ADVERTISEMENT

ರೋಹಿತ್ ಬಳಗಕ್ಕೆ ವೆಸ್ಟ್ ಇಂಡೀಸ್ ಸವಾಲು: 1000ನೇ ಏಕದಿನ ಪಂದ್ಯವಾಡಲು ಭಾರತ ಸಿದ್ಧ

ಕ್ರಿಕೆಟ್‌ಗೆ ಸಾವಿರಾನೆಯ ಬಲ ತುಂಬಿದ ಭಾರತ

ಗಿರೀಶದೊಡ್ಡಮನಿ
Published 6 ಫೆಬ್ರುವರಿ 2022, 2:42 IST
Last Updated 6 ಫೆಬ್ರುವರಿ 2022, 2:42 IST
ದ್ರಾವಿಡ್‌, ಕೊಹ್ಲಿ
ದ್ರಾವಿಡ್‌, ಕೊಹ್ಲಿ   

ಅಹಮದಾಬಾದ್: ನಾಲ್ಕು ದಶಕಗಳ ಹಿಂದೆ ಲಾರ್ಡ್ಸ್‌ ಮೈದಾನದ ಆ ಅಟ್ಟಣಿಗೆಯ ಮೇಲೆ ಮಿರಿಮಿರಿ ಮಿಂಚುವ ವಿಶ್ವಕಪ್‌ಗೆ ಕಪಿಲ್ ದೇವ್ ಮುತ್ತಿಡುವುದರೊಂದಿಗೆ ಕ್ರಿಕೆಟ್‌ ಆಟದ ನವಯುಗ ಆರಂಭವಾಯಿತು.

ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆಯನ್ನು ಮೀರಿ ಬೆಳೆಯುವ ಏಕದಿನ ಮಾದರಿಗೆ ಶರವೇಗ ಸಿಕ್ಕಿದ್ದೂ ಆಗಲೇ. ಅಷ್ಟೋತ್ತಿಗಾಗಲೇ ಏಕದಿನ ಮಾದರಿ ಆರಂಭವಾಗಿ 12 ವರ್ಷಗಳೇ ಕಳೆದಿದ್ದವು. 1983 ವಿಶ್ವಕಪ್‌ನಲ್ಲಿ ‘ಕಪ್ಪುಕುದುರೆ’ಯಾಗಿ ಕಣಕ್ಕಿಳಿದಿದ್ದ ತಂಡವೊಂದು, ಬಲಿಷ್ಠ ವೆಸ್ಟ್ ಇಂಡೀಸ್‌ ತಂಡವನ್ನೇ ‘ಚಿತ್‌’ ಮಾಡುವುದು ಹೇಗೆಂಬುದು ತೋರಿಸಿಕೊಟ್ಟಿತ್ತು. ಸೀಮಿತ ಓವರ್‌ಗಳ ಕ್ರಿಕೆಟ್‌ನ ರೋಚಕತೆಗಳ ಕಣಜವನ್ನು ಅನಾವರಣ ಮಾಡಿತ್ತು. ಇಂದು ಕ್ರಿಕೆಟ್ ಎಲ್ಲ ಆಯಾಮಗಳಲ್ಲಿಯೂ ಶ್ರೀಮಂತವಾಗುವುದಕ್ಕೆ ಮುನ್ನುಡಿ ಬರೆದಿದ್ದು ಭಾರತ. ಈ ಹೆಗ್ಗಳಿಕೆಯ ಕಿರೀಟಕ್ಕೆ ಈಗ ಮತ್ತೊಂದು ರತ್ನ ಸೇರ್ಪಡೆಯಾಗುತ್ತಿದೆ.

1000ನೇ ಏಕದಿನ ಪಂದ್ಯವಾಡಲು ಭಾರತ ಸಿದ್ಧವಾಗಿದೆ. ಭಾನುವಾರ ಮೊಟೇರಾದ ನರೇಂದ್ರ ಮೋದಿ ಕ್ರಿಕೆಟ್ ಅಂಗಳದಲ್ಲಿ ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಆಡುವುದರೊಂದಿಗೆ ಈ ಮಾದರಿಯಲ್ಲಿ ಸಹಸ್ರದ ಮೈಲುಗಲ್ಲು ಸ್ಥಾಪಿಸಲಿದೆ. ಈ ಸಾಧನೆ ಮಾಡಿದ ಮಟ್ಟಮೊದಲ ತಂಡವಾಗಲಿದೆ.

ADVERTISEMENT

1974ರಲ್ಲಿ ಲೀಡ್ಸ್‌ನಲ್ಲಿ ಅಜಿತ್ ವಾಡೇಕರ್ ನಾಯಕತ್ವದ ತಂಡವು ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆಡಿತ್ತು. ಕರ್ನಾಟಕದ ಜಿ.ಆರ್. ವಿಶ್ವನಾಥ್ ಮತ್ತು ಬ್ರಿಜೇಶ್ ಪಟೇಲ್ ಕೂಡ ಆಡಿದ್ದರು. ಅದರಲ್ಲಿ ಬ್ರಿಜೇಶ್ 82 ರನ್ ಬಾರಿಸಿದ್ದರು. ಆದರೆ, ತಂಡವು ಸೋಲನುಭವಿಸಿತ್ತು. 1975 ಮತ್ತು 1979ರಲ್ಲಿ ನಡೆದ ವಿಶ್ವಕಪ್‌ ಟೂರ್ನಿಗಳಲ್ಲಿ ವಿಂಡೀಸ್ ಚಾಂಪಿಯನ್ ಆಗಿತ್ತು. ಭಾರತಕ್ಕೆ ಗೆಲವು ದೂರವೇ ಇತ್ತು. ಆದರೆ 1983ರಲ್ಲಿ ನಡೆದ ಜಾದೂ ಕ್ರಿಕೆಟ್‌ ಲೋಕದ ಕಣ್ಣುಕುಕ್ಕಿತು.

ಅದರಲ್ಲೂ ಜಿಂಬಾಬ್ವೆ ಎದುರು ಕಪಿಲ್ ಬಾರಿಸಿದ ಅಜೇಯ 175 ರನ್‌ಗಳು ಕ್ರಿಕೆಟ್‌ನ ಇತಿಹಾಸವನ್ನೇ ಬದಲಿಸಿತು. ಏಕದಿನ ಮಾದರಿಯಲ್ಲಿ ಶತಕ ಬಾರಿಸಿದ ಮೊದಲ ಭಾರತೀಯನಾದ ಕಪಿಲ್, ಮುಂದೆ ವಿಶ್ವಕಪ್ ಜಯಿಸಿದ ಮೊದಲ ನಾಯಕನೂ ಆದರು. ಈ ಮಾದರಿಯ ರೋಚಕ ಸಂಗತಿಗಳು ಜನರನ್ನು ಆಕರ್ಷಿಸಿದ್ದನ್ನು ಕಂಡ ವಾಣಿಜ್ಯ ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಮುಗಿಬಿದ್ದವು. ಅದೇ ಕಾಲಕ್ಕೆ ಬಂದ ಟೆಲಿವಿಜನ್ ಮತ್ತು 1991ರಲ್ಲಿ ಆರ್ಥಿಕ ಉದಾರೀಕರಣ ನೀತಿಯಿಂದಾಗಿ ಪ್ರಾಯೋಜಕರಿಗೆ ಕ್ರಿಕೆಟ್ ಚಿನ್ನದ ಮೊಟ್ಟೆಯಿಡುವ ಕೋಳಿಯಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಗಳು ಆಯೋಜನೆಗೊಂಡವು. ಭಾರತ ತಂಡವು ಉಳಿದೆಲ್ಲರನ್ನೂ ಹಿಂದಿಕ್ಕಿ ಮುನ್ನುಗಿತ್ತು.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ವಿಶ್ವದ ಶ್ರೀಮಂತ ಕ್ರೀಡಾಸಂಸ್ಥೆಗಳಲ್ಲಿ ಒಂದಾಯಿತು. ಕ್ರಿಕೆಟಿಗರೂ ಶತಕೋಟಿಯ ಒಡೆಯರಾದರು. ಹಲವು ದಿಗ್ಗಜ ಆಟಗಾರರು ಕ್ರೀಡೆಯನ್ನು ಮತ್ತಷ್ಟು ಸಿರಿವಂತಗೊಳಿಸಿದರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್, ಅನಿಲ್ ಕುಂಬ್ಳೆ, ಸೌರವ್ ಗಂಗೂಲಿ,ಮಹೇಂದ್ರಸಿಂಗ್ ಧೋನಿ, ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್, ಜಾವಗಲ್ ಶ್ರೀನಾಥ್, ಹರಭಜನ್ ಸಿಂಗ್, ಜಹೀರ್ ಖಾನ್ ಮತ್ತಿತರರು ಮಾಡಿದ ದಾಖಲೆಗಳು ಕ್ರಿಕೆಟ್ ಜನಪ್ರಿಯತೆಯನ್ನು ಉತ್ತುಂಗಕ್ಕೇರಿಸಿದವು. ಇದೀಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜ ಅವರು ಪರಂಪರೆಯನ್ನು ಮುಂದುವರಿಸಿದ್ದಾರೆ.

ಇವರಷ್ಟೇ ಅಲ್ಲ. ದೇಶದ ಬೇರೆ ಬೇರೆ ರಾಜ್ಯಗಳಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ, ಮಿಂಚಿ ಮರೆಯಾದ ಪ್ರತಿಭೆಗಳ ಯೋಗದಾನವೂ ದೊಡ್ಡದೇ. ಟ್ವೆಂಟಿ–20 ಕ್ರಿಕೆಟ್ ಭರಾಟೆಯಲ್ಲಿಯೂ ತನ್ನ ನೈಜತೆಯನ್ನು ಉಳಿಸಿಕೊಂಡಿರುವ ಏಕದಿನ ಕ್ರಿಕೆಟ್ ಮನರಂಜನೆಯ ಮೂಲವಾಗಿ ನಿರಂತರವಾಗಿ ಸಾಗುತ್ತಿದೆ.

ಆತ್ಮವಿಶ್ವಾಸದಲ್ಲಿ ವಿಂಡೀಸ್

ಹಮದಾಬಾದ್ (ಪಿಟಿಐ): ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ಅಮೋಘ ಜಯ ಸಾಧಿಸಿರುವ ಕೀರನ್ ಪೊಲಾರ್ಡ್ ನಾಯಕತ್ವದ ವೆಸ್ಟ್ ಇಂಡೀಸ್ ಬಳಗವು ಭಾರತಕ್ಕೆ ಬಂದಿಳಿದಿದೆ.

ತನ್ನ ತವರಿನಲ್ಲಿ ಅಮೋಘವಾಗಿ ಆಡಿದ್ದ ವಿಂಡೀಸ್ ಇಲ್ಲಿಯೂ ಅದೇ ಲಯವನ್ನು ಮುಂದುವರಿಸುವ ಛಲದಲ್ಲಿದೆ. ಅಲ್ಲದೇ ಮುಂದಿನ ವಾರ ನಡೆಯಲಿರುವ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಫ್ರ್ಯಾಂಚೈಸಿಗಳ ಗಮನ ಸೆಳೆಯುವ ಗುರಿಯೂ ತಂಡದ ಆಟಗಾರರಲ್ಲಿದೆ. ಆದ್ದರಿಂದ ಆತಿಥೇಯ ಭಾರತಕ್ಕೆ ದಿಟ್ಟ ಸವಾಲೊಡ್ಡುವ ವಿಶ್ವಾಸದಲ್ಲಿದೆ. ಏಕದಿನ ಮಾದರಿಯಲ್ಲಿ ಉಭಯ ತಂಡಗಳು 133 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತವು 64 ರಲ್ಲಿ ಮತ್ತು ವಿಂಡೀಸ್ 63ರಲ್ಲಿ ಜಯಿಸಿವೆ. ಎರಡು ಪಂದ್ಯ ಟೈ ಆಗಿವೆ. ನಾಲ್ಕರಲ್ಲಿ ಫಲಿತಾಂಶ ಹೊರಹೊಮ್ಮಿಲ್ಲ. ‌

ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್, ರವಿ ಬಿಷ್ಣೋಯಿ, ಮಯಂಕ್ ಅಗರವಾಲ್, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್, ವಾಷಿಂಗ್ಟನ್ ಸುಂದರ್.

ವೆಸ್ಟ್ ಇಂಡೀಸ್: ಕೀರನ್ ಪೊಲಾರ್ಡ್ (ನಾಯಕ), ಶಾಯ್ ಹೋಪ್ (ವಿಕೆಟ್‌ಕೀಪರ್), ಬ್ರೆಂಡನ್ ಕಿಂಗ್, ನಿಕೊಲಸ್ ಪೂರನ್, ಶಾಮ್ರಾ ಬ್ರೂಕ್ಸ್‌, ಡರೆನ್ ಬ್ರಾವೊ, ಜೇಸನ್ ಹೋಲ್ಡರ್, ಫ್ಯಾಬಿಯನ್ ಅಲೆನ್, ರೊಮೆರಿಯೊ ಶೇಫರ್ಡ್, ಒಡಿಯನ್ ಸ್ಮಿತ್, ಅಲ್ಜರಿ ಜೋಸೆಫ್, ಅಕೀಲ್ ಹುಸೇನ್, ಹೇಡನ್ ವಾಲ್ಶ್, ಕೆಮರ್ ರೋಚ್, ಎನ್‌ಕ್ರುಮಾ ಬಾನೆರ್

ಪಂದ್ಯ ಆರಂಭ: ಮಧ್ಯಾಹ್ನ 1.30; ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.