ಬೆಂಗಳೂರು: ಕ್ಯಾಟಲಿಸ್ಟ್ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಬೆಂಗಳೂರು ಟರ್ಫ್ ಕ್ಲಬ್ ಏರ್ಪಡಿಸಿರುವ ‘ಕ್ಯಾಟಲಿಸ್ಟ್ ಪ್ರಾಪರ್ಟಿಸ್ ಬೆಂಗಳೂರು ಡರ್ಬಿ ಭಾನುವಾರ ನಡೆಯಲಿದೆ. ಈ ರೇಸ್‌ನಲ್ಲಿ ‘ಪ್ರಿವೆಲೆಂಟ್ ಫೋರ್ಸ್’ ಗೆಲ್ಲುವ ನಿರೀಕ್ಷೆ ಇದೆ.
ಬೆಂಗಳೂರು ರೇಸ್‌ಕೋರ್ಸ್‌ನಲ್ಲಿ 44ನೇ ಬಾರಿಗೆ ಈ ಚಳಿಗಾಲದ ಡರ್ಬಿ ನಡೆಯಲಿದೆ. ಒಟ್ಟು ಬಹುಮಾನದ ಮೊತ್ತವು ಸುಮಾರು ₹ 1.60 ಕೋಟಿಗ ಳಷ್ಟಾಗಿದೆ. ವಿಜೇತ ಕುದುರೆಯು ಸುಮಾರು ₹ 95.33 ಲಕ್ಷ ಪಡೆಯಲಿದೆ. ಬೆಂಗಳೂರು ಚಳಿಗಾಲದ ರೇಸ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೊತ್ತದ ಬಹುಮಾನದ ದಾಖಲೆಯಾಗಿದೆ. 2016–17ನೇ ಚಳಿಗಾಲದ ಡರ್ಬಿಯಲ್ಲಿ ₹ 1.44 ಕೋಟಿ ಬಹುಮಾನ ಮೊತ್ತ ನೀಡಲಾಗಿತ್ತು.
ಹೈದರಾಬಾದ್ ಬೇಸಿಗೆ ರೇಸ್‌ಗಳ 2000 ಗಿನ್ನಿಸ್ ಮತ್ತು ಡರ್ಬಿ, ಚೆನ್ನೈನಲ್ಲಿ ನಡೆದಿದ್ದ ಡರ್ಬಿ ಸೇರಿ ಸತತವಾಗಿ ಐದು ರೇಸ್‌ಗಳನ್ನು ‘ಪ್ರಿವೆಲೆಂಟ್ ಫೋರ್ಸ್’ ಗೆದ್ದಿತ್ತು. ಆದರೆ, ಹೋದ ವಾರ ಮುಂಬೈನಲ್ಲಿ ನಡೆದಿದ್ದ ಇಂಡಿಯನ್ ಡರ್ಬಿಯಲ್ಲಿ ನಿರಾಸೆ ಅನುಭವಿಸಿತ್ತು. ಆ ರೇಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು.
ಡೇರಿಯಸ್ ಬೈರಾಮ್‌ಜಿ ತರಬೇತಿಯಲ್ಲಿ ಪಳಗಿರುವ ‘ಪ್ರಿವೆಲೆಂಟ್ ಫೋರ್ಸ್’ ಭಾನುವಾರದ ರೇಸ್‌ನಲ್ಲಿ ಪ್ರತಿಸ್ಪರ್ಧಿ ಕುದುರೆಗಳಿಗೆ ಪೈಪೋಟಿ ನೀಡಲು ಸಿದ್ಧವಾಗಿದೆ. ಈ ರೇಸ್‌ನಲ್ಲಿ ಒಟ್ಟು 15 ಸ್ಪರ್ಧಿಗಳು ಇವೆ.
ಆದರೆ. ಇದುವರೆಗಿನ ಪ್ರದರ್ಶನ ಮಟ್ಟವನ್ನು ಅವಲೋಕಿಸಿದಲ್ಲಿ, ‘ಪ್ರಿವೆಲೆಂಟ್ ಫೋರ್ಸ್’ ಕುದುರೆಯ ಸಾಮರ್ಥ್ಯಕ್ಕೆ ಸರಿಸಮನಾಗಿ ಇನ್ನುಳಿದ ಸ್ಫರ್ಧಿಗಳು ಸವಾಲು ಒಡ್ಡಬಲ್ಲವೇ ಎಂಬ ಕುತೂಹಲ ಈಗ ಗರಿಗೆದರಿದೆ. ಹೋದ ಭಾನುವಾರ ಪ್ರಿವೆಲೆಂಟ್ ಫೋರ್ಸ್ ಮುಂಬೈನಲ್ಲಿ ಸ್ಪರ್ಧಿಸಿತ್ತು. ಒಂದು ವಾರದ ಅಂತರದಲ್ಲಿ ಮತ್ತೆ ಇಲ್ಲಿ ಕಣಕ್ಕಿಳಿಯಲಿದೆ. ಕಡಿಮೆ ಅವಧಿಯಲ್ಲಿ ತನ್ನ ದೈಹಿಕ ಸಾಮರ್ಥ್ಯವನ್ನು ಯಾವ ರೀತಿ ಪಣಕ್ಕೊಡಲಿದೆ ಎಂಬ ಕೌತುಕವೂ ರೇಸ್‌ಪ್ರಿಯರಲ್ಲಿ ಮೂಡಿದೆ.
ಬೆಂಗಳೂರು ಓಕ್ಸ್‌ನಲ್ಲಿ ಗೆದ್ದಿದ್ದ ಕಾಂಗ್ರಾ ಮತ್ತು ಹೈದರಾಬಾದ್ ಚಳಿಗಾಲದ ಡರ್ಬಿ ಗೆದ್ದಿರುವ ಮಹಟೇಜಿ ಹಾಗೂ ನಾಲ್ಕನೇ ಸ್ಥಾನ ಪಡೆದಿದ್ದ ರೊಮ್ಯಾಂಟಿಕ್ ಸ್ಟಾರ್ ಸ್ಪರ್ಧೆ ಯಲ್ಲಿರುವ ಪ್ರಮುಖ ಕುದುರೆಗಳು.
ಡರ್ಬಿ ರೇಸ್ ಸಮಯ: ಸಂಜೆ 3.55ಕ್ಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.