ಮೆಲ್ಬರ್ನ್: ಅನುಭವಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರಿಗೆ ಆಸ್ಟ್ರೇಲಿಯಾಕ್ಕೆ ಬಂದಿಳಿದಾಗಿನಿಂದಲೂ ಭುಜದ ನೋವು ಕಾಡುತ್ತಿದೆ. ಅವರಿಗೆ ನಾಲ್ಕು ದಿನಗಳ ಕಾಲ ಚುಚ್ಚುಮದ್ದು ನೀಡಲಾಗಿತ್ತು ಎಂದು ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಹೇಳಿದರು.
ಪರ್ತ್‌ನಲ್ಲಿ ಈಚೆಗೆ ನಡೆದ ಎರಡನೇ ಟೆಸ್ಟ್‌ನಲ್ಲಿ ರವೀಂದ್ರ ಜಡೇಜ ಅವರನ್ನು ಕಣಕ್ಕಿಳಿಸಿರಲಿಲ್ಲ. ಆದರೆ ಆ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಜಡೇಜ ಅವರು ಹಲವು ಓವರ್‌ಗಳಲ್ಲಿ ಬದಲೀ ಫೀಲ್ಡರ್ ಆಗಿ ಕಾರ್ಯನಿರ್ವಹಿಸಿದ್ದರು.
ಇದು ಚರ್ಚೆಗೆ ಗ್ರಾಸವಾಗಿತ್ತು ಈ ಬಗ್ಗೆ ಭಾನುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ರವಿಶಾಸ್ತ್ರಿ ಪ್ರತಿಕ್ರಿಯಿಸಿದರು.
‘ಇಲ್ಲಿಗೆ ಬರುವ ಮುನ್ನ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುವಾಗಲೂ ಅವರಿಗೆ ನೋವು ಕಾಡಿತ್ತು. ಅದರಿಂದಾಗಿ ಧೇಶಿ ಪಂದ್ಯಗಳಲ್ಲಿಯೂ ಆಡಿರಲಿಲ್ಲ’ ಎಂದರು.
ಆದರೆ, ಸಂಪೂರ್ಣ ಫಿಟ್ ಇಲ್ಲದಿದ್ದರೂ ಆಸ್ಟ್ರೇಲಿಯಾಕ್ಕೆ ಕರೆಸಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸ್ತ್ರಿ, ‘ಪರ್ತ್‌ನಲ್ಲಿ ಜಡೇಜ ಶೇ 70–80ರಷ್ಟು ಫಿಟ್ ಆಗಿದ್ದರು. ಆದರೆ ಯಾವುದೇ ಕಾರಣಕ್ಕೂ ಗಾಯ ಉಲ್ಬಣಿಸಲು ಅವಕಾಶ ನೀಡದಿರಲು ಅವರನ್ನು ಕಣಕ್ಕೆ ಇಳಿಸಲಿಲ್ಲ. ಮೆಲ್ಬರ್ನ್ ಟೆಸ್ಟ್ ವೇಳೆ ಅವರು ಶೇ 80ರಷ್ಟು ಫಿಟ್ ಇದ್ದರೂ ಕೂಡ ಆಡುವರು’ ಎಂದರು.
ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ಬೆನ್ನುನೋವಿನಿಂದ ಚೇತರಿಸಿಕೊಂಡಿದ್ದಾರೆ. ನೆಟ್ಸ್‌ಗೆ ಮರಳಿದ್ದಾರೆ. ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರ ಫಿಟ್‌ನೆಸ್ ಕುರಿತು ಇನ್ನೂ 48 ಗಂಟೆಗಳ ನಂತರವಷ್ಟೇ ತಿಳಿದುಬರಲಿದೆ.
‘ಆಟಗಾರರ ಫಿಟ್‌ನೆಸ್ ವಿಷಯವು ದೊಡ್ಡ ಸವಾಲಾಗಿದೆ. ಇನ್ನು 24 ಗಂಟೆಗಳಲ್ಲಿ ಎಲ್ಲ ಆಟಗಾರರ ದೈಹಿಕ ಕ್ಷಮತೆಯ ಕುರಿತು ಸ್ಪಷ್ಟಪಡಿಸಲಾಗುವುದು’ ಎಂದರು.
‘ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿರುವುದು ಉತ್ತಮ ಬೆಳವಣಿಗೆ. ಇದರಿಂದಾಗಿ ಒಬ್ಬ ಆಲ್‌ರೌಂಡರ್ ಇರುವುದು ತಂಡದ ಆಯ್ಕೆ ಪ್ರಕ್ರಿಯೆಗೆ ಹೆಚ್ಚಿನ ಬಲ ತುಂಬಿದೆ. ಶಸ್ತ್ರಚಿಕಿತ್ಸೆಯ ಅವರು ದೀರ್ಘ ಅವಧಿ ವಿಶ್ರಾಂತಿ ಪಡೆದಿದ್ದರು. ಚೇತರಿಸಿಕೊಂಡ ಮೇಲೆ ಒಂದು ರಣಜಿ ಪಂದ್ಯದಲ್ಲಿ ಮಾತ್ರ ಆಡಿದ್ದರು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.