ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧ ಟಿ20: 2ನೇ ಸಾಲಿನ ಆಟಗಾರರಿಗೆ ಮಿಂಚಲು ಅವಕಾಶ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 23:30 IST
Last Updated 7 ನವೆಂಬರ್ 2024, 23:30 IST
<div class="paragraphs"><p>ಸಂಜು ಸ್ಯಾಮ್ಸನ್‌&nbsp;</p></div>

ಸಂಜು ಸ್ಯಾಮ್ಸನ್‌ 

   

ಡರ್ಬನ್: ಭಾರತ ಕ್ರಿಕೆಟ್ ತಂಡ ಪರಿವರ್ತನೆಯ ಹಂತದಲ್ಲಿದ್ದು, ಎರಡನೇ ಸಾಲಿನ ಆಟಗಾರರಿಗೆ ಛಾಪು ಮೂಡಿಸುವ ಸವಾಲು ಇದೆ. ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ಪಂದ್ಯಗಳ ಟಿ20 ಸರಣಿಯ ಮೊದಲನೆಯದು ಕಿಂಗ್ಸ್‌ಮೀಡ್‌ನಲ್ಲಿ ಶುಕ್ರವಾರ ನಡೆಯಲಿದ್ದು, ಸಂಜು ಸ್ಯಾಮ್ಸನ್‌ ಮತ್ತು ಅಭಿಷೇಕ್ ಶರ್ಮಾ ಅವರು ಇಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.

ತಾವು ಮೊದಲ ಆಯ್ಕೆಯ ಆಟಗಾರರೆನಿಸಿಕೊಳ್ಳಲು ಅವರು ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಬೇಕಾಗಿದೆ. ಬಾಂಗ್ಲಾದೇಶ ವಿರುದ್ಧ ಇತ್ತೀಚಿನ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅಂಥ ಅವಕಾಶವನ್ನು ಬಳಸಿಕೊಂಡಿದ್ದಾರೆ. ತವರಿನ ಆ ಸರಣಿಯಲ್ಲಿ ಮಿಂಚಿನ ಶತಕವನ್ನೂ (111, 47 ಎ) ಸಿಡಿಸಿದ್ದರು.

ADVERTISEMENT

ರೋಹಿತ್‌ ಶರ್ಮಾ ನಿರ್ಗಮನದ ನಂತರ ಟಿ20 ತಂಡದಲ್ಲಿ ಸ್ಯಾಮ್ಸನ್‌ ತಮ್ಮ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಳ್ಳಬೇಕಾದರೆ ಈ ಸರಣಿ ಅದಕ್ಕೆ ಸದವಕಾಶವಾಗಿದೆ.

ಬಿರುಸಿನ ಹೊಡೆತಗಳ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಪಾಲಿಗೂ ಇದು ಮಹತ್ವದ್ದು. ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ 47 ಎಸೆತಗಳಲ್ಲಿ ಶತಕ ಬಾರಿಸಿದ ನಂತರ ಅವರು ರನ್‌ ಬರ ಎದುರಿಸುತ್ತಿದ್ದಾರೆ. ಕಳೆದ ಆರು ಇನಿಂಗ್ಸ್‌ಗಳಲ್ಲಿ ಒಮ್ಮೆಯೂ ಅವರು 20 ರನ್ ದಾಟಿಲ್ಲ. ಹೀಗಾಗಿ ಅವರು ಲಯಕ್ಕೆ ಮರಳಬೇಕಾದ ಒತ್ತಡದಲ್ಲಿದ್ದಾರೆ. ಅವರು ಉಪಯುಕ್ತ ಎಡಗೈ ಸ್ಪಿನ್ನರ್ ಕೂಡ.

ಎಡಗೈ ಆಟಗಾರ ತಿಲಕ್ ವರ್ಮಾ ಅವರ ಕಥೆ ಭಿನ್ನವೇನಲ್ಲ. 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಆರಂಭ ಮಾಡಿದ್ದ ಅವರು ನಂತರ ಅದೇ ರೀತಿಯಲ್ಲಿ ಆಡಿಲ್ಲ. ನಂತರದ 12 ಇನಿಂಗ್ಸ್‌ಗಳಲ್ಲಿ ಅವರಿಂದ ಒಂದು ಅರ್ಧ ಶತಕವಷ್ಟೇ ದಾಖಲಾಗಿದೆ.

‌ವಿಕೆಟ್‌ ಕೀಪರ್ ಜಿತೇಶ್ ಶರ್ಮಾ ಅವರಿಗೂ ತಂಡದಲ್ಲಿ ಸ್ಥಾನ ಗಟ್ಟಿಪಡಿಸಿಕೊಳ್ಳಲು ಅವಕಾಶವಿದೆ. ವರುಣ್ ಚಕ್ರವರ್ತಿ ಅವರಿಗೂ ಸ್ಪಿನ್ ವಿಭಾಗದಲ್ಲಿ ಪ್ರಬಲ ಪರ್ಯಾಯವೆನಿಸಲು ಕಾತುರದಿಂದ ಇದ್ದಾರೆ.

ಅರ್ಷದೀಪ್ ಸಿಂಗ್, ಆವೇಶ್‌ ಖಾನ್‌, ವಿಜಯಕುಮಾರ್‌ ವೈಶಾಖ್ ಮತ್ತು ಯಶ್‌ ದಯಾಳ್ ಅವರನ್ನು ಹೊಂದಿರುವ ವೇಗದ ಬೌಲರ್‌ಗಳ ಪ್ರದರ್ಶನದ ಮೇಲೂ ಆಯ್ಕೆಗಾರರ ಕಣ್ಣು ನೆಟ್ಟಿದೆ. ರಮಣದೀಪ್ ಸಿಂಗ್ ಅವರೂ ಭರವಸೆಯ ಯುವ ಆಟಗಾರ. ಕೆಳಕ್ರಮಾಂಕದ ಬ್ಯಾಟಿಂಗ್, ವೇಗದ ಬೌಲಿಂಗ್ ಜೊತೆಗೆ ಉತ್ತಮ ಫೀಲ್ಡರ್ ಆಗಿ ಗುರುತಿಸಿಕೊಂಡಿದ್ದಾರೆ.

ಈ ವರ್ಷದ ಜೂನ್‌ನಲ್ಲಿ ವಿಶ್ವಕಪ್‌ನಲ್ಲಿ ಈ ಎರಡು ತಂಡಗಳು ಎದುರಾಗಿದ್ದು, ದಕ್ಷಿಣ ಆಫ್ರಿಕಾ ಅಲ್ಪ ಅಂತರದಲ್ಲಿ ಸೋತಿತ್ತು. ಈಗ ಮುಯ್ಯಿ ತೀರಿಸಲು ಆ ತಂಡ ತವಕದಿಂದ ಇದೆ.

ಪಂದ್ಯ ಆರಂಭ: ರಾತ್ರಿ 8.30 (ಭಾರತೀಯ ಕಾಲಮಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.