಐ
Published 19 ಮಾರ್ಚ್ 2018, 20:22 IST
Last Updated 19 ಮಾರ್ಚ್ 2018, 20:22 IST
ಇರಾನಿ ಟ್ರೋಫಿಯೊಂದಿಗೆ ವಿದರ್ಭ ತಂಡದ ಆಟಗಾರರು ಸಂಭ್ರಮಿಸಿದ ಕ್ಷಣ ಪಿಟಿಐ ಚಿತ್ರ
ಇರಾನಿ ಟ್ರೋಫಿಯೊಂದಿಗೆ ವಿದರ್ಭ ತಂಡದ ಆಟಗಾರರು ಸಂಭ್ರಮಿಸಿದ ಕ್ಷಣ ಪಿಟಿಐ ಚಿತ್ರ   

ನಾಗಪುರ: ಎರಡು ತಿಂಗಳ ಹಿಂದೆ ಚೊಚ್ಚಲ ರಣಜಿ ಟ್ರೋಫಿ ಗೆದ್ದು ಇತಿಹಾಸ ರಚಿಸಿದ್ದ ವಿದರ್ಭ ತಂಡ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ ಮಾಡಿಕೊಂಡಿದೆ. ಫಯಾಜ್‌ ಫಜಲ್‌ ಪಡೆ ಇರಾನಿ ಕಪ್‌ನಲ್ಲೂ ಮೊದಲ ಸಲ ಪ್ರಶಸ್ತಿ ಜಯಿಸಿ ದಾಖಲೆ ಬರೆದಿದೆ.

ಜಮ್ತಾ ಕ್ರೀಡಾಂಗಣದಲ್ಲಿ ನಡೆದ ಭಾರತ ಇತರೆ ಎದುರಿನ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ ಮುನ್ನಡೆ ಆಧಾರದಲ್ಲಿ ವಿದರ್ಭ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಕರುಣ್‌ ನಾಯರ್‌ ಸಾರಥ್ಯದ ಭಾರತ ಇತರೆ ತಂಡ ಮೊದಲ ಇನಿಂಗ್ಸ್‌ನಲ್ಲಿ 129.1 ಓವರ್‌ಗಳಲ್ಲಿ 390ರನ್‌ಗಳಿಗೆ ಆಲೌಟ್‌ ಆಯಿತು. 410ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಶುರು ಮಾಡಿದ ವಿದರ್ಭ 26 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 79ರನ್‌ ಗಳಿಸಿದ್ದ ವೇಳೆ ಉಭಯ ತಂಡಗಳ ನಾಯಕರು ಪಂದ್ಯ ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.

ADVERTISEMENT

ಫಯಾಜ್‌ ಬಳಗ ಪ್ರಥಮ ಇನಿಂಗ್ಸ್‌ನಲ್ಲಿ 226.3 ಓವರ್‌ಗಳಲ್ಲಿ 7 ವಿಕೆಟ್‌ಗೆ 800ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಈ ಮೂಲಕ ಇರಾನಿ ಕಪ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಭಾಜನವಾಗಿತ್ತು.

6 ವಿಕೆಟ್‌ಗೆ 236ರನ್‌ಗಳಿಂದ ಭಾನುವಾರ ಆಟ ಮುಂದುವರಿಸಿದ ಭಾರತ ಇತರೆ ತಂಡಕ್ಕೆ ಹನುಮ ವಿಹಾರಿ ಮತ್ತು ಜಯಂತ್‌ ಯಾದವ್‌ ಆಸರೆಯಾದರು.

ದಿನದ ಮೊದಲ ಅವಧಿಯಲ್ಲಿ ಇವರು ವಿದರ್ಭ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಆರಂಭದಿಂದಲೇ ಎಚ್ಚರಿಕೆಯ ಆಟ ಆಡಿದ ಈ ಜೋಡಿ ಅವಕಾಶ ಸಿಕ್ಕಾಗಲೆಲ್ಲಾ ಚೆಂಡನ್ನು ಬೌಂಡರಿ ಗೆರೆ ದಾಟಿಸುತ್ತಾ ತಂಡದ ರನ್ ಗಳಿಕೆಗೆ ವೇಗ ತುಂಬುವ ಪ್ರಯತ್ನ ಮಾಡಿತು.

106ನೇ ಓವರ್‌ ಬೌಲ್ ಮಾಡಿದ ಎಡಗೈ ಸ್ಪಿನ್ನರ್‌ ಆದಿತ್ಯ ಸರ್ವಟೆ, ಮೊದಲ ಎಸೆತದಲ್ಲಿ ಜಯಂತ್‌ ವಿಕೆಟ್‌ ಉರುಳಿಸಿದರು. ಇದರೊಂದಿಗೆ 216ರನ್‌ಗಳ ಏಳನೇ ವಿಕೆಟ್‌ ಜೊತೆಯಾಟ ಅಂತ್ಯ ಕಂಡಿತು.

319 ನಿಮಿಷ ಕ್ರೀಸ್‌ನಲ್ಲಿದ್ದ ಜಯಂತ್‌, 230 ಎಸೆತಗಳನ್ನು ಎದುರಿಸಿ 96ರನ್‌ ಬಾರಿಸಿದರು. ಇದರಲ್ಲಿ 14 ಬೌಂಡರಿಗಳು ಸೇರಿದ್ದವು.

ಜಯಂತ್ ಪೆವಿಲಿಯನ್‌ ಸೇರಿದ ನಂತರ ವಿಹಾರಿ ವೇಗದ ಆಟಕ್ಕೆ ಒತ್ತು ನೀಡಿದರು. ಅವರು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜೊತೆಗೂಡಿ ಇನಿಂಗ್ಸ್‌ ಬೆಳೆಸಿದರು. 130ನೇ ಓವರ್‌ನಲ್ಲಿ ಸರ್ವಟೆ, ಕರುಣ್‌ ಪಡೆಯ ಇನಿಂಗ್ಸ್‌ಗೆ ತೆರೆ ಎಳೆದರು. ಅವರು ಮೊದಲ ಎಸೆತದಲ್ಲಿ ವಿಹಾರಿ ಅವರನ್ನು ಔಟ್‌ ಮಾಡಿದರು.  477 ನಿಮಿಷ ಕ್ರೀಸ್‌ನಲ್ಲಿದ್ದ ವಿಹಾರಿ 183 ರನ್‌ ಬಾರಿಸಿದರು. ಇದಕ್ಕಾಗಿ ತೆಗೆದುಕೊಂಡಿದ್ದು 327ಎಸೆತ. ಅವರು ಬೌಂಡರಿ (23) ಮತ್ತು ಸಿಕ್ಸರ್‌ (3) ಮೂಲಕವೇ 110ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌:

ವಿದರ್ಭ: ಮೊದಲ ಇನಿಂಗ್ಸ್‌, 226.3 ಓವರ್‌ಗಳಲ್ಲಿ 7 ವಿಕೆಟ್‌ಗೆ 800 ಡಿಕ್ಲೇರ್ಡ್‌ ಮತ್ತು 26 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 79 (ಸಂಜಯ್‌ ರಾಮಸ್ವಾಮಿ ಔಟಾಗದೆ 27, ಅಕ್ಷಯ್‌ ವಾಡಕರ್‌ ಔಟಾಗದೆ 50).

ಭಾರತ ಇತರೆ: ಪ್ರಥಮ ಇನಿಂಗ್ಸ್‌, 129.1 ಓವರ್‌ಗಳಲ್ಲಿ 390 (ಹನುಮ ವಿಹಾರಿ 183, ಜಯಂತ್‌ ಯಾದವ್‌ 96, ಶಹಬಾಜ್‌ ನದೀಮ್‌ 15; ಉಮೇಶ್‌ ಯಾದವ್‌ 72ಕ್ಕೆ2, ರಜನೀಶ್‌ ಗುರುಬಾನಿ 70ಕ್ಕೆ4, ಆದಿತ್ಯ ಠಾಕರೆ 74ಕ್ಕೆ1, ಆದಿತ್ಯ ಸರ್ವಟೆ 97ಕ್ಕೆ3).

ಫಲಿತಾಂಶ: ಪಂದ್ಯ ಡ್ರಾ. ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿದ್ದ ವಿದರ್ಭ ತಂಡಕ್ಕೆ ಪ್ರಶಸ್ತಿ.

ಪಂದ್ಯಶ್ರೇಷ್ಠ: ವಸೀಂ ಜಾಫರ್‌.

**

1269: ವಿದರ್ಭ ಮತ್ತು ಭಾರತ ಇತರೆ ತಂಡಗಳ ನಡುವಣ ಹೋರಾಟದಲ್ಲಿ ದಾಖಲಾದ ಒಟ್ಟು ರನ್‌ಗಳು

17: ಎರಡೂ ತಂಡಗಳ ಬೌಲರ್‌ಗಳು ಈ ಪಂದ್ಯದಲ್ಲಿ ಪಡೆದ ವಿಕೆಟ್‌ಗಳು

216: ಭಾರತ ಇತರೆ ತಂಡದ ಹನುಮ ವಿಹಾರಿ ಮತ್ತು ಜಯಂತ್‌ ಯಾದವ್‌ ಏಳನೇ ವಿಕೆಟ್‌ ಜೊತೆಯಾಟದಲ್ಲಿ ಗಳಿಸಿದ ರನ್‌.

183: ಭಾರತ ಇತರೆ ತಂಡದ ಬ್ಯಾಟ್ಸ್‌ಮನ್‌ ಹನುಮ ವಿಹಾರಿ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬಾರಿಸಿದ ರನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.