ADVERTISEMENT

ಕರ್ನಾಟಕ ಆಟಗಾರರನ್ನು ಪಡೆಯುವ ಯೋಜನೆ ಕೈಗೂಡಲಿಲ್ಲ: ನೆಹ್ರಾ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 20:10 IST
Last Updated 16 ಮಾರ್ಚ್ 2019, 20:10 IST
 ಆಶಿಶ್ ನೆಹ್ರಾ
ಆಶಿಶ್ ನೆಹ್ರಾ    

ಬೆಂಗಳೂರು:ಆಟಗಾರರ ಹರಾಜು ಪ್ರಕ್ರಿಯೆಯಲ್ಲಿರುವ ನಿಯಮಗಳು ಮತ್ತು ಅಪಾರ ಪೈಪೋಟಿಯಿಂದಾಗಿ ನಮ್ಮ ಯೋಜನೆಗಳು ಈಡೇರುವುದು ಕಷ್ಟ. ಅದಕ್ಕಾಗಿಯೇ ನಾವು ಕರ್ನಾಟಕದ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲು ಮಾಡಿದ ಪ್ರಯತ್ನಗಳು ಕೈಗೂಡಲಿಲ್ಲ. ಮನೀಷ್ ಪಾಂಡೆ ಮತ್ತು ಮಯಂಕ್ ಅಗರವಾಲ್ ಅವರನ್ನು ಪಡೆಯಲು ಶತಪ್ರಯತ್ನ ಮಾಡಿದ್ದೆವು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬೌಲಿಂಗ್ ಸಲಹೆಗಾರ ಆಶಿಶ್ ನೆಹ್ರಾ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಒಳ್ಳೆಯ ಆಟಗಾರರು ಇದ್ದಾರೆ. ಅವರಲ್ಲಿ ಬಹುತೇಕರು ಐಪಿಎಲ್‌ನ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿದ್ದಾರೆ. ಕೆ.ಎಲ್. ರಾಹುಲ್, ರಾಬಿನ್ ಉತ್ತಪ್ಪ ಅವರಿಗೆ ಹೆಚ್ಚು ಮೌಲ್ಯ ಪಡೆದ ಆಟಗಾರರಾಗಿದ್ದಾರೆ. ಕರುಣ್ ನಾಯರ್ ಕೂಡ ಪಂಜಾಬ್ ತಂಡದಲ್ಲಿ ಆಡುತ್ತಿದ್ದಾರೆ. ನಮಗೆ ದೇವದತ್ ಪಡಿಕ್ಕಲ್ ಬಿಟ್ಟರೆ ಉಳಿದವರನ್ನು ಖರೀದಿಸಲು ಸಾಧ್ಯವಾಗಲಿಲ್ಲ. ನಮ್ಮ ತಂಡದಲ್ಲಿ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಇದ್ದಾರೆ. ಆದ್ದರಿಂದ ಶ್ರೇಯಸ್ ಗೋಪಾಲ್ ಮತ್ತು ಕೆ.ಗೌತಮ್ ಅವರನ್ನು ಪರಿಗಣಿಸಲಿಲ್ಲ. ಶ್ರೇಯಸ್ ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆ ಆಡುತ್ತಿದ್ದಾರೆ. ಗೌತಮ್ ಅವರಿಗೆ ₹ 6.2 ಕೋಟಿ ಮೌಲ್ಯ ಲಭಿಸಿದೆ. ನಾವು ಗರಿಷ್ಠ ಆರು ಕೋಟಿ ರೂಪಾಯಿಯವರೆಗೆ ಬಿಡ್ ಮಾಡಿದ್ದೆವು’ ಎಂದರು.

ಆರ್‌ಸಿಬಿಯಲ್ಲಿ ಹೋದ ವರ್ಷದ ಆವೃತ್ತಿಯಲ್ಲಿ ಪವನ್ ದೇಶಪಾಂಡೆ ಮತ್ತು ಅನಿರುದ್ಧ ಜೋಶಿ ಇದ್ದರು. ಆದರೆ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಅವರನ್ನು ತಂಡವು ಉಳಿಸಿಕೊಂಡಿಲ್ಲ.

ADVERTISEMENT

‘ತಂಡದಲ್ಲಿ ಬೆಂಚ್‌ ಶಕ್ತಿ ಚೆನ್ನಾಗಿದೆ. ಇದು ಮಹತ್ವದ್ದು ಕೂಡ. ಐಪಿಎಲ್ ದೀರ್ಘ ವೇಳಾಪಟ್ಟಿ ಹೊಂದಿದೆ. ಗುಂಪು ಹಂತದಲ್ಲಿಯೇ 14 ಪಂದ್ಯಗಳು ಇರುತ್ತವೆ. ಈ ಅವಧಿಯಲ್ಲಿ ಎಲ್ಲ ಆಟಗಾರರೂ ಒಂದೇ ರೀತಿಯ ದೈಹಿಕ ಮತ್ತು ಮಾನಸಿಕ ಸ್ಥಿರತೆ ಕಾಪಾಡುಕೊಳ್ಳುವುದು ಕಷ್ಟ. ಆದ್ದರಿಂದ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಿದಾಗ ಯುವ ಆಟಗಾರರಿಗೆ ಅವಕಾಶ ಸಿಗುತ್ತದೆ. ಪ್ರತಿಭಾ ಶೋಧ ಯೋಜನೆಯಲ್ಲಿಯೂ ಪ್ರತಿಭಾವಂತರು ಲಭಿಸುತ್ತಿದ್ದಾರೆ. ಸಮಯ ಕಳೆದಂತೆ ಅವರು ಬೆಳೆಯುತ್ತಾರೆ. ಕನಿಷ್ಠ 2–3 ವರ್ಷಗಳ ಸಮಯವಾದರೂ ಬೇಕು’ ಎಂದರು.

ಟ್ವೆಂಟಿ–20 ಕ್ರಿಕೆಟ್ ಹೆಚ್ಚು ವೈಜ್ಞಾನಿಕವಾಗಿದೆ: ಗ್ಯಾರಿ
‘ಟ್ವೆಂಟಿ–20 ಮಾದರಿಯ ಕ್ರಿಕೆಟ್‌ ಇಂದು ಹೆಚ್ಚು ವೈಜ್ಞಾನಿಕವಾಗುತ್ತಿದೆ. ಚುಟುಕು ಅವಧಿಯಲ್ಲಿ ಶಕ್ತಿ, ಸಾಮರ್ಥ್ಯಗಳ ಜೊತೆಗೆ ವೈಜ್ಞಾನಿಕ ಲೆಕ್ಕಾಚಾರದ ನಡೆಗಳಿದ್ದರೆ ಮಾತ್ರ ಯಶಸ್ಸು ಸಾಧ್ಯ’ಎಂದು ಆರ್‌ಸಿಬಿ ಕೋಚ್ ಗ್ಯಾರಿ ಕರ್ಸ್ಟನ್‌ ಹೇಳಿದರು.

‘ಫುಟ್‌ಬಾಲ್‌ನಲ್ಲಿ ಕೋಚ್ ಇರುವುದಿಲ್ಲ. ಮ್ಯಾನೇಜರ್ ಇರುತ್ತಾರೆ. ಅವರ ಹೊಣೆ ಹೆಚ್ಚಿರುತ್ತದೆ. ಆದರೆ ಕ್ರಿಕೆಟ್‌ನಲ್ಲಿ ಮೈದಾನದ ಹೊರಗೆ ಯೋಜನೆಗಳನ್ನು ಹೆಣೆದುಕೊಡಲು ಕೋಚ್ ಸಹಾಯ ಮಾಡಿದರೆ, ಮೈದಾನದೊಳಗೆ ಅವುಗಳ ಅನುಷ್ಠಾನ ಮತ್ತು ಪಂದ್ಯದ ಅಗತ್ಯಕ್ಕೆ ತಕ್ಕಂತೆ ನಿರ್ಧಾರಗಳನ್ನು ನಾಯಕರಾದವರು ತೆಗೆದುಕೊಳ್ಳುತ್ತಾರೆ. ಆದ್ದರಿಂದ ಎಲ್ಲರೂ ಸೇರಿ ಪರಿಸ್ಥಿತಿಯನ್ನು ಯೋಜನಾಬದ್ಧವಾಗಿ ನಿರ್ವಹಿಸುವುದು ಮುಖ್ಯವಾಗುತ್ತದೆ’ ಎಂದರು.

‘ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಸ್ಟ್ರ್ಯಾಟರ್ಜಿಕ್ ಟೈಮ್ ಔಟ್‌ಗಳು ಇರಬೇಕು. ಎನ್‌ಎಫ್‌ಎಲ್ ಮತ್ತು ಎನ್‌ಬಿಎ ಟೂರ್ನಿಗಳಲ್ಲಿ ಇಂತಹ ಅವಕಾಶಗಳು ಇವೆ. ಈ ಒಂದು–ಒಂದೂವರೆ ನಿಮಿಷದ ಅವಧಿಯಲ್ಲಿ ಆಟಗಾರರು ಮತ್ತು ನಾಯಕನೊಂದಿಗೆ ನೇರ ಮಾತುಕತೆ ನಡೆಸಲು ಸಾಧ್ಯವಾಗುತ್ತದೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.