ADVERTISEMENT

ಸುಲಭ ಜಯದತ್ತ ಬೆಲ್ಜಿಯಂ ಚಿತ್ತ

ಇಂದು ಪನಾಮ ವಿರುದ್ಧ ‘ಜಿ’ ಗುಂಪಿನ ಹಣಾಹಣಿ; ಕೆವಿನ್‌, ಹಜಾರ್ಡ್‌ ಮೇಲೆ ಎಲ್ಲರ ಕಣ್ಣು

ಏಜೆನ್ಸೀಸ್
Published 17 ಜೂನ್ 2018, 18:51 IST
Last Updated 17 ಜೂನ್ 2018, 18:51 IST
ಹಜಾರ್ಡ್‌
ಹಜಾರ್ಡ್‌   

ಸೋಚಿ, ರಷ್ಯಾ: ಪ್ರತಿಭಾನ್ವಿತ ಆಟಗಾರರನ್ನು ಹೊಂದಿರುವ ಬೆಲ್ಜಿಯಂ ತಂಡ 21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಪನಾಮ ವಿರುದ್ಧ ಆಡಲಿದೆ.

ಸೋಮವಾರ ನಡೆಯುವ ‘ಜಿ’ ಗುಂಪಿನ  ಹಣಾಹಣಿಯಲ್ಲಿ ರಾಬರ್ಟೊ ಮಾರ್ಟಿನೆಜ್‌ ಗರಡಿಯಲ್ಲಿ ಪಳಗಿರುವ ಬೆಲ್ಜಿಯಂ, ಸುಲಭವಾಗಿ ಗೆಲ್ಲುವ ವಿಶ್ವಾಸ ಹೊಂದಿದೆ. ಏಡನ್‌ ಹಜಾರ್ಡ್‌ ಸಾರಥ್ಯದ ಬೆಲ್ಜಿಯಂ ತಂಡ ಫಿಫಾ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪನಾಮ ತಂಡ 55ನೇ ಸ್ಥಾನ ತನ್ನದಾಗಿಸಿಕೊಂಡಿದೆ.

ಬೆಲ್ಜಿಯಂ, ವಿಶ್ವಕಪ್‌ನಲ್ಲಿ ಒಮ್ಮೆಯೂ ‍ಪ್ರಶಸ್ತಿ ಜಯಿಸಿಲ್ಲ. 1986ರಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು ಈ ತಂಡದ ಇದುವರೆಗಿನ ಉತ್ತಮ ಸಾಧನೆಯಾಗಿದೆ.

ADVERTISEMENT

ನಾಯಕ ಹಜಾರ್ಡ್‌, ಕೆವಿನ್‌ ಡಿ ಬ್ರ್ಯೂನ್‌ ಮತ್ತು ರೊಮೆಲು ಲುಕಾಕು ಈ ತಂಡದ ಬೆನ್ನೆಲು ಬಾಗಿದ್ದಾರೆ. ಪೆನಾಲ್ಟಿ ಮತ್ತು ಫ್ರೀ ಕಿಕ್‌ ಮೂಲಕ ಚೆಂಡನ್ನು ಲೀಲಾಜಾಲವಾಗಿ ಎದುರಾಳಿ ತಂಡದ ಗೋಲುಪೆಟ್ಟಿಗೆಯೊಳಗೆ ಸೇರಿಸುವ ಕೌಶಲವನ್ನು ಕರಗತ ಮಾಡಿಕೊಂಡಿರುವ ಇವರ ಮೇಲೆ ಅಪಾರ ನಿರೀಕ್ಷೆ ಇದೆ.

ರಕ್ಷಣಾ ವಿಭಾಗದ ಆಟಗಾರರಾದ ವಿನ್ಸೆಂಟ್‌ ಕೊಂಪನಿ ಮತ್ತು ಥಾಮಸ್‌ ವೆರ್ಮಾಲೆನ್‌ ಅವರು ಗಾಯಗೊಂಡಿದ್ದಾರೆ. ಇವರು ಪನಾಮ ವಿರುದ್ಧ ಕಣಕ್ಕಿಳಿಯುವುದು ಇನ್ನೂ ಖಚಿತವಾಗಿಲ್ಲ.

ಒಂದೊಮ್ಮೆ ಇವರು ಅಂಗಳಕ್ಕಿಳಿಯದಿದ್ದರೆ ಥಾಮಸ್‌ ಮೆಯುನಿಯರ್‌, ಡೆಡ್ರಿಕ್‌ ಬೊಯಾಟಾ ಮತ್ತು ಟಾಬಿ ಅಲ್‌ಡರ್‌ವೀರಲ್ಡ್‌ ಅವರ ಮೇಲೆ ಅವರ ಮೇಲೆ ಜವಾಬ್ದಾರಿ ಹೆಚ್ಚಲಿದೆ. ಅದನ್ನು ಅವರು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಈಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಮಿಡ್‌ ಫೀಲ್ಡರ್‌ಗಳಾದ ಆ್ಯಕ್ಸಲ್‌ ವಿಷೆಲ್‌, ಮರೌನ್‌ ಫೆಲ್ಲಾಯಿನಿ, ಯಾನ್ನಿಕ್‌ ಕ್ಯಾರಸ್ಕೊ, ಥೋರ್ಗನ್‌ ಹಜಾರ್ಡ್‌ ಮತ್ತು ಮೌಸಾ ಡೆಂಬೆಲ್‌ ಅವರು ಪರಿಣಾಮಕಾರಿಯಾಗಿ ಆಡಿ ತಂಡಕ್ಕೆ ಗೆಲುವು ತಂದುಕೊಡುವ ಹುಮ್ಮಸ್ಸಿನಲ್ಲಿದ್ದಾರೆ.

ಡ್ರಿಯಸ್‌ ಮೆರ್ಟೆನ್ಸ್‌, ಅದ್ನಾನ್‌ ಜಾನುಜಾಜ್‌ ಮತ್ತು ಮಿಚಿ ಬ್ಯಾಟ್‌ಶುಯಾಯಿ ಅವರೂ ಕಾಲ್ಚಳಕ ತೋರಲು ಕಾತರರಾಗಿದ್ದಾರೆ.

ಆಘಾತ ನೀಡಲು ಕಾದಿರುವ ಪನಾಮ: ರೋಮನ್‌ ಟೊರೆಸ್‌ ಸಾರಥ್ಯದ ಪನಾಮ ತಂಡ ಮೊದಲ ಬಾರಿ ವಿಶ್ವಕಪ್‌ಗೆ ಅರ್ಹತೆ ಗಳಿಸಿದೆ. ಪ್ರತಿಭಾನ್ವಿತ ಆಟಗಾರರನ್ನು ಹೊಂದಿರುವ ಈ ತಂಡ ಪರಿಣಾಮಕಾರಿ ಆಟ ಆಡಿ ಬೆಲ್ಜಿಯಂ ತಂಡಕ್ಕೆ ಆಘಾತ ನೀಡಲು ಕಾಯುತ್ತಿದೆ.

ರಕ್ಷಣಾ ವಿಭಾಗದ ಆಟಗಾರರಾದ ಮೈಕಲ್ ಮುರಿಲ್ಲೊ, ಹರೋಲ್ಡ್‌ ಕಮಿಂಗ್ಸ್‌, ಫಿಡೆಲ್‌ ಎಸ್ಕೊಬಾರ್‌, ನಾಯಕ ಟೊರೆಸ್‌ ಮತ್ತು ಎರಿಕ್‌ ಡೆವಿಸ್‌ ಅವರು ಬೆಲ್ಜಿಯಂ ತಂಡದ ಆಟಗಾರರನ್ನು ನಿಯಂತ್ರಿಸಲು ಸೂಕ್ತ ಯೋಜನೆ ಹೆಣೆದಿದ್ದಾರೆ.

ಮಿಡ್‌ಫೀಲ್ಡರ್‌ಗಳಾದ ಗೇಬ್ರಿಯಲ್‌ ಗೊಮೆಜ್‌, ಎಡ್ಗರ್‌ ಬಾರ್ಸೆನಸ್‌, ಅರ್ಮಾಂಡೊ ಕೂಪರ್‌, ರಿಕಾರ್ಡೊ ಅವಿಲಾ ಮತ್ತು ಅನಿಬಲ್‌ ಗೊಡೊಯ್‌ ಅಭ್ಯಾಸ ಪಂದ್ಯಗಳಲ್ಲಿ ಗಮನ ಸೆಳೆದಿದ್ದಾರೆ. ಇವರು ಬೆಲ್ಜಿಯಂ ಎದುರು ಚುರುಕಿನ ಆಟ ಆಡಿ ಪನಾಮ ತಂಡಕ್ಕೆ ಅವಿಸ್ಮರಣೀಯ ಜಯ ತಂದುಕೊಡಲು ಹಾತೊರೆಯುತ್ತಿದ್ದಾರೆ.

*
ಅಭ್ಯಾಸ ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ ಗೆದ್ದಿದ್ದೆವು. ಇದು ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ. ಪನಾಮ ತಂಡವನ್ನು ನಾವು ಹಗುರವಾಗಿ ಪರಿಗಣಿಸುವುದಿಲ್ಲ.
-ರಾಬರ್ಟೊ ಮಾರ್ಟಿನೆಜ್‌, ಬೆಲ್ಜಿಯಂ ತಂಡದ ಕೋಚ್‌


*

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.