ADVERTISEMENT

ಹೆಚ್ಚು ಸಂಪಾದಿಸುವ ಪೂರನ್‌, ಹೆಟ್ಮೆಯರ್‌: ರಾಷ್ಟ್ರೀಯ ತಂಡಕ್ಕಿಂತ ಐಪಿಎಲ್‌ ಲಾಭದಾಯಕ!

ಪಿಟಿಐ
Published 2 ಜುಲೈ 2023, 23:38 IST
Last Updated 2 ಜುಲೈ 2023, 23:38 IST
ಶಿಮ್ರೊನ್‌ ಹೆಟ್ಮಯೆರ್‌
ಶಿಮ್ರೊನ್‌ ಹೆಟ್ಮಯೆರ್‌    –ಎಎಫ್‌ಪಿ ಚಿತ್ರ

ನವದೆಹಲಿ: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಡಿದಕ್ಕೆ ಶಿಮ್ರೊನ್‌ ಹೆಟ್ಮೆಯರ್ ಐಪಿಎಲ್‌ ಸಂಭಾವನೆಯಾಗಿ ₹8.50 ಕೋಟಿ ಗಳಿಸಿದರೆ, ತಮ್ಮನ್ನು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಲ್ಲೇ ಉಳಿಸಿಕೊಂಡಿದ್ದಕ್ಕೆ ಆ್ಯಂಡ್ರೆ ರಸೆಲ್‌ ₹ 16 ಕೋಟಿ ಪಡೆದರು. ಇದು ಕ್ರಿಕೆಟ್‌ನಲ್ಲಿ ಹಣದ ಹೊಳೆ ಬೀರುತ್ತಿರುವ ಪ್ರಭಾವವನ್ನು ಸೂಚಿಸುತ್ತಿದೆ. ‌ಕೆರಿಬಿಯನ್‌ ಆಟಗಾರರಿಗೆ ವೆಸ್ಟ್‌ ಇಂಡೀಸ್‌ ತಂಡಕ್ಕೆ ಆಡುವುದು ಹಿಂದಿನಂತೆ ಸ್ಫೂರ್ತಿಯಾಗಿ ಉಳಿದಿಲ್ಲ.

ಹಣವೇ ಮುಖ್ಯವಾಗಿರುವ ಈಗಿನ ಕಾಲದಲ್ಲಿ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಆಟಗಾರರು ಹೊರತಾಗಿಲ್ಲ. ಈ ಅಂಶವೇ ಪ್ರಮುಖ ಆಟಗಾರರನ್ನು ವರ್ಷವಿಡಿ ದೇಶಿಯ ಕ್ರಿಕೆಟ್‌ನಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುವಲ್ಲಿ ಕ್ರಿಕೆಟ್‌ ವೆಸ್ಟ್ ಇಂಡೀಸ್‌ (ಸಿಡಬ್ಲ್ಯುಐ)ಗೆ ದೊಡ್ಡ ಅಡಚಣೆಯಾಗಿ ಮಾರ್ಪಟ್ಟಿದೆ.

ಜಿಂಬಾಬ್ವೆಯಲ್ಲಿ ನಡೆದಿದ್ದ ಹಾಲಿ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡವು, ಹೆಟ್ಮೆಯರ್, ಆ್ಯಂಡ್ರೆ ರಸೆಲ್‌ ಅಥವಾ ಸುನೀಲ್‌ ನಾರಾಯಣ್ ಅವರ ಸೇವೆ ಲಭ್ಯವಿರಲಿಲ್ಲ. ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ ಕಳೆದ ವರ್ಷ ಬಿಡುಗಡೆ ಮಾಡಿದ 18 ಆಟಗಾರರ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿ ಇವರು ಯಾರೂ ಇರಲಿಲ್ಲ. ವರ್ಷವಿಡೀ ಬೇರೆ ಬೇರೆ ಕಡೆ ನಡೆಯುವ ಲೀಗ್‌ಗಳಲ್ಲಿ ಆಡುವುದಕ್ಕೆ ಆದ್ಯತೆ ನೀಡಿ, ರಾಷ್ಟ್ರೀಯ ತಂಡದ ಆಯ್ಕೆ ವೇಳೆ ಸ್ವಯಂಪ್ರೇರಣೆಯಿಂದ ಹಿಂದೆ ಸರಿದರು.

ADVERTISEMENT

ಲಖನೌ ಸೂಪರ್‌ಜೈಂಟ್ಸ್‌ ತಂಡಕ್ಕೆ ಈ ವರ್ಷ ₹16 ಕೋಟಿ ಒಪ್ಪಂದಕ್ಕೆ ಆಡಿದ್ದ ನಿಕೋಲಸ್‌ ಪೂರನ್‌, ಅರ್ಹತಾ ಟೂರ್ನಿಯಲ್ಲಿ ಆಡಿ ಒಂದು ಶತಕವನ್ನೇನೊ ಹೊಡೆದರು. ಆದರೆ ಕೋಟ್ಯಂತರ ರೂಪಾಯಿ ಹರಿಸುವ ಐಪಿಎಲ್‌ ಅಥವಾ ಎಸ್‌ಎ ಟಿ–20 (ದಕ್ಷಿಣ ಆಫ್ರಿಕದ ಲೀಗ್‌) ಯಿಂದ ರಾಷ್ಟ್ರೀಯ ತಂಡಕ್ಕೆ ಆಡುವಂತೆ ಪ್ರೇರಣೆ ನೀಡುವಲ್ಲಿ ಕೆರಿಬಿಯನ್ ಕ್ರಿಕೆಟ್‌ ವ್ಯವಸ್ಥೆ ಎಷ್ಟು ಕಾಲ ಪ್ರೇರಣೆ ನೀಡಲು ಸಾಧ್ಯ? ಇದರ ಜೊತೆಗೆ ಬಿಗ್‌ ಬ್ಯಾಷ್‌ ಲೀಗ್‌, ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ಗಳ ಆಕರ್ಷಣೆ ಇರುವದರಿಂದ ಪೂರನ್‌ ಅಂಥ ಆಟಗಾರರನ್ನು ರಾಷ್ಟ್ರೀಯ ತಂಡದಲ್ಲೇ  ಹಿಡಿದಿಟ್ಟುಕೊಳ್ಳುವುದು ಕಷ್ಟ.

ಇಎಸ್‌ಪಿಎನ್‌ ಕ್ರಿಕ್‌ ಇನ್ಫೊದಲ್ಲಿ 2017ರಲ್ಲಿ ದಾಖಲಾದ ಕೊನೆಯ ಅಧಿಕೃತ ಮಾಹಿತಿಗಳ ಪ್ರಕಾರ ವೆಸ್ಟ್ ಇಂಡೀಸ್‌ ಆಟಗಾರರಿಗೆ ಪ್ರತಿ ಟೆಸ್ಟ್‌ ಪಂದ್ಯಕ್ಕೆ ಸಿಗುವ ಹಣ ₹4.72 ಲಕ್ಷ. ಏಕದಿನ ಪಂದ್ಯಕ್ಕೆ ₹1.88 ಲಕ್ಷ ಮತ್ತು ಟಿ–20 ಪಂದ್ಯಕ್ಕೆ 1.42 ಲಕ್ಷ. ಆದರೆ ಇತ್ತೀಚಿನ ವರ್ಷಗಳಲ್ಲಿ ಆಟಗಾರರಿಗೆ ನೀಡುವ ಮೊತ್ತವನ್ನು ಪರಿಷ್ಕರಿಸಲಾಗಿದೆಯೇ ಎಂಬ ಮಾಹಿತಿ ಲಭ್ಯವಿಲ್ಲ. ವಿಂಡೀಸ್‌ ಆಟಗಾರರು ಪಡೆಯವ ಮೊತ್ತ, ಭಾರತದ ಆಟಗಾರರು ಪಡೆಯುವ ಮೊತ್ತಕ್ಕಿಂತ ಮೂರೂವರೆಯಿಂದ ನಾಲ್ಕು ಪಟ್ಟು ಕಡಿಮೆ. ಭಾರತದ ಆಟಗಾರರು ಪ್ರತಿ ಟೆಸ್ಟ್‌ಗೆ 15 ಲಕ್ಷ, ಏಕದಿನ ಪಂದ್ಯಕ್ಕೆ 8 ಲಕ್ಷ, ಟಿ–20 ಪಂದ್ಯಕ್ಕೆ ₹ 4 ಲಕ್ಷ ಪಡೆಯುತ್ತಾರೆ.

ವೆಸ್ಟ್‌ ಇಂಡೀಸ್‌ನಲ್ಲಿ ಕೇಂದ್ರೀಯ ಗುತ್ತಿಗೆ ವ್ಯವಸ್ಥೆ ಇದ್ದು, ಎರಡು ಮಾದರಿಯಲ್ಲಿ ಆಡುವ ಆಟಗಾರರು ಕಡೇಪಕ್ಷ ₹1.97 ಕೋಟಿ ಸಂಪಾದಿಸುತ್ತಾರೆ. ಮೂರೂ ಮಾದರಿಯಲ್ಲಿ ಆಡುವ ಆಟಗಾರರಿಗೆ ₹ 2.5 ಕೋಟಿ ಮೊತ್ತ ನಿಗದಿಯಾಗಿದೆ. ಇದು ಪಂದ್ಯ ಶುಲ್ಕ ಸೇರಿ.

ಐಪಿಎಲ್‌ ಗುತ್ತಿಗೆಯಲ್ಲಿ ಇಲ್ಲದ ಚೇತೇಶ್ವರ ಪೂಜಾರ ಒಂದು ಮಾದರಿಯಲ್ಲಿ ಮಾತ್ರ ಆಡುತ್ತಿದ್ದು, ಕೇಂದ್ರಿಯ ಗುತ್ತಿಗೆಯಿಂದ ವರ್ಷಕ್ಕೆ ₹ 3 ಕೋಟಿ ಪಡೆಯುತ್ತಾರೆ. ಪಂದ್ಯ ಶುಲ್ಕ ಸೇರಿದರೆ ಈ ಮೊತ್ತ ಇನ್ನೂ ಹೆಚ್ಚಾಗುತ್ತದೆ.

ವಿಶ್ವಕಪ್‌ನಿಂದ ವೆಸ್ಟ್‌ ಇಂಡೀಸ್‌ ನಿರ್ಗಮನ ಕೋಟ್ಯಂತರ ಮಂದಿಗೆ ನಿರಾಸೆ ಮೂಡಿಸಿರಬಹುದು. ಆದರೆ ಮೇಲಿನ ವಿದ್ಯಮಾನ ಅರಿತ ಕೆಲವರಿಗಷ್ಟೇ ಆಘಾತ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.