ADVERTISEMENT

ಐಪಿಎಲ್: 1097 ಆಟಗಾರರ ನೋಂದಣಿ, ಫೆಬ್ರುವರಿ 18ರಂದು ಹರಾಜು

ವೆಸ್ಟ್ ಇಂಡೀಸ್‌ ಆಟಗಾರರು ಬಹುಪಾಲು

ಪಿಟಿಐ
Published 5 ಫೆಬ್ರುವರಿ 2021, 15:03 IST
Last Updated 5 ಫೆಬ್ರುವರಿ 2021, 15:03 IST
ಐಪಿಎಲ್ ಪಂದ್ಯವೊಂದರ ಸಂಭ್ರಮದ ಕ್ಷಣ
ಐಪಿಎಲ್ ಪಂದ್ಯವೊಂದರ ಸಂಭ್ರಮದ ಕ್ಷಣ   

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರ ಹರಾಜು ಪ್ರಕ್ರಿಯೆಇದೇ ತಿಂಗಳ 18ರಂದು ಇಲ್ಲಿ ನಡೆಯಲಿದ್ದು ಒಟ್ಟು1097 ಆಟಗಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ ಹೆಚ್ಚಿನವರು ವೆಸ್ಟ್ ಇಂಡೀಸ್‌ನವರಾಗಿದ್ದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಆಟಗಾರರ ಪಾಲು ಕೂಡ ಸಾಕಷ್ಟು ಇದೆ. ಈ ಮೂರು ದೇಶಗಳಿಂದ ಕ್ರಮವಾಗಿ 56, 42 ಮತ್ತು 38 ಮಂದಿ ಹೆಸರು ನೊಂದಾಯಿಸಿದ್ದಾರೆ.

ಆಟಗಾರರ ನೋಂದಣಿಗೆ ಗುರುವಾರ ಕೊನೆಯ ದಿನವಾಗಿತ್ತು. ಆಡಲು ಇಚ್ಛಿಸಿದವರಲ್ಲಿ 207 ಮಂದಿ ಅಂತರರಾಷ್ಟ್ರೀಯ ಆಟಗಾರರು ಇದ್ದು ಈ ಪೈಕಿ 21 ಮಂದಿ ಭಾರತದ ಆಟಗಾರರು. ಅಂತರರಾಷ್ಟ್ರೀಯ ಪಂದ್ಯ ಆಡದೇ ಇರುವ ಆಟಗಾರರ ಸಂಖ್ಯೆ 863 ಆಗಿದ್ದು ಈ ಪೈಕಿ 743 ಮಂದಿ ಭಾರತೀಯರು.

ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸ್ ಅತಿ ಹೆಚ್ಚು, ₹ 53.20 ಕೋಟಿ ಮೊತ್ತದ ಹಣ ಉಳಿಸಿಕೊಂಡಿದ್ದು ಎರಡನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೆ. ಈ ಫ್ರಾಂಚೈಸ್ ಬಳಿ ಇನ್ನು ₹ 35.90 ಕೋಟಿ ಬಾಕಿ ಇದೆ. ರಾಜಸ್ಥಾನ ರಾಯಲ್ಸ್‌ ₹ 34.85 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್‌ ₹ 22.90 ಕೋಟಿ, ಮುಂಬೈ ಇಂಡಿಯನ್ಸ್‌ ₹ 15.35 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್‌ ರೂ 12.9 ಕೋಟಿ, ಕೋಲ್ಕತ್ತ ನೈಟ್ ರೈಡರ್ಸ್‌ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಲಾ ₹ 10.75 ಕೋಟಿ ಉಳಿಸಿಕೊಂಡಿವೆ.

ಆಸ್ಟ್ರೇಲಿಯಾದಿಂದ ನೋಂದಣಿ ಮಾಡಿಸಿಕೊಂಡವರಲ್ಲಿ ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ ಅವರನ್ನು ಕ್ರಮವಾಗಿ ರಾಜಸ್ಥಾನ ರಾಯಲ್ಸ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸ್‌ಗಳು ಆಟಗಾರರನ್ನು ಉಳಿಸಲು ಕೊನೆಯ ದಿನವಾಗಿದ್ದ ಜನವರಿ 20ರಂದು ಬಿಟ್ಟುಕೊಟ್ಟಿದ್ದವು. ಕ್ರಿಸ್ ಮೊರೀಸ್, ಹರ್ಭಜನ್ ಸಿಂಗ್‌ ಮತ್ತು ಆ್ಯರನ್ ಫಿಂಚ್ ಅವರನ್ನು ಕೂಡ ಆಯಾ ಫ್ರಾಂಚೈಸ್‌ಗಳು ಬಿಟ್ಟುಕೊಟ್ಟಿದ್ದವು. ಒಟ್ಟು 57 ಆಟಗಾರರನ್ನು ಕೈಬಿಟ್ಟಿದ್ದರೆ 139 ಮಂದಿಯನ್ನು ಉಳಿಸಿಕೊಂಡಿದ್ದವು.

ನೋಂದಣಿ ಮಾಡಿಕೊಂಡವರ ಸಂಖ್ಯೆ

ದೇಶ;ಆಟಗಾರರು

ವೆಸ್ಟ್ ಇಂಡೀಸ್‌;56

ಆಸ್ಟ್ರೇಲಿಯಾ;42

ದಕ್ಷಿಣ ಆಫ್ರಿಕಾ;38

ಶ್ರೀಲಂಕಾ;31

ಅಫ್ಗಾನಿಸ್ತಾನ;30

ನ್ಯೂಜಿಲೆಂಡ್‌;29

ಇಂಗ್ಲೆಂಡ್‌;21

ಯುಎಇ;9

ನೇಪಾಳ;8

ಸ್ಕಾಟ್ಲೆಂಡ್;7

ಬಾಂಗ್ಲಾದೇಶ;5

ಜಿಂಬಾಬ್ವೆ;2

ಐರ್ಲೆಂಡ್‌;2

ಅಮೆರಿಕ;2

ನೆದರ್ಲೆಂಡ್ಸ್‌;1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.