ADVERTISEMENT

ಒಂದೇ ಇನಿಂಗ್ಸ್‌ನಲ್ಲಿ ಹತ್ತು ವಿಕೆಟ್ ಪಡೆದ ರಾಜಕುಮಾರ!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 19:45 IST
Last Updated 12 ಡಿಸೆಂಬರ್ 2018, 19:45 IST

ಇಂಫಾಲ: ಮಣಿಪುರ ಕ್ರಿಕೆಟ್ ತಂಡದ ಬೌಲರ್ ರೆಕ್ಸ್‌ ರಾಜಕುಮಾರ್ ಸಿಂಗ್ ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದ ಒಂದೇ ಇನಿಂಗ್ಸ್‌ನಲ್ಲಿ 10 ವಿಕೆಟ್‌ಗಳನ್ನು ಗಳಿಸಿ ದಾಖಲೆ ಬರೆದರು.

ಅರುಣಾಚಲ ಪ್ರದೇಶ ತಂಡದ ಎದುರಿನ ಪಂದ್ಯದಲ್ಲಿ ರೆಕ್ಸ್‌ (9.5-6-11-10)ಈ ಸಾಧನೆ ಮಾಡಿದರು. ಅವರು ಈ ಹಾದಿಯಲ್ಲಿ ಎರಡು ಹ್ಯಾಟ್ರಿಕ್ ಗಳಿಸಿದರು. ಅವರ ಬೌಲಿಂಗ್‌ನಲ್ಲಿ ಇಬ್ಬರು ಎಲ್‌ಬಿಡಬ್ಲ್ಯು, ಇಬ್ಬರು ಕಾಟ್ ಅ್ಯಂಡ್ ಬೌಲ್ಡ್; ಒಬ್ಬರು ಕ್ಯಾಚ್ ಮತ್ತು ಐವರನ್ನು ಬೌಲ್ಡ್‌ ಮಾಡಿದರು. ಅರುಣಾಚಲ ಪ್ರದೇಶವು ಮೊದಲ ಇನಿಂಗ್ಸ್‌ನಲ್ಲಿ 138 ರನ್‌ ಗಳಿಸಿತ್ತು. ಅದಕ್ಕುತ್ತರವಾಗಿ ಮಣಿಪುರ ತಂಡವು 122 ರನ್‌ ಗಳಿಸಿತ್ತು.

ಅರುಣಾಚಲ ಪ್ರದೇಶವು 16 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಪೇರಿಸಿ ಮಣಿಪುರಕ್ಕೆ ಕಠಿಣ ಗುರಿ ನೀಡುವ ಕನಸು ಕಾಣುತ್ತಿತ್ತು. ಆದರೆ, ರೆಕ್ಸ್ ರಾಜಕುಮಾರ್ ಕೊಟ್ಟ ಪೆಟ್ಟಿಗೆ ನಲುಗಿದ ಅರುಣಾಚಲ ತಂಡವು ಕೇವಲ 37 ರನ್‌ ಗಳಿಸಿ ಆಲೌಟ್ ಆಯಿತು. ಎಲ್ಲ ವಿಕೆಟ್‌ಗಳೂ ರಾಜಕುಮಾರ್ ಪಾಲಾದವು. 53 ರನ್‌ಗಳ ಗುರಿ ಬೆನ್ನತ್ತಿದ ಮಣಿಪುರ ತಂಡವು ಶುಭಂ ಚೌಹಾಣ್ ಅವರ (32 ರನ್) ಬ್ಯಾಟಿಂಗ್ ಬಲದಿಂದ 7.5 ಓವರ್‌ಗಳಲ್ಲಿ ಗುರಿ ಮುಟ್ಟಿತು ಎಂದು ಐಸಿಸಿ ವೆಬ್‌ಸೈಟ್ ವರದಿ ಮಾಡಿದೆ.

ADVERTISEMENT

ರೆಕ್ಸ್‌ ಈ ಪಂದ್ಯದಲ್ಲಿ ಒಟ್ಟು 15 ವಿಕೆಟ್ ಕಬಳಿಸಿದರು. ಅವರು ಈಚೆಗಷ್ಟೇ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ್ದರು.

ಅನಿಲ್ ಕುಂಬ್ಳೆ ಅವರು ಎರಡು ದಶಕಗಳ ಹಿಂದೆ ಪಾಕಿಸ್ತಾನ ಎದುರಿನ ಟೆಸ್ಟ್‌ನಲ್ಲಿ ಒಂದೇ ಇನಿಂಗ್ಸ್‌ನಲ್ಲಿ ಹತ್ತು ವಿಕೆಟ್ ಗಳಿಸಿ ದಾಖಲೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.