ADVERTISEMENT

ಕೆಎಸ್‌ಸಿಗೆ ಸಿಒಎ ಚಾಟಿಯೇಟು; ಮತದಾನ ಹಕ್ಕು ಮೊಟಕುಗೊಳಿಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 19:07 IST
Last Updated 30 ಅಕ್ಟೋಬರ್ 2018, 19:07 IST
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ   

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಸುಧಾರಣೆಗಳನ್ನು ತರಲು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡುವ ಕುರಿತು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಗೆ ಸಿಒಎ ಚಾಟಿ ಬೀಸಿದೆ.

‘ಒಂದು ವಾರದೊಳಗೆ ಅಫಿಡವಿಟ್ ಸಲ್ಲಿಸದೇ ಹೋದರೆ ಕರ್ನಾಟಕ ಸೇರಿದಂತೆ 17 ರಾಜ್ಯ ಸಂಸ್ಥೆಗಳ ಮತದಾನ ಹಕ್ಕು ಕಡಿತಗೊಳಿಸಲು ಸೂಚನೆ ನೀಡಬೇಕು‘ ಎಂದು ಸಿಒಎ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ವಿನೋದ್ ರಾಯ್ ನೇತೃತ್ವದ ಸಿಒಎ ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಶಿಫಾರಸ್ಸುಗಳ ಕುರಿತ ಸ್ಥಿತಿ–ಗತಿ ವರದಿಯಲ್ಲಿ ಈ ವಿಷಯವನ್ನು ಉಲ್ಲೇಖಿಸಿದೆ.

ADVERTISEMENT

‘ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಪಾಲಿಸುವಲ್ಲಿ ಕರ್ನಾಟಕ, ಹರಿಯಾಣ, ಹಿಮಾಚಲ ಪ್ರದೇಶ, ಗುಜರಾತ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಸಂಸ್ಥೆಗಳು ಕ್ರಮ ಕೈಗೊಂಡಿಲ್ಲ. ಶಿಫಾರಸುಗಳನ್ನು ಜಾರಿಗೊಳಿಸುವ ಕುರಿತು ಅಫಿಡವಿಟ್ ಕೂಡ ಸಲ್ಲಿಸಿಲ್ಲ. ಈ ಸಂಸ್ಥೆಗಳಲ್ಲಿ ಸದ್ಯ ಇರುವ ಹಂಗಾಮಿ ಸಮಿತಿಗಳು ಅಧಿಕಾರ ಬಿಟ್ಟುಕೊಡಲು ಆಸಕ್ತಿ ತೋರಿಸುತ್ತಿಲ್ಲ. ಇದುವರೆಗೆ ಅಫಿಡವಿಟ್ ಸಲ್ಲಿಸದ ಮತ್ತು ಭಾಗಶಃ ಒಪ್ಪಿಗೆ ಪತ್ರ ಸಲ್ಲಿಸಿದ ಸಂಸ್ಥೆಗಳು ಒಂದು ವಾರದೊಳಗೆ ತಮ್ಮ ಒಪ್ಪಿಗೆ ಪತ್ರಗಳನ್ನು ಸಲ್ಲಿಸಬೇಕು. ಇಲ್ಲದಿದ್ದರೆ ಆ ಸಂಸ್ಥೆಗಳ ಮತದಾನದ ಹಕ್ಕು ಮೊಟಕುಗೊಳಿಸಬೇಕು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದಲ್ಲಿ ಎರಡು ವರ್ಷಗಳಿಂದ ಹಂಗಾಮಿ ಸಮಿತಿ ಅಧಿಕಾರ ವಹಿಸಿಕೊಂಡಿದೆ. ಸಂಜಯ್ ದೇಸಾಯಿ ಮತ್ತು ಸುಧಾಕರ್ ರಾವ್ ಕ್ರಮವಾಗಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿದ್ದಾರೆ.‌ ತಮಿಳುನಾಡು, ಬಂಗಾಳ, ವಿದರ್ಭ, ಮಹಾರಾಷ್ಟ್ರ, ಜಾರ್ಖಂಡ್, ಮಧ್ಯಪ್ರದೇಶ, ಬಿಹಾರ, ಗೋವಾ, ಛತ್ತೀಸಗಡ ಮತ್ತು ಮಣಿಪುರ ರಾಜ್ಯ ಸಂಸ್ಥೆಗಳು ಭಾಗಶಃ ಒಪ್ಪಿಗೆ ಸೂಚಿಸಿವೆ. ಈ ಸಂಸ್ಥೆಗಳೂ ಕೂಡ ಸಂಪೂರ್ಣ ಒಪ್ಪಿಗೆ ಪತ್ರವನ್ನು ನೀಡಬೇಕಿದೆ.

‘ಒಟ್ಟು 34 ರಾಜ್ಯ ಸಂಸ್ಥೆಗಳ ಪೈಕಿ 17 ಮಾತ್ರ ಸುಪ್ರೀಂ ನಿರ್ದೇಶಿತ ನಿಯಮಾವಳಿ ಮತ್ತು ಶಿಫಾರಸುಗಳ ಜಾರಿಗೆ ಒಪ್ಪಿಗೆ ನೀಡಿವೆ. ಅವುಗಳೆಂದರೆ; ಆಂಧ್ರ, ಅಸ್ಸಾಂ, ಬರೋಡಾ, ಮಿಜೋರಾಂ, ಪುದುಚೇರಿ, ದೆಹಲಿ, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ, ಕೇರಳ, ಮುಂಬೈ, ಒಡಿಶಾ, ಪಂಜಾಬ್, ರಾಜಸ್ಥಾನ, ಸೌರಾಷ್ಟ್ರ, ಸಿಕ್ಕಿಂ, ತ್ರಿಪುರ ಮತ್ತು ಉತ್ತರಪ್ರದೇಶ ರಾಜ್ಯ ಸಂಸ್ಥೆಗಳಾಗಿವೆ. ಭಾಗಶಃ ಒಪ್ಪಿಗೆ ನೀಡಿರುವ ಮತ್ತು ನೀಡದಿರುವ ಸಂಸ್ಥೆಗಳ ಪೈಕಿ ಕೆಲವರು ನೂತನ ಮಾರ್ಗದರ್ಶಿ ಸೂತ್ರಗಳನ್ನು ಕೇಳಿದ್ದವು. ಅವುಗಳನ್ನು ಬಿಸಿಸಿಐಗೆ ನೀಡಲಾಗಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ವಿಷಯದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಎಸ್‌ಸಿಎ ಕಾರ್ಯದರ್ಶಿ ಸುಧಾಕರ್ ರಾವ್, ‘ ಒಂದು ವಾರ ಸಮಯ ನೀಡಲಾಗಿದೆ. ಆದರೆ, ನಮ್ಮ ಸಂಸ್ಥೆಯು ಇವತ್ತೇ ಎಲ್ಲ ದಾಖಲೆಗಳು ಮತ್ತು ಪತ್ರಗಳನ್ನು ಕಳುಹಿಸುತ್ತಿದ್ದೇವೆ. ನಾಳೆ ಅಥವಾ ನಾಡಿದ್ದರಲ್ಲಿ ಅಲ್ಲಿಗೆ ತಲುಪಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.