ಲಂಡನ್: ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರಸಿಂಗ್ ಧೋನಿ ಬಿಸಿಸಿಐ ನಿಯಮವನ್ನು ಉಲ್ಲಂಘಿಸಿದ್ದಾರೆಯೇ? ಅವರಿಗೆ ಶಿಕ್ಷೆ ಕಾದಿದೆಯೇ?
ಇಂತಹದೊಂದು ಚರ್ಚೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ. ಅದಕ್ಕೆ ಕಾರಣ ಧೋನಿಯವರ ಪತ್ನಿ ಸಾಕ್ಷಿ ಸಿಂಗ್ ಮತ್ತು ಮಗಳು ಜೀವಾ ಬುಧವಾರ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಹಾಜರಿದ್ದದ್ದು.
ಕ್ರೀಡಾಂಗಣದ ವಿಶೇಷ ಗ್ಯಾಲರಿಯಲ್ಲಿ ತಾವು ಮತ್ತು ಮಗಳು ಕುಳಿತು ಪಂದ್ಯವನ್ನು ವೀಕ್ಷಿಸಿದ ಚಿತ್ರಗಳನ್ನು ಸಾಕ್ಷಿ ಧೋನಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ್ದಾರೆ. ಕೆಲವು ವಿಡಿಯೊಗಳನ್ನು ಅಪಲೋಡ್ ಮಾಡಿದ್ದಾರೆ.
ಟೂರ್ನಿಯಲ್ಲಿ ಆಡುವ ಭಾರತ ತಂಡದ ಆಟಗಾರರು ತಮ್ಮ ಮೊದಲ ಪಂದ್ಯದ 15 ದಿನಗಳ ನಂತರವೇ ತಮ್ಮ ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.
ಆದರೆ ಇದೀಗ ಧೋನಿ ಪತ್ನಿ ಮತ್ತು ಮಗಳು ಮೊದಲ ಪಂದ್ಯದಲ್ಲಿಯೇ ಕ್ರೀಡಾಂಗಣದಲ್ಲಿರುವುದು ಅಚ್ಚರಿ ಮೂಡಿಸಿದೆ.
ಇದರಿಂದಾಗಿ ಧೋನಿ ನಿಯಮವನ್ನು ಉಲ್ಲಂಘಿಸಿದ್ದಾರೆನ್ನಲಾಗಿದ್ದು, ಬಿಸಿಸಿಐ ಕ್ರಮ ಜರುಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಇದುವರೆಗೂ ಈ ಕುರಿತು ಬಿಸಿಸಿಐ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ.
ಭಾರತ ತಂಡವು ಮೇ 23ರಂದು ಇಂಗ್ಲೆಂಡ್‌ಗೆ ತೆರಳಿತ್ತು. ಬುಧವಾರ ನಡೆದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಭಾರತ ತಂಡವು ಆರು ವಿಕೆಟ್‌ಗಳಿಂದ ಗೆದ್ದಿತು. ಧೋನಿ 34 ರನ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.