ಬೆಂಗಳೂರು:ಕರ್ನಾಟಕ ಮತ್ತು ಸೌರಾಷ್ಟ್ರ ನಡುವಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಅಂಪೈರ್‌ಗಳು ಮಾಡಿದ ಅವಾಂತರ ಈಗ ದೊಡ್ಡ ಸುದ್ದಿಯಾಗಿದೆ.
ಇದರ ಹಿನ್ನೆಲೆಯಲ್ಲಿಯೇ ಈಗ ರಣಜಿ ಟ್ರೋಫಿ ಟೂರ್ನಿಯಲ್ಲಿಯೂ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್) ಜಾರಿಗೆ ತರುವ ಆಗ್ರಹ ವ್ಯಕ್ತವಾಗುತ್ತಿದೆ. ಸೋಮವಾರ ಬೆಳಿಗ್ಗೆ ಸೌರಾಷ್ಟ್ರ ತಂಡವು 5 ವಿಕೆಟ್‌ಗಳಿಂದ ಜಯಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕರ್ನಾಟಕದ ಕೋಚ್ ಯರೇಗೌಡ ಈ ಕುರಿತು ಒಲವು ವ್ಯಕ್ತಪಡಿಸಿದರು.
‘ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಡಿಆರ್‌ಎಸ್ ಅಗತ್ಯವಿದೆಯೇ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯರೇಗೌಡ, ‘ಖಂಡಿತವಾಗಿಯೂ ಬೇಕು. ಪ್ರತಿಷ್ಠಿತ ಟೂರ್ನಿಗಳಲ್ಲಿ ಈ ವ್ಯವಸ್ಥೆಯಿಂದ ಸರಿಯಾದ ಫಲಿತಾಂಶ ಬರುತ್ತದೆ’ ಎಂದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸೌರಾಷ್ಟ್ರ ತಂಡದ ನಾಯಕ ಜಯದೇವ್ ಉನದ್ಕತ್ ಕೂಡ ಡಿಆರ್‌ಎಸ್ ಪರವಾಗಿ ಬ್ಯಾಟಿಂಗ್ ಮಾಡಿದ್ದರು.
‘ಆಟವನ್ನು ಉತ್ಕೃಷ್ಠ ಮತ್ತು ನಿಷ್ಪಕ್ಷಪಾತಗೊಳಿಸಲು ಯಾವುದೇ ತಂತ್ರಜ್ಞಾನ ಅಳವಡಿಸಿದರೂ ಸ್ವಾಗತಾರ್ಹವೇ. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಂತ್ರಜ್ಞಾನದ ಬಳಕೆಯಿಂದ ಬಹಳಷ್ಟು ಪ್ರಯೋಜನವಾಗಿದೆ. ಬಹುತೇಕ ತಂಡಗಳು ಇದರಿಂದ ಉತ್ತಮ ಫಲಿತಾಂಶ ಸಾಧಿಸಿರುವುದನ್ನು ನೋಡಿದ್ದೇವೆ. ಬಿಸಿಸಿಐ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸೂಕ್ತ’ ಎಂದರು.
ಬಿಸಿಸಿಐ ಕಾಮೆಂಟೆಟರ್ ರೋಹನ್ ಗಾವಸ್ಕರ್ ಅವರಿಗೆ ಸಂದರ್ಶನ ನೀಡಿದ ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ ಕೂಡ ಡಿಆರ್‌ಎಸ್ ತಂತ್ರಜ್ಞಾನ ಬಳಕೆಯ ಬಗ್ಗೆ ಒಲವು ತೋರಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಚೇತೇಶ್ವರ್ ಪೂಜಾರ ಅವರು ಒಂದು ರನ್ ಗಳಿಸಿದ್ದಾಗ ಅಭಿಮನ್ಯು ಮಿಥುನ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಕ್ಯಾಚ್‌ನಲ್ಲಿ ಔಟಾಗಿದ್ದು ವಿಡಿಯೊ ರಿಪ್ಲೆನಲ್ಲಿ ಸ್ಪಷ್ಟವಾಗಿತ್ತು.ಎರಡನೇ ಇನಿಂಗ್ಸ್‌ನಲ್ಲಿ ವಿನಯಕುಮಾರ್ ಬೌಲಿಂಗ್‌ನಲ್ಲಿಯೂ ಇದೇ ರೀತಿಯಾಗಿತ್ತು. ಈ ಎರಡೂ ಸಂದರ್ಭಗಳಲ್ಲಿ ಅಂಪೈರ್ ಸೈಯದ್ ಖಾಲೀದ್ ಔಟ್ ನೀಡಿರಲಿಲ್ಲ. ಇದು ವಿವಾದಕ್ಕೆ ಕಾರಣವಾಗಿತ್ತು. ಭಾನುವಾರ ಶೆಲ್ಡನ್ ಜ್ಯಾಕ್ಷನ್ ಎಲ್‌ಬಿಡಬ್ಲ್ಯು ಆಗಿದ್ದನ್ನು ಕೂಡ ಇನ್ನೊಬ್ಬ ಅಂಪೈರ್ ಉಲ್ಲಾಸ್ ಗಂಧೆ ಅವರು ಔಟ್ ನೀಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.