ADVERTISEMENT

ಕುಲವಂತ್‌ಗೆ ಆರು; ಗಂಭೀರ್‌ಗೆ ನೂರು

ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ: ಸೆಮಿಗೆ ದೆಹಲಿ, ಮುಂಬೈ

ಗಿರೀಶದೊಡ್ಡಮನಿ
Published 14 ಅಕ್ಟೋಬರ್ 2018, 19:54 IST
Last Updated 14 ಅಕ್ಟೋಬರ್ 2018, 19:54 IST
ಕುಲವಂತ್ ಖೆಜ್ರೋಲಿಯಾ
ಕುಲವಂತ್ ಖೆಜ್ರೋಲಿಯಾ    

ಬೆಂಗಳೂರು: ಕುಲವಂತ್ ಖೆಜ್ರೋಲಿಯಾ ಹ್ಯಾಟ್ರಿಕ್ ಮತ್ತು ಗೌತಮ್ ಗಂಭೀರ್ ಶತಕದ ಬಲದಿಂದ ದೆಹಲಿ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ದೆಹಲಿ ತಂಡವು ಐದು ವಿಕೆಟ್‌ಗಳಿಂದ ಹರಿಯಾಣ ವಿರುದ್ಧ ಜಯಿಸಿತು.

ಅಮಿತ್ ಮಿಶ್ರಾ ನಾಯಕತ್ವದ ಹರಿಯಾಣ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ವೇಗಿ ಕುಲವಂತ ಖೆಜ್ರೋಲಿಯಾ ಆರನೇ ಓವರ್‌ನಲ್ಲಿ ನಿತಿನ್ ಸೈನಿ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿ ಕೇಕೆ ಹಾಕಿದರು. ನಮಥರ ಓವರ್‌ನಲ್ಲಿ ಜಯಂತ್ ಯಾದವ್ ಅವರು ನವದೀಪ್ ಸೈನಿಗೆ ವಿಕೆಟ್ ಒಪ‍್ಪಿಸಿದರು.

ADVERTISEMENT

ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಚೈತನ್ಯ ಬಿಷ್ಣೊಯ್ (85 ರನ್) ಇನಿಂಗ್ಸ್‌ ಕಟ್ಟುವ ಪ್ರಯತ್ನ ಮಾಡಿದರು. ಪ್ರಮೋದ್ ಚಾಂಡಿಲಾ (59 ರನ್) ಅವರಿಗೆ ಜೊತೆ ನೀಡಿದರು.

ಆದರೆ ಕುಲವಂತ್ ತಮ್ಮ ಮೊನಚು ದಾಳಿಯಿಂದ ಬ್ಯಾಟಿಂಗ್ ಪಡೆಗೆ ಪೆಟ್ಟು ನೀಡಿದರು. ಹತ್ತನೇ ಓವರ್‌ನಲ್ಲಿ ಹಿಮಾಂಶು ರಾಣಾ ವಿಕೆಟ್ ಕಬಳಿಸಿದರು. ಶತಕದತ್ತ ಹೆಜ್ಜೆ ಇಟ್ಟಿದ್ದ ಚೈತನ್ಯ (38.4), ಪ್ರಮೋದ್ (38.5) ಮತ್ತು ಅಮಿತ್ ಮಿಶ್ರಾ (38.6) ಅವರನ್ನು ಒಂದೇ ಓವರ್‌ನಲ್ಲಿ ಕಬಳಿಸಿ ಮಿಂಚಿದರು. ಇದರಿಂದಾಗಿ ದೊಡ್ಡ ಮೊತ್ತ ಗಳಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಗುರಿ ಬೆನ್ನತ್ತಿದ ದೆಹಲಿ ತಂಡವೂ ಆರಂಭದಲ್ಲಿ ಆಘಾತ ಅನುಭವಿಸಿತು. ಉನ್ಮುಕ್ತ ಚಾಂದ್ (15 ರನ್) ಬೇಗನೇ ಔಟಾದರು. ಆದರೆ ಅನುಭವಿ ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ (104; 72ಎಸೆತ, 16ಬೌಂಡರಿ) ಶತಕದ ಆಟ ಕಳೆಗಟ್ಟಿತು. ಅವರಿಗೆ ಉತ್ತಮ ಜೊತೆ ನೀಡಿದ ಧ್ರುವ ಶೋರೆ (50 ರನ್) ಎರಡನೇ ವಿಕೆಟ್‌ ಜೊತೆಯಾಟದಲ್ಲಿ 118 ರನ್‌ ಗಳಿಸಿದರು. ಇದರಿಂದಾಗಿ ತಂಡದ ಜಯ ಸುಲಭವಾಯಿತು.

ಮುಂಬೈಗೆ ಸುಲಭ ಜಯ: ತುಷಾರ್ ದೇಶಪಾಂಡೆ (23ಕ್ಕೆ5) ಅವರ ಉತ್ತಮ ಬೌಲಿಂಗ್‌ ನಿಂದಾಗಿ ಮುಂಬೈ ತಂಡವು ಬಿಹಾರ್ ವಿರುದ್ಧದ ಪಂದ್ಯದಲ್ಲಿ ಸುಲಭ ಜಯ ಸಾಧಿಸಿತು. ಮುಂಬೈ ತಂಡವು 9 ವಿಕೆಟ್‌ಗಳಿಂದ ಗೆದ್ದಿತು.

ಸಂಕ್ಷಿಪ್ತ ಸ್ಕೋರು: ಚಿನ್ನಸ್ವಾಮಿ ಕ್ರೀಡಾಂಗಣ: ಹರಿಯಾಣ: 49.1 ಓವರ್‌ಗಳಲ್ಲಿ 229 (ಚೈತನ್ಯ ಬಿಷ್ಣೂ 85, ಹಿಮಾಂಶು ರಾಣಾ 10, ಪ್ರಮೋದ ಚಾಂಡಿಲಾ 59, ರಾಹುಲ್ ತೆವಾಟಿಯಾ 14, ಹರ್ಷಲ್ ಪಟೇಲ್ 15, ಮೋಹಿತ್ ಶರ್ಮಾ 12, ನವದೀಪ್ ಸೈನಿ 39ಕ್ಕೆ3, ಕುಲವಂತ ಖೆಜ್ರೋಲಿಯಾ 31ಕ್ಕೆ6), ದೆಹಲಿ: 39.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 230 (ಉನ್ಮುಕ್ತ ಚಾಂದ್ 15, ಗೌತಮ್ ಗಂಭೀರ್ 104. ಧ್ರುವ ಶೋರೆ 50, ನಿತೀಶ್ ರಾಣಾ 37, ರಾಹುಲ್ ತೆವಾಟಿಯಾ 32ಕ್ಕೆ3) ಫಲಿತಾಂಶ: ದೆಹಲಿಗೆ 5 ವಿಕೆಟ್‌ಗಳ ಜಯ.

ಜಸ್ಟ್‌ಕ್ರಿಕೆಟ್ ಮೈದಾನ: ಬಿಹಾರ: 28.2 ಓವರ್‌ಗಲಲ್ಲಿ 69 (ಬಾಬುಲ್ ಕುಮಾರ್ 16, ರೆಹಮತ್‌ ಉಲ್ಲ 18, ತುಷಾರ್ ದೇಶಪಾಂಡೆ 23ಕ್ಕೆ5, ಶಂಸ್ ಮುಲಾನಿ 18ಕ್ಕೆ3), ಮುಂಬೈ: 12.3 ಓವರ್‌ಗಳಲ್ಲಿ 1 ವಿಕೆಟ್‌ಗೆ 70 (ಅಖಿಲ್ ಹೆರ್ವಾಡ್ಕರ್ 24, ರೋಹಿತ್ ಶರ್ಮಾ ಔಟಾಗದೆ 33, ಆದಿತ್ಯ ತಾರೆ ಔಟಾಗದೆ 6) ಫಲಿತಾಂಶ: ಮುಂಬೈ ತಂಡಕ್ಕೆ 9 ವಿಕೆಟ್‌ಗಳ ಜಯ.

ಇಂದಿನ ಪಂದ್ಯಗಳು
ಮಹಾರಾಷ್ಟ್ರ–ಜಾರ್ಖಂಡ್ (ಚಿನ್ನಸ್ವಾಮಿ ಕ್ರೀಡಾಂಗಣ)
ಆಂಧ್ರ–ಹೈದರಾಬಾದ್ (ಜಸ್ಟ್‌ ಕ್ರಿಕೆಟ್ ಕ್ರೀಡಾಂಗಣ)
ಪಂದ್ಯಗಳ ಆರಂಭ: ಬೆಳಿಗ್ಗೆ 9

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.